ಒಳ್ಳೆ ಸಿನಿಮಾಗಳಿಲ್ಲದೇ ಸೊರಗಿದ್ದ ಸ್ಯಾಂಡಲ್ ವುಡ್ ಇಂಡಸ್ಟ್ರೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಹೊಸ ಚೈತನ್ಯ ತಂದು ಕೊಟ್ಟಿದೆ. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕ್ವಾಟ್ಲೆಗೆ ಪ್ರೇಕ್ಷಕ ಹೊಟ್ಟೆ ಹುಣ್ಣಾಗುವಂತೆ ನಕ್ಕುತ್ತಿದ್ದಾರೆ. ಭರಪೂರ ಮನರಂಜನೆ ಉಣಬಡಿಸಿರುವ ಈ ಸಿನಿಮಾಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬರೀ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಿಗೂ ಹಾಸ್ಟೆಲ್ ಹುಡುಗರ ಹವಾಳಿ ಹಬ್ಬಿದೆ. ಈಗ ವಿದೇಶದಲ್ಲಿಯೂ ಧಮಾಕ ಎಬ್ಬಿಸಲು ಬಾಯ್ಸ್ ರೆಡಿಯಾಗಿದ್ದಾರೆ.
*ವಿದೇಶದಲ್ಲಿ ಹಾಸ್ಟೆಲ್ ಹುಡುಗರ ಹಂಗಾಮ*
ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ ಸಿನಿಮಾ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕೆನಡ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಯುಕೆ ಅಂಡ್ ಯೂರೋಪ್ ದೇಶಗಳಲ್ಲಿ ಇದೇ ವೀಕೆಂಡ್ ನಿಂದ ತುಂಗಾ ಹಾಸ್ಟೆಲ್ ಬಾಯ್ಸ್ ಕ್ವಾಟ್ಲೆ ಶುರುವಾಗಲಿದೆ. ಆರಂಭದಿಂದಲೂ ತಮ್ಮ ಚಿತ್ರವನ್ನು ಅತ್ಯಂತ ಕೆಟ್ಟ ಚಿತ್ರ ಎನ್ನುತ್ತಲೇ ಅತ್ಯುತ್ತಮ ಸಿನಿಮಾ ಎಂದು ಪ್ರೇಕ್ಷಕರಿಂದ ಬೆನ್ನು ತಟ್ಟಿಸಿಕೊಂಡಿರುವ ಚಿತ್ರತಂಡ ವಿಶ್ವಾದ್ಯಂತ ತಮ್ಮ ಸಿನಿಮಾವನ್ನು ಸಂಭ್ರಮಿಸುವ ತವಕದಲ್ಲಿದೆ.
ಹೈದ್ರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ಹಲವರು ರಾಜ್ಯಗಳಲ್ಲಿ ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಕನಸ್ಸಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿದ್ದಾರೆ.
ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸಾಥ್ ಕೊಟ್ಟಿದ್ದಾರೆ. ಇಡೀ ಸ್ಯಾಂಡಲ್ ವುಡ್ ಬೆಂಬಲವಾಗಿ ನಿಂತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹೊಸ ಹುರುಪು ತಂದುಕೊಟ್ಟಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಕಳೆದ ಶುರುವಾರ ರಾಜ್ಯಾದ್ಯಂತ ತೆರೆಕಂಡ ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕಪ್ರಭುವಿಗೆ ಮನರಂಜನೆ ರಸದೌತಣ ನೀಡುವಲ್ಲಿ ಹೊಸಬರ ತಂಡ ಯಶಸ್ವಿಯಾಗಿದೆ.