ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕು ಬಂದಂತೆ ಸ್ವೀಕರಿಸಿ ಎಂಬ ಸ್ವೀಟ್ ಸಂದೇಶ ಕೊಟ್ಟು ಫ್ಯಾಮಿಲಿ ಪ್ರೇಕ್ಷಕ ಪ್ರಭುವಿನಿಂದ ಚಪ್ಪಾಳೆ ಪಡೆದಿದ್ದ ರಾಮೇನಹಳ್ಳಿ ಜಗನ್ನಾಥ ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಪುತ್ರಿ ಸಿನಿಮಾಗೆ ಕ್ಲ್ಯಾಪ್ ಮಾಡಿದರೆ, ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಕ್ಯಾಮೆರಾಗೆ ಚಾಲನೆ ನೀಡಿದರು. ಜಗನ್ನಾಥ ಅವರ ಹೊಸ ಪ್ರಯತ್ನಕ್ಕೆ ತೀರ್ಥರೂಪ ತಂದೆಯವರಿಗೆ ಎಂಬ ಆಕರ್ಷಕ ಟೈಟಲ್ ಇಡಲಾಗಿದೆ.
ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಪಡೆದಿರುವ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸದ್ಯ ಮುಖೇಶ್ ಹೀರೋ ಆಗಿ ಬಣ್ಣ ಹಚ್ಚಿರುವ ಗೀತಾ ಶಂಕರಂ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದರ ಬೆನ್ನೆಲ್ಲೇ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದೆ. ತೆಲುಗಿನಲ್ಲಿ ಪ್ರಿಯಮೈನ ನಾನ್ನಕು ಎಂಬ ಶೀರ್ಷಿಕೆ ಇಡಲಾಗಿದೆ.
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ತೀರ್ಥರೂಪ ತಂದೆಯವರಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ಬ್ಲಿಂಕ್ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದೆ. ಸದ್ಯ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದೆ.