ನಟ ಸುದೀಪ್ ಅವರನ್ನು ಕಂಡರೆ ಎಲ್ಲ ವಯೋಮಾನದ ಅಭಿಮಾನಿಗಳಿಗೂ ಸಖತ್ ಇಷ್ಟ. ಅದರಲ್ಲೂ ವಿಶೇಷವಾಗಿ ಮಕ್ಕಳು ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಸಿನಿಮಾಗಳನ್ನು ನೋಡಿ ಪುಟಾಣಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆ ಆಸೆ ಈಡೇರಲು ಸಮಯ ಕೂಡಿ ಬರಬೇಕು. ಈಗ ವಿಶೇಷ ಅಭಿಮಾನಿಯ ಬಯಕೆಯನ್ನು ಸುದೀಪ್ ಈಡೇರಿಸಿದ್ದಾರೆ.
ಆಜಾನ್ ಖಾನ್ ಎಂಬ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಕಿಚ್ಚ ಸುದೀಪ್ ಎಂದರೆ ಪಂಚಪ್ರಾಣ. ‘ಅಭಿನಯ ಚಕ್ರವರ್ತಿ’ಯನ್ನು ಒಮ್ಮೆಯಾದೂ ಭೇಟಿ ಮಾಡಬೇಕು ಎಂದು ಆತ ಕಂಡಿದ್ದ ಕನಸು ಸೋಮವಾರ (ಆಗಸ್ಟ್ 1) ನನಸಾಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ನಿರ್ಮಾಪಕ ಜಾಕ್ ಮಂಜು ಅವರ ಸಹಾಯದಿಂದ ಕಿಚ್ಚ ಸುದೀಪ್ ಅವರನ್ನು ಆಜಾನ್ ಖಾನ್ ಭೇಟಿ ಮಾಡಿದ್ದಾನೆ. ಫೇವರಿಟ್ ಹೀರೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಆತ ಸಂಭ್ರಮಿಸಿದ್ದಾನೆ.
ಕಿಚ್ಚ ಸುದೀಪ್ ಅವರ ಈ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾಗೆ ಸಿಕ್ಕಿರುವ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜುಲೈ 28ರಂದು ತೆರೆಕಂಡ ಈ ಚಿತ್ರ ಜಯಭೇರಿ ಬಾರಿಸಿದೆ. ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯುತ್ತಿದೆ.