ಪ್ರೇಕ್ಷಕರ ಮನಗೆದ್ದ ನೀನಾಸಂ ಮಂಜು…ಯಶಸ್ವಿಯಾಗಿ 75 ದಿನ ಪೂರೈಸಿದ ‘ಕನ್ನೇರಿ’ ಸಿನಿಮಾ
ಕೊರೊನಾ ಆರ್ಭಟ ಮುಗಿದ್ಮೇಲೆ ಬೆಳ್ಳಿತೆರೆಯಲ್ಲಿ ಸಿನಿಮಾಗಳ ಅಬ್ಬರ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳೆಂಟು ಸಿನಿಮಾಗಳು ಥಿಯೇಟರ್ ಪ್ರವೇಶಿಸುತ್ತವೆ. ಹೀಗಿರುವಾಗ ಇಲ್ಲಿ ಉಳಿಯೋದು ಮಾತ್ರ ಬೆರಳೆಣಿಕೆ ಸಿನಿಮಾಗಳಷ್ಟೇ. ಅದ್ರಲ್ಲೂ ಸ್ಟಾರ್ಸ್ ಸಿನಿಮಾಗಳ ನಡುವೆ ತನ್ನ ಕಂಟೆಂಟು ಮತ್ತು ಕ್ವಾಲಿಟಿ ಮೂಲಕ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವುದಕ್ಕೆ ಕನ್ನೇರಿ ಸಿನಿಮಾ ತಾಜಾ ಉದಾಹರಣೆ.
ಮೂಕಹಕ್ಕಿ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಭತ್ತಳಿಕೆಯಿಂದ ಬಂದ ನೈಜ ಘಟನೆಯಾಧಾರಿತ ಕನ್ನೇರಿ ಸಿನಿಮಾ ಯಶಸ್ವಿಯಾಗಿ 75 ದಿನ ಪೂರೈಸಿ ನೂರು ದಿನದತ್ತ ದಾಪುಗಾಲು ಇಡ್ತಿದೆ. ಈ ಖುಷಿ ಕ್ಷಣಗಳನ್ನು ಹಂಚಿಕೊಳ್ಳಲು ಕನ್ನೇರಿ ಸಿನಿಮಾ ತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು.
ನನ್ನ ಬೆನ್ನಿಗೆ ನಿಂತು ಇಡೀ ಸಿನಿಮಾದ ಯಶಸ್ವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ಬುಡಕಟ್ಟು ಜನಾಂಗದ ನೋವಿನ ಕಥೆ, ಬದುಕಿನ ತಲ್ಲಣ, ಹೆಣ್ಣುಮಕ್ಕಳ ದೌರ್ಜನ್ಯ, ಹೋರಾಟದ ಕಥೆಯನ್ನು ಈ ಸಿನಿಮಾ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ ಎಂದು ನೀನಾಸಂ ಮಂಜು ಸಂತಸ ಹಂಚಿಕೊಂಡರು.
ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ಜೇನು ಆಕಾಶದ ಅರಮನೆ ಕಾದಂಬರಿ ಎಳೆಯನ್ನು ಇಟ್ಟುಕೊಂಡು ಹೆಣೆಯಲಾಗಿದ್ದ ಕಥೆ ಪ್ರೇಕ್ಷಕರ ಪ್ರಶಂಸೆ ಗಿಟ್ಟಿಸಿಕೊಂಡಿದೆ.
ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಗೆ ಬಂದ ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂದನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಕರಿಸುಬ್ಬು, ಅರುಣ್ ಸಾಗರ್, ಎಂಕೆ ಮಠ ಸೇರಿದಂತೆ ಅನುಭವಿ ತಾರಾಬಳಗ ಸಿನಿಮಾದಲ್ಲಿದೆ. ಬುಡ್ಡೀಸ್ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಚಿತ್ರ ನಿರ್ಮಾಣ ಮಾಡಿದ್ದು, ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕವಿದೆ.