ಕುಂದಾಪುರದ ಕೆರಾಡಿ ಎಂಬ ಸಣ್ಣ ಗ್ರಾಮದ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಹುಡುಗನೊಬ್ಬ ಇಂದು ಇಡೀ ಭಾರತವೇ ತಿರುಗಿ ನೋಡುವಂತಹ ಸಿನೆಮಾ ಮಾಡುವ ಮಟ್ಟಕ್ಕೆ ಬೆಳೆದಿದ್ದಾನೆ ಅನ್ನೋದು ಸಿನಿಮಾ ವಿಮರ್ಶೆಗೂ ಹಂಚಿಕೊಳ್ಳಬೇಕಾದ ಹೆಮ್ಮೆಯ ವಿಷಯ. ಸಾವಿರ ಕೋಟಿಗೂ ಹೆಚ್ಚಿನ ಹಣ ಬಾಕ್ಸಾಫೀಸಿನಲ್ಲಿ ಕಾಂತಾರ ಸಂಪಾದಿಸುವ ನಿರೀಕ್ಷೆ ಹುಟ್ಟಿಸುವುದೂ ಕೂಡ ಸಣ್ಣ ಮಾತಲ್ಲ. ಸಿನೆಮಾ ಕಲೆಯೂ ಹೌದು, ವ್ಯಾಪಾರವೂ ಹೌದು ಎಂಬುದನ್ನು ಶೆಟ್ರು ಸರಿಯಾಗಿ ಅರ್ಥಮಾಡಿಕೊಂಡಿದ್ದರ ಪರಿಣಾಮವೇ ಇಂತಹ ಮಹಾನ್ ಸಾಧನೆ ಸಾಧ್ಯವಾಗಿದೆ. ತನ್ನ ಮಣ್ಣಿನ ಮೇಲೆ ಎದ್ದುನಿಂತ ಬೃಹದ್ ಆಕಾರದ ಸಂಸ್ಕೃತಿ, ಸಂಪ್ರದಾಯ, ಆಚರಣೆ ಎಂಬ ಆಲದ ಮರದ ಬೇರುಗಳ ಬಗ್ಗೆ `ಕಾಂತಾರ ಚಾಪ್ಟರ್–1’ರಲ್ಲಿ ರಿಷಭ್ ಸಮರ್ಥವಾಗಿ ಬೆಳಕು ಚೆಲ್ಲಿದ್ದಾರೆ.
ಸರಿಯಾಗಿ ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ `ಕಾಂತಾರ‘ ಸಿನಿಮಾವು ದೇಶಾದ್ಯಂತ ಮಾಡಿದ ಮೋಡಿ ಸಾಮಾನ್ಯದಲ್ಲ. ಬ್ಲಾಕ್ ಆಫೀಸ್ನಲ್ಲಿ ಧೂಳೆಬ್ಬಿಸಿ, ಪ್ರಚಂಡ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಗೆಲುವಿನ ಹಿಂದೆಯೇ ಶೆಟ್ರು `ಕಾಂತಾರ‘ ಸಿನಿಮಾದ ಪ್ರೀಕ್ವೇಲ್ ಮಾಡ್ತಿವಿ, ಕ್ರಿ.ಶ. 400 – 500ರ ಕಾಲಘಟ್ಟದ ಕಥೆ ಹೇಳ್ತೀವಿ ಎಂದು ಹೇಳಿದಾಗ, ನಿಜಕ್ಕೂ ಏನು ಮಾಡಬಹುದು ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. `ಕಾಂತಾರ: ಚಾಪ್ಟರ್ 1‘ , ಬರೀ ಸಿನಿಮಾ ಅಲ್ಲ ಅದೊಂದು ನಂಬಿಕೆಯ ದಿಗ್ಧರ್ಶನ ಎಂಬುದು ಸಾಬೀತಾಗಿದೆ. ‘ಕಾಂತಾರ: ಚಾಪ್ಟರ್ 1‘ ಸಿನಿಮಾದಲ್ಲಿ ಸುಮಾರು 1500 ವರ್ಷ ಹಿಂದಕ್ಕೆ ಹೋಗಿದ್ದಾರೆ. ಕ್ರಿ.ಶ.4–5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಬೆರೆಯದೇ ಜಗತ್ತನ್ನು ಪ್ರೇಕ್ಷಕ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ ಶೆಟ್ಟಿ&ಗ್ಯಾಂಗ್.
ಬಾ0ಗ್ರಾ ರಾಜ ಮನೆತನ ಮತ್ತು ಈಶ್ವರನ ಹೂದೋಟದ ಜನರ ನಡುವಿನ ಆಂತರಿಕ ಮತ್ತು ಬಹಿರಂಗ ಯುದ್ಧವನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಕಥೆ ‘ಕಾಂತಾರ: ಚಾಪ್ಟರ್ 1’ ಚಿತ್ರದ್ದು. ಈಶ್ವರ ಹೂದೋಟದ ಮುಂಚೂಣಿಯ ಯುವ ನಾಯಕ ಬೇರ್ಮೆ ಆಗಿ ನಟ ರಿಷಬ್ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ (ರಾಜಶೇಖರ) ಮತ್ತು ಗುಲ್ಶನ್ ದೇವಯ್ಯ (ಕುಲಶೇಖರ) ಅವರು ಕಾಣಿಸಿಕೊಂಡಿದ್ದಾರೆ. `ಈಶ್ವರನ ಹೂದೋಟ’ದ ವಿಚಾರದಲ್ಲಿ `ಮಯಾಕಾರ’ ನಡೆಸುವ ದೈವದ ಆಟ ಏನು ಎಂಬುದನ್ನು ಶೆಟ್ಟಿ&ಗ್ಯಾಂಗ್ ಅದ್ಭುತ ಮೇಕಿಂಗ್‌ನೊ0ದಿಗೆ ತೆರೆಯ ಮೇಲೆ ತೆರೆದಿಟ್ಟಿದೆ.
ನಿರ್ದೇಶನ ಮತ್ತು ನಟನೆ ಎರಡರಲ್ಲೂ ಅದ್ಭುತ!
‘ಕಾಂತಾರ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ರಿಷಬ್ ಶೆಟ್ಟಿ, ಈ ಬಾರಿಯೂ ತಮ್ಮ ನಟನಾ ವಿಶ್ವರೂಪವನ್ನು ತೆರೆದಿಟ್ಟಿದ್ದಾರೆ. ನಟನೆ ಜೊತೆಗೆ ಈ ಸಲ ಆಕ್ಷನ್ ಸೀನ್‌ಗಳಲ್ಲಿ ಯಾವುದೇ ಹಾಲಿವುಡ್ ಸ್ಟಾರ್‌ಗಳಿಗೂ ಕಮ್ಮಿ ಇಲ್ಲದಂತೆ ಮಿಂಚಿದ್ದಾರೆ. climaxಲ್ಲಿ ರಿಷಭ್ ಕಾಣಿಸುವುದೇ ಇಲ್ಲಾ.. ಕಾಣಿಸುವುದು ಬರೀ `ದರ್ಶನ’! ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್ `ಮನೋಜ್ಞವಾಗಿ ನಟಿಸಿದ್ದಾರೆ’ ಅಂದಷ್ಟೇ ಹೇಳಿದರೇ ಉತ್ತಮ! ಕುಲಶೇಖರ ಪಾತ್ರದಲ್ಲಿ ನಟಿಸಿರುವ ಗುಲ್ಶನ್ ದೇವಯ್ಯ ಅವರ ಮೇಲಿದ್ದ ನಿರೀಕ್ಷೆ ಸುಳ್ಳಾಗಲಿಲ್ಲ. ಇನ್ನು, ಜಯರಾಮ್ ಅವರದ್ದು ತೂಕದ ನಟನೆ. ಉಳಿದಂತೆ, ಪ್ರಕಾಶ್ ತುಮ್ಮಿನಾಡು, ರಾಕೇಶ್ ಪೂಜಾರಿ, ನವೀನ್ ಪಡೀಲ್ ಅಲ್ಲಲ್ಲಿ ನಗಿಸಿದ್ದಾರೆ, ಕೆಲವು ಕಡೆ ಕಷ್ಟಪಟ್ಟು ನಗಿಸುವುದಕ್ಕೆ ತುಂಬಾ ಪ್ರಯತ್ನಿಸಿದ್ದಾರೆ!
ಬೆರೆಯದೇ `ಲೋಕ’ದ ಕಥೆಗೆ ಸಮರ್ಥ ಲೋಕನಾಥ್ ಸಂಗೀತ
‘ಕಾ0ತಾರ’ ಸಿನಿಮಾದ ಸಂಗೀತಕ್ಕಾಗಿ ಅಜನೀಶ್ ಲೋಕನಾಥ್ ಅವರು ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಹಾಗಾಗಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಅವರ ಸಂಗೀತ ಸಂಯೋಜನೆಯ ಹಾಡುಗಳ ಮೇಲೆ ಭಾರಿ ನಿರೀಕ್ಷೆ ಇತ್ತು. ನಿರೀಕ್ಷೆ ಹುಸಿಯಾಗಲಿಲ್ಲ. ‘ಕಾಂತಾರ’ ಚಿತ್ರದ `ಕರ್ಮ ಸಾಂಗ್’ ಟ್ಯೂನ್ ಅನ್ನೇ ಬೇರೆ ಲಿರಿಕ್ಸ್ ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ಪ್ಲಸ್ ಆಗಿದೆ. ಏಕೆಂದರೆ ಹಿಂದಿನ `ಕಾಂತಾರ’ದ ಕೆಲವು ದೃಶ್ಯಗಳಿಗೆ ಈ ಟ್ಯೂನ್‌ಳೇ ಕೊಂಡಿಯಾಗುತ್ತವೆ. `ವರಾಹರೂಪಂ’ ಸಾಂಗ್ ಅನ್ನು ಅಜನೀಶ್ ಪುನರ್ಬಳಕೆ ಮಾಡಿರೋದು `ಪ್ರೀಕ್ವೆಲ್’ಗೆ ಇನ್ನಷ್ಟು ಅರ್ಥಕೊಟ್ಟಿದೆ. ಯುದ್ಧದ ಸನ್ನಿವೇಶಗಳ ಹಿನ್ನಲೆ ಸಂಗೀತ ದೃಶ್ಯದ ಜೊತೆ ಸಮರ್ಥವಾಗಿ ಮಿಳಿತವಾಗಿದೆ. ಇದರ ಜೊತೆಗೆ ಇನ್ನೆರಡು ಹಾಡುಗಳೂ ದೃಶ್ಯವನ್ನು ಎತ್ತಿಹಿಡಿಯುತ್ತದೆ. ಸಂಗೀತ ಮತ್ತು ಹಿನ್ನಲೆ ಸಂಗೀತ ಎಲ್ಲೂ ದೃಶ್ಯವನ್ನು ಓವರ್‌ಟೇಕ್ ಮಾಡದಂತಿರುವ `ಅಜನೀಶಿಸಂ’ ಇಲ್ಲೂ ಮುಂದುವರಿದಿದೆ.
ಮೇಕಿ0ಗ್‌ಗಾಗಿ ದುಡ್ಡಿನ ಹೊಳೆ ಹರಿಸಿರುವ ಹೊಂಬಾಳೆ
‘ಕಾ0ತಾರ’ ಸಿನಿಮಾವು ಸಿಂಪಲ್ ಮೇಕಿಂಗ್‌ನಿ0ದ ಕೂಡಿತ್ತು. ಕಥೆಗೆ ಎಷ್ಟು ಬೇಕೋ ಅಷ್ಟನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಪ್ರೀಕ್ವೇಲ್‌ನಲ್ಲಿ ಅದ್ದೂರಿ ಮೇಕಿಂಗ್ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ. ಒಂದಿಡೀ ಊರನ್ನೇ ಸೃಷ್ಟಿ ಮಾಡಲಾಗಿದೆ. ದೇವಸ್ಥಾನ, ಅರಮನೆ ದರ್ಬಾರ್‌ನ ಸೆಟ್‌ಗಳು ಗಮನಸೆಳೆದರೆ, ಈಶ್ವರ ಹೂದೋಟ ಎಂಬ ಕಾಡಿನೊಳಗಿನ ಜಗತ್ತು ಮತ್ತೊಂದು ಮಾಯೆ. ಸಿನಿಮಾದ ಅದ್ದೂರಿತನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿರುವುದು ವಿಎಫ್‌ಎಕ್ಸ್. ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕಾಗಿ ವಿಎಫ್‌ಎಕ್ಸ್ ತಂಡ ಬಹಳ ಅಚ್ಚುಕಟ್ಟಾದ ಕೆಲಸವನ್ನು ಮಾಡಿದೆ. ಹುಲಿ, ಕಾಡುಪಾಪ, ಕೆಲ ಕಾಡಿನ ದೃಶ್ಯಗಳು ಸೇರಿದಂತೆ ಎಲ್ಲವನ್ನೂ ಕೂಡ ಬಹಳ ಅಮೋಘವಾಗಿ ಕ್ರಿಯೆಟ್ ಮಾಡಿದೆ. ಎಲ್ಲಿಯೂ ಇದು ವಿಎಫ್‌ಎಕ್ಸ್ ಅಂತ ಅನ್ನಿಸೋದೇ ಇಲ್ಲ. ಅಷ್ಟರಮಟ್ಟಿಗೆ ವಿಎಫ್‌ಎಕ್ಸ್ ಟೀಮ್ ಕೆಲಸ ಮಾಡಿದೆ. ಕನ್ನಡದ ಸಿನಿಮಾದ ವಿಎಫ್‌ಎಕ್ಸ್ ಕೆಲಸಗಳು ಬಾಲಿವುಡ್ ಅನ್ನೂ ನಾಚಿಸುವಂತೆ ಮೂಡಿಬಂದಿರೋದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ. ರಿಷಭ್ ಮತ್ತು ತಂಡದ ಕಲ್ಪನೆಗೆ ಹೊಂಬಾಳೆ ದುಡ್ಡು ಸುರಿದಿರೋದು ಸಾರ್ಥಕವಾಗಿದೆ.
ಅರವಿಂದ್ ಎಂಬ ಮಾಯಾವಿ!
ರಿಷಬ್ಗೆ ದೊಡ್ಡ ಬಲವಾಗಿ ನಿಂತವರು ಎಂದರೆ, ಅದು ಛಾಯಾಗ್ರಾಹಕ ಅರವಿಂದ್ ಕಶ್ಯಪ್. ಮಾಯಾವಿ ಲೋಕದಲ್ಲಿ ಅರವಿಂದ್ ಕ್ಯಾಮೆರಾ ಕೈಚಳಕ ಬೆರಗು ಮೂಡಿಸುತ್ತದೆ. ಫೈಟ್ ಸೀಕ್ವೆನ್ಸ್ಗಳಲ್ಲಿ ಅರವಿಂದ್ ಮತ್ತು ಡಿ.ಓ.ಪಿ ತಂಡದ ಕೆಲಸಕ್ಕೊಂದು ಸೆಲ್ಯೂಟ್. ಅರವಿಂದ್ ಕಶ್ಯಪ್ ಕ್ಯಾಮೆರಾ ಕಣ್ಣಲ್ಲಿ ‘ಕಾಂತಾರ ಚಾಪ್ಟರ್ 1‘ ಸಿನಿಮಾವು ಸೊಗಸಾಗಿ ಸೆರೆಯಾಗಿದೆ. ಕತ್ತಲು ಬೆಳಕಿನ ಆಟದಲ್ಲಿ ಅರವಿಂದ್ ಕಶ್ಯಪ್ ಗೆದ್ದಿದ್ದಾರೆ. ಕಲಾ ನಿರ್ದೇಶಕ ಧರಣಿ ಹಾಗೂ ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ನಿದ್ದೆ ಇಲ್ಲದ ರಾತ್ರಿಗಳಿಗೆ ತೆರೆಯ ಮೇಎಲೆ ಉತ್ತರ ಸಿಕ್ಕಿದೆ. ಜೊತೆಗೆ ಕಲಾ ನಿರ್ದೇಶನ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಊರಿನೊಳಗೆ ರಥ ಹರಿದು ಬರುವ ದೃಶ್ಯ, ಕುದುರೆಯೊಂದು ಮದವೇರಿ ಬೀದಿಯಲ್ಲಿ ಓಡುವ ದೃಶ್ಯ, ಬ್ರಹ್ಮಕಳಶದ ದೃಶ್ಯಗಳ ಮೇಕಿಂಗ್ ಅನ್ನು ತೆರೆಯ ಮೇಲೆ ನೋಡಿಯೇ ಅನುಭವಿಸಬೇಕು.
ಸೀಕ್ವೆಲ್ ಅನ್ನೇ ಮೀರಿಸಿತಾ ಪ್ರೀಕ್ವೆಲ್?
‘ಕಾಂತಾರ’ ಸಿನಿಮಾದೊಂದಿಗೆ ‘ಕಾಂತಾರ: ಚಾಪ್ಟರ್ 1’ ಹೋಲಿಕೆ ಮಾಡುವುದು ಸಹಜ. ‘ಕಾಂತಾರ’ ಕ್ಲೈಮ್ಯಾಕ್ಸ್ನಲ್ಲಿ ಶಿವನ ಮೇಲೆ ಗುಳಿಗ ದೈವ ಆವಾಹನೆ ಆಗುವ ದೃಶ್ಯಗಳು ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದ್ದವು. ಅಲ್ಲಿ ಕೊನೆಯಲ್ಲಿ ಬಂದ ದೃಶ್ಯಗಳು, ಇಲ್ಲಿ ಬಹುತೇಕ ಕಡೆ ಬರುತ್ತವೆ. ಇಂಟರ್‌ವಲ್‌ಗೂ ಮುನ್ನ ಬರುವ ಸೀನ್ ಬಹಳಷ್ಟು ರೋಮಾಂಚಕಾರಿಯಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಆಕ್ಷನ್‌ಗೆ ಜಾಸ್ತಿ ಮಹತ್ವ ನೀಡಲಾಗಿದೆ. ಯುದ್ಧದ ಸೀನ್‌ಗಳನ್ನು ನೋಡುವಾಗ ರಾಜಮೌಳಿ ನೆನಪಾದರೆ, ಅದು ರಾಜಮೌಳಿ ತಾಕತ್ತು! ಉಳಿದಂತೆ, ಕರಾವಳಿಯ ಬಹುತೇಕ ದೈವಗಳ ಪರಿಚಯವಿದೆ. ಈ ದೈವಗಳ ಬಗ್ಗೆ ಅದಾಗಲೇ ಗೊತ್ತಿರುವ ಕರಾವಳಿ ಮಂದಿಗೆ ಚಿತ್ರ ಹೆಚ್ಚು ಕನೆಕ್ಟ್ ಆಗುತ್ತದೆ. `ಕಾಂತಾರ’ದ climax ಗಿಂತ ಪ್ರೀಕ್ವೆಲ್‌ನ climax ಹತ್ತು ಪಟ್ಟು ರೋಮಾಂಚಕರಿಯಾಗಿದೆ. ಮೇಕಿಂಗ್, ಜೊತೆಗೆ ಕಥೆ-ಚಿತ್ರಕಥೆಗೂ ಒತ್ತು ಕೊಟ್ಟಿರುವ ರಿಷಭ್ ಒಂದು ಕ್ಷಣವೂ ಪ್ರೇಕ್ಷಕ `ರೀಲ್ಸ್’ ಮೊರೆ ಹೋಗದಂತೆ ಮಾಡುವಲ್ಲಿ ಅಕ್ಷರಶಃ ಗೆದ್ದಿದ್ದಾರೆ. ಈ ಗೆಲುವಿಗೆ ಕಾರಣ ರಿಷಭ್ ಮತ್ತು ತಂಡ ಕಥೆಯ ವಿಚಾರಲದಲ್ಲಿ ದೈವರಾಧನೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಕರಾವಳಿಯ ದಿಗ್ಗಜ ಸಾಹಿತಿಗಳ ಜೊತೆ ಚರ್ಚಿಸಿ ಕಥೆ ಹೆಣೆದಿದ್ದು.
ಒಟ್ಟಿನಲ್ಲಿ, ಇಲ್ಲಿವರೆಗೆ ಯಾರೂ ಮಾಡದ ಸಾಹಸ ರಿಷಭ್ ಮತ್ತು ಹೊಂಬಾಳೆ ಮಾಡಿದೆ. ರಿಷಭ್ ಇಡೀ ಸಿನಿಮಾ ಮುಗಿದ ಮೇಲೆ ಒಂದು ಪಾರ್ಟ್-3 ಬಗ್ಗೆ ಹಿಂಟ್ ಕೊಡುತ್ತಾರೆ. ಪಾರ್ಟ್-3 ಬರುವುದರಲ್ಲಿ ಅಚ್ಚಿರಿಯಿಲ್ಲ. ಏಕೆಂದರೆ, ನಾವು ಹಾಲಿವುಡ್‌ನಲ್ಲಿ ಸಾಕಷ್ಟು ಸಾಲು ಸಾಲು ಸೀರೀಸ್ ಚಿತ್ರಗಳು super hit ಆಗಿವೆ. ಅದು `ಕಾಂತಾರ’ ರೂಪದಲ್ಲಿ ಕನ್ನಡದಲ್ಲೂ ಯಾಕಾಗಬಾರದು? ಮೊಸರನ್ನು ಕಡೆಯದೇ `ಬೆಣ್ಣೆ’ ಹುಡುಕುವವರು ಸಾಕಷ್ಟು ಮಂದಿ ಇದ್ದಾರೆ. ಅವರ ಬಗ್ಗೆ ತಲೆಕಡೆಸಿಕೊಳ್ಳದೇ ಇಂದೇ ತೆರೆಯ ಮೇಲೆ `ನಂಬಿಕೆ’ಯ ದರ್ಶನದ `ದಿಗ್ಧರ್ಶನ’ ಮಾಡಿ.
By B.Naveen Krishna.Puttur
