*ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ “ವೃಕ್ಷದೀಪ” ಅಭಿಯಾನಕ್ಕೆ ಚಾಲನೆ* .
*ಕಿಚ್ಚ ಸುದೀಪ್ ಅವರಿಂದ ಬಿಡುಗಡೆಯಾಯಿತು “ಹುಲಿ ನಾಯಕ” ಚಿತ್ರದ ಫಸ್ಟ್ ಲುಕ್*.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 50ನೇ ಹುಟ್ಟುಹಬ್ಬದ ಸಡಗರ. ಇದೇ ಸಂದರ್ಭದಲ್ಲಿ ಪತ್ರಕರ್ತ, ನಟ ಹಾಗೂ ನಿರ್ದೇಶಕ ಡಿ.ಜೆ ಚಕ್ರವರ್ತಿ(ಚಂದ್ರಚೂಡ್), “ವೃಕ್ಷದೀಪ” ಎಂಬ ಹೆಸರಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ವೃಕ್ಷದೀಪ ಅಭಿಯಾನಕ್ಕೆ ಚಾಲನೆ ನೀಡಿದರು. “ಅಭಿನಯ ತಿಲಕ” ಎಂಬ ಅಭಿಮಾನದ ಹಾಡನ್ನು ಚಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಬಿಡುಗಡೆ ಮಾಡಿದರು. ಶಾಸಕ ರಾಜು ಗೌಡ ನಾಯಕ, ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ನಿರ್ಮಿಸುತ್ತಿರುವ, ಡಿ.ಜೆ.ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿರುವ “ಹುಲಿ ನಾಯಕ” ಚಿತ್ರದ ಮೋಷನ್ ಪೋಸ್ಟರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, ಚಕ್ರವರ್ತಿ ಬಿಗ್ ಬಾಸ್ ನಿಂದ ನನಗೆ ಹತ್ತಿರವಾದರು. ಆತ ಅದ್ಭುತ ರೈಟರ್. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಹುಲಿನಾಯಕ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
“ವೃಕ್ಷದೀಪ” ಅಭಿಯಾನಕ್ಕೆ ಚಾಲನೆ ನೀಡಿದ ಎಲ್ಲಾ ಗಣ್ಯರಿಗೆ, ಹಾಡು ಬಿಡುಗಡೆ ಮಾಡಿಕೊಟ್ಟ ಸ್ವಾಮೀಜಿ ಅವರಿಗೆ ಹಾಗೂ ಹುಟ್ಟುಹಬ್ಬದ ಸಡಗರದಲ್ಲಿದ್ದರೂ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ನನ್ನ ಧನ್ಯವಾದ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷ್ಮಣ ನಾಯಕ ಅವರ ಕುರಿತಾದ ಈ ಚಿತ್ರವನ್ನು ಮಂಜುನಾಥ್ ಅವರು ನಿರ್ಮಿಸುತ್ತಿದ್ದಾರೆ. ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿದ್ದಾರೆ. ನಾನು ನಿರ್ದೇಶನ ಮಾಡುತ್ತಿದ್ದೇನೆ. ಇಂದು ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ ಎಂದು ಡಿ.ಜೆ ಚಕ್ರವರ್ತಿ ತಿಳಿಸಿದರು.
ಚಕ್ರವರ್ತಿ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನನ್ನ ಮಗ ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿದ್ದಾನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್.
ನಮ್ಮ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಸರ್ ಅವರಿಗೆ ನಾನು ಆಭಾರಿ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ಚಕ್ರವರ್ತಿ ಅವರಿಗೆ ಧನ್ಯವಾದ ಎಂದರು ನಾಯಕ ಮಿಲಿಂದ್ ಗೌತಮ್.
ಇದೇ ಸಂದರ್ಭದಲ್ಲಿ ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ವಸಿಷ್ಠ ಸಿಂಹ, ಪೂಜಾಗಾಂಧಿ, ಸಂಜನಾ ಗಲ್ರಾನಿ ಮುಂತಾದ ಕಲಾವಿದರು ಸೇರಿ ಸಿಂಧೂರ ಲಕ್ಷ್ಮಣ್ ನಾಯಕ ಅವರ ಕುಟುಂಬದವರನ್ನು ಹಾಗೂ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರನ್ನು ಸನ್ಮಾನಿಸಿದರು.