Left Ad
ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ - Chittara news
# Tags

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ಅವರ ಹಾಸ್ಯ ಪ್ರೇಕ್ಷಕರ ಮನಗೆದ್ದಿದೆ. ಅವರು ಮನೆಯಲ್ಲಿ ಸದಾ ಉಲ್ಲಾಸ ತುಂಬಿಸುತ್ತಾ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ. ಆದರೆ, ಇತ್ತೀಚಿನ ಘಟನೆಯೊಂದರಿಂದ ಗಿಲ್ಲಿಯ ಹಾಸ್ಯ ಆಟದ ಗಂಭೀರತೆಯನ್ನು ಮರೆಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇತ್ತೀಚೆಗೆ ನಡೆದ ಕಾಯಿನ್ ಟಾಸ್ಕ್ ವೇಳೆ ಗಿಲ್ಲಿ ಅವರ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ಅಸಮಾಧಾನ ವ್ಯಕ್ತಪಡಿಸಿದರು. ಗಿಲ್ಲಿ ತಮ್ಮ ಹಾಸ್ಯದಿಂದ ಆಟವನ್ನು ಹಾಸ್ಯಾಸ್ಪದವಾಗಿಸುತ್ತಿದ್ದಾರೆ, ಆದರೆ ಅದು ಮಿತಿ ಮೀರುತ್ತಿದೆ ಎಂಬ ಅಭಿಪ್ರಾಯವನ್ನು ಕಾವ್ಯಾ ಹಂಚಿಕೊಂಡರು. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿಯೂ ಭಾರಿ ಚರ್ಚೆಗೆ ಕಾರಣವಾಗಿದೆ.

ಆರಂಭದಲ್ಲಿ ಗಿಲ್ಲಿ ಆಟವನ್ನು ಅತ್ಯಂತ ಶಿಸ್ತಿನಿಂದ ಆಡುತ್ತಾ ಎಲ್ಲರ ಮೆಚ್ಚುಗೆ ಪಡೆದಿದ್ದರು. ಸುದೀಪ್ ಅವರಿಂದಲೂ ಪ್ರಶಂಸೆ ಪಡೆದ ಅವರು, ರಕ್ಷಿತಾ ಶೆಟ್ಟಿಗೆ ಅನ್ಯಾಯ ಆಗುತ್ತಿದೆ ಎಂದಾಗ ಮುನ್ನಡೆದು ಅವರ ಪರ ನಿಂತಿದ್ದರು. ಈ ನಡೆ ಅವರಿಗೆ ಜನಮೆಚ್ಚುಗೆ ತರಿಸಿತ್ತು.

ಆದರೆ ಈಗ ಸ್ಥಿತಿ ಬದಲಾಗಿದೆ. ಬಿಗ್ ಬಾಸ್ ನೀಡಿದ ಹೊಸ ಟಾಸ್ಕ್‌ನಲ್ಲಿ ಸ್ಪರ್ಧಿಗಳು ನಕಲಿ ಕಾಯಿನ್‌ಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗಿತ್ತು. ಈ ಕಾಯಿನ್‌ಗಳ ಆಧಾರದ ಮೇಲೆ ಮುಂದಿನ ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಆಯ್ಕೆ ಮಾಡಲಾಗುವುದಿತ್ತು.

ಗಿಲ್ಲಿ ಮತ್ತು ಕಾವ್ಯಾ ಒಂದೇ ತಂಡದಲ್ಲಿ ಇದ್ದರು. ಗಿಲ್ಲಿ ಅವರು ತಮ್ಮ ಕಾಯಿನ್‌ಗಳನ್ನು ಬಟ್ಟೆ ಒಳಗೆ ಬಚ್ಚಿಟ್ಟಿದ್ದರು. ಆದರೆ ರಘು ಈ ಮೊದಲು ಅವರಿಗೆ ಮೋಸ ಮಾಡಿ ಕಾಯಿನ್ ಕದ್ದಿದ್ದರು. ಇಷ್ಟಾದರೂ ಗಿಲ್ಲಿ ಬುದ್ಧಿ ಕಲಿಯದೆ ಮತ್ತೆ ರಘು ಪಕ್ಕದಲ್ಲೇ ಕುಳಿತರು. ಮಾತಿನಲ್ಲಿ ಹಾಸ್ಯ ಮಾಡುತ್ತಾ ತಾವು ಕಾಯಿನ್‌ಗಳನ್ನು ಎಲ್ಲಿ ಇಟ್ಟಿದ್ದಾರೆಂಬುದನ್ನೇ ಬಾಯ್ಬಿಟ್ಟು ಹೇಳಿದರು!

ಅದನ್ನು ಉಪಯೋಗಿಸಿಕೊಂಡ ರಘು ಮತ್ತೆ ಅವರ ಕಾಯಿನ್ ಕದ್ದರು. ಆಗ ಗಿಲ್ಲಿ ಕೋಪದಿಂದ ಕಿರುಚಾಡಿದರು. ಈ ಘಟನೆಗೆ ಕಾವ್ಯಾ ತಾಳ್ಮೆ ಕಳೆದುಕೊಂಡು ಗಿಲ್ಲಿಗೆ ತಿರುಗೇಟು ನೀಡಿದರು –
“ನೀನು ಹೋಗಿ ಟಾಂಟ್ ಮಾಡ್ತಾ, ಅವರನ್ನು ರೇಗಿಸ್ತಾ ಇದೀಯಲ್ಲಾ? ಅದರಿಂದ ಏನು ಪ್ರಯೋಜನ? ಅವರು ರೇಗಿಸಿ ತಿರುಗೇಟು ಕೊಡ್ತಾರೆ. ನೀನೇ ನಿನಗೆ ತೊಂದರೆ ತರಿಸ್ಕೊಂಡಂತಾಗಿದೆ,” ಎಂದು ಕಾವ್ಯಾ ಗಿಲ್ಲಿಗೆ ಪ್ರಶ್ನೆ ಮಾಡಿದರು.

ಈ ಮಾತಿನ ಬಳಿಕ ಗಿಲ್ಲಿ ಮೌನವಾಗಿಬಿಟ್ಟರು. ಅವರ ಹಾಸ್ಯ ಮತ್ತು ನಗುವಿನ ನಡುವೆ ಆಟದ ಗಂಭೀರತೆ ಎಲ್ಲೋ ಮಾಯವಾಗಿದೆಯೇ ಎಂಬ ಚರ್ಚೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೂ ಹರಿದಾಡುತ್ತಿದೆ.

Spread the love
Translate »
Right Ad