RATING / ***/5
ಚಿತ್ರ: ಜಸ್ಟ್ ಮ್ಯಾರೀಡ್
ನಿರ್ಮಾಣ: ಸಿ.ಆರ್. ಬಾಬಿ ಮತ್ತು ಅಜನೀಶ್ ಲೋಕನಾಥ್
ನಿರ್ದೇಶನ: ಸಿ.ಆರ್. ಬಾಬಿ
ತಾರಾಗಣ: ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್ ಮುಂತಾದವರು
ಪೋಸ್ಟರ್, ಹಾಡುಗಳು ಮತ್ತು ವಿಭಿನ್ನ ಕಂಟೆ0ಟ್‌ಗಳ ಮೂಲಕ ಗಮನ ಸೆಳೆದಿದ್ದ `ಜಸ್ಟ್ ಮ್ಯಾರೀಡ್’ ರಿಲೀಸ್ ಆಗಿ, ಒಂದು ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರ ಕನ್ನಡಗರಿಗೆ ಸಿಕ್ಕಿದೆ. ಒಂದು ದೊಡ್ಡ ಅವಿಭಿಕ್ತ ಕುಟುಂಬ. ಅದರ ಒಡೆಯ ವಿಶ್ರಾಂತ ಚೀಫ್ ಜಸ್ಟೀಸ್ ಪೂರ್ಣಚಂದ್ರ. ಅವರಿಗೆ ಮೂವರು ಮಕ್ಕಳು. ಮೂವರು ಸೊಸೆಯಂದಿರು. ಇಬ್ಬರು ಮೊಮ್ಮಕ್ಕಳು. ಮನೆ ತುಂಬಾ ಆಳು ಕಾಳು. ಆದರೆ, ಇಷ್ಟು ದೊಡ್ಡ ಮನೆಯಲ್ಲಿ ನೆಮ್ಮದಿಯಾಗಿರುವ ಸಂಖ್ಯೆ ಕಡಿಮೆ.
ಜಸ್ಟ್ ಮ್ಯಾರೀಡ್ ಒಂದು ಮದುವೆಯ ಸುತ್ತ ಸುತ್ತುವ ಕಥೆ. ಹಾಗಂತ ಇಲ್ಲಿ ಮದುವೆಯೇ ಎಲ್ಲಾ ಅಲ್ಲ. ಪೂರ್ಣಚಂದ್ರರ ಮೊಮ್ಮಗ ಸೂರ್ಯ (ಶೈನ್ ಶೆಟ್ಟಿ) ಮದುವೆ, ಚಿತ್ರದ ಪ್ರಮುಖ ಅಂಶವಾದರೂ ಇಲ್ಲಿ ಸಾಕಷ್ಟು ಬೇರೆ ಅಂಶಗಳಿವೆ. ಸೂರ್ಯ ಸೇರಿದಂತೆ ಆ ಮನೆಯ ಎಲ್ಲಾ ಗಂಡಸರು ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದೆಲ್ಲವನ್ನೂ ಯಾರಿಗೂ ಸಮಸ್ಯೆಯಾಗದೆ, ನೋವಾಗದೆ ಸೂರ್ಯ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಚಿತ್ರದ ಕಥೆ.
‘ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನೆ ಮನುಜ ಕಣೋ …’ ಎಂಬ ಸಾಲಿನ ಮೇಲೆ ಇಡೀ ಚಿತ್ರ ನಿಂತಿದೆ ಮತ್ತು ಅದೇ ಚಿತ್ರದ ಒನ್‍ಲೈನ್ ಸಂದೇಶವೂ ಹೌದು. ಈ ಸಂದೇಶ ಹೇಳುತ್ತಾ ಕೊನೆಯ 10 ನಿಮಿಷಗಳಷ್ಟು ಕಾಲ ತಾವೂ ಗದ್ಗಿತರಾಗುವುದರ ಜೊತೆಗೆ, ಬೇರೆಯವರನ್ನೂ ತಮ್ಮ ಅಭಿನಯದಿಂದ ಬಡಿದೆಬ್ಬಿಸುತ್ತಾರೆ ದೇವರಾಜ್. ಇಡೀ ಚಿತ್ರದಲ್ಲಿ ಈ 10 ನಿಮಿಷಗಳು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ ಎಂಬುದು ಹೈಲೈಟ್.
ನಾಯಕನ ಭ್ರಮೆ ಸಮಸ್ಯೆ. ಯಾಕಾಗಿ ಅವನಿಗೆ ಈ ಸಮಸ್ಯೆ ಇರುತ್ತದೆ? ಅದರಿಂದ ಹೇಗೆ ಆಚೆ ಬರುತ್ತಾನೆ? ಎಂಬ ಪ್ರಶ್ನೆಗಳಿಗೆ ಚಿತ್ರ ಮುಗಿದರೂ ಉತ್ತರ ಸಿಗುವುದಿಲ್ಲ. ಇನ್ನು, ಇದೊಂದು ಬರೀ ಫ್ಯಾಮಿಲಿ ಡ್ರಾಮಾ ಅಷ್ಟೇ ಅಲ್ಲ, ರಾಜಕೀಯ, ಷಡ್ಯಂತ್ರ, ವಿವಾಹೇತರ ಸಂಬಂಧಗಳು ಎಲ್ಲವೂ ಇವೆ.
ಶೈನ್ ಶೆಟ್ಟಿಗೆ ಪೂರ್ಣಪ್ರಮಾಣದ ನಾಯಕನಾಗಿ ಇದು ಮೊದಲ ಚಿತ್ರ. ಮೊದಲ ಪ್ರಯತ್ನದಲ್ಲೇ ಶೈನ್ ಗಮನಸೆಳೆಯುತ್ತಾರೆ. ಅಂಕಿತಾ ಅಮರ್ ತಮ್ಮ ಚೆಲುವು ಮತ್ತು ಅಭಿನಯದಿಂದ ಇಷ್ಟವಾಗುತ್ತಾರೆ. ದೇವರಾಜ್ ಮತ್ತು ಶ್ರುತಿ ಅವರದ್ದು ತೂಕದ ಅಭಿನಯದ. ಅಚ್ಯುತ್ ಕುಮಾರ್, ಶ್ರುತಿ ಹರಿಹರನ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕಿವಿಗೆ ಇಂಪು, ಪಾರ್ಥಿಬನ್ ಛಾಯಾಗ್ರಹಣ ಕಣ್ಣಿಗೆ ತಂಪಾಗಿದೆ.
ಇದು ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಸಿನಿಮಾದ ಎಲ್ಲಾ ವಿಭಾಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕಿ, ಸಿನಿಮಾ ಬರವಣಿಗೆಯ ಬಗ್ಗೆ ಇನ್ನಷ್ಟು ಗಮನ ಹರಿಸಿದ್ದರೆ ನಿಜಕ್ಕೂ ಒಂದು ಅದ್ಭುತ ಸಿನಿಮಾ ಆಗುತ್ತಿತ್ತು. ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಅಜನೀಶ್ ಲೋಕನಾಥ್ ಅವರ ಸಂಗೀತ ಒಂದು ಹೊಸ ಅನುಭವ ನೀಡುತ್ತದೆ.
