ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು.
ಈಗೀಗ ಈ ಟ್ಯಾಟೂ ಟ್ರೆಂಡ್ ತುಸು ಹೆಚ್ಚಾಗಿದೆ. ಸದ್ಯ ಇದೇ ತರಹದ ಅಭಿಮಾನ ಕಂಡು ”ಬಿಗ್ ಬಾಸ್”ಕನ್ನಡ ಸೀಸನ್ 12ರ ಮೂರನೇ ರನ್ನರ್ ಅಪ್ ಕಾವ್ಯ ಶೈವ ಬೇಸರಗೊಂಡಿದ್ದಾರೆ. ಪ್ರೀತಿಯ ಎಚ್ಚರಿಕೆ ನೀಡಿದ್ಧಾರೆ. ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಕಾವ್ಯ ಶೈವ ”ಟ್ಯಾಟೂ ಹಾಕಿಸಿಕೊಳ್ಳುತ್ತಿರುವವರ ಬಗ್ಗೆ ನಾನು ಮಾತಾಡಬೇಕು. ನಾನು ಇದನ್ನು ಪ್ರೋತ್ಸಾಹಿಸುವುದಿಲ್ಲ, ಬೆಂಬಲಿಸುವುದಿಲ್ಲ ಎಂದು ಹೇಳಿದ್ಧಾರೆ. ಜೀವನಪೂರ್ತಿ ನಿಮ್ಮ ಸ್ಕಿನ್ ಮೇಲೆ ಆ ಟ್ಯಾಟೂ ಇರುತ್ತೆ. ಒಬ್ಬರು ನಮ್ಮ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಅಂದಾಗ ಖುಷಿ ಆಗುತ್ತೆ. ಆದರೆ ಅದರ ಜೊತೆಯಲ್ಲಿ ಬೇಜಾರು ಕೂಡ ಆಗುತ್ತೆ ಎಂದು ಹೇಳಿರುವ ಕಾವ್ಯ ನೀವು ನಮ್ಮ ಹತ್ತಿರ ಬಂದು ಪ್ರೀತಿ ಮತ್ತು ಖುಷಿಯಿಂದ ಮಾತಾಡ್ತಿರಲ್ಲ ನನಗೆ ಅಷ್ಟೇ ಸಾಕು ಎಂದಿದ್ದಾರೆ. ಅದಕ್ಕಿಂತ ಬೇರೆ ನನಗೆ ಏನೂ ಬೇಡ ಎಂದು ಹೇಳಿರುವ ಕಾವ್ಯಾ ದಯವಿಟ್ಟು ಟ್ಯಾಟೂ ಹಾಕಿಸಿಕೊಳ್ಳುವ ನಿರ್ಧಾರವನ್ನು ಮಾಡಬೇಡಿ ಎಂದು ಮನವಿಯನ್ನು ಮಾಡಿದ್ದಾರೆ.
ಇನ್ನೂ ಇದೇ ವೇಳೆ ತಮ್ಮ ”ಬಿಗ್ ಬಾಸ್” ನ ಪ್ರಯಾಣದ ಬಗ್ಗೆಯೂ ಕೂಡ ಹೆಮ್ಮೆ ಪಟ್ಟಿರುವ ಕಾವ್ಯ ಶೈವ, ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪಿಆರ್ ಗಳು ಇಲ್ಲದೇ ”ಬಿಗ್ ಬಾಸ್” ಮನೆಯ ಒಳಗಡೆ ಇರಲು ಸಾಧ್ಯವೇ ಇಲ್ಲ ಅಂತ ನನಗೆ ತುಂಬಾ ಜನ ಹೇಳಿದ್ದರು. ಆದರೂ ಕೂಡ ನಾನು ಧೈರ್ಯ ಮಾಡಿ, ನನಗೆ ಎಷ್ಟು ದಿನ ಆಗುತ್ತೋ ಅಷ್ಟು ದಿನ ಇದ್ದು ಬರೋಣ ಅಂದುಕೊಂಡು ಹೋದೆ ಎಂದು ಹೇಳಿದ್ದಾರೆ. ಮುಂದುವರೆದು, ಹೀಗೆ ಒಳಗಡೆ ಹೋದ ನನಗೆ ಹೊರಗಡೆ ಬಂದು ನೋಡಿದಾಗ ಆಶ್ಚರ್ಯವಾಯ್ತು, ಈ ಪ್ರೀತಿಗೆ ನಾನು ಏನು ಹೇಳಲಿ? ಎಂದು ಪ್ರಶ್ನೆ ಮಾಡಿದ್ಧಾರೆ. ನೀವು ಹಂಚಿಕೊಳ್ಳುವ ಫೋಟೋ ಮತ್ತು ಆ ವಿಡಿಯೋಗಗಳಿಗೆ ನೀವು ಹಾಕುವ ಎಫರ್ಟ್‌ಗೆ ಹ್ಯಾಟ್ಸ್ ಆಫ್ ಎಂದು ನುಡಿದಿದ್ದಾರೆ. ವಿಡಿಯೋವನ್ನ ತಡವಾಗಿ ಮಾಡುತ್ತಿದ್ದೇನೆ. ಕಾರಣ ಬಿಗ್‌ಬಾಸ್‌ನಿಂದ ಹೊರ ಬಂದಮೇಲೆ ನನಗೆ ಇಷ್ಟು ಜನರ ಪ್ರೀತಿ ಸಿಕ್ಕಿದೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಅದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಟೈಮ್ ಹಿಡಿಯಿತು ಎಂದು ಹೇಳಿರುವ ಕಾವ್ಯ ಶೈವ ಅವಕಾಶ ನೀಡಿದ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳನ್ನು ಕೂಡ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಕಿರುತೆರೆಯಿಂದ ವೃತ್ತಿ ಬದುಕು ಶುರು ಮಾಡಿದ ಕಾವ್ಯ, ಈಗಾಗಲೇ ಬೆಳ್ಳಿತೆರೆಗೆ ಬಂದಿದ್ದಾರೆ. ”ಕೊತ್ತಲವಾಡಿ” ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾವ್ಯ ಯಾವ ರೀತಿಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮುಂದಿನ ಚಿತ್ರದ ಕುರಿತು ಯಾವಾಗ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
