ಸಾರಥಿಯಾಗುವ ಮುನ್ನ…
THE EXCITING LIFE OF A ASSISTANT DIRECTOR
ಇವರದು ನೇಕಾರರ ಕುಟುಂಬ, ನೇಯ್ಗೆಯ ಯಂತ್ರ ಮನೆಯಲ್ಲಿ ಯಾವಾಗಲೂ ದಡ್,ದಡ್ ಸನ್ನುವ ಸದ್ದು. ಇವರ ತಂದೆಗೆ ಸಂಗೀತದ ಮೇಲೆೆ ಎಲ್ಲಿಲ್ಲದ ಆಸಕ್ತಿ. ತಮ್ಮ ಎಲ್ಲ ಮಕ್ಕಳನ್ನು ಸಂಗೀತ ಅಭ್ಯಾಸಕ್ಕೆ ಕಳಿಸುತ್ತಿದ್ದರು. ಎಲ್ಲರೂ ಒಂದಲ್ಲಾ ಒಂದು ಸಂಗೀತ ಕಲಿಕೆಯಲ್ಲಿ, ಸಂಗೀತ ಸಾಧನಗಳನ್ನು ನುಡಿಸುವಲ್ಲಿ ಆಸಕ್ತಿ ತೋರುತ್ತಿದ್ದರು. ಮನೆಯಲ್ಲಿ ಮಾತೃ ಭಾಷೆ ತೆಲುಗು, ಮನೆಯಿಂದ ಹೊರಗಡೆ ಇವರು ಅಪ್ಪಟ ಕನ್ನಡಿಗರು. ಇವರು ನೇಯ್ಗೆಯ ಜೊತೆ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ಕೂಡ ಮಾಡುತ್ತಿದ್ದರು. ಇವರು ಕೆಲಸ ಮಾಡುತ್ತಿದ್ದ ಗ್ಯಾರೇಜ್ ಕ್ರೇಜಿಸ್ಟಾರ್ ರವಿಚಂದ್ರನ್ ಮನೆ ಮುಂದೆ ಇತ್ತು. ಆ ಗ್ಯಾರೇಜ್‌ನಲ್ಲಿ ಒಂದು ಎಫ್.ಎಂ. ರೇಡಿಯೋ ಅದು ಯಾವಾಗಲೂ ಗುನುಗುತ್ತಿರುತ್ತದೆ. ಗ್ಯಾರೇಜ್ ಸದ್ದಿನ ಜೊತೆ ಸುಮಧುರ ಸಂಗೀತ. ಇಂತಹ ಒಂದು ಪರಿಸ್ಥಿತಿಯಲ್ಲಿ ಕನ್ನಡ ಸಿನಿಮಾ ಇಂಡಸ್ಟಿçಗೆ ಅಂತಲೇ ಜೀವ ಪಡೆದುಕೊಂಡ ಗೀತ ರಚನೆಕಾರ, ಸಂಭಾಷಣೆಗಾರ, ನಮ್ಮ ಈ ಸಂಚಿಕೆಯ ‘ಸಾರಥಿಯಾಗುವ ಮುನ್ನ’.. ಅಂಕಣದ ಸಾರಥಿ, ನಿರ್ದೇಶಕ ರಾಮ್ ನಾರಾಯಣ್. ಬೆಂಗಳೂರಿನ ರಾಜಾಜಿನಗರದ (ಸಿಲೋನ್)ಕೋದಂಡ ರಾಮಯ್ಯ ಮತ್ತು ಶಾರದಮ್ಮನವರ ಪುತ್ರ.
ನೋಟ್ ಬುಕ್- ಕಸದ ರಾಶಿ- ಗ್ಯಾರೇಜ್
ಅಪ್ಪನಿಗೆ ಸಂಗೀತದ ಮೇಲೆ ಆಸಕ್ತಿ ಇದ್ದುದರಿಂದ ನಮ್ಮನ್ನು ಸಂಗೀತ ತರಗತಿಗಳಿಗೆ ಸೇರಿಸಿದರು ನಾವು ಸಂಗೀತ ಕಲಿತರೂ ಆ ವೃತ್ತಿಯಲ್ಲಿ ಮುಂದುವರೆಯಲಿಲ್ಲ. ಏನೋ ಕಲಿಬೇಕು ಕಲಿತೆವು ನಮಗೆ ನಾವೇನು ಕಲಿತಿದ್ದೇವೆ ಅನ್ನೋದೆ ನಿಜವಾಗಿ ನಮಗೆ ಅರ್ಥವಾಗಿರಲಿಲ್ಲ. ನಾವು ಮಕ್ಕಳೆಲ್ಲ ಬೆಳೆದಂತೆ ಬೇರೆ ಬೇರೆ ವೃತ್ತಿಯನ್ನು ನೋಡಿಕೊಂಡೆವು. ಆದರೆ ನನಗೆ ಅದೇನೋ ಬರೆಯುವ ಗೀಳು ಅಂಟಿಕೊಂಡುಬಿಟ್ಟಿತ್ತು. ನನಗೆ ಏನೇ ತೋಚಿದರು ಅದನ್ನು ಒಂದು ಹಾಳೆಯಲ್ಲಿ ಬರೆದಿಡುತ್ತಿದ್ದೆ. ಒಂದು ದಿನ ಕೂತು ಆ ಹಾಳೆಯಲ್ಲಿ ಬರೆದಿದ್ದನ್ನು ಒಂದು ನೋಟ್ ಬುಕ್‌ಗೆ ಕಾಪಿ ಮಾಡಿ ಇಟ್ಟಿದ್ದೆ. ಒಮ್ಮೆ ನಮ್ಮಮ್ಮ ಮನೆ ಕ್ಲೀನ್ ಮಾಡಬೇಕಾದರೆ ಆ ನೋಟ್ ಬುಕ್‌ಗಳನ್ನು ಎಸೆದು ಬಿಟ್ಟಿದ್ದರು! ನಾನು ಮನೆಯಲ್ಲಿ ಆ ನೋಟ್ ಬುಕ್ ಹುಡುಕುವಾಗ ಅಮ್ಮ ಆಚೆ ಎಸೆದದ್ದು ಹೇಳಿದರು. ನಾನು ಅವರು ಎಸೆದ ಕಸದ ರಾಶಿಯಲ್ಲಿ ಇಡೀ ದಿನವೆಲ್ಲ ಹುಡುಕಿದರೂ ಆ ನೋಟ್ ಬುಕ್ ಸಿಗಲೇ ಇಲ್ಲ. ನಮ್ಮಮ್ಮನ ಜೊತೆ ಜಗಳವಾಡಿಕೊಂಡು ಎರಡು ಮೂರು ದಿನ ಮಾತು ಬಿಟ್ಟಿದ್ದೆ. ಆಮೇಲೆ ಮತ್ತೆ ಬರೆಯೋಕೆ ಶುರು ಮಾಡಿದೆ, ಕಸ್ಟಮರ್ ಇಲ್ಲದಿದ್ದಾಗ ಗ್ಯಾರೇಜ್‌ನಲ್ಲಿ ಕುಳಿತು ಬರೆಯುತ್ತಿದ್ದೆ. ಮತ್ತೆ ಹಾಗೆ ಕವನ, ಕವಿತೆಗಳು ನನ್ನ ನೋಟ್ ಬುಕ್ ತುಂಬುತ್ತಾ ಹೋದವು. ನಾನು ಬರೆದ ಕವಿತೆಗಳನ್ನು ನಾನೇ ನೋಡುವಾಗ ಇದನ್ನು ಯಾರಾದರು ಮ್ಯೂಸಿಕ್ ಡೈರೆಕ್ಟರ್‌ಗೆ ಕೊಡಬೇಕು ಅಂತಾ ಅನಿಸಿತ್ತು.
ಆಂಧ್ರದಲ್ಲಿ ಕನ್ನಡ ಕವಿತೆ..
ನಮ್ಮ ತಂದೆ ಎಲ್ಲಾ ಮಕ್ಕಳಿಗೂ ಒಂದೊಂದು ವ್ಯವಹಾರ ಮಾಡಿಕೊಡುತ್ತಿದ್ದರು. ಹಾಗೆ ನನಗೆ ನಮ್ಮ ತಂದೆ ತಮ್ಮ ನೇಯ್ಗೆಯ ವ್ಯಾಪಾರವನ್ನು ನನಗೆ ಹಿಂದೂಪುರದಲ್ಲಿ ಮಾಡಿಕೊಟ್ಟರು. ನಾನು ಬೆಂಗಳೂರಿನಿಂದ ಹಿಂದೂಪುರಕ್ಕೆ ಹೊರಟೆ, ಅಲ್ಲಿ ನಮ್ಮ ನೇಯ್ಗೆಯ ವ್ಯವಹಾರವೂ ಶುರುವಾಯಿತು. ಆದರೆ ಖಾಲಿ ಸಮಯದಲ್ಲಿ ಬರವಣಿಗೆಯ ನಶೆ ನನ್ನನ್ನು ಸುಮ್ಮನೆ ಕೂರಲು ಬಿಡಲಿಲ್ಲ. ಆಂಧ್ರದ ಹಿಂದೂಪುರದಲ್ಲಿ ಕನ್ನಡ ಕವಿತೆಗಳನ್ನು ಬರೆಯಲು ಶುರು ಮಾಡಿದೆ. ಹೀಗೆ ಬರೆದು ಬರೆದು ಓದುತ್ತಿದ್ದೆ, ಮತ್ತೆ ಬರೆಯುತ್ತಿದ್ದೆ. ಏಕಾಂತದಲ್ಲಿ ಹುಟ್ಟಿಕೊಂಡಿತು ಬರವಣಿಗೆಯ ಬಗೆ ಬಗೆಗಳು. ನಾನು ಬರೆದ ಕವಿತೆಗಳನ್ನೆಲ್ಲ ನನ್ನಣ್ಣನಿಗೆ ಓದಲು ಕೊಡುತ್ತಿದ್ದೆ. ನನಗೆ ಸಿನಿಮಾದಲ್ಲಿ ಹಾಡು ಬರೆಯುವ ಇಂಗಿತವನ್ನು ನಾನು ಆತನ ಬಳಿ ಹೇಳಿಕೊಂಡಿದ್ದೆ. ಆತ ವೃತ್ತಿಯಲ್ಲಿ ಡಾಕ್ಟರ್, ಅವರು ನನ್ನ ಕವಿತೆಗಳೆಲ್ಲವನ್ನು ಓದಿ ಚೆನ್ನಾಗಿ ಬರೆಯುತ್ತೀಯಾ ಎಂದಿದ್ದರು. ಒಮ್ಮೆ ಅವರಿಗೆ ಗೊತ್ತಿದ್ದ ಒಬ್ಬ ಸಿನಿಮಾದವರ ಕಡೆಯಿಂದ ವಿ. ಮನೋಹರ್ ಸಾರ್‌ರವರ ನಂಬರ್ ತೆಗೆದುಕೊಂಡು ನನಗೆ ಕೊಟ್ಟರು. ನಾನು ಆಂಧ್ರದಿಂದಲೇ ಮನೋಹರ್ ಸರ್‌ಗೆ ಫೋನ್ ಮಾಡಿದೆ ಅವರು ಹನುಮಂತ ನಗರಕ್ಕೆ ಬರಲು ಹೇಳಿದರು, ನಾನಿರುವುದು ಆಂಧ್ರದಲ್ಲಿ ಏನು ಮಾಡುವುದು ತಿಳಿಯದೆ ಒಂದು ದಿನ ನಮ್ಮ ತಂದೆಯ ಪರ್ಮಿಷನ್ ತೆಗೆದುಕೊಂಡು ಬೆಂಗಳೂರಿಗೆ ಹೊರಟೆ. ನಾನು ಬರೆದಿದ್ದ ಕವನಗಳೆಲ್ಲವನ್ನು ತೆಗೆದುಕೊಂಡು ಮನೋಹರ್ ಸರ್ ಮನೆಗೆ ಹೋದೆ ಅಲ್ಲಿ ನಾನು ಬರೆದ ಅಷ್ಟನ್ನು ಕೊಟ್ಟೆ. ಮನೋಹರ್ ಸಾರ್ ಏನೂ ಮಾತನಾಡುತ್ತಿಲ್ಲ ಸುಮ್ಮನೆ ಓದುತ್ತಿದ್ದಾರೆ. ಎಲ್ಲಾ ಓದಿ ಆದ ಮೇಲೆ ಮನೋಹರ್ ಸರ್ ನಿನಗೆ ಕಾಲ್ ಮಾಡ್ತೀನಿ ಹೋಗಪ್ಪ ಎಂದು ಹೇಳಿ ಕಳಿಸಿದರು. ನಾನು ಮನೆಗೆ ಹೋಗಿ ಎಲ್ಲವನ್ನು ಅಣ್ಣನಿಗೆ ಹೇಳಿ ಮತ್ತೇ ಆಂಧ್ರದ ಹಿಂದೂಪುರಕ್ಕೆ ಹೊರಟುಬಿಟ್ಟೆ. ಮೂರು ದಿನಗಳ ನಂತರ ಬಂತು ಮನೋಹರ್ ಸರ್ ಫೋನ್ ಕಾಲ್ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ, ನನ್ನ ತಂದೆ ನನ್ನನ್ನು ಮತ್ತೇ ಬೆಂಗಳೂರಿಗೆ ಖುಷಿಯಿಂದನೇ ಕಳಿಸಿಕೊಟ್ಟರು. ಯಾಕೆಂದರೆ ಅವರಿಗೂ ಸಂಗೀತದ ಮೇಲೆ ಆಸಕ್ತಿ ಇತ್ತು. ಮತ್ತು ನಮ್ಮನೇಲಿ ಎಲ್ಲರಿಗೂ ಸಂಗೀತದ ತರಗತಿ ಕೊಡಿಸಿದ್ದರೂ ಯಾರೂ ಸಂಗೀತದ ದಾರಿ ಹಿಡಿದಿರಲಿಲ್ಲ ಇವನೊಬ್ಬನಾದರೂ ಪ್ರಯತ್ನಿಸಿದ್ದಾನಲ್ಲ ಅಂತಾ ಖುಷಿಪಟ್ಟಿದ್ದರು.
ಒಂದೇ ದಿನ
ಮೂವರು ದಿಗ್ಗಜರ ದರ್ಶನ
ನಾನು ಆಂಧ್ರದಿಂದ ವಿ. ಮನೋಹರ್ ಸರ್ ಮನೆಗೆ ಹೋದೆ ಅಲ್ಲಿ ಮನೋಹರ್ ಸರ್ ನನಗೆ ರಾಮಕೃಷ್ಣ ಅನ್ನುವ ಪ್ರೊಡ್ಯೂಸರ್ ಪರಿಚಯ ಮಾಡಿಸಿಕೊಟ್ಟರು. ಮತ್ತು ನನ್ನನ್ನು ಅವರ ಜೊತೆ ಕಳಿಸಿಕೊಟ್ಟರು. ಅವರು ನನ್ನನ್ನು ನೇರಾ ಅಶ್ವಿನಿ ಸ್ಟುಡಿಯೋಗೆ ಕರೆದುಕೊಂಡು ಬಂದರು. ಆ ಪ್ರೊಡ್ಯೂಸರ್ ನನಗೆ ಗುರುಕಿರಣ್‌ರವರನ್ನು ಪರಿಚಯ ಮಾಡಿಸಿಕೊಟ್ಟರು. ಗುರುಕಿರಣ್‌ರವರು ನನ್ನನ್ನು ಸ್ಟುಡಿಯೋ ಒಳಗಡೆ ಕರೆದುಕೊಂಡು ಹೋಗಿ ಒಂದು ಟ್ಯೂನ್ ಕೇಳಿಸಿ, ಈ ಟ್ಯೂನ್‌ಗೆ ಲಿರಿಕ್ ಬರಿಬೇಕು ಆ ಹಾಡಿನ ಸಂದರ್ಭವನ್ನು ಡೈರೆಕ್ಟರ್ ಹೇಳ್ತಾರೆ ಅಂತಾ ನನ್ನನ್ನಾ ಡೈರೆಕ್ಟರ್ ಹತ್ರಾ ಅದೇ ಪ್ರೊಡ್ಯೂಸರ್ ಜೊತೆ ಕಳಿಸಿ ಅವರು ನನ್ನನ್ನು ಶೂಟಿಂಗ್ ಮಾಡ್ತಾ ಇರೋ ಲೋಕೇಷನ್‌ಗೆ ಕರೆದುಕೊಂಡು ಹೋದರು. ಅಲ್ಲಿ ನೋಡಿದ್ರೇ ಡೈರೆಕ್ಟರ್ ಓಂ ಪ್ರಕಾಶ್ ರಾವ್. ನನಗೆ ನಿಜಕ್ಕೂ ಶಾಕ್ ಆಗಿದ್ದು ಆವಾಗ. ಇದಿಷ್ಟೂ ನಡೆದದ್ದೂ ಕೇವಲ ಒಂದೇ ಒಂದು ಗಂಟೆಯಲ್ಲಿ. ವಿ ಮನೋಹರ್ ಸರ್, ಗುರುಕಿರಣ್ ಸರ್, ಓಂ ಪ್ರಕಾಶ್ ಸರ್, ಈ ಮೂವರನ್ನು ನಾನು ಒಂದು ಗಂಟೆಯ ಅವಧಿಯಲ್ಲಿ ನೋಡಿದೆ. ಒಂದು ಕಾಲದಲ್ಲಿ ಇವರನ್ನು ನಾನು ಭೇಟಿ ಮಾಡೋದಕ್ಕೆ ಆಗುತ್ತಾ? ಅವರೆಲ್ಲ ನಮ್ಮಂತವರಿಗೆ ಸಿಕ್ತಾರಾ? ಹೀಗೆ ಅದೆಷ್ಟೋ ದಿನಗಳು ಅಂದುಕೊAಡು ಚಂದಿರನನ್ನು ನೋಡಿಕೊಂಡು ಮಲಗುತ್ತಿದ್ದ ನನಗೆ, ನಿಜಕ್ಕೂ ಇದು ನನ್ನ ಬದುಕೇನಾ? ಇಷ್ಟೊತ್ತು ಇವರನ್ನು ಭೇಟಿ ಮಾಡಿದ್ದು ನಾನೇನಾ!? ಅಂತಾ ಅನ್ನಿಸುತ್ತಿತ್ತು..!!!
ಹಾಡು ಬರೆಯಲು ಎಲ್ಲಿ ಹೋಗಬೇಕು?
ಓಂ ಪ್ರಕಾಶ್ ರಾವ್ ರವರು ನನ್ನನ್ನು ಕೂರಿಸಿಕೊಂಡು ಸೀನ್ ಮತ್ತು ಸಂದರ್ಭ ಎಲ್ಲವನ್ನು ಹೇಳುತ್ತಿದ್ದಾರೆ, ನನಗೆ ಅವರು ಹೇಳುವುದು ಎಲ್ಲಾ ಕೇಳುತ್ತಿದೆ ಆದರೇ ನನಗೆ ಏನೂ ಅರ್ಥವಾಗುತ್ತಿಲ್ಲ. ಹಾಡು ಬರೆಯೋದು ಹೇಗೆ ಅಂತಾ ಅಸಲು ಗೊತ್ತಾಗುತ್ತಿಲ್ಲ.
ಎಲ್ಲಾ ಕೇಳಿಸಿಕೊಂಡ ನಂತರ ಸೀದಾ ಮನೋಹರ್ ಸರ್ ಮನೆಗೆ ಮತ್ತೇ ಅದೇ ಪ್ರೊಡ್ಯೂಸರ್ ಕರೆದುಕೊಂಡು ಹೋಗಿ ಬಿಟ್ಟರು. ಮನೋಹರ್ ಸರ್‌ಗೆ ನನ್ನ ಪರಿಸ್ಥಿತಿ ಅರ್ಥ ಆಯಿತು. ಅವರು ನನ್ನನ್ನು ಕೂರಿಸಿ “ಇದು ತನನನಾ, ಇದು ಲಲಲಲಾ” ಅಂತಾ ತಿಳಿಸಿ ಲಘು ಗುರು ಹೇಳಿಕೊಟ್ಟು ಬರೆಸಿದರು. ಅಲ್ಲಿ ನಾನು ಕವನವನ್ನು ಸಂಗೀತದ ಸ್ಕೇಲ್‌ಗೆ ಬರೆಯುವುದನ್ನು ಶುರು ಮಾಡಿದೆ. ಮನೆಯಲ್ಲಿ ಎಲ್ಲರೂ ನನಗೆ ಫುಲ್ ಸಪೋರ್ಟ್ ಕೊಟ್ಟರು. ಹಾಡು ಬರೆಯೋದಕ್ಕೆ, ಮನೇಲಿ ನನ್ನ ಅಕ್ಕ, ಅಣ್ಣ ಎಲ್ಲರು ಊಟಿಗೆ ಹೋಗು ಅಥವಾ ಯಾವುದಾದರೂ ಸಮುದ್ರದ ತೀರಕ್ಕೆ ಹೋಗು ಅಂತಾ ಹೇಳ್ತಾ ಇದ್ರೂ, ನಾನು ಏನೂ ಬೇಡಾ ಅಂತಾ ಮನೆಯಲ್ಲೇ ಕುಳಿತು ಒಂದಷ್ಟು ಬರೆದುಕೊಂಡು ಮನೋಹರ್ ಸರ್ ಮನೆಗೆ ತೆಗೆದುಕೊಂಡು ಹೋದೆ, ಮನೋಹರ್ ಸರ್ ಲಿರಿಕ್ ನೋಡಿ ಚೆನ್ನಾಗಿದೆ, ಇದನ್ನು ಗುರುಕಿರಣ್‌ರವರಿಗೆ ಕೊಡು ಎಂದು ಹೇಳಿ ಕಳಿಸಿದರು. ಅವರು ಆ ಲಿರಿಕ್‌ನಲ್ಲಿದ್ದ ಲೈನ್‌ಗಳೆಲ್ಲವನ್ನು ಒಂದಾದರೊಂದರಂತೆ ಜೋಡಿಸಿದರು. ಆ ಹಾಡಿಗೆ ಒಂದು ಅಂತಿಮ ರೂಪು ರೇಷೆ ಕೊಟ್ಟು ಅದನ್ನು ಓಂ ಪ್ರಕಾಶ್ ಸರ್‌ಗೆ ತೋರಿಸಲು ಹೇಳಿದರು ನಾನು ಆ ಫೈನಲ್ ಲಿರಿಕ್ ಲೈನ್ ತೆಗೆದುಕೊಂಡು ಹೋಗಿ ಕೊಟ್ಟೆ ಅವರು ಹಾಡಿಸಿ ಕಳಿಸಲು ಹೇಳಿದರು ನಾನು ಮತ್ತೆ ವರದಿ ತಲುಪಿಸಿದೆ. ಅವರು ಹಾಡಿಸಿ ಕಳಿಸಿದರು. ಎರಡು ದಿನದ ನಂತರ ನನಗೆ ಗುರು ಸರ್ ಕಾಲ್ ಮಾಡಿ ನನ್ನನ್ನು ಸ್ಟುಡಿಯೋಗೆ ಕರೆದು ಹಾಡು ಕೇಳಿಸಿದರು. ನನಗೆ ಆ ಖುಷಿ ತಡೆಯಲಾಗಲಿಲ್ಲ. ಆ ಹಾಡು ಸಚ್ಚಿ ಚಿತ್ರದ ‘ಏನೋ ಆಗಿದೆ, ನಂಗೇನೋ ಆಗಿದೆ, ನೋವು ಇದೆ, ನಲಿವೂ ಇದೆ’ ಈ ಹಾಡು.
ಹಾಡು ಬರವಣಿಗೆಯಿಂದ ಸ್ಟೋರಿ ಬರವಣಿಗೆವರೆಗೆ.
ಹೀಗೆ ಹಾಡು ಬರೆದುಕೊಂಡು ಸಿನಿಮಾದಲ್ಲಿ ಹೆಜ್ಜೆ ಇಟ್ಟಾಗಿತ್ತು, ಆಮೇಲೆ ನನಗೆ ಇನ್ನೊಂದು ಹಾಡು ಬರೆಯುವ ಅವಕಾಶ ಸಿಕ್ಕಿತು. ಅದು ಸಚ್ಚಿ ಚಿತ್ರದ ಟೈಟಲ್ ಸಾಂಗ್ ಅದನ್ನು ಬರೆದೆ. ಆ ಹಾಡು ಕೇಳಿದ ಮೇಲೆ ಓಂ ಪ್ರಕಾಶ್ ಸರ್ ನನಗೆ ಬೇರೆ ತರಹದ ನಂಬಿಕೆಯನ್ನಾ ಹುಟ್ಟಿಸಿಬಿಟ್ಟರು. ಆಮೇಲೆ ಅವರು ನನ್ನನ್ನು ದಿನ ಬೇಟಿ ಮಾಡಲು ತಿಳಿಸಿದರು. ‘ಸಚ್ಚಿ ಸಿನಿಮಾ ಸ್ಟೋರಿಗೂ ನನ್ನ ಹಾಡಿಗೂ ಒಂದು ಭಯಂಕರ ಸಿಂಕ್ ಆಗಿಹೋಗಿದೆ. ಎಂದು ನನಗೆ ಸ್ಟೋರಿ ಬರವಣಿಗೆಗೆ ಸೇರಿಸಿಕೊಂಡರು, ಹೀಗೆ ಬರವಣಿಗೆ ಕೆಲಸಗಳು ಶುರುವಾದವು.
ನಿರ್ದೇಶಕರನ್ನು ನೋಡಿ ನಿರ್ದೇಶನ ಕಲಿತೆ.
ಸುಗ್ರೀವ ಸಿನಿಮಾಗೆ ನಾನು ರೈಟರ್ ಆಗಿ ಬರವಣಿಗೆ ಕೆಲಸ ಮಾಡಿದೆ, ಆ ಸಿನಿಮಾ ಶೂಟಿಂಗ್ ಮಾಡಬೇಕಾದರೆ ಹತ್ತು ಜನ ನಿರ್ದೇಶಕರಿದ್ದರು ಆ ಎಲ್ಲರಿಗೂ ನಾನೊಬ್ಬನೆ ರೈಟರ್ ಆಗ ನಾನು ಎಷ್ಟೋ ಕೆಲಸಗಳನ್ನು ತಿಳಿದುಕೊಂಡೆ. ಸುಗ್ರೀವ ಸಿನಿಮಾದಲ್ಲಿ ಶಿವಣ್ಣನವರಿಗೂ ನಾನೆ ರೀಡಿಂಗ್ ಕೊಟ್ಟಿದ್ದೆ. ಡೈಲಾಗ್ ಹೇಳೊದಕ್ಕೂ ಹೋಗಿದ್ದೆ. ಆಮೇಲೆ ನನಗೆ ಎಷ್ಟೋ ಸಿನಿಮಾಗಳಿಗೆ ಡೈಲಾಗ್ ಬರೆಯೋ ಅವಕಾಶಗಳೂ ಸಿಕ್ಕಿದ್ದವು ನನಗೆ ಉಪೇಂದ್ರರವರ ಜೊತೆ ಬುದ್ಧಿವಂತ ಸಿನಿಮಾಗೆ ಡೈಲಾಗ್ ಬರೆಯೋದಕ್ಕೆ ಅವಕಾಶ ಸಿಕ್ಕಿತು. ಅಲ್ಲಿಂದ ನಾನು ಕಂಪ್ಲೀಟ್ ಬರಹಗಾರನಾಗಿ ಹೋದೆ. ಕೆಲವು ಸಿನಿಮಾಗಳಿಗೆ, ನಿರ್ದೇಶಕರಿಗೆ ಸ್ಪಾಟ್‌ನಲ್ಲಿ ಅಸಿಸ್ಟೆಂಟ್ ಆಗಿದ್ದೆ, ಅಸೋಸಿಯೇಟ್ ಆಗಿದ್ದೆ.
ನನ್ನ ಬದುಕಲ್ಲಿ ನಾನು ನಿರ್ದೇಶಕನಾಗಬೇಕೆಂದು ನಿರ್ದರಿಸಿದ್ದು ಈ ಇಬ್ಬರು ಒಂದು ‘ಸಿನಿಮಾ’ ಇನ್ನೊಂದು ನನ್ನ ‘ಸ್ನೇಹಿತರು’. ನಾನು ಉಪೇಂದ್ರ ಅಭಿನಯದ ರಜನಿ ಸಿನಿಮಾದ ಡೈಲಾಗ್ ಬರೆಯಬೇಕಾದರೆ ಎಲ್ಲರೂ ನನ್ನ ಡೈಲಾಗ್ ರೀಡಿಂಗ್ ಒಪ್ಪಿಕೊಂಡರು. ಆಮೇಲೆ ನಾನು ‘ಅಪ್ಪು ಪಪ್ಪು’ ಮತ್ತು ‘ಮಸ್ತ್ ಮಜಾ ಮಾಡಿ’ ಸಿನಿಮಾಗೂ ರೈಟರ್ ಆಗಿ ಕೆಲಸ ಮಾಡಿದ್ದೆ. ಅದರ ಪ್ರೊಡ್ಯೂಸರ್ ಸೌಂದರ್ಯ ಜಗದೀಶ್‌ರವರು ಅಮೇರಿಕಕ್ಕೆ ಪ್ರವಾಸ ಹೋಗುತ್ತಿರಬೇಕಾದರೆ ನನ್ನನ್ನು ಕರೆದು ಒಂದು ಒಳ್ಳೆ ಕಥೆ ಮಾಡಿ ರಾಮ್ ನಾರಾಯಣ್, ಎಂದು ಹೇಳಿ ದುಡ್ಡು ಕೊಟ್ಟು ಅವರು ಟ್ರಿಪ್ ಹೊರಟರು. ಅವರು ಪ್ರವಾಸದಿಂದ ಬರುವಷ್ಟರಲ್ಲಿ ನಾನು ನನ್ನ ಟೀಮ್ ಸೇರಿಕೊಂಡು ಒಂದು ಕಥೆ ರೆಡಿ ಮಾಡಿದೆವು. ಅವರು ಮರಳಿ ಬಂದ ಕೂಡಲೇ ಕಥೆ ಕೇಳಿ ತುಂಬಾ ಖುಷಿಪಟ್ಟರು. ಈ ಕಥೆನಾ ಯಾರ ಕೈಲಿ ಡೈರೆಕ್ಟ್ ಮಾಡಿಸೋದು ಅನ್ನುವ ಗಲಿಬಿಲಿಯಲ್ಲಿದ್ದರು. ಆ ಗಲಿಬಿಲಿಯಲ್ಲಿ ನನ್ನ ಟೀಮ್ ನನಗೆ ಒಂದು ಮಾತು ಹೇಳಿತು “ರಾಮ್ ನೀವೇ ಯಾಕೆ ಡೈರೆಕ್ಟ್ ಮಾಡಬಾರದು” ಅಂದ್ರು “ಒಂದು ಮಾತು ಕೇಳಿ ಟ್ರೈ ಮಾಡಿ” ಅಂದ್ರು. ಸರಿ ಹೇಗಿದ್ರೂ ಕೆಲಸ ಗೊತ್ತಿದೆಯಲ್ಲ ಒಂದು ಟ್ರೈ ಮಾಡೇ ಬಿಡೋಣ ಅಂತಾ ಪ್ರೊಡ್ಯೂಸರ್ ಹತ್ತಿರ ಹೋಗಿ ಕೇಳಿದೆ ಅವರು ಈ ಸಿನಿಮಾಗೆ ದರ್ಶನ್ ಹಾಕ್ಕೋಳ್ಳೋಣ ಅಂತಾ ಇದ್ದೀವಿ. ನೀವು ದರ್ಶನ್ ಒಪ್ಪಿಸಿದರೆ ನೀವೇ ಡೈರೆಕ್ಟರ್ ಅಂದ್ರು. ನಾನು ಸರಿ ಎಂದು ದರ್ಶನ್ ಸರ್ ಹತ್ತಿರ ಹೋದೆ, ದರ್ಶನ್ ಸರ್ ನನ್ನನ್ನು ಯಾವಾಗಲೂ ಏನ್ ರೈರ‍್ರೇ ಅಂತಾನೇ ಕರೆಯುತ್ತಿದ್ದರು. ನಾನು ಮಾಡಿದ ಈ ಹೊಸ ಕಥೆಯ ವಿಷಯ ಕೇಳಲು ಅವರ ಬಳಿಗೆ ಹೋದಾಗಲೂ ಅವರು ನನ್ನನ್ನು ಏನ್ ರೈರ‍್ರೇ ಅಂತಾನೆ ಕರೆದು ಮಾತಾಡಿಸಿದರು. ನಾನು ಹೋಗಿ ಅವರಿಗೆ ಹೊಸದಾಗಿ ಮಾಡಿಕೊಂಡಿದ್ದ ಕಥೆ ಹೇಳಿದೆ. ಅವರು ಕಥೆ ಕೇಳೀದ ಕೂಡಲೆ ಒಪ್ಪಿಕೊಂಡರು ನಂತರ “ಡೈರೆಕ್ಟರ್ ಯಾರು” ಅಂತಾ ಕೇಳಿದರು ಅದಕ್ಕೆ ನಾನು ಸ್ವಲ್ಪ ಗಲಿಬಿಲಿಯಲ್ಲೇ “ನೀವು ಒಪ್ಪಿಕೊಂಡರೇ ನಾನೆ ಡೈರೆಕ್ಟರ್ ಇಲ್ಲಾಂದ್ರೇ ಬೇರೆಯವರು” ಅಂದೆ. ಅವರು ಸಂತೋಷದಿಂದ ನಗುತ್ತಾ ನನ್ನನ್ನು ಬಾಚಿ ತಬ್ಬಿಕೊಂಡರು. “ಏನ್ ಡೈರೆಕ್ರ‍್ರೇ ಹೀಗ್ ಕೇಳ್ತಿದ್ದೀರಲ್ಲಾ” ಅಂದು ಬಿಟ್ಟರು. “ಹೋಗಿ ಪ್ರೊಡ್ಯೂಸರ್ ಕರೆದುಕೊಂಡು ಬನ್ನಿ” ಅಂದರು. ಹಾಗೆ ನನ್ನ ಮೊದಲ ನಿರ್ದೇಶನದ ‘ಸ್ನೇಹಿತರು’ ಸಿನಿಮಾ ಶುರುವಾಯಿತು. ಆ ದಿನ ನನ್ನ ಸ್ನೇಹಿತರು ನನಗೆ ಒಂದು ಮಾತು ಧೈರ್ಯ ಕೊಡಲಿಲ್ಲ ಅಂದಿದ್ದರೆ, ದರ್ಶನ್ ಸರ್ ದೊಡ್ಡ ಮನಸ್ಸು ಮಾಡದಿದ್ದರೇ ಆ ದಿನ ನಾನು ನಿರ್ದೇಶಕನಾಗಿ ಬಡ್ತಿಯಾಗುತ್ತಿರಲಿಲ್ಲ. ಬಹುಶಃ ಇವತ್ತು ಡೈರೆಕ್ಟರ್ ಆಗುತ್ತಿದ್ದನೋ ಇಲ್ಲವೋ ಗೊತ್ತಿಲ್ಲ.