ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನಿಜವಾಗಿಯೂ ‘ಡ್ರಾಮಾ ಹೌಸ್’ ಆಗಿದೆ! ದೊಡ್ಮನೆಯಲ್ಲಿ ನಡೆದ ಒಂದು ಸಣ್ಣ ಮಾತಿನ ಜಗಳ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಸ್ಪರ್ಧಿ ಜಾಹ್ನವಿ ಮಾತಿನ ಭರದಲ್ಲಿ “ಗಾಂಚಲಿ” ಎಂಬ ಪದವನ್ನು ಬಳಸಿದಂತೆಯೇ ಮನೆ ಪೂರ್ತಿ ಸಿಡಿಲು ಬಡಿದಂತಾಗಿದೆ. ಆ ಪದ ಕೇಳಿದ ಜಂಟಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಕ್ಷಣಾರ್ಧದಲ್ಲಿ ಗರಂ ಆಯಿತು.

ಆಟದ ಮಧ್ಯೆ ಈಗ ಜಗಳದ ಜ್ವಾಲೆ ಉರಿಯುತ್ತಿದೆ. ಜಂಟಿಗಳು ಮತ್ತು ಒಂಟಿಗಳ ನಡುವೆ ಈಗಾಗಲೇ ಒತ್ತಡ ಹೆಚ್ಚಾಗಿದ್ದು, ಅದಕ್ಕೆ ಈ ಪದದ ವಿವಾದ ಮತ್ತೊಂದು ತಿವಿತ ನೀಡಿದೆ. ಕಳೆದ ವಾರಾಂತ್ಯದಲ್ಲಿ ಜಂಟಿಗಳು ಕೆಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬಿಗ್ ಬಾಸ್ ಒಂಟಿಗಳಿಗೆ ಶಿಕ್ಷೆ ನೀಡಿದ್ದರು. ಅದರಲ್ಲಿ ಬೆಡ್ ರೂಮ್ ಬಳಕೆ ನಿಷೇಧಿಸಿದ ಬಳಿಕ ಮನೆಯೊಳಗಿನ ಅಸಮಾಧಾನ ತಾರಕಕ್ಕೇರಿತ್ತು. ಈ ಹಿನ್ನೆಲೆ, ಜಾಹ್ನವಿ ಮಾತು ಬೆಂಕಿಗೆ ಎಣ್ಣೆ ಸುರಿದಂತಾಗಿದೆ.
ಜಾಹ್ನವಿ ಅವರ ಹೇಳಿಕೆಗೆ ಪ್ರತಿಯಾಗಿ ಅಶ್ವಿನಿ, ಮಂಜು ಭಾಷಿಣಿ, ಅಭಿಷೇಕ್ ಸೇರಿ ಹಲವರು ತೀವ್ರವಾಗಿ ಪ್ರತಿಕ್ರಿಯಿಸಿದರು. “ಅದು ಅಸಭ್ಯ ಪದ!” ಎಂದು ಮಂಜು ಭಾಷಿಣಿ ವಾದಿಸಿದರೆ, “ಅದು ಸಾಮಾನ್ಯ ಪದ, ಅರ್ಥ ಬೇರೆ” ಎಂದು ಜಾಹ್ನವಿ ತಿರುಗಿ ಉತ್ತರಿಸಿದರು. ಇಬ್ಬರ ಮಧ್ಯೆ ಮಾತಿನ ಕಿತ್ತಾಟ, ಕೂಗಾಟ, ಆರೋಪ–ಪ್ರತಾರೋಪ ನಡೆಯುತ್ತಲೇ ಬಿಗ್ ಬಾಸ್ ಮನೆಯಲ್ಲಿ ಕೆಲಸಗಳೆಲ್ಲ ನಿಂತುಹೋಗಿವೆ.
ಒಟ್ಟಾರೆ, ಈ ಘಟನೆ ಮನೆಯಲ್ಲಿ ಹೊಸ ಬಿಕ್ಕಟ್ಟಿಗೆ ಕಾರಣವಾಗಿದ್ದು, ಪ್ರೇಕ್ಷಕರಿಗೂ ಕುತೂಹಲ ಮೂಡಿಸಿದೆ. ಎಲ್ಲರೂ ಯಾರ ತಪ್ಪು, ಯಾರ ಸರಿ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತ ಗಿಲ್ಲಿ ಮಾತ್ರ ಈ ಎಲ್ಲ ಗಲಾಟೆಯ ಮಧ್ಯೆ ತನ್ನ ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾನೆ.
ಬಿಗ್ ಬಾಸ್ ಮನೆಯಲ್ಲಿ ಈಗ ಆಟಕ್ಕಿಂತ ಜಗಳವೇ ಹೆಚ್ಚು! ಮುಂದಿನ ಎಪಿಸೋಡ್‌ನಲ್ಲಿ ಈ ವಿವಾದದ ತೀವ್ರತೆ ಏನೆಂಬುದು ಈಗ ಎಲ್ಲರ ಕಣ್ಣಿನ ಕೇಂದ್ರವಾಗಿದೆ.
