ಸುಧಾಮೂರ್ತಿ… ಹೀಗೆಂದ ತಕ್ಷಣ ಕಣ್ಣ ಮುಂದೆ ಸುಳಿಯುವುದು ಸರಳತೆ ಮತ್ತು ಸಮಾಜಸೇವೆ. ಬರಹಗಾರ್ತಿಯಾಗಿ, ಸಾಕಷ್ಟು ಸಮಾಜಮುಖಿ ಕಾರ್ಯದ ಮೂಲಕಜನಮನ ಗೆದ್ದಿದ್ದಾರೆ. ತಮ್ಮ ಮಾದರಿ ಜೀವನದ ಮೂಲಕವೇ ಗಮನ ಸೆಳೆದಿರುವ ಸುಧಾಮೂರ್ತಿ ಅವರನ್ನು ಕಂಡರೆ ಎಲ್ಲರಿಗೂ ಬಲು ಪ್ರೀತಿ, ಗೌರವ, ವಿಶ್ವಾಸ. ಇವರ ಜೀವನ ಎಲ್ಲರಿಗೂ ಸ್ಫೂರ್ತಿ ಕೂಡಾ ಹೌದು.ಇನ್ಫೋಸಿಸ್ ಎಂಬ ಐಟಿ ದಿಗ್ಗಜ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ, ಪದ್ಮಶ್ರೀ ಪುರಸ್ಕೃತೆ ಸುಧಾಮೂರ್ತಿಗೆ ಇಂದು ಜನ್ಮದಿನದ ಸಂಭ್ರಮ.
ಸುಧಾಮೂರ್ತಿಯವರು 1950ರಲ್ಲಿ ಆಗಿನ ಧಾರವಾಡ ಜಿಲ್ಲೆಯ ‘ಶಿಗ್ಗಾಂವ್’ (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ಆಗಸ್ಟ್ 18ರಂದು ಜನಿಸಿದರು. ಸುಧಾ ಕುಲಕರ್ಣಿಯವರ ತಂದೆ, ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು.
ಸುಧಾಮೂರ್ತಿ ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್’ ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ ಹುಟ್ಟೂರಾದ ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿ ನಡೆಯಿತು. 1966ರಲ್ಲಿ ಹುಬಬ್ಲ್ಳಿಯಲ್ಲಿ ನ್ಯೂ ಎಜ್ಯುಕೇಶನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು.
ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಅವರು ನಾರಾಯಣ ಮೂರ್ತಿ ಅವರ ಬೆನ್ನೆಲುಬು. ಇನ್ಫೋಸಿಸ್ ಸಂಸ್ಥೆ ಪ್ರಪಂಚದ ಟಾಪ್ ಸಂಸ್ಥೆಯಾಗಿ ಬೆಳೆಯಲು ಮುಖ್ಯ ಕಾರಣ ಸುಧಾಮೂರ್ತಿ ಅವರು. ನಾರಾಯಣ ಮೂರ್ತಿ ಅವರ ಮೇಲೆ ನಂಬಿಕೆ ಇಟ್ಟು, ಎಲ್ಲಾ ಕೆಲಸಗಳಿಗೂ ಸಪೋರ್ಟ್ ಮಾಡಿ ಇಂದು ಆಕಾಶದ ಎತ್ತರಕ್ಕೆ ಇನ್ಫೋಸಿಸ್ ಸಂಸ್ಥೆಯನ್ನು ಬೆಳೆಸಿದ್ದಾರೆ. ಸುಧಾಮೂರ್ತಿ ಅವರು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಕೂಡ ಬಹಳ ಸರಳ ಸ್ವಭಾವ ಹೊಂದಿರುವವರು..
ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡಿರುವ ಸುಧಾ ಮೂರ್ತಿಯವರಿಗೆ ಸಮಾಜ ಸೇವೆಯ ಕಡೆಗೆ ಭಾರಿ ಒಲವು. ಕಾಲೇಜಿನಲ್ಲಿ ಓದುವಾಗ ಶೌಚಾಲಯಕ್ಕಾಗಿ ಅವರು ಅನುಭವಿಸಿದ ಕಷ್ಟ ಬೇರೆ ಹೆಣ್ಣು ಮಕ್ಕಳಿಗೆ ಬರಬಾರದೆಂದು ಗುಲಬರ್ಗಾದಲ್ಲಿ 15,000 ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ.
ಭಾರತಕ್ಕೆ ಅಂಟಿಕೊಂಡಿದ್ದ ಅನಿಷ್ಟ ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ರಾಯಚೂರಿನಲ್ಲಿ ಹೆಚ್ಚಾಗಿ ಇದ್ದ ಈ ಪಿಡುಗನ್ನು ನಿರ್ಮೂಲನೆ ಮಾಡಿ 20,000 ಹೆಚ್ಚು ಹೆಣ್ಣುಮಕ್ಕಳನ್ನೂ ಅದರಿಂದ ಹೊರ ತಂದು ಅವರಿಗೆ ಕೌದಿ ಹೊಲೆಯುವುದನ್ನು ಹೇಳಿಕೊಟ್ಟು ಸ್ವಾವಲಂಬಿಯಾಗಿ ಬದುಕಲು ಹೇಳಿಕೊಟ್ಟಿದ್ದಾರೆ. ಇದರ ಕುರಿತು ಅವರು 3000 ‘Stitiches’ ಎಂಬ ಅದ್ಭುತ ಪುಸ್ತಕವನ್ನೂ ಬರೆದಿದ್ದಾರೆ.
ಸುಧಾ ಮೂರ್ತಿ…ಇವರು ಕೈಯಾಡಿಸದ ಕ್ಷೇತ್ರವಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸುಧಾರಣೆಗಾಗಿ ಇವರು ಸದಾ ಮಿಡಿಯುತ್ತಿದ್ದಾರೆ. ಸರಕಾರಿ, ಹಾಗು ಸರಕಾರಿ ಅನುದಾನಿತ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ಗ್ರಂಥಾಲಯ ಸೌಲಭ್ಯ ಒದಗಿಸುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಸಮಾಜಕಾರ್ಯದ ನಡುವೆಯೂ ಅವರು ಕಂಪ್ಯೂಟರ್ ವಿಜ್ಞಾನವನ್ನೂ ಕಲಿಸಿದ್ದಾರೆ. ಇವರು ಅನೇಕ ಜನಪ್ರಿಯ ಕಥೆ, ಕಾದಂಬರಿಗಳನ್ನು ಬರೆದಿರುವ ಜನಪ್ರಿಯ ಬರಹಗಾರ್ತಿಯೂ ಹೌದು. ಇವರು ʼಗೇಟ್ಸ್ ಫೌಂಡೇಶನ್ʼ ನ ಆರೋಗ್ಯ ಸುಧಾರಣಾ ಕ್ರಮಗಳ ಭಾಗವಾಗಿಯೂ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.
ಸಿಂಪಲ್ ಆದ ಸೀರೆಗಳನ್ನು ಧರಿಸಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಾರೆ. ಸಮಾನ್ಯ ಮಹಿಳೆಯ ಹಾಗೆ ಸಂತೆಯಲ್ಲಿ ತರಕಾರಿ ಖರೀದಿ ಮಾಡುತ್ತಾರೆ. ದೇವಸ್ಥಾನದಲ್ಲಿ ಮಹಿಳೆಯರ ಜೊತೆ ಹೂ ಕಟ್ಟುತ್ತಾರೆ. ಇವರು ಮಾಡಿರುವ ಸಹಾಯಗಳ ಬಗ್ಗೆ ಹೇಳುತ್ತಾ ಹೋದರೆ ಸಮಯ ಸಾಲುವುದಿಲ್ಲ. ರಾಜ್ಯದಲ್ಲಿ ಯಾವುದೇ ರೀತಿಯ ಕಷ್ಟ ಬಂದರು ಸಹಾಯ ಮಾಡಲು ಮೊದಲು ಬರುವುದು ಇನ್ಫೋಸಿಸ್ ಸಂಸ್ಥೆ. ಸುಧಾಮೂರ್ತಿ ಅವರು ಬರಹಗಾರ್ತಿ ಸಹ ಹೌದು. ಈಗಾಗಲೇ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಶ್ರೀಮತಿ ಸುಧಾ ಮೂರ್ತಿಯವರು ಲೇಖಕಿಯಾಗಿ ಅನೇಕ ಕಥೆಗಳನ್ನು, ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಬರವಣಿಗೆಗಳು ಜನಸಾಮಾನ್ಯನ ಜೀವನದ ಕಂಪನ್ನು ಸೂಸುತ್ತವೆ. ಅವರು ಆತಿಥ್ಯ, ತಮ್ಮ ಬಾಲ್ಯ, ದೇಣಿಗೆ ಮತ್ತು ದಾನದ ಬಗೆಗಿನ ಅಭಿಪ್ರಾಯಗಳನ್ನು ಅರಿತುಕೊಳ್ಳುವುದು ಮೊದಲಾದವುಗಳ ಬಗ್ಗೆ ಬರೆಯುತ್ತಾರೆ. ಅವರ ಅನೇಕ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ ಮತ್ತು ಕೆಲವು ಟಿವಿ ಸರಣಿಗಳಾಗಿ ರೂಪಾಂತರಗೊಂಡಿವೆ. ಅವರ ಅನೇಕ ಕೃತಿಗಳು ಮಕ್ಕಳ ಸರಣಿಗಳಾಗಿವೆ. ಸುಧಾ ಮೂರ್ತಿಯವರು ಕನ್ನಡ ಮತ್ತು ಇಂಗ್ಲಿಷ್‌ನ ಅನನ್ಯ ಕಾದಂಬರಿ ಬರಹಗಾರ್ತಿ. ಪೆಂಗ್ವಿನ್ ಪ್ರಕಾಶನ ಅವರ ಹೆಚ್ಚಿನ ಬರಹಗಳನ್ನು ಪ್ರಕಟಿಸಿವೆ. ಈವರೆಗೆ ಅವರು 21 ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ಕನ್ನಡದ ಕೆಲವು ಜನಪ್ರಿಯ ಕೃತಿಗಳೆಂದರೆ: ಡಾಲರ್ ಸೊಸೆ , ಕಾವೇರಿಯಿಂದ ಮೆಕಾಂಗಿಗೆ , ಋಣ, ಹಕ್ಕಿಯ ತೆರದಲಿ ಗುಟ್ಟೊಂದ ಹೇಳುವೆ.
ಅವರ ಜನಪ್ರಿಯ ಕೃತಿಗಳಲ್ಲಿ ಒಂದು “ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು”. ಈ ಪುಸ್ತಕ 15 ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದು ಅವರು ತಮ್ಮ ಬಾಲ್ಯದಲ್ಲಿ ತಮ್ಮ ಅಜ್ಜ- ಅಜ್ಜಿಯೊಂದಿಗೆ ಹೊಂದಿದ್ದ ನಂಟನ್ನು ಪ್ರತಿಫಲಿಸುತ್ತದೆ. ಅವರ ಮೊದಲ ಕಾದಂಬರಿ ʼಹೌಸ್ ಆಫ್ ಕಾರ್ಡ್ಸ್ʼ ಶ್ರೀಮಂತ ವೈದ್ಯರ ಪತ್ನಿಯೊಬ್ಬರು ಎದುರಿಸಿದ ಪ್ರಕ್ಷುಬ್ದ ಪರಿಸ್ಥಿತಿಯನ್ನು ವಿವರಿಸುತ್ತದೆ.
ಸುಧಾ ಮೂರ್ತಿ ತಮ್ಮ ಶಿಕ್ಷಣದ ಆರಂಭದಿಂದಲೂ, ಅವರು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೆನ್ನೈನಲ್ಲಿ 2004 ರಲ್ಲಿ ಶ್ರೀ ರಾಜಲಕ್ಷ್ಮಿ ಫೌಂಡೇಶನ್ ನಿಂದ ರಾಜಲಕ್ಷ್ಮಿ ಪ್ರಶಸ್ತಿಯ ಮನ್ನಣೆ ಪಡೆದರು. ಸಮಾಜ ಸೇವೆಯಲ್ಲಿ ತಮ್ಮ ಅಸಾಮಾನ್ಯ ಸಾಧನೆಗಾಗಿ ಅವರು ಆ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಭಾರತದ ಸರ್ಕಾರದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕರ್ನಾಟಕ ಸರಕಾರದ ಅತ್ಯುನ್ನತ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ತನ್ನ ನೂರನೇ ಘಟಿಕೋತ್ಸವದಲ್ಲಿ, ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಸರಳ ಜೀವನ (Life)ವು ಬದುಕಲು ಸುಲಭವಾದ ಮಾರ್ಗವಾಗಿದೆ. ಅದರಲ್ಲೂ ಸುಧಾಮೂರ್ತಿ ಸರಳವಾಗಿ ಬದುಕಿ ಬಾಳುತ್ತಿರುವವರು. ಅವರು ಅದೇ ಪಾಠವನ್ನು ಮಕ್ಕಳಿಗೆ ಕಲಿಸುವಂತೆ ಸೂಚಿಸುತ್ತಾರೆ. ಮನುಷ್ಯನದು ಮೂರು ದಿನದ ಜೀವನ. ಹೀಗಾಗಿ ಯಾರಿಗೂ ತೋರಿಸಿಕೊಳ್ಳಲು, ಅಂತಸ್ತಿನ ತೋರ್ಪಡಿಕೆಗಾಗಿ ಬದುಕಬೇಕಿಲ್ಲ. ನಮ್ಮ ಖುಷಿಗಾಗಿ ನಾವು ಜೀವನ ನಡೆಸಿದರೆ ಸಾಕು. ಅದು ಆಹಾರವಾಗಲೀ ಅಥವಾ ಉಡುಗೆಯಾಗಲೀ ಅಥವಾ ಮನೆಯ ಅಲಂಕಾರವಾಗಲಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರು ಯಾವಾಗಲೂ ತಮ್ಮ ಜೀವನದಲ್ಲಿ ಸರಳ ಕ್ರಮವನ್ನು ಅನುಸರಿಸುತ್ತಾರೆ.ಸದಾ ಸಮಾಜ ಸೇವೆಯ ಬಗ್ಗೆ ಯೋಚಿಸುವ ಇವರು ಪ್ರತಿ ವರ್ಷ ಇನ್ಫೋಸಿಸ್ ಫೌಂಡೇಶನ್ ಮೂಲಕ 400 ಕೋಟಿ ರೂಪಾಯಿಗಳನ್ನು ಸಮಾಜ ಸೇವೆಗೆಂದೇ ಮೀಸಲಿಟ್ಟಿದ್ದಾರೆ.