ಹೋಪ್..ಕನ್ನಡದಲ್ಲಿ ಹೀಗೊಂದು ಸಿನಿಮಾ ಬರ್ತಿರೋದು ಗೊತ್ತೇ ಇದೆ. ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಸಣ್ಣದೊಂದು ಗ್ಯಾಪ್ ಬಳಿಕ ಕಂಬ್ಯಾಕ್ ಆಗ್ತಿರುವ ಈ ಚಿತ್ರ ತೆರೆಗೆ ಬರೋದಿಕ್ಕೆ ಅಣಿಯಾಗಿದೆ. ಜುಲೈ 8ರಂದು ಹೋಪ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಸಜ್ಜಾಗ್ತಿದೆ.
ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ನಿರ್ಮಾಣ ಮಾಡಿರುವ ಹೋಪ್ ಸಿನಿಮಾಗೆ ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಜನರಿಗೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಂಟೆಂಟ್ ಆಧಾರಿತ ಸೋಷಿಯಲ್ ಡ್ರಾಮಾ ಹೋಪ್ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೋಪ್ ಚಿತ್ರ ಇಷ್ಟರಲ್ಲಾಗಲೇ ತೆರೆಗೆ ಬರಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿತ್ತು. ಇದೀಗ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. 34 ದಿನಗಳ ಶೂಟಿಂಗ್ ಮುಗಿಸಿರುವ ಹೋಪ್ ಚಿತ್ರಕ್ಕೆ ಹಾಲೇಶ್ ಛಾಯಾಗ್ರಾಹಣ, ಹರೀಶ್ ಕೊಮ್ಮೆ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತವಿದೆ.