ಗೋಲ್ಡನ್ ಸ್ಟಾರ್’ ಗಣೇಶ್ ನಾಯಕತ್ವದ ‘ಗಾಳಿಪಟ 2’ ಸಿನಿಮಾ ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಕೆವಿಎನ್ ಪಾಲಿಗೆ ‘ಗಾಳಿಪಟ’ ಹಾರಿಸುವ ಕೆಲಸ ಸಿಕ್ಕಿದೆ. ಅರ್ಥಾತ್, ‘ಗಾಳಿಪಟ 2’ ಚಿತ್ರವನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ವಿತರಣೆ ಮಾಡುವುದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ರೆಡಿ ಆಗಿದ್ದು“ಗಾಳಿ ಪಟ-2′ ಚಿತ್ರದ ವಿತರಣೆಯ ಹಕ್ಕನ್ನು “ಕೆವಿಎನ್’ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ. “ಆರ್‌ಆರ್‌ಆರ್’ ಸಿನಿಮಾ ನಂತರ “ಕೆವಿಎನ್’ ವಿತರಣೆ ಮಾಡುತ್ತಿರುವ ಸಿನಿಮಾ “ಗಾಳಿಪಟ-2′. ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಮೂಲಕ “ಗಾಳಿಪಟ-2′ ಚಿತ್ರ ನಿರ್ಮಿಸಿದ್ದಾರೆ.
ಈ ಹಿಂದೆ ತೆರೆಕಂಡ ‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಸಖತ್’ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕೆವಿಎನ್ ಪ್ರೊಡಕ್ಷನ್ಸ್ ಆನಂತರ ‘ಬೈ ಟು ಲವ್’ ಚಿತ್ರಕ್ಕೂ ಹಣ ಹಾಕಿತ್ತು. ಸದ್ಯ ‘ಜೋಗಿ’ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನ ಹೊಸ ಸಿನಿಮಾಕ್ಕೂ ಹಣ ಹಾಕಿದ್ದು, ಶೀಘ್ರದಲ್ಲೇ ಆ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಮೈಸೂರಿನಲ್ಲಿ ಅದ್ದೂರಿಯಾಗಿ ಮುಹೂರ್ತ ನೆರವೇರಿತ್ತು. ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ಚಿತ್ರದ ವಿತರಣೆಯನ್ನು ಮಾಡಿ ಸದ್ದು ಮಾಡಿದ್ದ ಕೆವಿಎನ್ ಪ್ರೊಡಕ್ಷನ್ಸ್ ಈಗ ‘ಗಾಳಿಪಟ 2’ ಚಿತ್ರವನ್ನು ಕೈಗೆತ್ತಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಬ್ಯುಸಿ ಆಗಿದೆ.
‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಪವನ್ ಕುಮಾರ್, ದಿಗಂತ್ ಕೂಡ ಇದ್ದಾರೆ. ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ.