ಸ್ಯಾಂಡಲ್‌ವುಡ್‌ನ ಭರವಸೆಯ ಕಲಾವಿದರಲ್ಲಿ ಪ್ರಮೋದ್ ಶೆಟ್ಟಿ ಕೂಡ ಒಬ್ಬರು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ತೂತುಮಡಿಕೆ, ಕಾಂತಾರ ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಅನ್ನೋ ಸಿನಿಮಾದಲ್ಲಿ ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಮೋದ್ ಶೆಟ್ಟಿ ಹೊಸದೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಎಂಬ ಶೀರ್ಷಿಕೆ ಇಡಲಾಗಿದೆ. ಇಂದು ಪ್ರಮೋದ್ ಶೆಟ್ಟಿ ಹುಟ್ಟುಹಬ್ಬ..ಅವರ ಜನ್ಮದಿನದ ಅಂಗವಾಗಿ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಫಸ್ಟ್ ಲುಕ್ ರಿಲಿಸ್ ಮಾಡಲಾಗಿದೆ.
‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರವು ಒಂದು ಊರಿನಲ್ಲಿ ಆದ ಅಪಾರ್ಥವೂ ಅನಾಹುತವಾಗಿ, ಅನಾಹುತವು ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ವಡ್ಡಾರಾಧಕ ಹಾಗೂ ಶಬರಿ ಎನ್ನುವ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಆಕ್ಷನ್ ಕಟ್ ಹೇಳಿದ್ದಾರೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಚಂದ್ರಕಲಾ ಚಿತ್ರದ ಭಾಗವಾಗಿದ್ದಾರೆ.