ತಮಿಳಿನ ಸಿನಿಮಾ ʻರಘುತಾಥʼ ಟೀಸರ್ ರಿಲೀಸ್ ಆಗಿದೆ. ಕಾಮಿಡಿ ಎಂಟರ್‌ಟೈನರ್ ಇದಾಗಿದೆ. ಗಂಭೀರವಾದ ವಿಚಾರವನ್ನಿಟ್ಟುಕೊಂಡು,ಫನ್ನಿಯಾಗಿಯೇ ಸಿನಿಮಾವನ್ನು ತೆಗೆದುಕೊಂಡು ಹೋಗಿದ್ದಾರೆಂಬಂತೆ ಟೀಸರ್‌ನಲ್ಲಿ ಭಾಸವಾಗುತ್ತಿದೆ. ಹಿಂದಿ ಹೇರಿಕೆಯ ವಿಚಾರ ಆಗಾಗ ಕೆಲವು ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿದೆ.
ನಮ್ಮ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ತಮಿಳಿನ ʻರಘುತಾಥʼ ಸಿನಿಮಾವನ್ನು ನಿರ್ಮಾಣ ಮಾಡಿದೆ. ಕೀರ್ತಿ ಸುರೇಶ್ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. NCCನಲ್ಲಿ ಕೆಡೆಟ್ ತರಬೇತಿ ಪಡೆಯುತ್ತಿರುವ ಕೀರ್ತಿ ಸುರೇಶ್ ಪಾತ್ರದೊಂದಿಗೆ ‘ರಘುತಥಾ’ ಟೀಸರ್ ಪ್ರಾರಂಭವಾಗುತ್ತದೆ. ಆದರೆ ಎನ್‌ಸಿಸಿ ಮಾಸ್ಟರ್ ಹಿಂದಿಯಲ್ಲಿ ತರಬೇತಿ ನೀಡುತ್ತಿರುವಾಗ ಕೀರ್ತಿ ಸುರೇಶ್ ನನಗೆ ಹಿಂದಿ ಬರುವುದಿಲ್ಲ, ತಮಿಳಿನಲ್ಲಿ ಹೇಳಿ ಸರ್ ಎನ್ನುತ್ತಾರೆ. ಅಲ್ಲಿಂದ ಟೀಸರ್ ಸಿನಿಮಾ ಕಥೆ ಏನು ಎನ್ನುವ ಸುಳಿವು ಕೊಡುತ್ತಾ ಸಾಗುತ್ತದೆ. ಹಿಂದಿ ಪರೀಕ್ಷೆ ಬರೆದರೆ ಮಾತ್ರ ಬಡ್ತಿ ಸಿಗುತ್ತಾ? ಹಾಗಾದರೆ ಅದು ಬೇಡ ಎಂದು ಧಿಕ್ಕರಿಸುವ ಸನ್ನಿವೇಶ ಟೀಸರ್‌ನಲ್ಲಿ ಕಾಣುತ್ತಿದೆ.
ಹಲವು ವರ್ಷಗಳಿಂದ ತಮಿಳುನಾಡಿನ ಜನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ತಮಿಳುನಾಡು ಸರ್ಕಾರಗಳು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಇವೆ. ಶಾಲೆಗಳಲ್ಲಿ ಕೇಂದ್ರದ ತ್ರಿಭಾಷೆ ಶಿಕ್ಷಣ ನೀತಿಯನ್ನು ಕೂಡ ತಮಿಳುನಾಡು ಒಪ್ಪಲು ಸಿದ್ಧವಿಲ್ಲ. ಇದೀಗ ಅದೇ ಘಟನೆಯನ್ನು ತೆರೆಮೇಲೆ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಸುಮನ್ ಕುಮಾರ್. ಸದ್ಯ ಟೀಸರ್ ವೀವ್ಸ್ ಪಡೆಯುತ್ತಿದ್ದು, ಮುಂದೆ ಯಾವ ತರದ ತಿರುವು ಪಡೆಯುತ್ತದೆ ಎಂಬುದನ್ನು ನೋಡಬೇಕಿದೆ.
ಕೀರ್ತಿ ಸುರೇಶ್ ಜೊತೆಗೆ ಎಂ. ಎಸ್ ಭಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ರಾಜೀವ್ ರವೀಂದ್ರನಾಥನ್, ಜಯಕುಮಾರ್, ಆನಂದ್‌ಸಾಮಿ ಸೇರಿದಂತೆ ಹಲವರು ನಟಿಸಿದ್ದಾರೆ. ಸೀನ್ ರೋಲ್ಡನ್ ಸಂಗೀತ, ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.