Sandalwood Leading OnlineMedia

ಕಾಲ್ಗೆಜ್ಜೆ ನಿರ್ದೇಶಕರಿಂದ ಮನಮೋಹಕ ‘ಮಡಿಕೇರಿ’ ದೃಶ್ಯಕಾವ್ಯ!

ಕಾಲ್ಗೆಜ್ಜೆ ನಿರ್ದೇಶಕರಿಂದ ಮನಮೋಹಕ ‘ಮಡಿಕೇರಿ’ ದೃಶ್ಯಕಾವ್ಯ!


ಶಿಷ್ಯ ಎ.ಬಂಗಾರುಗೆ ಗುರು ಎಸ್. ಮಹೇಂದರ್ ಸಾಥ್!

ಶ್ರೀ ಶ್ರೀ ಶ್ರೀ ಷ.ಬ್ರ. ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯ!

…..‌‌‌‌‌……………………………..

 

ರಾಜ್ಯಪ್ರಶಸ್ತಿ ವಿಜೇತ ಕಾಲ್ಗೆಜ್ಜೆ ಎನ್ನೋ ಅತ್ಯದ್ಭುತ ಸಿನೆಮಾ ಮಾಡಿದ್ದ ಎ ಬಂಗಾರು ನಿರ್ದೇಶನದ ಮಡಿಕೇರಿ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಬಂಗಾರು ಅವರ ಸಿನೆಮಾ ಗುರು ಎಸ್. ಮಹೇಂದರ್ ಅವರು ಟೈಟಲ್ ಲಾಂಚ್ ಮಾಡುವ ಮೂಲಕ ಕಾರ‍್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ನಿರ್ಮಾಣದ ಈ ಚಿತ್ರಕ್ಕೆ ಎ. ಬಂಗಾರು ಅವರು ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ. ನನ್ನ ಶಿಷ್ಯ ಮಾಡಿದ್ದ ಕಾಲ್ಗೆಜ್ಜೆ ಚಿತ್ರವನ್ನ ೨೦೧೨ರಲ್ಲಿ ನೋಡಿ ತುಂಬಾ ಖುಷಿಪಟ್ಟಿದ್ದೆ. ಅಷ್ಟೊಂದು ಅದ್ಭುತ ಚಿತ್ರ ಅದಾಗಿತ್ತು. ಅದೇ ಬಂಗಾರು ಇದೀಗ ಇನ್ನೊಂದು ಹೊಸ ಯೋಚನೆ-ಯೋಜನೆಯೊಂದಿಗೆ ಮತ್ತೆ ಬಂದಿದ್ದಾರೆ. ನನ್ನ ಶಿಷ್ಯರಲ್ಲಿ ಅತ್ಯಂತ ಪ್ರಿಯವಾದವರು ಬಂಗಾರು. ಮಡಿಕೇರಿ ಸಿನೆಮಾ ಶೀರ್ಷಿಕೆಯೇ ಅದ್ಭುತವಾಗಿದೆ. ಖಂಡಿತ ಇದು ವಿಷಯಾಧಾರಿತ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನುವ ಭರವಸೆ ಇದೆ. ಖಂಡಿತ ಬರಹಗಾರ ಮತ್ತು ಭಾವನಾಜೀವಿ ಬಂಗಾರು ಗೆಲುವು ಸಾಧಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.

ಚಿತ್ರದ ನಿರ್ದೇಶಕ ಎ ಬಂಗಾರು ಮಾತನಾಡಿ, ‘ಇದೊಂದು ಸುಮಧುರ ದೃಶ್ಯಕಾವ್ಯವಾಗಿದ್ದು, ಸಂಗೀತವೇ ಚಿತ್ರದ ಜೀವಾಳವಾಗಿರುತ್ತದೆ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಟೈಟಲ್ ಝಲಕ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ರವಿ ಶ್ಯಾಮನೂರು ಮಾತನಾಡಿ, “ಬಂಗಾರು ಅವರು ಹದಿನೈದು ವರ್ಷದ ಸ್ನೇಹಿತರು. ಅವರ ಸಿನೆಮಾ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈ ಹಿಂದೆ ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಕೈ ಜೋಡಿಸಿದ್ದೇನೆ” ಎಂದರು.

ಇನ್ನೊಬ್ಬ ನಿರ್ಮಾಪಕರಾದ ಶಿವಪ್ರಕಾಶ್ ಮಾತನಾಡಿ, “ಬಂಗಾರು ಅವರ ಕಾಲ್ಗೆಜ್ಜೆ ಸಿನೆಮಾ ನೋಡಿ ತುಂಬಾ ಸಂಭ್ರಮಪಟ್ಟಿದ್ದೆ. ಥಿಯೇಟರ್ ನಿಂದ ಹೊರಬಂದವನೇ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಅಡ್ವಾನ್ಸ್ ಕೊಟ್ಟಿದ್ದೆ. ಅವರ ಸಿನೆಮಾ ಪ್ಯಾಷನ್ ನನಗೆ ತುಂಬಾ ಇಷ್ಟವಾಗಿ ನಾವೆಲ್ಲಾ ಸೇರಿ ಈ ಚಿತ್ರಕ್ಕೆ ಸಾಥ್ ನೀಡಿದ್ದೇವೆ” ಎಂದು ಸಂಭ್ರಮಪಟ್ಟರು.

ಕಾರ‍್ಯಕ್ರಮದ ಅತಿಥಿ ಗಣ್ಯರಾದ ಬಳಿಗಾರ್, ಮಹೇಂದ್ರ ಬಡಳ್ಳಿ ಸೇರಿದಂತೇ ಬಂಗಾರು ಅವರ ಹಿತೈಷಿಗಳು ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು. ಕೊನೆಯಲ್ಲಿ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ ಸಿನೆಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಮಡಿಕೇರಿ ಚಿತ್ರದ ಸಂಗೀತ ನಿರ್ದೇಶಕರಾಗಿ ಗಂಧರ್ವ ಅವರು ಸಂಗೀತದ ಬಗ್ಗೆ ಮಾಹಿತಿ ನೀಡಿ, ‘ಇದೊಂದು ಸಂಗೀತಮಯ ಚಿತ್ರವಾಗಿದ್ದು, ಚಿತ್ರದ ಟೈಟಲ್ ಗೆ ತಕ್ಕಂತೇ ಮ್ಯೂಸಿಕ್ ಮಾಡಿದ್ದೇನೆ’ ಎಂದು ವಿವರಿಸಿದರು. ನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಮಾತನಾಡಿ ಅನುಭವ ಹಂಚಿಕೊಂಡರು. 

ಚಿತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೇ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೇ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಮೂವರು ಛಾಯಾಗ್ರಾಹಕರು. ಚಂದ್ರ-ಪ್ರಭ ಮತ್ತು ಯಾಸಿನ್ ಅವರ ಕ್ಯಾಮೆರಾ ಕೈಚಳಕವಿದೆ. ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ನಿರ್ದೇಶನವಿದೆ. ದಿವ್ಯಾ ಭಾರತಿ ಅವರು ಈ ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

Share this post:

Related Posts

To Subscribe to our News Letter.

Translate »