ಕನ್ನಡದ ಕಾಂತಾರ ಸಿನಿಮಾ ನಾಳೆಯಿಂದ ಹಿಂದಿಯಲ್ಲಿ (Hindi) 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್, ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್, ಕಾಂತಾರದ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ.
ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರ ರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ ‘ಕಾಂತಾರ’ ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನ ಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹಾಗೂ ಚಿತ್ರವನ್ನು ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರ ಬಗ್ಗೆ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಈಗ ಎಲ್ಲಿ ನೋಡಿದರೂ ‘ಕಾಂತಾರ’ ಚಿತ್ರದ್ದೇ ಮಾತು. ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಇಂತಹ ಅದ್ಭುತ ಸಿನಿಮಾ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14, ಶುಕ್ರವಾರ ಹಿಂದಿ ಭಾಷೆಯಲ್ಲೂ ‘ಕಾಂತಾರ ‘ ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500 ಕ್ಕೂ ಅಧಿಕ ಸ್ಕೀನ್‌ಗಳಲ್ಲಿ ‘ಕಾಂತಾರ’ ಪ್ರದರ್ಶನವಾಗಲಿದೆ.
ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ (Rishabh Shetty) ಬಾಲಿವುಡ್ (Bollywood) ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ “ಕೆ.ಜಿ.ಎಫ್ 2” ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿದ್ದು ಗಮನಾರ್ಹ. ಈಗ “ಕಾಂತಾರ” ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.