ಪವನ್ ಕುಮಾರ್ ನಿರ್ದೇಶನದ ಧೂಮಂ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಕೇಳಿಬರುತ್ತಿವೆ. ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಮಾತನಾಡಿದ್ದಾರೆ. ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಲೂಸಿಯಾ ಖ್ಯಾತಿಯ ಪವನ್ ಕುಮಾರ್, ಯೂ-ಟರ್ನ್ ಸಿನಿಮಾ ನಿರ್ದೇಶಿಸಿ ಬರೋಬ್ಬರಿ ಏಳು ವರ್ಷದ ಬಳಿಕ ಧೂಮಮ್ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಶುಕ್ರವಾರವಷ್ಟೆ ಬಿಡುಗಡೆ ಆಗಿದ್ದು ಸಿನಿಮಾಕ್ಕೆ ಋಣಾತ್ಮಕ ವಿಮರ್ಶೆಗಳು ಕೇಳಿ ಬರುತ್ತಿವೆ. ಫಹಾದ್ ಫಾಸಿಲ್ ನಟಿಸಿರುವ ಧೂಮಂ ಸಿನಿಮಾ ಮೂಲತಃ ಮಲಯಾಳಂ ಸಿನಿಮಾ ಆಗಿದ್ದು ಈ ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ವಿಮರ್ಶೆಗಳು ಹರಿದಾಡುತ್ತಿವೆ. ಈ ಬಗ್ಗೆ ಪವನ್ ಕುಮಾರ್ ವಿಡಿಯೋ ಮೂಲಕ ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. “ನಾನು ಬಹಳ ವರ್ಷಗಳ ಬಳಿಕ ಈ ಸಿನಿಮಾ ಮಾಡಿದ್ದೇನೆ, ಏಳು ವರ್ಷಗಳ ಹಿಂದೆಯ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ವಿಮರ್ಶೆಗಳ ಹಾವಳಿ ಬಹಳ ಹೆಚ್ಚಾಗಿದೆ. ಎಷ್ಟು ಬೇಗ ವಿಮರ್ಶೆಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆಂದರೆ ಸಿನಿಮಾ ಬಗ್ಗೆ ಯೋಚಿಸಿ ವಿಮರ್ಶೆ ನೀಡುವ ಸಮಯವನ್ನೂ ಸಹ ಅವರು ತೆಗೆದುಕೊಳ್ಳುತ್ತಿಲ್ಲ. ಧಾವಂತದಲ್ಲಿ ನಾ-ಮುಂದು ತಾ ಮುಂದು ಎಂದು ಅಪ್ಲೋಡ್ ಮಾಡುತ್ತಾರೆ. ಆದಷ್ಟು ಬೇಗ ಜನರನ್ನು ಸಿನಿಮಾ ಬಗ್ಗೆ ಇನ್ಫ್ಲುಯೆನ್ಸ್ ಮಾಡಬೇಕು ಎಂದು ಅಪೇಕ್ಷಿಸುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಬಿಡುಗಡೆಗೆ ಸನಿಹದಲ್ಲಿ ‘ಬ್ಲಿಂಕ್’….ರೀ-ರೆಕಾರ್ಡಿಂಗ್ ಕಂಪ್ಲೀಟ್
ಸಿನಿಮಾ ವಿಮರ್ಶೆ ಮಾಡುವವರು ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಿಲ್ಲ. ಮಾತ್ರವಲ್ಲ ಸಿನಿಮಾಕ್ಕೆ ಒಂದು ಅವಕಾಶವನ್ನು, ಸಣ್ಣ ಕಾಲಾವಕಾಶವನ್ನೂ ಕೊಡದೆ ಸಿನಿಮಾದ ವಿರುದ್ಧ ವಿಮರ್ಶೆಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ, ನಿಮ್ಮ ನಿರ್ಣಯವನ್ನು ನೀವು ಮಾಡಿ. ಒಬ್ಬರಿಗೆ ಇಷ್ಟವಾದ ಸಿನಿಮಾ ಇನ್ನೊಬ್ಬರಿಗೆ ಇಷ್ಟವಾಗದೇ ಹೋಗಬಹುದು. ಸಿನಿಮಾದ ಟ್ರೈಲರ್, ಪೋಸ್ಟರ್ಗಳ ಮೇಲೆ ಸಿನಿಮಾ ನೋಡುವ ನಿರ್ಣಯ ಮಾಡಿ, ವಿಮರ್ಶೆಗಳ ಆಧಾರದಲ್ಲಿ ಸಿನಿಮಾ ನೋಡುವುದೋ ಬೇಡವೋ ಎಂಬ ಬಗ್ಗೆ ನಿರ್ಣಯ ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ. “ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ಒಂದು ದೊಡ್ಡ ಸೂಪರ್ ಹಿಟ್ ಸಿನಿಮಾ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಆ ಸಿನಮಾ ಆಸ್ಕರ್ಗೆ ಸಹ ಹೋಯಿತು ಆದರೆ ಆ ಸಿನಿಮಾ ನೋಡಿದ ಮೇಲೆ ನನಗೆ ಇಷ್ಟವಾಗಿರಲಿಲ್ಲ. ಅದಕ್ಕೆ ನನಗಿರುವ ವ್ಯಕ್ತಿತ್ವ, ನಾನು ಬೆಳೆದು ಬಂದ ಪ್ರಪಂಚ ಕಾರಣ ಆಗಿರಬಹುದು. ಹಾಗೆಯೇ ಪ್ರತಿ ಸಿನಿಮಾಗಳು ಪ್ರತಿಯೊಬ್ಬರಿಗೂ ಬೇರೆ-ಬೇರೆ ರೀತಿಯಲ್ಲಿ ತಟ್ಟುತ್ತವೆ, ಬೇರೆ-ಬೇರೆ ರೀತಿಯಲ್ಲಿ ಅರ್ಥವಾಗುತ್ತವೆ. ಹಾಗಾಗಿ ಬೇರೆಯವರ ಅಭಿಪ್ರಾಯದ ಮೇಲೆ ನಿರ್ಭರವಾಗದೆ ನೀವೇ ಹೋಗಿ ಸಿನಿಮಾ ನೋಡಿ ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳಿ” ಎಂದಿದ್ದಾರೆ ಪವನ್ ಕುಮಾರ್.
ಇದನ್ನೂ ಓದಿ: ಸೆ.15ಕ್ಕೆ ಬಹುನಿರೀಕ್ಷಿತ `ಬೋಯಾಪಾಟಿರಾಪೋ’ ರಿಲೀಸ್
ಪವನ್ ಕುಮಾರ್ ನಿರ್ದೇಶಿಸಿರುವ ಧೂಮಂ ಸಿನಿಮಾವು ಸಿಗರೇಟು ಚಟ ಅದರ ದುಷ್ಪರಿಣಾಮಗಳ ಕುರಿತಾದದ್ದಾಗಿದೆ. ಈ ಸಿನಿಮಾವನ್ನು ಹತ್ತು ವರ್ಷಕ್ಕೂ ಹಿಂದೆಯೇ ಪವನ್ ಕುಮಾರ್ ಬರೆದುಕೊಂಡಿದ್ದರು. ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್, ನಟಿ ಅಪರ್ಣಾ ಬಾಲಮುರಳಿ, ರೋಶ್ಯೂ ಮ್ಯಾಥ್ಯು, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ.ಪೂರ್ಣ ಚಂದ್ರ ತೇಜಸ್ವಿ ಸಂಗೀತವಿದೆ.