Left Ad
Rukmini Vasanth Exclusive; ʻಟಾಕ್ಸಿಕ್’ & ಯಶ್‌ ಬಗ್ಗೆ ಕನಕವತಿ  ಏನಂದ್ರು ಗೊತ್ತಾ? - Chittara news
# Tags

Rukmini Vasanth Exclusive; ʻಟಾಕ್ಸಿಕ್’ & ಯಶ್‌ ಬಗ್ಗೆ ಕನಕವತಿ  ಏನಂದ್ರು ಗೊತ್ತಾ?

ಬರೀ ಕನ್ನಡವಷ್ಟೇ ಅಲ್ಲ, ಸದ್ಯದ ಮಟ್ಟಿಗೆ ಅತ್ಯಂತ ಬೇಡಿಕೆಯ ನಟಿ ಯಾರು ಎಂಬ ಪ್ರಶ್ನೆಗೆ ಎಲ್ಲರೂ ತೋರಿಸುವುದು ನಟಿ ರುಕ್ಮಿಣಿ ವಸಂತ್ ಅವರತ್ತ. ಕಳೆದ ವರ್ಷ ‘ಕಾಂತಾರ – ಚಾಪ್ಟರ್ ೧’ರಲ್ಲಿ ಹೊಸ ಇಮೇಜ್ ತಮ್ಮದಾಗಿಸಿಕೊಂಡಿರುವ ರುಕ್ಮಿಣಿ, ಸದ್ಯ ‘ಟಾಕ್ಸಿಕ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲೊಂದು ಮಹತ್ವದ ಪಾತ್ರ ನಿರ್ವಹಿಸಿರುವ ಅವರು, ಚಿತ್ರವು ತಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಜ್ಯೂನಿಯರ್ ಎನ್.ಟಿ.ಆರ್ ಅಭಿನಯದ ಮತ್ತು ಪ್ರಶಾಂತ್ ನೀಲ್ ನಿರ‍್ದೇಶನದ ‘ಡ್ರಾಗನ್’ ಚಿತ್ರದಲ್ಲೂ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

>>>>>>>>> 

ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಬರುವುದಕ್ಕೆ ಮೊದಲು ರುಕ್ಮಿಣಿ ಹಲವರಿಗೆ ಪರಿಚಯವಿರಲಿಲ್ಲ. ಅದಕ್ಕೂ ಮೊದಲು ಅವರು ‘ಬೀರ್ಬಲ್’ ಚಿತ್ರದಲ್ಲಿ ನಟಿಸಿದ್ದರೂ, ದೊಡ್ಡ ಹೆಸರು ಮಾಡಿರಲಿಲ್ಲ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಬಿಡುಗಡೆಯಾಗಿ ಮೂರು ವರ್ಷಗಳಲ್ಲಿ ರುಕ್ಮಿಣಿ ಜೀವನ ಸಾಕಷ್ಟು ಬದಲಾಗಿದೆ. ಮೂರು ವರ್ಷಗಳಲ್ಲಿ ಅವರು ಪ್ಯಾನ್ ಇಂಡಿಯಾ ನಟಿಯಾಗಿದ್ದಷ್ಟೇ ಅಲ್ಲ, ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಎಂದರೆ, ಅದಕ್ಕೆ ಉತ್ತರ ಪ್ರತಿಭೆ, ಶ್ರದ್ಧೆ ಮತ್ತು ಕಲಿಕೆ.

>>>>>>>>> 

ಕಲಿಕೆ ಎಂಬುದು ನಿರಂತರ ಎಂಬುದು ರುಕ್ಮಿಣಿ ಅಭಿಪ್ರಾಯ. ‘ಪ್ರತಿಯೊಂದು ಹಂತದಲ್ಲೂ ನಾವು ಕಲಿಯುತ್ತಲೇ ಇರಬೇಕು. ನನಗೆ ಬಹಳ ಒಳ್ಳೆಯ ಪ್ರತಿಭಾವಂತ ಕಲಾವಿದರ ಜೊತೆಗೆ ನಟಿಸುವುದಕ್ಕೆ ಅವಕಾಶಗಳು ಸಿಕ್ಕಿವೆ. ಕಲಿಯುವುದನ್ನು ಯಾವತ್ತೂ ಬಿಡಬಾರದು. ಯಾವತ್ತೂ ಕಲಿಯುತ್ತಲೇ ಇರಬೇಕು’ ಎನ್ನುತ್ತಾರೆ ಅವರು.

>>>>>>>>> 

ರುಕ್ಮಿಣಿ ಇದುವರೆಗೂ ಅಭಿನಯಿಸಿರುವುದು 12 ಚಿತ್ರಗಳಲ್ಲಿ. 13ನೇ ಚಿತ್ರದ ಚಿತ್ರೀಕರಣ ಈಗಷ್ಟೇ ನಡೆಯುತ್ತಿದೆ. ಇಷಷ್ಟು ಚಿತ್ರಗಳಲ್ಲಿ ಕಷ್ಟವೆನಿಸಿದ ಮತ್ತು ಸವಾಲಿನ ಪಾತ್ರ ಯಾವುದು ಎಂಬ ಪ್ರಶ್ನೆ ಮುಂದಿಟ್ಟರೆ, ನನಗೆ ಕಷ್ಟ ಅಂತ ಯಾವ ಪಾತ್ರವೂ ಅನಿಸಿಲ್ಲ ಎಂಬ ಉತ್ತರ ಬರುತ್ತದೆ. ‘ಕೆಲವೊಂದು ಸವಾಲಿನ ಪಾತ್ರಗಳು ಇರುತ್ತವೆ. ಆ ಪಾತ್ರಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಅಭಿವ್ಯಕ್ತಗೊಳಿಸುವುದು ಸವಾಲಾಗಿರುತ್ತದೆ. ಅಂಥ ಪಾತ್ರಗಳು ಮಾನಸಿಕವಾಗಿ ಸಾಕಷ್ಟು ತೃಪ್ತಿ ಕೊಡುತ್ತವೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪ್ರಿಯಾ ಪಾತ್ರ ಸವಾಲಿನದ್ದಾಗಿತ್ತು. ಅದರಲ್ಲೂ ಸೈಡ್ ಬಿ ಪಾತ್ರ ಚಾಲೆಂಜಿAಗ್ ಆಗಿತ್ತು. ಅವಳ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿ, ಅವಳ ಮನಸ್ಥಿತಿ ಬದಲಾಗಿರುತ್ತದೆ. ಆ ಪಾತ್ರ ಬಹಳ ಇಂಟೆನ್ಸ್ ಆಗಿತ್ತು. ಅದು ಬಿಟ್ಟರೆ, ‘ಕಾಂತಾರ – ಚಾಪ್ಟರ್ ೧’ ಚಿತ್ರ ಸಹ ಇಂಟೆನ್ಸ್ ಆಗಿತ್ತು. ಆ ಪಾತ್ರದಲ್ಲಿ ಬಹಳ ಮುಖ್ಯವಾದ ಬ್ಯಾಲೆನ್ಸ್ ಬೇಕಾಗಿತ್ತು. ಮೊದಲಾರ್ಧದಲ್ಲಿ ಏನು ಕಾಣಿಸಿಕೊಳ್ಳುತ್ತೀನೋ, ದ್ವಿತೀಯಾರ್ಧದಲ್ಲಿ ಇನ್ನಷ್ಟು ವಿಭಿನ್ನವಾಗಿರುತ್ತೇನೆ. ಎರಡೂ ಬೇರೆ ಪಾತ್ರಗಳೆಂದನಿಸಬಾರದು. ಒಂದೇ ಪಾತ್ರದ ಎರಡು ಶೇಡ್‌ಗಳು ಎಂದನಿಸಬೇಕು. ಆ ಬ್ಯಾಲೆನ್ಸ್ ಮಾಡುವುದು ಸವಾಲಾಗಿತ್ತು. ಆ ಪಾತ್ರ ಬಹಳ ತೃಪ್ತಿಕೊಟ್ಟಿತು’ ಎನ್ನುತ್ತಾರೆ.

>>>>>>>>> 

ಪ್ರತಿಯೊಬ್ಬ ನಿರ್ದೇಶಕರಿಂದಲೂ ಏನನ್ನೋ ಕಲಿಯುವ ಅವಕಾಶಗಳು ಸಿಗುತ್ತಿರುತ್ತವೆ ಎನ್ನುವ ರುಕ್ಮಿಣಿ, ‘ಒಬ್ಬೊಬ್ಬರೂ ಒಂದೊಂದು ದೃಷ್ಟಿಕೋನದಿಂದ ಯೋಚಿಸುತ್ತಾರೆ. ನಾವು ಕಲಾವಿದರಾಗಿ ನಮ್ಮ ದೃಷ್ಟಿಕೋನವನ್ನು ತೆಗೆದುಕೊಂಡು ಬರುತ್ತೇವೆ. ಇದೊಂದು ಕೊಲಾಬರೇಷನ್ ಆಗಿರುತ್ತದೆ’ ಎನ್ನುತ್ತಾರೆ.

>>>>>>>>> 

ಇದು ಪ್ರತೀ ಕಲಾವಿದರಿಗೂ ಆಗ ಅನುಭವ. ತಾವು ಮಾಡಿದ ಪಾತ್ರವನ್ನು ತೆರೆಯ ಮೇಲೆ ನೋಡಿದಾಗ, ಅದನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಬಹುದಿತ್ತು ಎಂಬುದು ಪ್ರತಿಯೊಬ್ಬರಿಗೂ ಸಹಜವಾಗಿಯೇ ಅನಿಸುತ್ತದೆ. ಇದಕ್ಕೆ ರುಕ್ಮಿಣಿ ಸಹ ಹೊರತಲ್ಲ. ‘ನಾನು ಅಭಿನಯಿಸಿದ ಪ್ರತೀ ಚಿತ್ರ ಈಗ ನೋಡಿದಾಗಲೂ, ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದನಿಸುತ್ತದೆ. ಒಂದು ಚಿತ್ರ ಪೂರ್ತಿಯಾಕಿ ಶೂಟ್ ಮಾಡಿದ ಮೇಲೆ, ಅದರ ಬಗ್ಗೆ ಒಂದು ಸ್ಪಷ್ಟತೆ ಸಿಗುತ್ತದೆ. ಆಗ ಒಂದು ದೃಶ್ಯದಲ್ಲಿ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಸಂಭಾಷಣೆಯನ್ನು ಹೀಗೆ ಹೇಳಬಹುದಿತ್ತು ಎಂದು ಅನಿಸುವುದಿದೆ. ಆದರೆ, ಕ್ಷಣದಲ್ಲಿ ನನಗೆ ಏನು ಬೆಸ್ಟ್ ಅಂತನಿಸುತ್ತದೋ ಅದನ್ನೇ ಮಾಡಿಕೊಂಡು ಬಂದಿದ್ದೇನೆ. ಆದರೆ, ನಾನು ಒಂದು ಚಿತ್ರದಿಂದ ಕಲಿತಿರುತ್ತೇನೋ, ಅದನ್ನು ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ.

>>>>>>>>> 

ಯಾವುದೇ ಒಂದು ಪಾತ್ರಕ್ಕೂ ಅಂಟಿಕೊಳ್ಳುವುದಕ್ಕೆ ಇಷ್ಟವಿಲ್ಲ ಎನ್ನುವ ಅವರು, ‘ಇದುವರೆಗೂ ನಾನು ಹೆಚ್ಚಾಗಿ ಪಕ್ಕದ್ಮನೆ ಹುಡುಗಿ ಪಾತ್ರಗಳು ಸಿಕ್ಕಿವೆ. ನಾನು ಸಹ ಅದನ್ನು ಎಂಜಾಯ್ ಮಾಡಿಕೊಂಡೇ ಮಾಡಿದ್ದೇನೆ. ಆದರೆ, ಒಂದೇ ತರಹದ ಪಾತ್ರಕ್ಕೆ ಅಂಟಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ವಿಭಿನ್ನವಾದ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವುದಕ್ಕೆ ನನಗೆ ಬಹಳ ಇಷ್ಟ. ಅದೇ ನಿಟ್ಟಿನಲ್ಲಿ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರಗಳ ಹುಡುಕಾಟದಲ್ಲಿ ನಾನಿದ್ದೇನೆ. ಕೆಲವೊಮ್ಮೆ ಒಂದು ಟ್ರೆಂಡ್ ಸೃಷ್ಟಿಯಾದರೆ, ಜನ ಅದನ್ನೇ ನಿರೀಕ್ಷೆ ಮಾಡುತ್ತಾರೆ. ನನ್ನ ವಿಷಯದಲ್ಲೇ ಹೇಳುವುದಾದರೆ, ನನ್ನ ಬಗ್ಗೆ ಹಲವು ಮೀಮ್‌ಗಳಿವೆ. ಪ್ರತೀ ಚಿತ್ರದಲ್ಲೂ ನನಗೆ ನಾಯಕ ಸಿಗುವುದಿಲ್ಲ ಎಂಬ ಮೀಮ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು. ಒಂದು ಕಡೆ ಎಂಜಾಯ್ ಮಾಡುತ್ತಲೇ, ಅದನ್ನೊಂದು ಎಚ್ಚರಿಕೆಯ ಗಂಟೆ ಎಂದು ಅರ್ಥ ಮಾಡಿಕೊಳ್ಳಬೇಕು. ನಾವು ಬದಲಾಗುತ್ತಿರಬೇಕು, ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳಬಾರದು ಎಂದು ಮೀಮ್‌ಗಳು ಅರ್ಥ ಮಾಡಿಸುತ್ತವೆ. ವಿಷಯದಲ್ಲಿ ನಾನು ಲಕ್ಕಿ. ಒಂದಿಷ್ಟು ವಿಭಿನ್ನ ಪಾತ್ರಗಳನ್ನು ಮಾಡುವುದಕ್ಕೆ ನನಗೆ ಅವಕಾಶಗಳು ಸಿಗುತ್ತಿವೆ’ ಎಂದು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ.

>>>>>>>>> 

ಸ್ಪೆಷಲ್ ಅನುಭವ ನೀಡಿದ ‘ಟಾಕ್ಸಿಕ್’

ರುಕ್ಮಿಣಿ ಬಹಳ ನಿರೀಕ್ಷೆಯಿಂದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಏಕೆಂದರೆ, ಇದು ಅವರ ವೃತ್ತಿಜೀವನದಲ್ಲೊಂದು ಸ್ಪೆಷಲ್ ಚಿತ್ರವಂತೆ. ‘‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿರುವುದುಕ್ಕೆ ಸಿಕ್ಕಾಪಟ್ಟೆ ಖುಷಿ ಇದೆ. ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಜನ ಆ ಚಿತ್ರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಅದೊಂದು ಅದ್ಭುತವಾದ ಅನುಭವವಾಗಿತ್ತು. ಗೀತೂ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದು, ಯಶ್ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಚೆನ್ನಾಗಿತ್ತು. ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಆ ಚಿತ್ರದ ಬಗ್ಗೆ ಹೆಚ್ಚು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ, ಮೂರು ವರ್ಷಗಳಿಂದ ಆ ಚಿತ್ರದ ಪ್ರಪಂಚವನ್ನು ಎಲ್ಲರೂ ಕಟ್ಟುತ್ತಲೇ ಇದ್ದಾರೆ. ನಾನೇನೋ ಹೇಳಿ, ಆ ನಿರೀಕ್ಷೆಗಳನ್ನು ಹಾಳು ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಅದನ್ನು ಚಿತ್ರಮಂದಿರಗಳಲ್ಲೇ ನೋಡಿ ಅನುಭವಿಸಬೇಕು. ಆ ಚಿತ್ರದಲ್ಲಿ ನಟಿಸಿದ ಅನುಭವಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ.

>>>>>>>>> 

‘ಟಾಕ್ಸಿಕ್’ ಚಿತ್ರದಿಂದ ತಮ್ಮ ಇಮೇಜ್ ಮತ್ತೊಮ್ಮೆ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿರುವ ರುಕ್ಮಿಣಿ, ‘ಇದೊಂದು ಪ್ಯಾನ್ ವರ್ಲ್ಡ್ ಚಿತ್ರ ಎಂದು ಯಶ್ ಹೇಳಿದ್ದಾರೆ. ಆ ಮಟ್ಟಕ್ಕೆ ಅವರು ಚಿತ್ರವನ್ನು ಪ್ರಮೋಟ್ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಕನ್ನಡ ಚಿತ್ರರಂಗದವಳಾಗಿ ನನಗೆ ಈ ಚಿತ್ರ ಬಹಳ ಸ್ಪೆಷಲ್ ಅನುಭವ. ಈ ಚಿತ್ರದಲ್ಲಿನ ಪಾತ್ರ ಬಹಳ ವಿಭಿನ್ನವಾಗಿದೆ. ನಾನು ಯಾವುದೋ ಒಂದು ಪಾತ್ರಕ್ಕೆ ಸೀಮಿತವಾಗಬಾರದು ಎಂದುಕೊಳ್ಳುವಷ್ಟರಲ್ಲೇ ನನಗೆ ಈ ಪಾತ್ರ ಸಿಕ್ಕಿದ ಖುಷಿ ಇದೆ. ಹೋದ ವರ್ಷದಲ್ಲಿ ‘ಕಾಂತಾರ – ಚಾಪ್ಟರ್ 1’ ಚಿತ್ರ ಬಿಡುಗಡೆಯಾಗಿ, ನನ್ನ ಇಮೇಜ್ ಬದಲಾಯಿಸಿತ್ತು. ಈ ವರ್ಷ ‘ಟಾಕ್ಸಿಕ್’ ಚಿತ್ರದಿಂದ ನನ್ನ ಇಮೇಜ್ ಮತ್ತೊಮ್ಮೆ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ನಾನು ಇಂಥದ್ದೊAದು ಪಾತ್ರ ಮಾಡುವುದಕ್ಕೆ ಅದೃಷ್ಟ ಮಾಡಿದ್ದೆ. ಈ ತರಹ ಪಾತ್ರ ಮತ್ತು ತಂಡಗಳು ಸಿಗುತ್ತಿರುವುದಕ್ಕೆ ಖುಷಿ ಆಗುತ್ತದೆ. ಯಶ್ ಬಹಳ ಯೋಚನೆ ಮಾಡಿ, ಚಿತ್ರವನ್ನು ಪ್ಲಾನ್ ಮಾಡಿದ್ದಾರೆ ಮತ್ತು ಅದೇ ರೀತಿ ಪ್ರಚಾರ ಸಹ ಮಾಡುತ್ತಿದ್ದಾರೆ. ಚಿತ್ರದ ಇಮೇಜ್ ಕಟ್ಟುತ್ತಿದ್ದಾರೆ. ಬಿಡುಗಡೆಯ ಹೊತ್ತಿಗೆ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಒಂದು ಕಲ್ಪನೆ ಅಥವಾ ಇಮೇಜ್ ಸೃಷ್ಟಿಯಾಗಿರುತ್ತದೆ’ ಎನ್ನುತ್ತಾರೆ.

>>>>>>>>> 

ನಟನೆ ಬಿಟ್ಟು ರುಕ್ಮಿಣಿಗೆ ಏನು ಇಷ್ಟ ಗೊತ್ತಾ?

ಶೂಟಿಂಗ್ ಇಲ್ಲದಿರುವ ಸಮಯದಲ್ಲಿ ರುಕ್ಮಿಣಿ ಏನು ಮಾಡುತ್ತಾರೆ? ಸಾಕಷ್ಟು ವರ್ಕೌಟ್ ಮಾಡುತ್ತೇನೆ ಎಂಬ ಉತ್ತರ ಅವರಿಂದ ಬರುತ್ತದೆ. ‘ಚಿತ್ರೀಕರಣವಿದ್ದಾಗ, ಕೆಲವೊಮ್ಮೆ ವರ್ಕೌಟ್ ಮಾಡುವುದಕ್ಕೆ ಮತ್ತು ಜಿಮ್‌ಗೆ ಹೋಗುವುದಕ್ಕೆ ಹೆಚ್ಚು ಸಮಯ ಸಿಗುವುದಿಲ್ಲ. ಚಿತ್ರೀಕರಣವಿಲ್ಲದ ಸಮಯದಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ಜಿಮ್ ಇಲ್ಲದಿದ್ದರೆ ಅಮ್ಮ, ಅಜ್ಜಿ, ತಂಗಿಯ ಜೊತೆಗೆ ಹೆಚ್ಚು ಸಮಯ ಕಳೆಯುತ್ತೇನೆ. ಇಲ್ಲವಾದರೆ ಸಿನಿಮಾಗಳನ್ನು ನೋಡುತ್ತಿದ್ದೇನೆ. ಪೇಂಟಿAಗ್ ಅಂದರೆ ಇಷ್ಟ. ಓದುವುದು, ಟ್ರಾವಲಿಂಗ್ ಮಾಡುವುದು ನನ್ನ ಇನ್ನಿತರ ಹವ್ಯಾಸಗಳು. ಕೆಲಸ ಮಾಡುವಾಗಲೂ ಸಾಕಷ್ಟು ಟ್ರಾವಲ್ ಮಾಡಬೇಕಾಗುತ್ತದೆ. ನನಗೆ ಯಾವತ್ತೂ ಕಾಶ್ಮೀರ ಬಹಳ ವಿಶೇಷವಾದ ಸ್ಥಳ. ಅಲ್ಲಿ ಯಾವಾಗಲೂ ಹೋಗುತ್ತಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

>>>>>>>>> 

ಲಂಡನ್‌ನಲ್ಲಿ ಅಭಿನಯ ತರಬೇತಿ

ರುಕ್ಮಿಣಿಗೆ ನಟಿಯಾಗಬೇಕು ಎಂದನಿಸಿದ್ದು ಕಾಲೇಜಿನಲ್ಲಾದರೂ, ಅವರದ್ದು ಕಲೆಯ ಕುಟುಂಬವAತೆ. ‘ನಮ್ಮ ಅಜ್ಜಿ ಭರತನಾಟ್ಯಂ ನೃತ್ಯ ಕಲಾವಿದೆ. ನಮ್ಮ ತಾಯಿ ಸಹ ಭರತನಾಟ್ಯ ಹೇಳಿಕೊಡುತ್ತಾರೆ. ಹಾಗಾಗಿ, ಮನೆಯಲ್ಲಿ ಕಲೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ನಾನು ಸಹ ಬಾಲ್ಯದಿಂದ ನೃತ್ಯ ಕಲಿಯುತ್ತಲೇ ಬಂದೆ. ಕಾಲೇಜಿನಲ್ಲಿರುವಾಗ ಅಭಿನಯದ ಬಗ್ಗೆ ಆಸಕ್ತಿ ಬಂತು. ಇದರಲ್ಲೇ ನಾನು ಮುಂದುವರೆಯಬೇಕು ಎಂದನಿಸಿತು’ ಎನ್ನುತ್ತಾರೆ.

>>>>>>>>> 

ರುಕ್ಮಿಣಿ ಇಂಗ್ಲೆಂಡ್‌ನಲ್ಲಿ ನಟನೆ ಕಲಿತಿದ್ದು. ಅಲ್ಲಿನ ರಾಯಲ್ ಅಕಾಡಮಿ ಆಫ್ ಡ್ರಮಾಟಿಕ್ ಆರ್ಟ್ಸ ಶಾಲೆಯಲ್ಲಿ ಅವರು ನಟನೆಯಲ್ಲಿ ತರಬೇತಿ ಪಡೆದು ಬಂದವರು. ‘ಅಲ್ಲಿ ಅವರದ್ದೇ ಬೇರೆ ವಿಧಾನವಿದೆ. ಡ್ರಾಮಾ ಸ್ಕೂಲ್‌ನಲ್ಲಿ ಓದುವಾಗ, ಮೂರನೇ ವರ್ಷದಲ್ಲಿ 10 ನಾಟಕಗಳನ್ನು ಮಾಡಬೇಕಿತ್ತು. ಅಲ್ಲಿ ಗಮನ ಸೆಳೆದರೆ, ಏಜೆಂಟ್‌ಗಳು ನಮಗೆ ಕೆಲಸ ಹುಡುಕಿ ಕೊಡುತ್ತಾರೆ. ಭಾರತದಲ್ಲಿ ಆ ತರಹದ ವ್ಯವಸ್ಥೆ ಇಲ್ಲ. ಇಲ್ಲಿ ಬಂದ ಮೇಲೆ ಒಂದು ಚಿತ್ರಕ್ಕೆ ಆಯ್ಕೆಯಾಗುವ ಪ್ರಕ್ರಿಯೆ ಹೇಗಾಗುತ್ತದೆ, ಆಡಿಷನ್ಗಳು ಹೇಗಾಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಯಿತು. ಆ ನಂತರ ‘ಬೀರ್ಬಲ್’ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು’ ಎನ್ನುತ್ತಾರೆ.

>>>>>>>>> 

ಮೌನ ಮತ್ತು ಟೀಂ ವರ್ಕ್ ಬಗ್ಗೆ ಕಲಿತೆ …

ಪ್ರತೀ ಚಿತ್ರದಲ್ಲೂ ಒಂದೊಂದು ವಿಷಯ ಕಲಿಯುವುದಕ್ಕೆ ಸಿಗುತ್ತದೆ ಎಂಬುದನ್ನು ರುಕ್ಮಿಣಿ ಬಲವಾಗಿ ನಂಬಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ಇದುವರೆಗೂ 12 ಚಿತ್ರಗಳಲ್ಲಿ ನಟಿಸಿದ್ದೇನೆ ಮತ್ತು ಬೇರೆಬೇರೆ ಚಿತ್ರಗಳಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅದರಲ್ಲಿ ಹೆಚ್ಚು ಸಂಭಾಷಣೆಗಳಿವೆ. ಅದರಲ್ಲಿ ಜಾಸ್ತಿ ಭಾವನೆಗಳಿವೆ. ಸಾಕಷ್ಟು ಕ್ಲೋಸ್-ಅಪ್ ಶಾಟ್‌ಗಳಿವೆ. ಆ ಚಿತ್ರದಲ್ಲಿ ಮೌನದ ಶಕ್ತಿಯ ಬಗ್ಗೆ ತಿಳಿದುಕೊಂಡೆ. ರಕ್ಷಿತ್ ಜೊತೆಗೆ ಕೆಲಸ ಮಾಡುವಾಗ, ಅವರ ಮೌನದಲ್ಲೊಂದು ಪವರ್ ಇರುತ್ತದೆ. ಅಲ್ಲಿ ನಾನು ಮೌನ ಎಷ್ಟು ಮುಖ್ಯ ಎಂಬುದನ್ನು ಕಲಿತೆ. ಇನ್ನು, ‘ಕಾಂತಾರ – ಚಾಪ್ಟರ್ ೧’ ಚಿತ್ರದಿಂದ ಟೀಮ್‌ವರ್ಕ್ನ ಮಹತ್ವ ಅರಿತುಕೊಂಡೆ. ಇಂಥದ್ದೊಂದು ಚಿತ್ರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಎಷ್ಟು ಜನ ಸೇರಿ ಒಂದು ಕಥೆಯನ್ನು ಕಟ್ಟುವಲ್ಲಿ ಸಹಾಯ ಮಾಡುತ್ತಾರೆ ಎಂಬುದನ್ನು ಕಲಿತೆ. ಇನ್ನು, ರಿಷಭ್ ಶೆಟ್ಟಿ ಅವರಿಂದಲೇ ಹಲವು ವಿಷಯಗಳನ್ನು ಕಲಿತೆ. ಅವರು ನಮ್ಮನ್ನು ಲೀಡ್ ಮಾಡಿದ ರೀತಿ ಅದ್ಭುತವಾಗಿತ್ತು. ಭೈರತಿ ರಣಗಲ್ ಚಿತ್ರದಲ್ಲಿ ಶಿವಣ್ಣ ಅವರ ಎನರ್ಜಿ, ಅವರ ಅಭಿನಯದಿಂದ ಸಾಕಷ್ಟು ಕಲಿಯುವುದಕ್ಕೆ ಸಿಕ್ಕಿತು’ ಎನ್ನುತ್ತಾರೆ.

Spread the love
Translate »
Right Ad