Left Ad
ನಗೆಗಡಲಲ್ಲಿ ತೇಲಿಸುವ "ಜಂಬೂ ಸರ್ಕಸ್" ಟ್ರೈಲರ್  - Chittara news
# Tags

ನಗೆಗಡಲಲ್ಲಿ ತೇಲಿಸುವ “ಜಂಬೂ ಸರ್ಕಸ್” ಟ್ರೈಲರ್ 

ದರ್ಶನ್ ನಟನೆಯ ಸಿನಿಮಾ ನಿರ್ದೇಶಕರಿಂದ ಒಂದು ವಿಭಿನ್ನ ಪ್ರಯತ್ನ 

 

ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಹೆಚ್.ಸಿ. ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ “ಜಂಬೂ ಸರ್ಕಸ್” ಎಂಬ ಚಲನ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಸಹ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರವೀಣ್ ತೇಜ್, ಅಂಜಲಿ ಎಸ್.ಅನೀಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ನೇಹ, ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

   

ಸುಪ್ರೀತಾ ಶೆಟ್ಟಿ, ಅಂಜಲಿ ಅನೀಶ್, ಹಾಗೂ ನಟಿ ನಯನಾ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ನಿರ್ದೇಶಕ ಎಂ.ಡಿ ಶ್ರೀಧರ್ ಮಾತನಾಡುತ್ತ ಆತ್ಮೀಯ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಮಿಡಿಯಾಗಿ ಹೇಳಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಬಿಡುಗಡೆ ಮಾಡುವ ಯೋಜನೆಯಿದೆ. ಕವಿರಾಜ್ ಬರೆದಿರುವ ೨ ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಚಿತ್ರದಿಂದಲೂ ಅವರು ನಮ್ಮ ಜೊತೆ ಇದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.

ನಟಿ ನಯನಾ, ಜಗ್ಗಪ್ಪ ಒಳ್ಳೆಯ ಪಾತ್ರ ಮಾಡಿದ್ದಾರೆ. ನಯನ ಸೆಟ್ ನಲ್ಲಿದ್ದರೆ ಲವಲವಿಕೆ ಇರುತ್ತದೆ ಎಂದು ಹೇಳಿದರು. ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ, ಮಾತನಾಡಿ
ನಿರ್ಮಾಪಕ ಸುರೇಶ್ ಸಿನಿಮಾ ಬಗ್ಗೆ ಪ್ರೀತಿ ಇಟ್ಟಿರುವ ವ್ಯಕ್ತಿ. ನಾವು ಅವರ ಜೊತೆ ನಿಂತಿದ್ದೇವೆ. ಸೀರಿಯಲ್ ಗೆ ಕಥೆ ಮಾಡುವಾಗ ಹೊಳೆದ ಕಾನ್ಸೆಪ್ಟ್ ಇದು. ಪ್ಯಾಮಿಲಿ ಒರಿಯಂಟೆಂಡ್ ಚಿತ್ರ. ಒಳ್ಳೆಯ ಸಿನಿಮಾ‌ ಮಾಡಿರುವ ಈ ನಿರ್ಮಾಪಕ‌ರು ಗೆದ್ದರೆ ಇನ್ನಷ್ಟು ಚಿತ್ರ ಮಾಡಲು ಶಕ್ತಿ ಸಿಗುತ್ತದೆ ಎಂದರು. ನಟಿ ಅಂಜಲಿ ಅನೀಶ್ ಮಾತನಾಡಿ, ಸಿನಿಮಾ ಪ್ಯಾಷನ್ ನಿಂದ ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ಬಜಾರಿ ಥರದ ಅಂಕಿತಳ ಪಾತ್ರ,ಜಾಸ್ತಿ ಜಗಳ‌ ಮಾಡ್ತಾಳೆ. ಅವಳಮ್ಮನೇ ಆಕೆಗೆ ಜಗಳ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಒಳ್ಳೆಯ ಹುಡುಗಿ‌ ಕೂಡ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು. ಸಾಹಿತಿ ಕವಿರಾಜ್ ಮಾತನಾಡಿ, ಈಗ ಕನ್ನಡ ಪ್ರೇಕ್ಷಕ ಒಳ್ಳೆ ಸಂದೇಶ ನೀಡಿದ್ದಾರೆ. ಮನರಂಜನೆ ಇದ್ದರೆ ಖಂಡಿತ ಸಿನಿಮಾ‌ ಗೆಲ್ಲುತ್ತೆ. ಶ್ರೀಧರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಪ್ರವೀಣ್ ತೇಜ್ ಗೆ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣವಿದೆ. ನಿರ್ಮಾಪಕರೂ ತೀರ್ಥಹಳ್ಳಿ ಕಡೆಯವರು, ಎಲ್ಲರೂ ಪ್ರೀತಿಯಿಂದ ಸಿನಿಮಾ‌ ಮಾಡಿದ್ದೇವೆ. ಸಿನಿಮಾ ಹಿಟ್ ಆಗಬೇಕು ಎಂದರು.

ಸಂಭಾಷಣೆ ಬರೆದ ರಘು ನಿಡುವಳ್ಳಿ ಚಿತ್ರದ ಕಾನ್ಸೆಪ್ಟ್ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಎ.ವಿ ಕೃಷ್ಣಕುಮಾರ್ ಮಾತನಾಡಿ, ನಿರ್ಮಾಪಕರು ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದಾರೆ ಎಂದರು. ಕಾಮಿಡಿ ಕಲಾವಿದೆ ನಯನಾ ಮಾತನಾಡಿ, ಸಿನಿಮಾದಲ್ಲಿ ಪಾತ್ರ ಹೇಗಿದೆಯೊ ಹಾಗೇ ನಟಿಸು ಅಂದಿದ್ದರು. ನಾನು ಜಾಸ್ತಿ ಮಾತನಾಡುತ್ತೇನೆ. ಕಡಿಮೆ ಮಾತನಾಡು ಎಂದು ನಿರ್ದೇಶಕರು ಸಲಹೆ ನೀಡಿದ್ದರು. ಚಿತ್ರದಲ್ಲಿ ಸ್ನೇಹಿತರಿಗೆ ಬತ್ತಿ ಇಡೋದೇ ನಾನು. ಒಳ್ಳೆಯ ಚಿತ್ರ ಬರಲ್ಲ ಎನ್ನುವ ಮಾತಿದೆ‌. ಇದು ಪೈಸಾ ವಸೂಲ್ ಚಿತ್ರ ಎಂದರು.  ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್ ಮುಂತಾದವರು ನಟಿಸಿದ್ದಾರೆ.

Spread the love
Translate »
Right Ad