‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ. ಟ್ರೇಲರ್ ಬಿಡುಗಡೆಯಾದ ಬಳಿಕ ಚಿತ್ರವು ಭಾರೀ ನಿರೀಕ್ಷೆ ಮೂಡಿಸಿದೆ. ಈ ನಡುವೆ ನಿರ್ದೇಶಕ-ನಟ ರಿಷಬ್ ಶೆಟ್ಟಿ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಆಸಕ್ತಿದಾಯಕ ವಿಚಾರ ಹಂಚಿಕೊಂಡಿದ್ದಾರೆ.

‘ಕಾಂತಾರ’ ಮೊದಲ ಭಾಗದ ಕ್ಲೈಮ್ಯಾಕ್ಸ್ ಬರವಣಿಗೆಯಲ್ಲಿ ರಾಜ್ ಬಿ ಶೆಟ್ಟಿ ಸಹಾಯ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಈ ಬಾರಿ ಅವರು ‘ಕಾಂತಾರ: ಚಾಪ್ಟರ್ 1’ನಲ್ಲಿ ಭಾಗಿಯಾಗಿಲ್ಲ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ರಿಷಬ್ ಉತ್ತರಿಸುತ್ತಾ, “ಈ ಚಿತ್ರದಲ್ಲಿ ರಾಜ್ ಅಥವಾ ರಕ್ಷಿತ್ ಯಾರೂ ಸಹ ಪಾಲ್ಗೊಂಡಿಲ್ಲ. ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಬರವಣಿಗೆಯ ಕಾರ್ಯದಲ್ಲಿ ಶನೀಲ್ (ಸು ಫ್ರಮ್ ಸೋ ಖ್ಯಾತಿ) ನನ್ನ ಜೊತೆ ಇದ್ದರು” ಎಂದು ಹೇಳಿದರು.
ಹಿಂದೆ ‘ಸು ಫ್ರಮ್ ಸೋ’ ಸಿನಿಮಾ ಯಶಸ್ಸಾದಾಗ ರಿಷಬ್ ಶೆಟ್ಟಿ ಸ್ವತಃ ರಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಜೊತೆಗೆ ಕಲೆಕ್ಷನ್ ವಿಚಾರದಲ್ಲಿಯೂ ಆಸಕ್ತಿ ತೋರಿಸಿದ್ದರು. ಈಗ ಎಲ್ಲರ ಕಣ್ಣು ‘ಕಾಂತಾರ: ಚಾಪ್ಟರ್ 1’ ನೋಡಿ ರಾಜ್ ಬಿ ಶೆಟ್ಟಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರತ್ತ ನೆಟ್ಟಿದೆ.
