ರಾಜ್ಯದಲ್ಲಿ ಚುನಾವಣೆ ಹಾಗೂ ಐಪಿಎಲ್ ಅಬ್ಬರ ಜೋರಾಗಿದೆ. ಆದಾಗ್ಯೂ ಹೊಂದಿಸಿ ಬರೆಯಿರಿ ಸಿನಿಮಾ ಅಮೇಜಾನ್ ಒಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಸಿನಿರಸಿಕರಿಂದ ಭರಪೂರ ಮೆಚ್ಚುಗೆ ಪಡೆದು 50 ದಿನಗಳ ಸಂಭ್ರಮದಲ್ಲಿ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿತ್ತು. ಥಿಯೇಟರ್ ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ನೋಡದವರು ಅಮೇಜಾನ್ ನಲ್ಲಿ ಚಿತ್ರ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರ ಪರಿಣಾಮ ಈ ಚಿತ್ರ ಒಟಿಟಿಯಲ್ಲಿ ಬರೋಬ್ಬರಿ 50 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಂಡು ರೆಕಾರ್ಡ್ ಕ್ರಿಯೇಟ್ ಮಾಡಿದೆ.
ಟಾಲಿವುಡ್ ಸಿಂಹಾದ್ರಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್…NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು
ಈ ವರ್ಷದಲ್ಲಿ ಅತಿ ಹೆಚ್ಚು ಸ್ಟ್ರೀಮಿಂಗ್ ಕಂಡಿರುವ ಹೆಗ್ಗಳಿಕೆಯೂ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಪಾಲಾಗಿದೆ. ಅಮೇಜಾನ್ ನಲ್ಲಿ ಬಿಗೆಸ್ಟ್ ಹಿಟ್ ಕಂಡಿರುವ ಈ ಚಿತ್ರವೀಗ ಯುಕೆ ಹಾಗೂ ಯುಎಸ್ ಎ ನಲ್ಲಿ ಸ್ಟ್ರೀಮ್ ಆಗ್ತಿದ್ದು, ಅಲ್ಲಿರುವ ಚಿತ್ರಪ್ರೇಮಿಗಳು ಸಿನಿಮಾ ನೋಡುಬಹುದು. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ.
ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟವನ್ನೇ ಇಟ್ಟುಕೊಂಡು ಹೆಣೆದ ಕಥೆ ಹೊಂದಿಸಿ ಬರೆಯಿರಿ ಚಿತ್ರ ಅಮೇಜಾನ್ ಒಟಿಟಿಯಲ್ಲಿ ಧಮಾಕ ಎಬ್ಬಿಸುತ್ತಿದೆ. ಪ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿ ಗೆಲುವು ದಾಖಲಿಸಿದ್ದಾರೆ.