‘ಕಾಂತಾರ’ ಸಿನಿಮಾ ಬಿಡುಗಡೆಯಾದ ಬಳಿಕ ದೈವದ ಅನುಕರಣೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ದೈವ ನರ್ತನದ ನಕಲಿ ವಿಡಿಯೋಗಳು ಹರಿದಾಡುತ್ತಿವೆ. ಇದರಿಂದ ಬೇಸತ್ತ ಕೆಲ ದೈವಾರಾಧಕರು ಹಾಗೂ ದೈವನರ್ತಕರು ಇದೀಗ ದೈವದ ಅಪಹಾಸ್ಯ ಮಾಡುತ್ತಿರುವವರ ವಿರುದ್ಧ ದೈವಸ್ಥಾನದಲ್ಲೇ ದೂರು ಸಲ್ಲಿಸಿದ್ದಾರೆ.

ಮಂಗಳೂರು ಬಜಪೆ ಸಮೀಪದ ಶ್ರೀ ಕ್ಷೇತ್ರ ಪೆರಾರ ಹಾಗೂ ಬಲವಂಡಿ–ಪಿಲಿಚಂಡಿ ದೈವಸ್ಥಾನಗಳಲ್ಲಿ ನಡೆದ ಪ್ರಾರ್ಥನೆ ವೇಳೆ, ದೈವದ ಆವೇಶದಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದಂತಾಗಿದೆ —
“ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಆ ಹಣವೇ ಅವರಿಗೆ ಆಸ್ಪತ್ರೆ ಸೇರಿಸುವಂತೆ ಮಾಡುತ್ತೇನೆ. ದೈವಾರಾಧನೆಗೆ ಅಪಚಾರ ಮಾಡಿದರೆ ಬುದ್ಧಿ ಕಲಿಸುತ್ತೇನೆ!”
ದೈವದ ಈ ಮಾತುಗಳು ಕರಾವಳಿ ಮತ್ತು ಮಲೆನಾಡಿನ ಭಕ್ತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಚಿತ್ರಗಳು ದೈವಭಕ್ತಿಯ ನೈಜತೆಯನ್ನು ಚಿತ್ರಿಸಿದರೂ, ಕೆಲವು ದೈವಾರಾಧಕರು ಈ ಚಿತ್ರಗಳು ದೈವಾರಾಧನೆಗೆ ವಾಣಿಜ್ಯ ಮುಖ ನೀಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಕೂಡ ಹಿಂದಿನಂತೆ “ದೈವದ ಅನುಕರಣೆ ಬೇಡ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿತ್ತು. ಆದರೂ ಜನರಲ್ಲಿ “ದೈವದ ಪಾತ್ರ ನಟನೆ” ಎಂಬ ಟ್ರೆಂಡ್ ನಿಲ್ಲದೆ ಮುಂದುವರಿದಿದೆ.
