ಕನ್ನಡದ ಭರವಸೆಯ ನಟಿಯಾಗಿ ಮಿನುಗುತ್ತಿರುವ ಕಲಾವಿದೆ. ಇವರು ಸಿನಿಮಾಗೆ ಹೋಗಬೇಕು, ನಟಿಯಾಗಬೇಕು ಅಂತಾ ಏನೂ ಅಂದುಕೊಂಡವರಲ್ಲ. ಏನೋ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿಯಬೇಕಾದರೆ ಎಲ್ಲರಿಗೂ ಅವಕಾಶ ಸಿಗುವ ಹಾಗೆ ಇವರಿಗೂ ಕಲ್ಚರಲ್ ಆಕ್ಟಿವಿಟೀಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಹಾಡು, ನೃತ್ಯ, ನಟನೆ ಎಲ್ಲವನ್ನು ಮಾಡಿ ಬಹುಮಾನವನ್ನೂ ಗಳಿಸಿಕೊಂಡರು. ಶಾಲೆ ಮುಗಿದು ಮುಂದೆ ಕಾಲೇಜ್‌ಗೆ ಹೋದಾಗ ಕಾಲೇಜ್ ಕ್ಯಾಂಪಸ್‌ನಲ್ಲಿ ಡಬ್‌ಸ್ಮ್ಯಾಶ್ಗಳ ಬಗ್ಗೆ ಗೆಳತಿಯರ ಜೊತೆ ಮಾತನಾಡುತ್ತಾ ಇರಬೇಕಾದರೆ, ನಾವೂ ಒಂದು ಡಬ್‌ಸ್ಮ್ಯಾಶ್ ವೀಡಿಯೋ ಮಾಡುವಾ ಅಂತಾ ಮಾಡಿದರು.
ಹಾಗೇ ಗೆಳತಿಯರ ಜೊತೆ ಡಬ್‌ಸ್ಮ್ಯಾಶ್ ಮಾಡುತ್ತಾ ಅಪ್ಲೋಡ್ ಮಾಡಿರುತ್ತಾರೆ. ಯಾರೋ ಆ ವೀಡಿಯೋ ನೋಡಿದವರೊಬ್ಬರು ಅವರಿಗೊಂದಿನ ಟಿ.ವಿ.ಸೀರಿಯಲ್‌ನ ಧಾರಾವಾಹಿಗಾಗಿ ಆಡಿಷನ್‌ನಲ್ಲಿ ಭಾಗವಹಿಸಲು ಕರೆ ಮಾಡುತ್ತಾರೆ. ಇವರಿಗೆ ಆವಾಗಲೂ ನಾನು ನಟಿಯಾಗುತ್ತೇನೆ, ನಾನು ನಟಿಸಬಲ್ಲೇ ಎನ್ನುವ ಯಾವ ನಂಬಿಕೆಯೂ ಇರಲಿಲ್ಲಾ. ಆದರೆ ಆಗಲಿ, ಹೋದರೆ ಹೋಗಲಿ ಒಂದು ಕೈ ನೋಡೇ ಬಿಡೋಣ ಅಂದುಕೊಂಡು ಆ ಆಡಿಷನ್‌ಗೆ ಹೋಗಿ ಭಾಗವಹಿಸಿದರು. ಆ ಆಡಿಷನ್‌ನಲ್ಲಿ ನಿರ್ದೇಶಕರು ಹೇಳಿದ ಹಾಗೆಲ್ಲಾ ನಟಿಸಿ ತೋರಿಸುತ್ತಾರೆ. ಆ ಆಡಿಷನ್ ನಡೆಸುತ್ತಿದ್ದವರೆಲ್ಲಾ ಚೆನ್ನಾಗಿ ಮಾಡಿದ್ದಿರಾ, ಸೆಲೆಕ್ಟ್ ಆದರೂ ಆಗಬಹುದು ಅಂತಾರೆ. ಆದರೇ ಈ ಹುಡುಗಿ ಸೆಲೆಕ್ಟ್ ಆಗಲಿಲ್ಲ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗುವುದಿಲ್ಲ ಆದರೇ ಇವರು “ನಾನು ಆಡಿಷನ್‌ನಲ್ಲಿ ಅಷ್ಟು ಚೆನ್ನಾಗಿ ನಟಿಸಿದ್ದರೂ ಯಾಕೆ ನನ್ನನ್ನು ಅವರು ಆಯ್ಕೆ ಮಾಡಿಕೊಳ್ಳಲಿಲ್ಲಾ” ಅಂತಾ ಚಿಂತಿಸುತ್ತಾರೆ.
ಆಗ ಅವರಿಗೆ ಇಲ್ಲಾ ನಾನು ನಟಿಯಾಗಲೇ ಬೇಕು, ನಾನು ನಟನಾ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು. ನಟನೆಯನ್ನೇ ನನ್ನ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತಾರೆ. ಅಷ್ಟರಲ್ಲಿ ಇವರು ತಮ್ಮ ಎಂಜಿನಿಯರಿಂಗ್ ಪದವಿ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಳ್ಳೆಯ ಸಂಬಳವೂ ಬರುತ್ತಿರುತ್ತದೆ. ನಟಿಯಾಗುತ್ತೇನೆ ಎಂದರೆ ಮನೆಯವರು ಏನನ್ನುತ್ತಾರೋ ಎನ್ನುವ ಗೊಂದಲವೂ ಆಕೆಗೆ ಮೂಡುತ್ತದೆ. ಆಗ ಇವರ ಮುಂದೆ ನಟನೆಯೋ, ಇಲ್ಲಾ ಸಾಫ್ಟ್ವೇರ್ ಕಂಪನಿಯ ಕೆಲಸವೋ ಎಂಬ ಪ್ರಶ್ನೆಯೂ ಇರುತ್ತದೆ. ಆದರೂ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನೇ.
ಡಬ್‌ಸ್ಮ್ಯಾಶ್ ಮಾಡಿ ನಟಿಯಾಗಿಬಿಟ್ಟೆ
ʻನಾನು ಮೂಲತಃ ದೊಡ್ಡ ಬಳ್ಳಾಪುರದವಳು, ಹುಟ್ಟಿದ್ದು ಬೆಳೆದಿದ್ದು ಓದಿದ್ದು ಎಲ್ಲಾ ಬೆಂಗಳೂರಿನಲ್ಲೆ. ನಮ್ಮ ತಂದೆ ಪರಮಶಿವಯ್ಯ ಮತ್ತು ತಾಯಿ ಶ್ಯಾಮಲ. ನಾನು ಎಸ್.ಜೆ.ಆರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ನನಗೆ ನಟನೆ ನನ್ನ ಕ್ಷೇತ್ರವಾಗುತ್ತೆ ಅಂತಾ ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಬದುಕು ಎಲ್ಲಿಂದೆಲ್ಲಿಗೋ ಕರೆದುಕೊಂಡು ಹೋಗುತ್ತದೆ ಅನ್ನುವುದಕ್ಕೆ ನನ್ನ ಬದುಕಿನ ಜರ್ನಿನೆ ಸಾಕ್ಷಿ. ಯಾವಾಗ ನಾನು ನನ್ನ ಮೊದಲ ಆಡಿಷನ್‌ನಲ್ಲಿ ನಾನು ಸೆಲೆಕ್ಟ್ ಆಗಲಿಲ್ಲವೋ, ಆಗ ನನಗೆ ಈ ಫೀಲ್ಡ್ನಲ್ಲಿ ಏನಾದರೂ ಮಾಡಲೇಬೇಕು ಎಂಬ ಕಿಚ್ಚು ಹುಟ್ಟಿತು. ಅಲ್ಲಿಂದ ನಾನು ಆಡಿಷನ್ ಮೇಲೆ ಆಡಿಷನ್ ಕೊಡೋದಕ್ಕೆ ಶುರುಮಾಡಿದೆ. ಅಲ್ಲಿಂದ ನಾನು ನಟನೆ ಕಲಿಯತ್ತಾ ಬಂದೆ. ಅದಕ್ಕೂ ಮುಂಚೆ ಡಬ್‌ಸ್ಮ್ಯಾಶ್‌ನಲ್ಲಿ ಕೆಲವೊಂದು ಡೈಲಾಗ್‌ಗಳನ್ನಾ ಡಬ್ ಮಾಡಿ ಅಪ್‌ಲೋಡ್ ಮಾಡ್ತಾ ಇದ್ದೇ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಏನಾದರು ಮಾಡಿಕೊಂಡು ಸದಾ ಆಕ್ಟಿವ್ ಆಗಿದ್ದೆ. ನನ್ನ ಯಾವುದೋ ಒಂದು ವಿಡಿಯೋವನ್ನು ನಿರ್ದೇಶಕರು ನೋಡಿ ನನಗೆ ಕರೆ ಮಾಡಿ ಆಡಿಷನ್‌ಗೆ ಕರೆದಿದ್ದು. ನನಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಕಲಿಯುತ್ತಾ ಹೋದೆ. ಕೊನೆಗೆ ನನಗೆ ಸ್ಟಾರ್ ಸುವರ್ಣ ವಾಹಿನಿಯ ‘ಬಿಳಿ ಹೆಂಡ್ತಿ’ ಅನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಮೇಲೆ ತೆಲುಗಿನಲ್ಲಿ ‘ನಲುಗು ಸ್ಥಂಭಲಾಟ’ ಅನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆನಂತರ ಮಲೆಯಾಳಂನ ‘ಅನಿಯತಿಪ್ರಾವು’ ಅನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು.ʼ
ಕೋವಿಡ್ ಟೈಮ್‌ನಲ್ಲಿ ಸಿಕ್ಕಿತು ಸಿನಿಮಾ ಅವಕಾಶ
ʻಕೋವಿಡ್ ಟೈಮ್‌ನಲ್ಲಿ ನಾನು ನಿರ್ದೇಶಕರಿಂದ ಹೆಚ್ಚು ಸಿನಿಮಾ ಕಥೆಗಳನ್ನು ಕೇಳಿದೆ. ಒಬ್ಬ ನಿರ್ದೇಶಕ ಒಂದು ಪಾತ್ರಕ್ಕೇ ಎಷ್ಟೆಲ್ಲಾ ಬೇಡಿಕೆಗಳನ್ನು ಇಡುತ್ತಾರೆ, ನಾನು ಇನ್ನೂ ಏನೇನೆಲ್ಲಾ ತಯಾರಿಗಳನ್ನೂ ಸಿನಿಮಾಗೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡೆ ಮತ್ತು ಎಲ್ಲವನ್ನು ಕಲಿಯುತ್ತಾ ಬಂದೆ. ಆ ಕೋವಿಡ್ ಟೈಮ್ ಅನ್ನುವುದು ನನ್ನ ಸಿನಿಮಾ ಬದುಕಿಗೆ ನನ್ನ ನಟನಾ ವೃತ್ತಿಗೆ ವರದಾನವಾಗಿ ಪರಿಣಮಿಸಿತು. ಅಲ್ಲಿಂದ ನಾನು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಾನು ನಟಿಸಿದ ಮೊದಲ ಸಿನಿಮಾ ‘ಬಾಡಿ ಗಾಡ್’ ಆಮೇಲೆ ‘ಆರ’, ಅಮರ ಪ್ರೇಮಿ ಅರುಣ್, ಸಪ್ಲೆöÊಯರ್ ಶಂಕರ, ಇವು ಒಂದು ಹಂತಕ್ಕೆ ಮುಗಿದಿರುವ ಚಿತ್ರಗಳು, ಇನ್ನು ಹೆಸರಿಡದೆ ಇರುವ ಚಿತ್ರಗಳೂ ಇವೆ, ಮತ್ತು ಈಗ ಮಾತುಕಥೆ ಮುಗಿದಿರುವ ಚಿತ್ರಗಳೂ ಇವೆ. ಸದ್ಯಕ್ಕೆ ಒಳ್ಳೊಳ್ಳೆ ಕಥೆ ಇರುವ ಚಿತ್ರಗಳೇ ಸಿಗುತ್ತಿವೆ ಮತ್ತು ಸಿನಿಮಾ ಬಗ್ಗೆ ತುಂಬಾ ಪ್ಯಾಶನೇಟ್ ಇರುವ ಚಿತ್ರ ತಂಡಗಳೇ ಸಿಗುತ್ತಿವೆ.ʼ
ಸಿನಿಮಾ ರಂಗಕ್ಕೆ ಬಂದರೆ ಮುಗಿಯಿತು
ʻನಾನು ಎಂಜಿನಿಯರಿಂಗ್ ಓದಿಕೊಂಡಿದ್ದರೂ ಒಳ್ಳೆಯ ಕೆಲಸವಿದ್ದರೂ ನಾನು ಚಿತ್ರರಂಗಕ್ಕೆ ಬಂದೆ. ಈ ಚಿತ್ರರಂಗವೇ ಹೀಗೆ ಬೇಕು ಎಂದರೇ ಅದೇ ತನ್ನೆಡೆಗೆ ಸೆಳೆದುಕೊಂಡುಬಿಡುತ್ತದೆ. ಬೇಡಾ ಅನಿಸಿದಾಗ ಅದೇ ನಮ್ಮನ್ನು ಬಿಟ್ಟು ಬಿಡುತ್ತದೆ. ಇದ್ದಷ್ಟು ದಿವಸ ನಾವು ಆ ಬೆಳ್ಳಿ ಪರೆದೆಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಬೇಕು. ಎಲ್ಲಿಯವರೆಗೆ ನಾವು ಕಲೆಯ ಜೊತೆ ಬೆರೆತಿರುತ್ತೇವೆಯೋ ಅಲ್ಲಿಯವರೆಗೂ ನಾವು ಬೆಳೆಯುತ್ತಿರುತ್ತೇವೆ. ಯಾವಾಗ ನಾವು ಹೀಯಾಳಿಸುವವರ ಮಾತಿಗೆ ಕಿವಿಕೊಡುತ್ತೇವೋ ಅಲ್ಲಿಂದ ನಾವು ಬೇಯುತ್ತಿರುತ್ತೇವೆ. ಇದು ನಾನು ಅರಿತುಕೊಂಡ ಚಿತ್ರರಂಗ. ನನ್ನನ್ನು ಕರೆದು ಅಪ್ಪಿಕೊಂಡು ನನಗೆ ಎಲ್ಲವನ್ನೂ ಕಲಿಸಿ ಬೆಳೆಸುತ್ತಿರುವ ಕನ್ನಡ ಚಿತ್ರರಂಗಕ್ಕೆ ನಾನು ಚಿರಋಣಿ.