Sandalwood Leading OnlineMedia

ಸುಳ್ಯದಲ್ಲಿ ಶುರುವಾಯಿತು “ಹೋಮ್ ಸ್ಟೇ” ನಿರ್ದೇಶಕನ ಹೊಸಚಿತ್ರ.

ದೃಷ್ಟಿ ಮಿಡಿಯಾ & ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, “ಹೋಮ್ ಸ್ಟೇ” ಚಿತ್ರದ ಖ್ಯಾತಿಯ ಸಂತೋಷ್ ಕೊಡಂಕೇರಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ “ಪ್ರೊಡಕ್ಷನ್ ನಂ 02” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಜರುಗಿತು.
 
 
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ತೂಗುಸೇತುವೆಗಳ ಸರದಾರ ಪದ್ಮಶ್ರೀ ಶ್ರೀ ಗಿರೀಶ್ ಭಾರಧ್ವಾಜ್ ರವರು, ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಶ್ರೀಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
 
 
ಗೀತಾ ಭಾರತಿ ಭಟ್, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನ ಹಾಗೂ ದರ್ಶಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪಾವನಾ ಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುರಳಿಧರ್. ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತ ನಿರ್ದೇಶನ, ರಘು ಎಸ್. ಸಂಕಲನ, ಕಿರಣ್ ಕಾವೇರಪ್ಪ ಗೀತರಚನೆ ಹಾಗೂ ಪ್ರಸನ್ನ – ಕಲ್ಯಾಣ್ ರೆಡ್ಡಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.
 
 
ಈ ಚಲನಚಿತ್ರವು ದಕ್ಷಿಣ ಕನ್ನಡದ ಸೊಗಡು, ಭಾಷೆ, ಸಂಸ್ಕೃತಿ ಹೊಂದಿದ್ದು, ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ತೋಡಿಕಾನ ಆಸುಪಾಸಿನಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ‌ ಎಂದು ನಿರ್ದೇಶಕರು ತಿಳಿಸಿದ್ದಾರೆ.

Share this post:

Related Posts

To Subscribe to our News Letter.

Translate »