‘ಗುರುಮೂರ್ತಿ’ ಕನ್ನಡ ಚಿತ್ರರಂಗದಲ್ಲಿ ಅರಳುತಿರೋ ಭರವಸೆಯ ಪ್ರತಿಭೆ. ಸಿನಿಮಾ ನಿರ್ದೇಶಕರು. ಮೂಲತಃ ಗುರುಮೂರ್ತಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದವರು. ಇವರು ರೈತಾಪಿ ಕುಟುಂಬದ ಹಿನ್ನೆಲೆಯಿಂದ ಬಂದವರು, ಓದಿದ್ದು ಬಳ್ಳಾರಿಯ ವಿದ್ಯಾನಗರದಲ್ಲಿರುವ ‘ನವ ಜೀವನ ಅಂಗವಿಕಲರ ಸಂಸ್ಥೆ’ಯಲ್ಲಿ. ಇವರ ತಂದೆ ತಾಯಿ ರೈತಾಪಿ ಕೆಲಸಗಳನ್ನು ಮಾಡುತ್ತಿದ್ದರೆ, ಇವರ ಓಡಹುಟ್ಟಿದವರು ಗಾರೆ ಕೆಲಸ ಮಾಡುವ ಮೇಸ್ತ್ರಿಗಳು. ಗುರುಮೂರ್ತಿಯ ಕುಟುಂಬದ ಬದುಕು ಕೂಲಿ ಮಾಡಿದರೆ ಉಂಟು ಇಲ್ಲ ಅಂದರೆ ಇಲ್ಲ ಅನ್ನುವಂತಹ ಪರಿಸ್ಥಿತಿಯಲ್ಲಿತ್ತು. ಇವರು ಸೈಕಲ್ ತಿಳಿದುಕೊಂಡು ಹೋಗಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಓದುವಾಗಲೇ ಕಣ್ಣಿಗೆ ಕನಸುಗಳು ಮೆತ್ತಿಕೊಳ್ಳುತ್ತಾ ಹೋದವು ಅದು ಅಂತಿಂಥ ಕನಸಲ್ಲ ಸಿನಿಮಾ ಕನಸು. ಯಾರೇನೇ ಅಂದರೂ ಯಾರೇನೇ ಬೈದರೂ ಕನಸುಗಳನ್ನು ಬಿಡದೆ ಒಂದರಮೇಲೊಂದು ಕನಸು ಕಟ್ಟುತ್ತಲೇ ಹೋದರು ಗುರುಮೂರ್ತಿಯವರು.
ಇನ್ನೂ ಓದಿ : ಬೆಂಗಳೂರಿನಲ್ಲಿ ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬಂದಿಳಿದ ನಿಖಿಲ್ ಸಿದ್ಧಾರ್ಥ್ ಹಾಗೂ ಐಶ್ವರ್ಯ ಮೆನನ್
ಆ ಕನಸು ಕಟ್ಟಿದ ಮನಸಿಗೆ ಸಿಕ್ಕ ಉಡುಗೊರೆ ಮಾತ್ರ ಅವಮಾನ.ಇವರನ್ನು ಅವಮಾನ ಮಾಡಲು ಅನೇಕ ಕಾರಣಗಳಿವೆ, ಒಂದು ಬಡತನ, ಇನ್ನೊಂದು ಇವರ ಸಿನಿಮಾ ಹುಚ್ಚು, ಹೀಗೆಅವಮಾನ ಮಾಡಿದವರ, ಅನುಮಾನ ಪಟ್ಟವರ, ಹೀಯಾಳಿಸಿದವರ ಎಲ್ಲರ ದೃಷ್ಟಿಯಲ್ಲಿ ಕಾಣುತ್ತಿದ್ದದ್ದು ಗುರುಮೂರ್ತಿಯ ಮತ್ತೊಂದು ದೌರ್ಬಲ್ಯ ಇವರ ಶಕ್ತಿ ಕಳೆದುಕೊಂಡ ಬಲಗಾಲು.ಆ ಕಾಲು ಅವರ ನಾಲ್ಕನೆಯ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿತ್ತು.ಬಡತನ ತುಂಬಿದ್ದರೂ, ಊನವಾದ ಕಾಲಿದ್ದರೂ ಗುರುಮೂರ್ತಿಯವರ ಕಣ್ಣಲ್ಲಿ ತುಂಬಿಕೊಂಡಿದ್ದು ಬರಿದಾಗದ ಉತ್ಸಾಹ ಮತ್ತು ಅವರ ಸಿನಿಮಾ ಕನಸುಗಳು.ಅವರ ಮನಸ್ಸಿನಲ್ಲಿದಿದ್ದು “ನವ ಜೀವನ ಅಂಗವಿಕಲರ ಸಂಸ್ಥೆ, ಅಲ್ಲಿ ಕಲಿತ ಜೀವನ ಪಾಠ ಅಲ್ಲಿ ನೊಂದ, ಇನ್ನೂ ನೋಯುತ್ತಿರುವ ನೋವಿನ ಮನಸುಗಳು, ತಮ್ಮ ಕಣ್ಣೀರಿನಲ್ಲೇ ಕನಸುಗಳನ್ನು ಕೈ ತೊಳೆದುಕೊಳ್ಳುತ್ತಿರುವ ಅದೆಷ್ಟೋ ಅಸಹಾಯಕ ಜೀವಗಳು. ಆ ಸಂಸ್ಥೆಯಲ್ಲಿ ಕನಸು ಕಾಣುತ್ತಿರುವ ನೂರಾರು ಆಕಾಂಕ್ಷಿ ಕಣ್ಣುಗಳು. ಅಂತದ್ದೇ ನೂರಾರು ಕಣ್ಣುಗಳಿದ್ದ ದೇಹಗಳಿಗೆಲ್ಲ ಏನೇನೋ ಊನಗಳಿದ್ದವು. ಕೆಲವರಿಗಂತು ಕನಸು ಕಾಣುವ ಕಣ್ಣುಗಳೇ ಊನ. ಆದರೆ ಇಂತಹ ದಿವ್ಯ ಶಕ್ತಿಯುಳ್ಳವರು ಕಾಣುತ್ತಿದ್ದ ಕನಸುಗಳು ಮಾತ್ರ ಬಹಳ ಶಕ್ತಿಯುತವಾಗಿದ್ದವು. ಈ ಶಕ್ತಿಯನ್ನೇ ತಾನೂ ನಂಬಿಕೊಂಡು ಬದುಕಿನ ಹೋರಾಟಕ್ಕೆ ನಿಂತುಕೊಂಡರು ಗುರುಮೂರ್ತಿಯವರು.ಸಿನಿಮಾ ಕನಸುಗಳನ್ನು ಹೊತ್ತು ಮಾರಲು ಹೊರಟಾಗ..
ಇನ್ನೂ ಓದಿ : ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದ “ಎಜುಕೇಟೆಡ್ ಬುಲ್ಸ್” ಆರಂಭ
ಗುರುಮೂರ್ತಿ ಅವರು ತಮ್ಮ ಸಿನಿಮಾ ಕನಸುಗಳನ್ನು ಹೊತ್ತು ಬಂಡವಾಳ ಹಾಕುವವರ ಬಳಿಗೆ ಹೋದಾಗ ಕೆಲವರು ಅಣಕಿಸಿದ್ದುಂಟು, ಕೆಲವರು ಅವಮಾನ ಮಾಡಿದ್ದುಂಟು, ಹೆಚ್ಚಿನವರು ಕರುಣೆ ತೋರಿಸಿದ್ದೂ ಉಂಟು. “ಎಲ್ಲಾದರೊಂದು ಅಂಗಡಿ ಇಟ್ಟುಕೊಂಡು ಮೊದಲು ಜೀವನ ಮಾಡು ಆಮೇಲೆ ಏನಾದರೂ ಮಾಡುವೆಯಂತೆ” ಅಂತಾ ಹೇಳಿ ಮಾನವೀಯತೆ ಮೆರೆದವರು ಉಂಟು. ಗುರುಮೂರ್ತಿ ಎಲ್ಲರ ಮಾತನ್ನು ಕೇಳಿಕೊಂಡು ತನ್ನೊಳಗೆ ತನ್ನ ನೋವು ನಿರಾಶೆ ನುಂಗಿಕೊಂಡು ಎದೆಗುಂದದೆ ತಾನು ಮಾಡಬೇಕಾದ ಕೆಲಸದತ್ತಾ, ತಾನು ತಲುಪುಬೇಕಾದ ಗುರಿಯತ್ತ ಗಮನ ಹರಿಸಿದರು. ಮೊದಲು ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ಕೆಲಸವನ್ನು ಶುರು ಮಾಡಿಯೇ ಬಿಟ್ಟರು. ಯಾವಾಗ ಸಿನಿಮಾ ಕೆಲಸಗಳು ಶುರುವಾಯಿತೋ ಗುರುಮೂರ್ತಿಯವರ ಆಪ್ತ ಬಳಗದ ಜನರಿಗೆ ಸಿನಿಮಾ ಪ್ರಾರಂಭವಾಗುವುದಾಗಿ ಪ್ರಚಾರ ಆಯಿತು. ಆ ಸಮಯದಲ್ಲಿ ಗುರುಮೂರ್ತಿಯವರಿಗೆ ಒಬ್ಬರ ಪರಿಚಯವಾಯಿತು ಅವರೇ ‘ಕೋಮಲ ನಟರಾಜ್’ ಈ ಚಿತ್ರಕ್ಕೆ ಪೂರ್ತಿ ಬಂಡವಾಳ ಹಾಕುತ್ತೇನೆ ಎಂದು ಮುಂದೆ ಬಂದರು. ಇವರೊಬ್ಬರು ಗುರುಮೂರ್ತಿಯವರನ್ನ ಅನುಮಾನಿಸಲಿಲ್ಲ, ಅವಮಾನಿಸಲಿಲ್ಲ ಬದಲಿಗೆ ಪೂರ್ತಿಯಾಗಿ ನಂಬಿಕೆ ಇಟ್ಟರು. ಗುರುಮೂರ್ತಿಯವರಿಗಿದ್ದ ಸಿನಿಮಾ ಪ್ರೀತಿಯ ಮೇಲೆ ಅವರಿಗಿದ್ದ ಸಿನಿಮಾ ಆಸಕ್ತಿಯಮೇಲೆ, ಅವರು ಮಾಡಿಕೊಂಡಿದ್ದ ಕಥೆಯ ಮೇಲೆ ನಿರ್ಮಾಪಕರಿಗೆ ಪೂರ್ತಿ ನಂಬಿಕೆ ಹುಟ್ಟಿಕೊಂಡಿತ್ತು. ಆಮೇಲೆ ಗುರುಮೂರ್ತಿಯವರ ಸಹಾಯಕ್ಕೆ ಬಂದು ನಿಂತದ್ದು ಆ ಚಿತ್ರದ ಕ್ರಿಯೇಟಿವ್ ಹೆಡ್ ಧನುಕುಮಾರ್, ಇವರು ಪೂರ್ತಿ ಸಿನಿಮಾ ಗುರುಮೂರ್ತಿಯವರಿಗೆ ಬೆನ್ನೆಲುಬಾಗಿ ಸಾತ್ ನೀಡಿದರು. ಆಮೇಲೆ ಗುರುಮೂರ್ತಿಯವರ ನಿರ್ದೇಶನದಿಂದ ಸೃಷ್ಟಿಯಾದದ್ದೇ ಕನಸಿನ ರಾಣಿ ಆಕ್ಷನ್ ಕ್ವೀನ್ ಮಾಲಾಶ್ರೀ ಅವರು ಮುಖ್ಯ ಭೂಮಿಕೆಯಲ್ಲಿರುವ ‘ಮಾರಕಾಸ್ತ್ರ’ ಅನ್ನುವ ಸಿನೆಮಾ.. ಈಗ ಆ ಸಿನಿಮಾ ನಿರ್ಮಾಣವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮುಗಿಸಿ ಬಿಡುಗಡೆಗಾಗಿ ಕಾದು ಕುಳಿತಿದೆ.
ಇನ್ನೂ ಓದಿ : ಪಸಂದಾಗಿದೆ “ಗರಡಿ” ಚಿತ್ರದ ಮೊದಲ ಹಾಡು; “ಹೊಡಿರೆಲೆ ಹಲಗಿ” ಎಂದ ಭಟ್ರು
ಗುರುಮೂರ್ತಿಯವರ ಮುಂದಿನ ಕನಸು ಮತ್ತು ಗುರಿ ,,,ಗುರುಮೂರ್ತಿಯವರು ಸುಮಾರು ಹತ್ತು ಕಥೆಗಳನ್ನ ರೆಡಿ ಮಾಡಿಕೊಂಡಿದ್ದಾರೆ. ಮುಂದೆ ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಚಿತ್ರ ಮಾಡುವ ಗುರಿ ಹೊಂದಿದ್ದಾರೆ. ತನ್ನಂತೆ ಕನಸು ಕಾಣುತ್ತಾ, ಅವಮಾನಗಳನ್ನು ಅನುಭವಿಸುತ್ತಾ, ಅನುಮಾನದ ದೃಷ್ಟಿಯಲ್ಲಿ ಬೇಯುತ್ತಿರುವ ಎಷ್ಟೋ ವಿಕಲಚೇತನರ ಕನಸುಗಳನ್ನು ಈಡೇರಿಸುವ ಆಶಯ ಹೊಂದಿದ್ದಾರೆ. ತನ್ನನ್ನು ಸಾಕಿ ಬೆಳೆಸಿದ ‘ನವ ಜೀವನ ಅಂಗವಿಕಲರ ಸಂಸ್ಥೆ’ ತನ್ನೊಂದಿಗೆ ಬೆಳೆದ ಸಹಪಾಠಿಗಳು, ಹಾಗೂ ತನ್ನನ್ನು ಹೊತ್ತು ತಿರುಗಿ ತನ್ನ ಕನಸುಗಳ ನೋವು ನಲಿವುಗಳ ಮತ್ತು ಅವಮಾನಗಳ ಜೊತೆಗಿದ್ದ ತನ್ನದೇ ನೆಚ್ಚಿನ ವಿಕಲಚೇತನರು ಬಳಸುವ ಟ್ರೈ ಸೈಕಲ್ ಅನ್ನು ಇಂದಿಗೂ ಸ್ಮರಿಸುತ್ತಾ, ಪೂಜಿಸುತ್ತಿರುವ ಗುರುಮೂರ್ತಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೊಂದು ತನ್ನದೇ ಆದ ಹೆಗ್ಗುರುತು ಬಿಟ್ಟು ಹೋಗುವಂತಹ ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ. ತಾನು ತನ್ನಂತಹ ಎಲ್ಲರಿಗೂ ಒಂದು ಆಸರೆ ಆಗಬೇಕು, ಕನಸು ಕಟ್ಟಿ, ಹೊತ್ತು ನಡೆಯಲಾರದಂತಹವರಿಗೆ ಆಸರೆಯಾಗಿ, ಮಾದರಿ ಮಾನವನಾಗಿ ನಿಲ್ಲಬೇಕು ಅನ್ನುತ್ತಾರೆ ಗುರುಮೂರ್ತಿಯವರು.