ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ
ನಿರ್ದೇಶನ: ಚಂದ್ರಜಿತ್ ಬೆಳ್ಳಿಯಪ್ಪ
ನಿರ್ಮಾಣ: ರಕ್ಷಿತ್ ಶೆಟ್ಟಿ (ಪರಂವಃ ಸ್ಟುಡಿಯೋಸ್), ಜಿಎಸ್ ಗುಪ್ತಾ
ತಾರಾಗಣ: ವಿಹಾನ್ ಗೌಡ, ಅಂಕಿತಾ ಅಮರ್, ಗಿರಿಜಾ ಶೆಟ್ಟರ್, ಮಯೂರಿ ನಟರಾಜ, ಶಂಕರ್ ಮೂರ್ತಿ, ಸಲ್ಮಾನ್ ಶೆರಿಫ್
ಸಂಗೀತ: ಗಗನ್ ಬಡೇರಿಯಾ
ಕ್ಯಾಮೆರಾ: ಶ್ರೀವಸ್ತನ್ ಸೆಲ್ವರಾಜನ್
ಸಂಕಲನ: ರಕ್ಷಿತ್ ಕಾಪು
ರೇಟಿಂಗ್: 3.5/5
ಕ್ರಿಕೆಟ್‌ನಲ್ಲಿ ಕಿರಿಕ್ ಮಾಡಿಕೊಂಡೇ ತನ್ನ ಗುರಿಮುಟ್ಟುವ ಹಂಬಲದಲ್ಲಿರುವ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಿದ್ದಾರ್ಥ್ ಅಶೋಕ್ (ವಿಹಾನ್). ಈತ ತನ್ನ ಕಂಗ್ಲೀಶ್ ಮಾತನಾಡುವ ಜ್ಯೂನಿಯರ್ ಹುಡುಗಿಯನ್ನು ನೋಡಿ ಲವ್ ವಿಚಾರದಲ್ಲಿ ಸೀನಿಯರ್ ಆಗುವ ಉದ್ದೇಶದಲ್ಲಿರುತ್ತಾನೆ. ಆದರೆ ಲವ್ ವಿಚಾರದಲ್ಲಿ ಸಿನಿಯರ್ ಆಗುವುದು ಬಿಡಿ, ಆಕೆಯನ್ನು ಪರಿಚಯ ಮಾಡಿಕೊಳ್ಳುವುದೂ ಸುಲಭದ ಕೆಲಸವಾಗಿರುವುದಿಲ್ಲ. ಇದೇ ಕೆಲಸವನ್ನು ಸುಲಭ ಮಾಡಿಕೊಳ್ಳುವ ಹಂತದಲ್ಲಿರುವಾಗಲೇ ಸಿದ್ದಾರ್ಥ್ ಒಳಗಿನ ಫೈಟ್ ಮಾಸ್ಟರ್ ರೂಪ ಕಂಡ ಕಂಗ್ಲೀಶ್ ಹುಡುಗಿ ಇನ್ನಷ್ಟು ದೂರ ಹೋಗುತ್ತಾಳೆ. ಆದರೆ, ಬರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಭೇಟಿಯಾಗುವ ಸಂದರ್ಭ ಒದಗಿ ಬರುತ್ತದೆ. ಈಗ ಕಂಗ್ಲೀಶ್ ಹುಡುಗಿಯ ಕನ್ನಡ, ಸಿನಿಮಾದಂತಯೇ ಒಂದು ವೇಗ ಪಡೆದಿರುತ್ತದೆ. ಹಳೇ ಆಕರ್ಷಣೆ ಪ್ರೌಢ ಪ್ರೇಮವಾಗುವುದನ್ನು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಸರಳ ವಿರಳ ಪ್ರೇಮಕಥೆಯನ್ನು ಚಿತ್ರತಂಡ ಅದ್ದೂರಿಯಾಗಿ ತೆರೆಯ ಮೇಲೆ ತಂದಿದೆ. ಎರಡು ಮುಗ್ಧ ಮನಸುಗಳ ಪ್ರೀತಿ, ಪ್ರೀತಿಯಲ್ಲಿನ ಸ್ಟಾರ್ಟಿಂಗ್ ಟ್ರಬಲ್, ಸ್ಟಾರ್ಟ್ ಆದ ಒಲವಿನ ಬ್ರೇಕಪ್, ಬ್ರೇಕಪ್ ತಂದುಕೊಡುವ ನೂರು ತರಹದ ವಿರಹ.. ಹೀಗೆ ಎಲ್ಲವನ್ನೂ ನಿರ್ದೇಶಕರು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾರೆ.
ಚಿತ್ರದ ಮೊದಲ ಹಾಡಿನಲ್ಲಿ ಬೆಳದಿಂಗಳ ಚಂದ್ರನನ್ನು ತೋರಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಚಂದ್ರಜಿತ್, ತಾನೂ ಒಬ್ಬ ಕವಿಯಾಗಿರೋದು ಚಿತ್ರವನ್ನು ದೃಶ್ಯ ಕಾವ್ಯವನ್ನಾಗಿಸಿದೆ. ಗಗನ್ ಬಡೇರಿಯಾ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಂದ್ರಜಿತ್ ಕಾವ್ಯಕ್ಕೆ divotional ಟಚ್ ನೀಡಿದೆ. ಸಿನಿಮಾದ ಸಂಗೀತ, ದೃಶ್ಯಗಳು, ಚಿತ್ರದಲ್ಲಿ ಬಳಸಿದ ವಸ್ತುಗಳು ಸಿದ್, ಅನಾಹಿತಾ ಮತ್ತು ರಾಧಾ ಅವರಂತಯೇ ಪಾತ್ರವೇ ಆಗಿ ಬಿಟ್ಟಿದೆ. ಸಂಗೀತ ಎಲ್ಲೂ ದೃಶ್ಯದಿಂದ ಬೇರೆ ಅನ್ನಿಸಿವುದಿಲ್ಲ, ಸಂಗೀತ ಕೇಳಿಯೂ ಕೇಳದಂತಿದೆ. ಒಟ್ಟಿನಲ್ಲಿ ಚಂದ್ರ ಮತ್ತು ಗಗನ ಒಂದಾಗಿ ಕನ್ನಡ ಪ್ರೇಕ್ಷಕರಿಗೊಂದು ಅದ್ಭುತ, ನವಿರಾದ ಅನುಭವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. `ಇಬ್ಬನಿ ತಬ್ಬಿದ ಇಳೆಯಲಿ‘ ಚಿತ್ರದಲ್ಲಿ ಚಂದ್ರಜಿತ್ ಮಿಕ್ಸ್ ಮಾಡಿರುವ `love mocktail‘ ಅಷ್ಟು ಸುಲಭದ್ದಲ್ಲ. ಏಕೆಂದರೆ, ಇದೊಂದು ಸಾಮಾನ್ಯ ಲವ್ ಸ್ಟೋರಿಯ ಅಸಮಾನ್ಯ ಪ್ರಸ್ತುತಿ! ಇಲ್ಲಿ ಪ್ರೀತಿಯಲ್ಲಿ ಬೀಳುವುದಿಲ್ಲ, ಪ್ರೀತಿಯಲ್ಲಿ ಏಳುತ್ತಾರೆ.. ಇಲ್ಲಿ ಪ್ರೀತಿಯ ನಡುವೆ ಅಪ್ಪಿ ತಪ್ಪಿಯೂ ಮೋಹ ಸುಳಿಯುವುದಿಲ್ಲ.. ಇಲ್ಲಿ ಪ್ರೀತಿ ಅಮೃತವೂ ಹೌದು, ವಿಷವೂ ಹೌದು.. ಹೀಗಿದ್ದಾಗ ಇಂತಹ ಕಂಟೆoಟ್‌ನ್ನು ತೆರೆಯ ಮೇಲೆ ತರುವ ಸವಾಲಿನ ಬಗ್ಗೆ ಒಮ್ಮೆ ಯೋಚಿಸಿ. ಒಂದು ಮಚ್ಚು-ಕೊಚ್ಚು ಸಿನಿಮಾದ ಮೂಲಕ ಪ್ರೇಕ್ಷಕನನ್ನು ಸುಲಭವಾಗಿ ಮೆಚ್ಚಿಸಬಹುದು.. ಆದರೆ `ಇಬ್ಬನಿ‘ಯ ಕಥೆ ಹೇಳುತ್ತಾ ಪ್ರೀತಿಯ ಮಳೆಯಲ್ಲಿ ಪ್ರೇಕ್ಷಕನನ್ನು ತೋಯಿಸುವುದು ನಿಜಕ್ಕೂ ಒಂದು ದೊಡ್ಡ ಸವಾಲು.
ಚಂದ್ರಜಿತ್ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದು ಪ್ರತೀ ಫ್ರೇಮ್‌ನಲ್ಲೂ ಕಾಣುತ್ತದೆ. ಚಿತ್ರದ ಬರವಣಿಗೆಯೇ ಚಿತ್ರದ ಅಸಲಿ ಹೀರೋ ಆದರೆ, ವಿಹಾನ್, ಅಂಕಿತಾ ಮತ್ತು ಮಯೂರಿ ಎಂಬ ಮೂವರು ಕಲಾವಿದರ ಅಭಿನಯ ಹಿರೋಗಿರಿಯನ್ನು ದಾಟಿ ಇನ್ನೂ ಸಾಕಷ್ಟು ಮುಂದಿದೆ. ಅವರ ಮೂವರ ಭಾವಾಭಿವ್ಯಕ್ತಿ, ನಟನೆ ಎಂದು ಒಂದು ಕ್ಷಣವೂ ಅನ್ನಿಸುವುದಿಲ್ಲ. ಸಾಕಷ್ಟು ಕಡೆ ಮಾತಿಲ್ಲ ಕಥೆಯಿಲ್ಲ ಬರೀ ಕಣ್ಣಿನಿಂದಲೇ `ರೋಮಾಂಚನ‘ ನೀಡಿದ್ದಾರೆ. ವಿಹಾನ್, ಅಂಕಿತಾ ಮತ್ತು ಮಯೂರಿ ಮೂವರೂ ಪೈಪೋಟಿಗೆ ಬಿದ್ದು ನಟಿಸಿಲ್ಲ, ಬದಲಾಗಿ ಪಾತ್ರವೇ ತಾವಾಗಿದ್ದಾರೆ. ಈ ಮೂವರು ಖಂಡಿತಾ ಪ್ರೇಕ್ಷಕರ ಮನಸ್ಸಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತಾರೆ. ಇನ್ನು, ಅಮ್ಮನಾಗಿ ಗಿರಿಜಾ ಶೆಟ್ಟರ್ ಹಲವು ವರ್ಷಗಳ ನಂತರ ತೆರೆಯ ಮೆಲೆ ನಿಜಕ್ಕೂ ಮ್ಯಾಜಿಕ್ ಮಾಡಿದ್ದಾರೆ. ಅಮ್ಮನ ನೆನೆಪುಗಳನ್ನು ಕೆದಕುತ್ತಾರೆ.
ನಮ್ಮ ನಡುವೆಯೇ ನಡೆದ ಕಥೆಯನ್ನು ಹೊಸ ರೂಪದಲ್ಲಿ, ಆಕರ್ಷಕವಾಗಿ ಸೆಳೆಯುವಂತೆ ತೆರೆಯ ಮೇಲೆ ತಂದಿರುವ ಇಡೀ ಚಿತ್ರ ತಂಡ ನಿಜಕ್ಕೂ ಅಪರೂಪದ ಕೆಲಸ ಮಾಡಿದೆ. ಇಂಟ್ರವಲ್‌ನಲ್ಲಿ ಬರುವ ಊಹಿಸದ ಟ್ವಿಸ್ಟ್, ಪ್ರೇಕ್ಷಕನಿಗೆ ಶಾಕ್ ನೀಡಿದರೆ, ನಂತರದಲ್ಲಿ ಅದೇ ಶಾಕ್ ಹದವಾದ-ಮುದವಾದ ಒಲವಿನ ಬಿಸುಪು ನೀಡುತ್ತಾ ಹೋಗುತ್ತದೆ. ಇನ್ನೊಬ್ಬರ ಫ್ಲಾಶ್‌ಬ್ಯಾಕ್‌ನಲ್ಲಿ ತನ್ನನ್ನೇ ಪಾತ್ರವಾಗಿಸುವ ಪಾತ್ರ.. ಚಾಕಲೇಟ್ ಜಾಹಿರಾತಿಗೆ ಮರಳಿ ಸಿಗುವ ಆತ್ಮ.. ಅಸಾಯಕತೆಯಲ್ಲೂ ಬಿಡದ ಸ್ವಾಭಿಮಾನ.. ಕಾಡುವ ಮೌನ.. ಅಳಿಸುವ ಪ್ರೇಮ ಧ್ಯಾನ.. ಹೀಗೆ ಸಿನಿಮಾದಲ್ಲಿ ಸಾಕಷ್ಟು ಹೊಸತುಗಳಿವೆ. ಒಟ್ಟಿನಲ್ಲಿ ಇಬ್ಬನಿ ತಬ್ಬಿದ ಇಳೆಯಲಿ ಎಂಬ ದೃಶ್ಯ ಕಾವ್ಯ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಏಕೆಂದರೆ ಇದು ಬರೀ ಸಿನಿಮಾ ಅಲ್ಲ ಒಂದು ಅನೂಹ್ಯ ಅನುಭವ.
ವಿಮರ್ಶೆ: ಬಿ.ನವೀನ್‌ಕೃಷ್ಣ. ಪುತ್ತೂರು