Sandalwood Leading OnlineMedia

‘ಜಾಕಿ’, ‘ಅಪ್ಪು’ ರೀ-ರಿಲೀಸ್ ಸೂಪರ್ ಹಿಟ್, ಮುಂದಿನ ರೀ-ರಿಲೀಸ್ ಚಿತ್ರ ಯಾವುದು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ರೀ-ರಿಲೀಸ್ ಪರ್ವ ಶುರುವಾಗಿದೆ. ಪುನೀತ್ ರಾಜ್‌ಕುಮಾರ್, ದರ್ಶನ್, ಉಪೇಂದ್ರ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ಹೊಸ ರೂಪದಲ್ಲಿ ಮತ್ತೆ ತೆರೆಗೆ ಬರ್ತಿವೆ. ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿವೆ.  ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ.

ದಶಕಗಳ ಹಿಂದೆ ಬಂದಿದ್ದ ಸಿನಿಮಾಗಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಡಿಟಿಎಸ್ ಸೌಂಡ್‌ನಲ್ಲಿ ದೊಡ್ಡ ಪರದೆಯಲ್ಲಿ ನೋಡುವ ಮಜಾನೇ ಬೇರೆ. ಅದರಲ್ಲೂ ಅಭಿಮಾನಿಗಳಿಗೆ ಇದು ಹಬ್ಬವೇ ಸರಿ. ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಅಪ್ಪು’ ಸಿನಿಮಾ ತೆರೆಗಪ್ಪಳಿಸಿದೆ. ಹಬ್ಬದ ರೀತಿ ಚಿತ್ರವನ್ನು ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಕೆಲವರಿಗೆ ಇದು ಹೊಸ ಸಿನಿಮಾ ಬಿಡುಗಡೆಯೋ ಹಳೇ ಸಿನಿಮಾ ಮರು ಬಿಡುಗಡೆಯೋ ಎಂದು ಗೊಂದಲ ಮೂಡುವ ಮಟ್ಟಿಗೆ ಅಭಿಮಾನಿಹಳು ಭವ್ಯ ಸ್ವಾಗತ ಕೋರಿದ್ದಾರೆ.

ದೊಡ್ಮನೆ ಸದಸ್ಯರು, ನಟಿಯರಾದ ರಮ್ಯಾ, ಶರ್ಮಿಳಾ ಮಾಂಡ್ರೆ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿ ಸಾಕಷ್ಟು ತಾರೆಯರು ‘ಅಪ್ಪು’ ಸಿನಿಮಾ ರೀ-ರಿಲೀಸ್ ಸಂಭ್ರಮಿಸಿದ್ದಾರೆ. ಚಿತ್ರಮಂದಿರದ ಒಳಗೆ ಅಭಿಮಾನಿಗಳು ಕುಣಿದು ಜೈಕಾರ ಎಂಜಾಯ್ ಮಾಡಿದ್ದಾರೆ. “ನನ್ನ ಜೀವಮಾನದಲ್ಲೇ ಚಿತ್ರಮಂದಿರದಲ್ಲಿ housefullನ ಅಷ್ಟು ಪ್ರೇಕ್ಷಕರು ಎದ್ದು ನಿಂತು ಕುಣಿದ ಹಾಡನ್ನು ನಾನು ನೋಡಿದ್ದು “ತಾಲಿಬಾನ್ ಅಲ್ಲ ಅಲ್ಲ”, ಸಿನಿಮಾ ‘ಅಪ್ಪು’, ಸ್ಥಳ ನರ್ತಕಿ ಚಿತ್ರಮಂದಿರ ಎಂದು ನಿರ್ದೇಶಕ ಸಿಂಪಲ್ ಸುನಿ ಟ್ಟೀಟ್ ಮಾಡಿದ್ದಾರೆ. ದಶಕಗಳ ಹಿಂದೆ ಡಾ. ರಾಜ್‌ಕುಮಾರ್ ನಟನೆಯ ಸೂಪರ್ ಚಿತ್ರಗಳು ಇದೇ ರೀತಿ ರೀ-ರಿಲೀಸ್ ಆಗಿ ಸದ್ದು ಮಾಡುತ್ತಿದ್ದವು. ಬಳಿಕ ಆ ಟ್ರೆಂಡ್ ಕಮ್ಮಿ ಆಗಿತ್ತು. ಡಿಜಿಟಲ್ ತಂತ್ರಜ್ಞಾನ ಬಂದಮೇಲೆ ಮತ್ತೆ ಇದು ಹೆಚ್ಚಾಯಿತು. ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಸಿನಿಮಾ 7 ವರ್ಷಗಳ ಹಿಂದೆ ದೊಡ್ಡಮಟ್ಟದಲ್ಲಿ ರೀ-ರಿಲೀಸ್ ಆಗಿತ್ತು. ಅಂಬರೀಶ್ ಕೂಡ ಸಿನಿಮಾ ಪ್ರಚಾರ ಮಾಡಿದ್ದರು. ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ‘ಜಾಕಿ’ ಸಿನಿಮಾ ರೀ-ರಿಲೀಸ್ ಆಗಿ ಕೋಟಿ ಕೋಟಿ ಗಳಿಕೆ ಕಂಡಿತ್ತು.

ಸದ್ಯ ಪುನೀತ್ ಹೀರೊ ಆಗಿ ನಟಿಸಿದ್ದ ಚೊಚ್ಚಲ ಸಿನಿಮಾ ‘ಅಪ್ಪು’ ಚಿತ್ರಮಂದಿರಗಳಲ್ಲಿದೆ. ಚಿತ್ರದ ಹಾಡುಗಳು, ಡೈಲಾಗ್‌ಗಳು ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದೆ. ಕಳೆದ ವರ್ಷ ‘ಜಾಕಿ’ ಸಿನಿಮಾ ಮರು ಬಿಡುಗಡೆಯಾಗಿ ಗೆಲ್ಲುತ್ತಿದ್ದಂತೆ ಮುಂದೆ ಪುನೀತ್ ಹುಟ್ಟುಹಬ್ಬಕ್ಕೆ ಒಂದೊಂದು ಸಿನಿಮಾ ರೀ-ರಿಲೀಸ್ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ‘ಅಪ್ಪು’ ರೀ-ರಿಲೀಸ್ ಬಗ್ಗೆ ಆ ಸಮಯದಲ್ಲೇ ಮಾಹಿತಿ ಸಿಕ್ಕಿತ್ತು.

‘ಜಾಕಿ’ ಹಾಗೂ ‘ಅಪ್ಪು’ ಬಳಿಯ ಪುನೀತ್ ನಟನೆಯ ಯಾವ ಸಿನಿಮಾ ಮತ್ತೆ ತೆರಗಪ್ಪಳಿಸುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮಿಷ್ಟದ ಸಿನಿಮಾ ಹೆಸರುಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ‘ಅರಸು’, ವೀರ ‘ಕನ್ನಡಿಗ’, ‘ಮಿಲನಾ’ ಹೀಗೆ ಹಲವು ಸಿನಿಮಾಗಳ ಹೆಸರುಗಳನ್ನು ಮುಂದಿಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಮತ್ತೊಂದು ಚಿತ್ರವನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಈಗಾಗಲೇ ತೆರೆಮರೆಯಲ್ಲಿ ಆರಂಭವಾಗಿದೆ. ಅಂದಹಾಗೆ ಆ ಸಿನಿಮಾ ನೋಡೊಕೆ ಇನ್ನು ಒಂದು ವರ್ಷ ಅಂದರೆ ಮುಂದಿನ ವರ್ಷ ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದವರೆಗೂ ಕಾಯಬೇಕಿಲ್ಲ. ಅದಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹಬ್ಬ ಆಚರಿಸಬಹುದು. ಅಂತಾದೊಂದು ಸುದ್ದಿ ಕೇಳಿಬಂದಿದೆ. ಅಂದಹಾಗೆ ಈ ಬಾರಿ ಪುನೀತ್ ರಾಜ್‌ಕುಮಾರ್ ನಟನೆಯ ಮಾಸ್ ಸಿನಿಮಾ ಅಲ್ಲ ಕ್ಲಾಸ್ ಚಿತ್ರವನ್ನು ತೆರೆಗೆ ತರುವ ಮಾತುಕತೆ ನಡೀತಿದೆ. ‘ಜಾಕಿ’ ಹಾಗೂ ‘ಅಪ್ಪು’ ಎರಡೂ ಮಾಸ್ ಸಿನಿಮಾಗಳೇ. ಅಪ್ಪು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿದ್ದರೂ ಅಭಿಮಾನಿಗಳು ಬಯಸುವ ಬಿಂದಾಸ್ ಸಾಂಗ್ಸ್, ಮಾಸ್ ಡೈಲಾಗ್ಸ್ ಚಿತ್ರದಲ್ಲಿತ್ತು. ಆದರೆ ಮುಂದೆ ಪುನೀತ್ ನಟನೆಯ ‘ಪರಮಾತ್ಮ’ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ.

ಸಾಕಷ್ಟು ಜನ ಅಭಿಮಾನಿಗಳು ಮತ್ತೆ ಬೆಳ್ಳಿಪರದೆ ಮೇಲೆ ‘ಪರಮಾತ್ಮ’ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ‘ಪರಮಾತ್ಮ’ 14 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ದೀಪಾ ಸನ್ನಿಧಿ ಮಿಂಚಿದ್ದರು. ವಿ. ಹರಿಕೃಷ್ಣ ಸಂಗೀತದ ಆಲ್ಬಮ್ ಸೂಪರ್ ಹಿಟ್ ಆಗಿತ್ತು.

ಅನಂತ್ ನಾಗ್, ಐಂದ್ರಿತಾ ರೇ, ರಂಗಾಯಣ ರಘು ಸೇರಿ ದೊಡ್ಡ ತಾರಾಗಣ ‘ಪರಮಾತ್ಮ’ ಚಿತ್ರದಲ್ಲಿತ್ತು. ಮೆಲ್ನೋಟಕ್ಕೆ ಇದು ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಎನಿಸಿದರೂ ಕೊನೆ ಕೊನೆಗೆ ಭಾವನಾತ್ಮಕವಾಗಿ ನೋಡುಗರನ್ನು ಕಾಡಿತ್ತು. ಅಪ್ಪು ನಟನೆಗೆ ಸಿನಿರಸಿಕರು ಫಿದಾ ಆಗಿದ್ದರು. 2011ರಲ್ಲಿ ಸಿನಿಮಾ ಬಿಡುಗಡೆ ಆಗಿದ್ದಾಗ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಂಡಿರಲಿಲ್ಲ. ಆದರೆ ಆ ಬಳಿಕ ಟಿವಿಯಲ್ಲಿ ಸಿನಿಮಾ ನೋಡಿ ಸಾಕಷ್ಟು ಜನ ಮೆಚ್ಚಿದ್ದರು. ಛೇ ಇಂತಹ ಚಿತ್ರವನ್ನು ತೆರೆಮೇಲೆ ಮಿಸ್ ಮಾಡಿಕೊಂಡೆವು ಎಂದು ಬೇಸರಗೊಂಡಿದ್ದರು. ಅಂತಹವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಯಣ್ಣ-ಭೋಗೇಂದ್ರ ‘ಪರಮಾತ್ಮ’ ಸಿನಿಮಾ ನಿರ್ಮಾಣ ಮಾಡಿದ್ದರು. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿತ್ತು. ಚಿತ್ರದ ಹಾಡುಗಳಿಗೆ ನಿರ್ದೇಶಕ ಯೋಗರಾಜ್ ಭಟ್ಟರ ಜೊತೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ಚಿತ್ರದ ನಾಯಕ ಪರಮಾತ್ಮ(ಪುನೀತ್ ರಾಜ್‌ಕುಮಾರ್). ಈ ಪ್ರಪಂಚದಲ್ಲೇ ಇದ್ದೂ ಇದರಾಚೆಗೆ ಧ್ಯಾನಿಸುವ ಹುಡುಗ. ಒಂದು ತ್ರಿಕೋನ ಪ್ರೇಮಕಥೆ. ಪರಮಾತ್ಮನನ್ನು ಪ್ರೀತಿಸುವ ತರಲೆ ಹುಡುಗಿ ಸಾನ್ವಿ(ಐಂದ್ರಿತಾ ರೇ). ಆದರೆ ಸದಾ ಸಿಡುಕುವ, ಪ್ರೀತಿ ಅಂದರೆ ಮೈಲಿ ದೂರ ಓಡುವ ದೀಪಾ(ದೀಪಾ ಸನ್ನಿಧಿ) ಹಿಂದೆ ಬೀಳುವ ಪರಮಾತ್ಮ. ಆಕೆಯ ಹಿಂದೆ ಶಿರಾಡಿ ಘಾಟಿ ಹಾದು, ಕುಂದಾಪುರದ ಹಳ್ಳಿಗೆ ಅವನ ಪಯಣ ಸಾಗುತ್ತದೆ.

ಜೀವನ ಪರ್ಯಂತ ಜೊತೆಗಿರಬೇಕು ಎಂದು ಒಂದಾದ ಜೋಡಿಯ ಆಸೆ ಬಹಳ ದಿನ ಉಳಿಯುವುದಿಲ್ಲ. ಹೀಗೆ ‘ಪರಮಾತ್ಮ’ ಸಿನಿಮಾ ಹೊಸ ರೀತಿಯ ಅನುಭವ ನೀಡುವ ಸಿನಿಮಾ. ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎನ್ನುವ ಸಾಲು ಬಹಳ ಕಾಡುವಂಥದ್ದು. ಪುನೀತ್ ರಾಜ್‌ಕುಮಾರ್ ವಿಚಾರದಲ್ಲಿ ಕೂಡ ಅಭಿಮಾನಿಗಳು ಇದ್ದನ್ನೇ ಅಂದುಕೊಳ್ಳುತ್ತಿರುತ್ತಾರೆ. ಶೀಘ್ರದಲ್ಲೇ ‘ಪರಮಾತ್ಮ’ ಸಿನಿಮಾವನ್ನು ರೀ-ರಿಲೀಸ್ ಮಾಡಲು ಚಿಂತನೆ ನಡೀತಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ಕೂಡ ‘ಪರಮಾತ್ಮ’ ರೀ-ರಿಲೀಸ್ ಮಾಡುವಂತೆ ಒತ್ತಡ ಹೆಚ್ಚಾಗಿದೆ. ದೊಡ್ಡಮಟ್ಟದಲ್ಲಿ ಫ್ಯಾಮಿಲಿ ಆಡಿಯನ್ಸ್ ಕೂಡ ಈ ಸಿನಿಮಾ ನೋಡೋಕೆ ಬರ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಈ ಬಾರಿ ಅಪ್ಪು ಪುಣ್ಯಸ್ಮರಣೆ ವೇಳೆಗೆ ‘ಪರಮಾತ್ಮ’ ಸಿನಿಮಾ ಮರು-ಬಿಡುಗಡೆ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಅದಕ್ಕಿಂತ ಮೊದ್ಲೇ ಬಂದರೂ ಅಚ್ಚರಿ ಪಡಬೇಕಿಲ್ಲ. ‘ಪೃಥ್ವಿ’, ‘ಆಕಾಶ್’ ಹಾಗೂ ‘ನಮ್ಮ ಬಸವ’ ಸಿನಿಮಾಗಳನ್ನು ಕೂಡ ರೀ-ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿ ಮೊದಲ  ದಿನಕ್ಕೆ ಹಲವು ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿದೆ. ದೊಡ್ಡ ಸಿನಿಮಾಗಳಿಲ್ಲೇ ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳು ಭರ್ತಿಯಾಗಿದೆ. ಮುಂದೆ ‘ಪರಮಾತ್ಮ’ ಚಿತ್ರಕ್ಕೂ ಇದೇ ರೀತಿ ಅದ್ಭುತ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ.

Share this post:

Translate »