೧೯೬೩ರಲ್ಲಿ ರಿಲೀಸ್ ಆದಂತ ಡಾ.ರಾಜ್‌ಕುಮಾರ್ ಅಭಿನಯದ ಸಿನಿಮಾ `ಕಲಿತರೂ ಹೆಣ್ಣೆ’. ಶ್ರೀಗಣೇಶ್ ಲಾಂಛನದಲ್ಲಿ ಜಯಾ ಬಾಲಕೃಷ್ಣ ಅವರು ನಿರ್ಮಾಣ ಮಾಡಿದ್ದರು. ನಿರ್ಮಾಣದ ಜೊತೆಗೆ ಕಥೆಯನ್ನು ಬರೆದಿದ್ದರು. ಎನ್.ಸಿ.ರಾಜನ್ ಅವರು ನಿರ್ದೆಶನ ಮಾಡಿದ್ದರು. ಬಾಲಕೃಷ್ಣ ಅವರು ಸಿನಿಮಾಗೆ ಸಂಭಾಷಣೆ ಬರೆಯುವುದರ ಜೊತೆಗೆ ಸಹನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, : ಎಸ್.ಜಾನಕಿ, ಮನಮೋಹನ ಠಾಕೂರ್ ಜಿ.ಕೆ.ವೆಂಕಟೇಶ್ ಹಾಡಿದ್ದಾರೆ. ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದಾರೆ. ಕೆ.ಜಾನಕಿರಾಂ ಛಾಯಾಗ್ರಹಣ, ಎನ್.ಸಿ.ರಾಜನ್ – ಸಂಕಲನ ಮಾಡಿದ್ದಾರೆ. ರಾಜಕುಮಾರ್, ಲೀಲಾವತಿ, ಆದವಾನಿ ಲಕ್ಷ್ಮೀದೇವಿ, ನಾಗೇಂದ್ರರಾವ್ ಉದಯಕುಮಾರ್, ಅಶ್ವಥ್, ನರಸಿಂಹರಾಜು, ಜಿ.ವಿ.ಅಯ್ಯರ್, ಬಿ.ಕೆ.ಈಶ್ವರಪ್ಪ ಎ.ಜಿ.ಶ್ಯಾಂ, ಹನುಮಂತರಾವ್, ರಾಮಚಂದ್ರಶಾಸ್ತ್ರಿ, ಗುಗ್ಗು, ಸತ್ಯ, ಬಸಪ್ಪ, ಜಯತ್ತೀ ಪಾಪಮ್ಮ, ಉಷಾ, ಸಿ.ವಿ.ಶಿವಶಂಕರ್ ತಾರಾಬಳಗದಲ್ಲಿದ್ದಾರೆ.
ಚಿತ್ರಕಥೆ:
ನಾಗಯ್ಯನಿಗೆ ಜೂಜಾಡುವ ಚಟ. ಈ ದುರಭ್ಯಾಸದಿಂದ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡು ನಿರ್ಗತಿಕನಾಗುತ್ತಾನೆ. ಬರಿಗೈಲಿ ಬದುಕು ಸಾಗಿಸುವ ದುರಂತ ನೆನಪಿಸಿಕೊಂಡು ತನ್ನ ಎಂಟು ವರ್ಷದ ಮಗಳು ಗಿರಿಜೆಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಇನ್ನೇನು ನಾಗಯ್ಯ ಬೆಟ್ಟದಿಂದ ಬಿದ್ದು ಪ್ರಾಣ ಕಳೆದುಕೊಳ್ಳಬೇಕು, ಅಷ್ಟರಲ್ಲಿ ಪಕ್ಕದ ಬಂಡೆ ಹನುಮನಹಳ್ಳಿಯ ಸೂರಿಗೌಡ ಗಮನಿಸುತ್ತಾನೆ. ಕೂಡಲೇ ಮುನ್ನುಗ್ಗಿ ತಡೆದು ತಂದೆ, ಮಗಳನ್ನು ರಕ್ಷಿಸುತ್ತಾನೆ. ನಂತರ ನಾಗಯ್ಯನ ದುರಂತ ಕತೆ ಕೇಳಿ ಸೂರಿಗೌಡನ ಹೃದಯ ಕರಗುತ್ತದೆ. ಬಾಳಿ ಬದುಕಬೇಕಾದ ಹೆಣ್ಣು ಮಗಳಾದರೂ ನೆರಳು ಕಾಣಲಿ ಎಂದು ಇಬ್ಬರನ್ನು ತನ್ನ ಮನೆಗೆ ಕರೆತರುತ್ತಾನೆ. ಕೆಲವು ದಿನಗಳಲ್ಲೇ ಅನಾಥರಿಗೆ ಶಾಶ್ವತ ಆಶ್ರಯವಿದ್ದಂತಾಗಲಿ ಎಂದು ತನ್ನ ಹಿರಿಮಗ ಚಂದ್ರಯ್ಯನೊAದಿಗೆ (ರಾಜಕುಮಾರ್) ಗಿರಿಜೆಯ ಬಾಲ್ಯವಿವಾಹ ಕೂಡ ನಡೆಸುತ್ತಾನೆ.
ಅದೊಂದು ದಿನ ನಾಗಯ್ಯನಿಗೆ ಆಕಸ್ಮಿಕವಾಗಿ ಅವನ ಹಳೆಯ ಗೆಳೆಯ ಪಾಲ್‌ನ ಭೇಟಿಯಾಗುತ್ತದೆ. ನಾಗಯ್ಯ ಕಷ್ಟದಲ್ಲಿರುವುದನ್ನು ಕೇಳಿ ಪಾಲ್‌ಗೆ ಖುಷಿಯಾಗುತ್ತದೆ. ಬಣ್ಣದ ಮಾತುಗಳಿಂದ ನಾಗಯ್ಯನ ಮನವೊಲಿಸಿ ಅವನು ಹಾಗೂ ಅವನ ಮಗಳನ್ನು ಪಟ್ಟಣಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ತಾನು ನಡೆಸುತ್ತಿದ್ದ ಕಳ್ಳನೋಟಿನ ದಂಧೆಗೆ ಇಳಿಸುತ್ತಾನೆ. ವ್ಯಾಪಾರ ಚೆನ್ನಾಗಿ ಕುದುರುತ್ತದೆ. ಬಹಳ ಬೇಗ ನಾಗಯ್ಯ ಶ್ರೀಮಂತನಾಗುತ್ತಾನೆ. ಸುಲಭವಾಗಿ ದಕ್ಕಿದ ಸಂಪತ್ತು ಅವನಲ್ಲಿ ಗರ್ವ, ದರ್ಪಗಳನ್ನು ಹೆಚ್ಚಿಸುತ್ತದೆ. ಶ್ರೀಮಂತಿಕೆಯ ಅಮಲು ಅವನನ್ನು ಆವರಿಸಿಕೊಳ್ಳುತ್ತದೆ. ಇದ್ಯಾವುದರ ಅರಿವಿಲ್ಲದೆ ಗಿರಿಜೆ ಚೆನ್ನಾಗಿ ಓದಿ ಪದವೀಧರೆಯಾಗುತ್ತಾಳೆ. ಹನ್ನೆರಡು ವರ್ಷಗಳು ಕಳೆಯುತ್ತದೆ. ಅತ್ತ ಹಳ್ಳಿಯಲ್ಲಿದ್ದ ಸೂರಿಗೌಡನಿಗೆ, ನಾಗಯ್ಯ ಹಾಗೂ ಗಿರಿಜೆ ಎಲ್ಲಿದ್ದಾರೆಂಬುದೇ ತಿಳಿಯುವುದಿಲ್ಲ. ಶಕ್ತಿಮೀರಿ ಎಲ್ಲಾ ಕಡೆ ಹುಡುಕಿಸುತ್ತಿರುತ್ತಾನೆ. ಒಮ್ಮೆ ಊರಿನ ಶಾನುಭೋಗ ಪಟ್ಟಣಕ್ಕೆ ಹೋಗಿದ್ದಾಗ ಅವನ ಕಣ್ಣಿಗೆ ನಾಗಯ್ಯ ಆಕಸ್ಮಿಕವಾಗಿ ಕಾಣುತ್ತಾನೆ. ಅವನಿರುವ ಜಾಗವೂ ತಿಳಿಯುತ್ತದೆ. ತಕ್ಷಣ ವಿಷಯವನ್ನು ಸೂರಿಗೌಡನಿಗೆ ಮುಟ್ಟಿಸುತ್ತಾನೆ. ಸೂರಿಗೌಡ ಕೂಡಲೇ ಹೋಗಿ ನಾಗಯ್ಯನಿಗೆ ತನ್ನ ಸೊಸೆಯನ್ನು ಮನೆತುಂಬಿಸಿಕೊಡುವAತೆ ಕೇಳಿಕೊಳ್ಳುತ್ತಾನೆ. ಆದರೆ ಹಳೆಯ ನಾಗಯ್ಯ ಈಗ ಹೊಸ ‘ನಾಗಯ್ಯ’ನಾಗಿರುತ್ತಾನೆ. ಪೊಳ್ಳು ಗರ್ವ ಅವನಲ್ಲಿ ತುಂಬಿ ತುಳುಕುತ್ತಿರುತ್ತದೆ. ಅಂತಸ್ತು, ಪ್ರತಿಷ್ಠೆಯ ಮಾತನ್ನಾಡುತ್ತಾನೆ. ಆಗಿದ್ದ ಮದುವೆ ಅವನ ದೃಷ್ಟಿಯಲ್ಲಿ ಮಕ್ಕಳಾಟವಾಗಿರುತ್ತದೆ. ಸೂರಿಗೌಡನನ್ನು ನಾನಾ ಬಗೆಯಲ್ಲಿ ಅವಮಾನಿಸಿ ಕಳಿಸುತ್ತಾನೆ. ಸೂರಿಗೌಡನಿಗೆ ಆಘಾತವಾಗುತ್ತದೆ. ಅದನ್ನೇ ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡು ಕೊರಗಿ ಕೊರಗಿ ಕೊನೆಯುಸಿರೆಳೆಯುತ್ತಾನೆ.
ಗಿರಿಜೆ ನ್ಯಾಯ, ನೀತಿಯನ್ನು ನಂಬಿದವಳು. ಸದಾ ಅವಳಿಗೆ ಗಂಡನ ಮನೆಗೆ ಹೋಗುವ ಹಂಬಲ ಕಾಡುತ್ತಿರುತ್ತದೆ. ಆದರೆ ಅದಕ್ಕೆ ನಾಗಯ್ಯ ಸಮ್ಮತಿಸುವುದಿಲ್ಲ. ಏನೂ ಮಾಡಲು ತೋಚದಂತಾಗಿ ಒಳಗೇ ಕೊರಗುತ್ತಿರುತ್ತಾಳೆ. ಒಮ್ಮೆ ಸೂರಿಗೌಡನ ಹೆಂಡತಿ ಗಂಗವ್ವ ಬಂದು ಸೊಸೆಯನ್ನು ಕಳಿಸುವಂತೆ ಕೇಳಿದಾಗ ನಾಗಯ್ಯ ಅವಳನ್ನೂ ಕೂಡ ಅವಮಾನಿಸುತ್ತಾನೆ. ಈ ಸಂದರ್ಭದಲ್ಲಿ ರೋಸಿಹೋದ ಗಿರಿಜೆ ತಂದೆಯನ್ನು ಧಿಕ್ಕರಿಸಿ, ಅತ್ತೆಯ ಜೊತೆ ಹಳ್ಳಿಗೆ ಹೊರಟುಬಿಡುತ್ತಾಳೆ. ಅನಕ್ಷರಸ್ಥ ಗಂಡ ಚಂದ್ರಯ್ಯನಿಗೆ ಅಕ್ಷರ ಕಲಿಸುತ್ತಾಳೆ. ಎಲ್ಲಕ್ಕೂ ಮಿಗಿಲಾಗಿ ಹಳ್ಳಿಯಲ್ಲಿ ಸಾಕ್ಷರತೆ ತರುತ್ತಾಳೆ.
ಈ ನಡುವೆ ಸೂರಿಗೌಡನ ಕಿರಿಯ ಮಗ ಮುದ್ದಯ್ಯ ಕೆಟ್ಟ ಸಹವಾಸಕ್ಕೆ ಬಿದ್ದು ದಾರಿ ತಪ್ಪುತ್ತಾನೆ. ಇವನ ಜೂಜಿನ ಚಟದಿಂದಾಗಿ ಆಸ್ತಿ ಕೈಬಿಟ್ಟು ಹೋಗುತ್ತದೆ. ಇದರೊಂದಿಗೆ ಮುದ್ದಯ್ಯ ಊರಿನ ಜಮೀನ್ದಾರ, ಸುಬ್ಬಯ್ಯನ ಮಗಳನ್ನು ಪ್ರೀತಿಸಿದ್ದರೂ ವಿಚಿತ್ರ ಸನ್ನಿವೇಶ ಸಂಭವಿಸಿ ಪುಲಿಯಪ್ಪನ ಮಗಳು ದೇವೀರಿಯನ್ನು ಮದುವೆಯಾಗಬೇಕಾಗುತ್ತದೆ. ಇದರಿಂದ ಕೆರಳಿದ ಸುಬ್ಬಯ್ಯ, ಮುದ್ದಯ್ಯನ ಮೇಲೆ ಗುಂಡು ಹಾರಿಸಲು ಹೋದಾಗ ಚಂದ್ರಯ್ಯ ತಮ್ಮನನ್ನು ಕಾಪಾಡುತ್ತಾನೆ. ಜೊತೆಗೆ ದೇವಿರಿಯೊಂದಿಗೆ ಆವನ ವಿವಾಹವನ್ನು ನೆರವೇರಿಸಿ, ತನ್ನ ಪಾಲಿನ ಆಸ್ತಿಯನ್ನೆಲ್ಲ ಕೊಟ್ಟು ತ್ಯಾಗ ಮೆರೆಯುತ್ತಾನೆ. ಆದರೆ ಮುದ್ದಯ್ಯ ಅಣ್ಣನ ಈ ಪ್ರೀತಿಯನ್ನು ಉಳಿಸಿಕೊಳ್ಳುವುದಿಲ್ಲ. ಅಣ್ಣ ಹಾಗೂ ತುಂಬು ಗರ್ಣಿಣಿ ಅತ್ತಿಗೆಯನ್ನು ಕೂಡಲೇ ಮನೆಯಿಂದ ಓಡಿಸುತ್ತಾನೆ. ಆದರೆ ದುಶ್ಚಟಗಳಿಗೆ ದಾನವಾಗಿದ್ದುದರಿಂದ ಆಸ್ತಿಯನ್ನೆಲ್ಲ ಬಹಳ ಬೇಗ ಕಳೆದುಕೊಂಡು ಬೀದಿಗೆ ಬೀಳುತ್ತಾನೆ. ಇತ್ತ ಚಂದ್ರಯ್ಯ ತನ್ನ ಪ್ರಾಮಾಣಿಕತೆ, ಸದ್ಭುದ್ಧಿಯಿಂದಾಗಿ ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳುವುದಿಲ್ಲ. ಈ ನಡುವೆ ಮುದ್ದಯ್ಯನಿಂದ ಮೋಸಕ್ಕೆ ಒಳಗಾಗಿದ್ದ ಊರ ಜಮೀನುದಾರನ ಮಗಳು, ಅವನಿಗೆ ತಕ್ಕಪಾಠವನ್ನು ಕಲಿಸುತ್ತಾಳೆ ! ಜೀವನದಲ್ಲಿ ಒಂದರ ಮೇಲೆ ಒಂದು ಹೊಡೆತ ತಿಂದು ಜರ್ಜರಿತನಾದ ಮುದ್ದಯ್ಯ ಹೆಂಡತಿ ದೇವೀರಿಯೊಂದಿಗೆ ಬಂದು ದೇವರಂಥ ಅಣ್ಣ-ಅತ್ತಿಗೆಯ ಕ್ಷಮೆಯಾಚಿಸುತ್ತಾನೆ. ಪಶ್ಚಾತ್ತಾಪದಿಂದ ಕುಗ್ಗಿಹೋಗಿದ್ದ ತಮ್ಮನನ್ನು ಚಂದ್ರಯ್ಯ ವಾತ್ಸಲ್ಯದಿಂದ ಬರಮಾಡಿಕೊಳ್ಳುತ್ತಾನೆ. ಒಡೆದು ಹೋಗಿದ್ದ ಸಂಸಾರ ಮತ್ತೆ ಒಂದಾಗುತ್ತದೆ. ‘ಕಲಿತ ಹೆಣ್ಣು’ ಗಿರಿಜೆ, ಹುಟ್ಟಿದ ಮನೆಗೂ, ಮೆಟ್ಟಿದ ಮನೆಗೂ, ಅಲ್ಲದೆ ಊರಿಗೂ ಮಾದರಿ ಎನಿಸುತ್ತಾಳೆ.
ಟಿ.ಎನ್.ಬಾಲಕೃಷ್ಣ ಅವರು ತುಂಬಾ ಕಷ್ಟಪಟ್ಟು ನಿರ್ಮಿಸಿದ ಚಿತ್ರ ಇದು. ಚಿತ್ರೀಕರಣದ ಉದ್ದಕ್ಕೂ ಬಾಲಣ್ಣ, ಸಹನಿರ್ದೆಶಕರಾಗಿ ಜೊತೆಗೇ ಇರುತ್ತಿದ್ದರು. ತಾವೇ ಬರೆದ ಸಂಭಾಷಣೆಯನ್ನು ಸುಧಾರಣೆ ಮಾಡಿಕೊಂಡು ಕಲಾವಿದರಿಗೆ ಹೇಳಿಕೊಡುತ್ತಿದ್ದರು. ಯಾವುದಾದರೂ ಕಾರಣಗಳಿಗೆ ಸೆಟ್ಟಿನಲ್ಲಿ ಗಂಭೀರ ಪರಿಸ್ಥಿತಿ ಏರ್ಪಟ್ಟರೆ ನಗೆ ಚಟಾಕಿ ಹಾರಿಸಿ ಎಲ್ಲರೂ ಬೇಸರ ಮರೆಯುವಂತೆ ಮಾಡುತ್ತಿದ್ದರು.