ಕಂಟೆಂಟ್ ಇರುವಂತ ಸಿನಿಮಾಗಳನ್ನು ಕೊಟ್ಟಾಗ ಜನ ಖಂಡಿತ ಸ್ವೀಕಾರ ಮಾಡುತ್ತಾರೆ. ಕೆಲವೊಮ್ಮೆ ನಿಧಾನವಾದರೂ ಸರಿ ಕಂಟೆಂಟ್ ಇರುವಂತ ಸಿನಿಮಾಗಳು ಗೆದ್ದೆ ಗೆಲ್ಲುತ್ತವೆ, ಜನರ ಮನಸ್ಸಲ್ಲಿ ಉಳಿಯುತ್ತವೆ. ಇದೀಗ ತಂದೆ-ಮಗಳ ಬಾಂಧವ್ಯದ ಕಥೆ ಹೊತ್ತು ಬರ್ತಿದ್ದಾರೆ ಕಿರಣ್ ಸುಬ್ರಮಣಿ.
ಕಿರಣ್ ಸುಬ್ರಮಣಿ ಮೂಲತಃ ರಂಗಭೂಮಿಯಿಂದ ಬಂದವರು. ನೀನಾಸಂ, ಸಾಣೇಹಳ್ಳಿ ಸೇರಿದಂತೆ ಹಲವು ರಂಗತಂಡದಲ್ಲಿ ಕೆಲಸ ಮಾಡಿ ಒಂದಷ್ಟು ಅನುಭವಗಳನ್ನು ಒಟ್ಟುಗೂಡಿಸಿಕೊಂಡವರು.
ಸಿನಿಮಾ ಮೇಲಿನ ಆಸಕ್ತಿ, ನಿರ್ದೇಶನ ಮಾಡಬೇಕೆಂಬ ಹುಮ್ಮಸ್ಸು, ನಟನೆ ಮೇಲಿನ ಒಲವು ಎಲ್ಲವೂ ಒಟ್ಟುಗೂಡಿ ಆರಂಭದಲ್ಲಿ ಶಾರ್ಟ್ ಮೂವಿಗಳನ್ನು ಮಾಡುವುದಕ್ಕೆ ಶುರು ಮಾಡಿದರು. ಜೊತೆ ಜೊತೆಗೆ ನಟನೆಯನ್ನು ಮಾಡಿದ್ದಾರೆ.
ಹೀಗೆ ಕಲೆಯ ಜೀವನ ಮುಂದುವರೆದಾಗ ಸೆಲ್ಫ್ ಕಾನ್ಫಿಡೆನ್ಸ್ನಿಂದ ಧೈರ್ಯ ಮಾಡಿ ಕಮರ್ಷಿಯಲ್ ಸಿನಿಮಾಗಳಿಗೂ ಕೈ ಹಾಕಿ, ಸೈ ಎನಿಸಿಕೊಂಡಿದ್ದಾರೆ. ಈಗ ಸದ್ಯಕ್ಕೆ ಸಿ ಎಂಬ ಎಮೋಷನಲ್ ಕ್ರೈಂ ಸಿನಿಮಾ ಕೊಡುವುದಕ್ಕೆ ರೆಡಿಯಾಗಿದ್ದಾರೆ.
ಟೈಟಲ್ ಕೂಡ ವಿಭಿನ್ನವಾಗಿದ್ದು, ಸಿ ಎಂದರೆ ದೃಷ್ಠಿ ಮತ್ತು ಸೃಷ್ಠಿಯ ನೋಟವನ್ನು ತೆರೆಮೇಲೆ ತೆರೆದಿಡುವ ಪ್ರಯತ್ನವಾಗಿದೆ. ಕಣ್ಣು ಕಾಣದಿರುವ ಮಗಳಿಗೆ ಕಣ್ಣು ಬರಿಸಲು ತಂದೆ ನಡೆಸುವ ಹೋರಾಟದ ಸುತ್ತ ಇಡೀ ಸಿನಿಮಾ ಕಥೆ ಸುತ್ತುತ್ತದೆ.
ಈ ಲೈನ್ ಹೇಳಿದಾಗಲೇ ಆ ಭಾವನೆ, ಆ ತೊಳಲಾಟ, ಮಗಳ ಅಂಧತ್ವ, ಅಪ್ಪನ ನೋವು ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಬಾರದೆ ಇರುವುದಿಲ್ಲ. ಇದನ್ನು ಸಿನಿಮಾ ರೂಪವಾಗಿ ತೆರೆ ಮೇಲೆ ನೋಡಿದರೆ ಇನ್ನಷ್ಟು ಎಫೆಕ್ಟೀವ್ ಆಗಿಯೇ ಇರುತ್ತದೆ.
ಈ ಸಿನಿಮಾಗೆ ಸ್ಯಾಂಡಲ್ವುಡ್ ಸ್ಟಾರ್ಗಳ ಬೆಂಬಲವೂ ಸಿಕ್ಕಿದೆ. ಸಿ ಸಿನಿಮಾದ ಪೋಸ್ಟರ್ ಅನ್ನು ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಡಾರ್ಲಿಂಗ್ ಕೃಷ್ಣ ಅವರು ರಿವಿಲ್ ಮಾಡಿ ಕೊಟ್ಟಿದ್ದಾರೆ. ಪೋಸ್ಟರ್ ನೋಡಿ, ಕಥೆ ಕೇಳಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಬೆಂಗಳೂರಿನಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗಿದ್ದು, ಉಳಿದಂತೆ ಮೈಸೂರು, ಶ್ರೀರಂಗಪಟ್ಟಣದಲ್ಲೂ ಚಿತ್ರೀಕರಣ ನಡೆದಿದೆ.
ಇನ್ನು ಕಿರಣ್ ಸುಬ್ರಮಣಿ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಜೊತೆಗೆ ಸಾನ್ವಿಕ, ಮಜಾಭಾರತ ಪಾಟೀಲ್, ಶ್ರೀಧರ್ ರಾಮ್, ಆರ್ಯ, ಚೈತ್ರಾ, ಪ್ರಶಾಂತ್ ನಟನ, ಮಧುಮಿತ, ನಿರ್ಮಲ ನಾಧನ್, ರವಿಕಾಂತ್ ಸೇರಿದಂತೆ ಹಲವರು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.