ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಬರಹಗಾರರಾಗಿದ್ದವರು ಸಿನಿಮಾ ನಿರ್ದೇಶನಕ್ಕೆ ಇಳಿಯೋದು ಹೊಸದೇನು ಅಲ್ಲ. ಅದೇ ರೀತಿ ಯಶ್ ನಟನೆಯ ‘KGF’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಚಂದ್ರಮೌಳಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ‘ವೈಲ್ಡ್ ಟೈಗರ್ ಸಫಾರಿ’ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ಶೀಥಿಲ್ ಪೂಜಾರಿ ನಾಯಕನಾಗಿ ಅಬ್ಬರಿಸಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ನಾಯಕಿಯಾಗಿ ‘ಶೇಕ್ ಇಟ್ ಪುಷ್ಪಾವತಿ’ ಖ್ಯಾತಿಯ ನಟಿ ನಿಮಿಕಾ ರತ್ಮಾಕರ್ ಮಿಂಚಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ವಿಕೆಫಿಲ್ಮ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ದುಬೈನಲ್ಲೆ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಗುರುದತ್ ಗಾಣಿಗ ಚಿತ್ರಕ್ಕೆ ಹಣ ಹೂಡಿದ್ದಾರೆ.

ಈಗಾಗಲೇ ‘ವೈಲ್ಡ್ ಟೈಗರ್ ಸಫಾರಿ’ ಚಿತ್ರದ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಜೋರಾಗಿ ನಡೀತಿದೆ. ಹೊಸ ವರ್ಷದ ಬೆನ್ನಲ್ಲೇ ದುಬೈನಲ್ಲಿ ಚಿತ್ರದ ಟೀಸರ್ ಲಾಂಚ್ ಆಗಿದೆ. ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ನೆರವೇರಿದೆ. ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್‌ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೀತು.
ಟೀಸರ್‌ನಲ್ಲಿ ನಾಯಕ ಶಿಥಿಲ್ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆಕ್ಷನ್ ರಿವೇಂಜ್ ಕಥೆ ಒಳಗೊಡಿರುವ ಸಿನಿಮಾ ಇದು. ಆದರೆ ಮಾನಸ ಕಳ್ಳಸಾಗಾಣಿಕೆ ಎಳೆ ಕೂಡ ಚಿತ್ರದಲ್ಲಿದೆ. ‘KGF’ ಸಿನಿಮಾ ನಟ ಅವಿನಾಶ್ ಹಾಗೂ ಅಚ್ಯುತ್ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಕೂಡ ನಟಿಸಿದ್ದಾರೆ. ಸೂಪರ್ ಹಿಟ್ ‘ಎಬಿಸಿಡಿ’ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಕೂಡ ಕನ್ನಡದ ‘ಟೈಗರ್ ಸಫಾರಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಟೀಸರ್ ನೋಡಿ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಫಿದಾ ಆಗಿದ್ದಾರೆ. ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್‌ನಲ್ಲಿ ಸಿನಿಮಾ ಇವೆಂಟ್ ಮಾಡಿರುವುದು ಇದೇ ಮೊದಲು. ಬಾಲಿವುಡ್‌ನ ಯಾವ ಸ್ಟಾರ್‌ಗಳಿಗೂ ಈ ಅವಕಾಶ ಸಿಕ್ಕಿರಲಿಲ್ಲ. ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ ಟೀಸರ್ ಅಲ್ಲಿ ಅನಾವರಣ ಆಗಿರುವುದು ವಿಶೇಷ.
ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡ ಶೀಘ್ರದಲ್ಲೇ ತೆರೆಮೇಲೆ ‘ವೈಲ್ಡ್ ಟೈಗರ್ ಸಫಾರಿ’ ತೋರಿಸಲಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಟೀಸರ್‌ನಲ್ಲಿ ಪ್ರತಿ ಫ್ರೇಮ್ ಕಣ್ಣೀಗೆ ಹಬ್ಬ ಎನ್ನುವಂತಿದೆ. ಆದರೆ ಸಿನಿಮಾ ಕೂಡ ಅದೇ ಮಜಾ ಕೊಡುತ್ತಾ ಕಾದು ನೋಡಬೇಕಿದೆ. ಕೇಚಾ ಖಂಫಕ್ಡೀ ಹಾಗೂ ಮಾಸ್ ಮಾದ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.
ಹಾಡುಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಮೋಹನ್ ಬಿ. ಕೆರೆ ಹಾಗೂ ಸಂದೀಪ್ ಜಿ ಶರ್ಮಾ ಚಿತ್ರಕ್ಕೆ ಸೆಟ್‌ಗಳನ್ನು ಹಾಕಿದ್ದಾರೆ. ಸದ್ಯ ‘ಟಾಕ್ಸಿಕ್’ ಚಿತ್ರಕ್ಕೆ ಛಾಯಾಗ್ರಾಹಕರಾಗಿರುವ ರಾಜೀವ್ ರವಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ವೈಲ್ಡ್ ಟೈಗರ್ ಸಫಾರಿ’ ಸಿನಿಮಾ ಆಕ್ಷನ್ ಪ್ರಿಯರಿಗೆ ಭರ್ಜರಿ ಮನರಂಜನೆ ಹೊತ್ತು ಬರ್ತಿದೆ. ರಾಘವ್ ವಿನಯ್ ಕನ್ನಡ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ದೊಡ್ಡದಾಗಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀಯಿದೆ.
