ಪ್ರೀತಿ, ಎಲ್ಲಾ ಬೇಲಿ ಮತ್ತು ಗಡಿ ರೇಖೆಗಳನ್ನು ಮೀರಿದ್ದಾದರೆ, ಸ್ನೇಹ ಅದಕ್ಕೂ ಮೀರಿದ್ದು. ಆ ಸ್ನೇಹಕ್ಕೆ ಜಾತಿ, ಮೇಲು-ಕೀಳು ಎನ್ನುವ ಕಂಟಕ ಆವರಿಸಿಕೊಂಡು ಬದುಕಿಗೇ ಮುಳುವಾಗುವ, ಚಿಂತನೆಗೆ ಒಡ್ಡುವ ಕಥೆ ಹೊಂದಿದ ಚಿತ್ರವೇ `ಕರ್ಕಿ’. ‘ಕರ್ಕಿ ನಾನು ಬಿಎ ಎಲ್‌ಎಲ್‌ಬಿ’ ಚಿತ್ರ ಪ್ರೇಕ್ಷಕರ ಮನಸ್ಸುಗಳಿಗೆ ನಾಟುವುದು ಅದರ ಕಥೆಯಿಂದ. ತಮಿಳಿನಲ್ಲಿ ಮಾರಿ ಸೆಲ್ವರಾಜ ನಿರ್ದೇಶಿದ್ದ ‘ಪರಿಯೇರುಂ ಪೆರುಮಾಳ್’ ಚಿತ್ರವನ್ನು ಬಹುತೇಕರು ನೋಡಿದ್ದಾರೆ. ಅದರ ಕನ್ನಡ ವರ್ಷನ್ ಈ ‘ಕರ್ಕಿ’.
ಮೂಲ ಚಿತ್ರದಂತೆಯೇ ‘ಕರ್ಕಿ’ ಕಾಡದೇ ಇದ್ದರೂ, ಖ್ಯಾತ ನಿರ್ದೇಶಕ ಪವಿತ್ರನ್ ಮಾಡಿರುವ ಕನ್ನಡೀಕರಣದ ಚಿತ್ರಕಥೆ ಕನ್ನಡಿಗರಿಗೆ ಬೇರೆಯದೇ ರೀತಿಯಲ್ಲಿ ಕಾಡುತ್ತದೆ. ಗಾಢ ಅನುಭವಗಳು, ಭಾವನೆಗಳು, ಸಂಭಾಷಣೆಗಳಲ್ಲಿ ಹೇಳಲಾಗದ್ದನ್ನು ಒಂದು ನೋಟದಲ್ಲಿ ಹೇಳುವ, ಸಣ್ಣ ದೃಶ್ಯದಲ್ಲಿ ತಲುಪಿಸುವ, ಕಪ್ಪು ನಾಯಿ, ಚಿತ್ರದ ಕೊನೆಯಲ್ಲಿ ಬರುವ ಕಾಫಿ ಗ್ಲಾಸಿನ ದೃಶ್ಯ ಸಾಕಷ್ಟು ಪ್ರಭಾವ ಬೀರುತ್ತದೆ. ಪವಿತ್ರನ್ ನಿರ್ದೇಶನದ ‘ಕರ್ಕಿ’ ಕತೆಯ ಕಾರಣಕ್ಕೆ ನೋಡಲೇ ಬೇಕಾದ ಚಿತ್ರ. ಜೆಪಿ ರೆಡ್ಡಿ, ಮೀನಾಕ್ಷಿ, ಬಲರಾಜವಾಡಿ, ಕಿಲ್ಲರ್ ತಾತಪ್ಪ ಮತ್ತು ಮುತ್ತುವಿನ ಅಪ್ಪನ ಪಾತ್ರಧಾರಿಯ ನಟನೆ ಸಾಕಷ್ಟು ಕಡೆ ಕಾಡುತ್ತದೆ. ಸಾಧು ಕೋಕಿಲಾ ನಗಿಸಿದರೆ, ಯತಿರಾಜ್, ಸ್ವಾತಿ ಪಾತ್ರಗಳು ಕತೆಗೆ ಪೂರಕವಾಗಿ ಮೂಡಿಬಂದಿದೆ.
ಲಾಯರ್ ಆಗುವ ಆಸೆ ಹೊತ್ತವನ ಕಥೆ ಚಿತ್ರದಲ್ಲಿದೆ. ಸಿನಿಮಾವನ್ನು ಪ್ರಕಾಶ್ ಪಳನಿ ನಿರ್ಮಿಸಿದ್ದು, ತಮ್ಮ ಕನ್ನಡ ಪ್ರೇಮದಿಂದ ಕನ್ನಡಿಗರಿಗೆ ಒಂದು ಅದ್ಭುತ ಕಥೆ ಮಿಸ್ ಆಗಬಾರದೆಂದು ನಿರ್ಮಿಸಿದ ಚಿತ್ರಕ್ಕೆ ಸಾರ್ಥಕತೆ ಸಿಕ್ಕಿದೆ. ಜಯಪ್ರಕಾಶ್ ಹಾಗೂ ಮೀನಾಕ್ಷಿ ಮುಗ್ಧ ಪ್ರೇಮಿಗಳಾಗಿ ಸಿನಿಮಾ ಮುಗಿದ ಮೇಲು ನೆನಪಿನಲ್ಲಿ ಉಳಿಯುತ್ತಾರೆ. ಉಳಿದಂತೆ ಮಿಮಿಕ್ರಿ ಗೋಪಿ, ವಾಲೆ ಮಂಜುನಾಥ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಹೃಷಿಕೇಶ್ ಕ್ಯಾಮೆರಾ, ಕವಿರಾಜ್ ಸಾಹಿತ್ಯ ಚಿತ್ರದ ಹೈಲಟ್ಸ್. ಶಿಕ್ಷಣ, ಜಾತಿ ವ್ಯವಸ್ಥೆ, ಪ್ರೀತಿ-ಪ್ರೇಮ, ಮುಗ್ಧ ಗೆಳೆತನ, ಸ್ವಾರ್ಥ.. ಹೀಗೆ ಸಾಕಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲುವ `ಕರ್ಕಿ’ ಒಂದು ಪೈಸಾ ವಸೂಲ್ ಚಿತ್ರ.