ಹಿರಿಯ ನಟಿ ಜಯಾ ಬಚ್ಚನ್ ತಮ್ಮ ಹಾಗೂ ಅಮಿತಾ ಭಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಬಚ್ಚನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ವಿವಾಹವಾದ ವರ್ಷವಾದ 2007 ರಲ್ಲಿ ಟಾಕ್ ಶೋ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಂಡಾಗ, ಜಯಾ ಬಚ್ಚನ್ ಅವರು ತಮ್ಮ ಸೊಸೆಯೊಂದಿಗಿನ ಸಂಬಂಧದ ಬಗ್ಗೆ ಬಹಿರಂಗಗೊಳಿಸಿದ್ದರು.ಅಮಿತಾಭ್ ಬಚ್ಚನ್ ಅವರು ಸೊಸೆ ಐಶ್ವರ್ಯಾ ಅವರನ್ನು ಹೇಗೆ ಪ್ರೀತಿಸುತ್ತಾರೆ ಮತ್ತು ಅಮಿತಾಭ್ ಅವರು ತಮ್ಮ ಮಗಳು ಶ್ವೇತಾರಂತೆ ಐಶ್ವರ್ಯ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಜಯಾ ಹೇಳಿದ್ದಾರೆ. ‘ಅಮಿತ್‌ಜಿ ಅವರು ಸೊಸೆ ಐಶ್ವರ್ಯಾಳನ್ನು ನೋಡಿದ ಕ್ಷಣ, ತಮ್ಮ ಮಗಳು ಶ್ವೇತಾಳನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದರು. ಅದನ್ನು ಇಂದಿಗೂ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಸೊಸೆಯನ್ನು ನೋಡಿದಾಗಲೆಲ್ಲಾ ಅಮಿತ್ ಜಿ ಅವರ ಕಣ್ಣುಗಳು ಬೆಳಗುತ್ತವೆ. ಶ್ವೇತಾ ತವರು ತೊರೆದ ಬಳಿಕ, ಆಕೆಯ ಜಾಗವನ್ನು ಐಶ್ವರ್ಯ ತುಂಬಿದ್ದಾಳೆ. ನಮ್ಮ ಮಗಳು ಶ್ವೇತಾ ಈಗ ನಮ್ಮ ಕುಟುಂಬದ ಜೊತೆ ಇಲ್ಲ, ಪತಿಯ ಮನೆಯಲ್ಲಿದ್ದಾಳೆ. ಆ ದುಃಖವನ್ನು ಮರೆಸಿದ್ದು, ಐಶ್ವರ್ಯ. ಇಲ್ಲದಿದ್ದರೆ ಶ್ವೇತಾ ಇಲ್ಲದ ನೋವು ನಮ್ಮನ್ನು ಕಾಡುತ್ತಿತ್ತು’ ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ಅಂದಹಾಗೆ, ಶ್ವೇತಾ ಬಚ್ಚನ್ ಅಮಿತಾಭ್ ಮತ್ತು ಜಯಾ ಅವರ ಹಿರಿಯ ಮಗಳು. ಅವರು 1997 ರಲ್ಲಿ ಉದ್ಯಮಿ ನಿಖಿಲ್ ನಂದಾ ಅವರನ್ನು ಮದುವೆಯಾದರು. ನಿಖಿಲ್ ಅವರು ಪ್ರಸಿದ್ಧ ಹಿಂದಿ ಚಲನಚಿತ್ರ ನಟ-ನಿರ್ಮಾಪಕ ರಾಜ್ ಕಪೂರ್ ಅವರ ಮಗಳಾದ ರಿತು ನಂದಾ ಅವರ ಪುತ್ರ, ಅರ್ಥಾತ್ ರಾಜ್ ಕಪೂರ್ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರ ಮಾವ. ಶ್ವೇತಾ ಮತ್ತು ನಿಖಿಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ – ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ.ಇದೇ ಸಂದರ್ಭದಲ್ಲಿ ತಮ್ಮ ಮತ್ತು ಐಶ್ವರ್ಯಾಳ ಸಂಬಂಧದ ಬಗ್ಗೆ ಮಾತನಾಡಿದ ಜಯಾ ಬಚ್ಚನ್, ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ.ಆಕೆ ಕೇವಲ ಸುಂದರಿ ಮಾತ್ರವಲ್ಲ, ತುಂಬಾ ಗುಣವಂತೆ ಕೂಡ. ನಾನು ಅವಳನ್ನು ಪ್ರೀತಿಸುತ್ತೇನೆ. ಆಕೆ ದೊಡ್ಡ ತಾರೆಯಾಗಿದ್ದರೂ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಅವಳು ಸಾಕಷ್ಟು ಘನತೆಯನ್ನು ಹೊಂದಿದ್ದಾಳೆ ಎಂದು ಜಯಾ ಹೇಳಿದ್ದಾರೆ.
ಇದೇ ವೇಳೆ ಅತ್ತೆ-ಸೊಸೆಯಾದ ಜಯಾ ಬಚ್ಚನ್ ಮತ್ತು ಐಶ್ವರ್ಯ ರೈ ಈ ಸಂಬಂಧವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುರಿತು ಮಾತನಾಡಿರುವ ಜಯಾ ಅವರು, ತಮ್ಮ ನಡುವೆ ಬರುವ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ವಿಧಾನವನ್ನು ಹೇಳಿಕೊಂಡಿದ್ದಾರೆ. ಐಶ್ವರ್ಯಾ ಬೆನ್ನಹಿಂದೆ ತಾನು ರಾಜಕೀಯ ಮಾಡುವುದಿಲ್ಲ. ಆಕೆಯನ್ನು ಸ್ನೇಹಿತೆಯಂತೆ ನೋಡುತ್ತೇನೆ. ನನಗೆ ಅವಳ ಬಗ್ಗೆ ಏನಾದರೂ ಇಷ್ಟವಾಗದಿದ್ದರೆ, ಅದನ್ನು ಬೆನ್ನ ಹಿಂದೆ ಹೇಳುವುದಿಲ್ಲ. ಬದಲಿಗೆ ಆಕೆಯ ಮುಖಕ್ಕೇ ಹೇಳುತ್ತೇನೆ. ಬೆನ್ನ ಹಿಂದೆ ರಾಜಕೀಯ ಮಾಡದ ಕಾರಣ ಜಗಳ ಆಗುವುದಿಲ್ಲ. ಒಂದು ವೇಳೆ ಅವಳು ನನ್ನ ಯಾವುದಾದರೂ ಅಂಶಗಳನ್ನು ಒಪ್ಪದಿದ್ದರೆ ನೇರವಾಗಿಯೇ ನನ್ನೆದುರು ಹೇಳುತ್ತಾಳೆ. ಒಂದೇ ವ್ಯತ್ಯಾಸವೆಂದರೆ ನಾನು ಸ್ವಲ್ಪ ಹೆಚ್ಚು ನಾಟಕೀಯವಾಗಿ ಹೇಳುತ್ತೇನೆ, ಆಕೆ ಹೆಚ್ಚು ಗೌರವಾನ್ವಿತವಾಗಿ ಹೇಳುತ್ತಾಳೆ ಎಂದು ಜಯಾ ಅತ್ತೆ-ಸೊಸೆ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ