ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ‘ಜೇಮ್ಸ್’ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೈ ಬಿಪಿಯಿಂದಾಗಿ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದು, ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕಿಶೋರ್ ಪತ್ತಿಕೊಂಡ ಅವರನ್ನು ದಾಖಲಿಸಲಾಗಿದೆ.
ಕಿಶೋರ್ ಪತ್ತಿಕೊಂಡ ಜೇಮ್ಸ್ ಸಿನಿಮಾ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಇದಾಗಿದೆ. ಅಪ್ಪು ನಿಧನದ ಬಳಿಕ ಈ ಸಿನಿಮಾ ರಿಲೀಸ್ ಆಗಿತ್ತು. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಬಂದ ಜೇಮ್ಸ್ 2022 ಮಾರ್ಚ್ 17ರಂದು ಜೇಮ್ಸ್ ಸಿನಿಮಾ ತೆರೆಗೆ ಬಂದಿತ್ತು. ಅಪ್ಪು ನಿಧನದ ಬಳಿಕ ಬಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿರ್ಮಾಪಕ ಕಿಶೋರ್ ಅವರಿಗೆ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗಿಂತ ಅಪ್ಪು ಇಲ್ಲ ಎನ್ನುವ ನೋವು ದೊಡ್ಡ ಮಟ್ಟದಲ್ಲಿ ಕಾಡಿತ್ತು. ಇದೀಗ ಕಿಶೋರ್ ಆಸ್ಪತ್ರೆ ಸೇರಿರುವುದು ಅವರ ಕುಟುಂಬದವರಿಗೆ ಆತಂಕ ಮನೆಮಾಡಿದೆ.