ಶಾರುಖ್ ಕಾನ್ ಅಭಿನಯದ ‘ಜವಾನ್’ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೆ ಇನ್ನು ಎರಡೂವರೆ ತಿಂಗಳಿದ್ದರೂ, ಶಾರುಖ್ ಖಾನ್ ಆಗಲಿ, ಚಿತ್ರತಂಡದವರಾಗಲಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಖುದ್ದು ಶಾರುಖ್ ಚಿತ್ರದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಟ್ವಿಟರ್ ನಲ್ಲಿ #AskSRK ಎಂಬ ಪ್ರಶ್ನೋತ್ತರ ಸೆಷನ್ ನಲ್ಲಿ ಭಾಗವಹಿಸುವ ಶಾರುಖ್ ಖಾನ್, ಇತ್ತೀಚೆಗೆ ಮತ್ತೆ ಅಂಥದೊಂದು ಸಂವಾದ ನಡೆಸಿದರು. ಅದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿವೆ. ಈ ಸಂಭ್ರಮವನ್ನು ಅವರು ಅಭಿಮಾನಿಗಳೊಂದಿಗೆ ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: “COZ I LUV U” ಆಲ್ಬಂ ಹಾಡಿನ ಮೂಲಕ ವಿನೂತನ ಪ್ರಯೋಗ
ಈ 31 ವರ್ಷಗಳಲ್ಲಿ ನೀವು ನಿರಂತರವಾಗಿ ಪಾಲಿಸುತ್ತಿರುವ ಒಂದು ವಿಷಯ ಏನು ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಖಾನ್, ‘ಒಂದು ಚಿತ್ರವನ್ನು ಒಪ್ಪಿಕೊಂಡ ನಂತರ ನನ್ನ ಪಾತ್ರದ ಹಿಂದಿನ ಕಥೆ ಮತ್ತು ಸಿದ್ಧಾಂತಗಳನ್ನು ಅಂದಾಜು ಮಾಡಿ ಬರೆದಿಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಅದನ್ನು ನಿರ್ದೇಶಕರ ಜೊತೆಗೆ ಹಂಚಿಕೊಳ್ಳುತ್ತೇನೆ. ಅದು ಕಥೆಯ ರೂಪದಲ್ಲಿರಬಹುದು ಅಥವಾ ಕಾವ್ಯದ ರೂಪದಲ್ಲೂ ಇರಬಹುದು. ಕೆಲವೊಮ್ಮೆ ಯಾರಿಗೂ ತೋರಿಸದೆ ಎತ್ತಿಟ್ಟುಕೊಂಡಿದ್ದೂ ಇದೆ ಎಂದು ಹೇಳಿದ್ದಾರೆ ಶಾರುಖ್ ಖಾನ್. ಸದ್ಯದಲ್ಲೇ ಹುಟ್ಟಲಿರುವ ತಮ್ಮ ಅವಳಿ ಗಂಡು ಮಕ್ಕಳಿಗೆ ‘ಪಠಾಣ್ ಮತ್ತು ‘ಜವಾನ್ ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ ಎಂದು ಅಭಿಮಾನಿಯೊಬ್ಬರ ತಮಾಷೆ ಪ್ರಶ್ನೆಗೆ, ‘ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಡಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ಸಿಹಿ
‘ಜವಾನ್ ಚಿತ್ರ ನೋಡುವುದಕ್ಕೆ ಜೋಶ್ ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಎಂದು ಕರೆ ನೀಡಿದ ಶಾರುಖ್ ಖಾನ್, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ಚೆನ್ನಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ನಂಬಿಕೆ ತಮಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.