Sandalwood Leading OnlineMedia

ಸಖತಾಗಿದೆ “ತ್ರಿಬಲ್ ರೈಡಿಂಗ್” ಹಾಡು.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ತ್ರಿಬಲ್ ರೈಡಿಂಗ್” ಚಿತ್ರದ “ಯಟ್ಟಾ ಯಟ್ಟಾ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಹಾಡಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
 
ನಾನು “ಮುಂಗಾರು‌ ಮಳೆ” ಸಮಯದಿಂದ ಗಣೇಶ್ ಅವರನ್ನು ಬಲ್ಲೆ. ಆಗಿನಿಂದಲೂ ನನಗೆ ಅವರಿಗೊಂದು ಸಿನಿಮಾ ಮಾಡುವ ಆಸೆ. ಕಾಲ ಈಗ ಕೂಡಿ ಬಂದಿದೆ. “ತ್ರಿಬಲ್ ರೈಡಿಂಗ್” ಸ್ವಮೇಕ್ ಚಿತ್ರ. ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಎಲ್ಲವೂ ಇದೆ. ನಾಲ್ಕು ಹಾಡುಗಳಿದೆ‌. ಆದರಲ್ಲಿ ಒಂದು ಹಾಡು ಇಂದು ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಸಾಯಿಕಾರ್ತಿಕ್ ಈ ಸಂಗೀತ ನಿರ್ದೇಶಕರು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಸುಮಧುರವಾಗಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಸಿನಿಮಾ‌ ಮಾಡಿದ್ದೇವೆ. ಅದಕ್ಕೆ ಕಾರಣರಾದ ನಿರ್ಮಾಪಕ ರಾಮ್ ಗೋಪಾಲ್ ಅವರಿಗೆ ಧನ್ಯವಾದ. ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ.
 
 
ನಿರ್ದೇಶಕ ಮಹೇಶ್ ನನಗೆ “ಮುಂಗಾರು ಮಳೆ” ಯಿಂದ ಪರಿಚಯ. ಆ ಚಿತ್ರಕ್ಕೆ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ನನಗೆ ಒಂದು ಕಥೆ ಮಾಡುತ್ತೀನಿ ಎಂದಿದ್ದರು‌. ಹದಿನಾಲ್ಕು ವರ್ಷಗಳ ನಂತರ ಕಥೆ ಮಾಡಿಕೊಂಡು ಬಂದರು. ಒಳ್ಳೆಯ ಪಾತ್ರ ಕೊಟ್ಟಿರುವುದಕ್ಕೆ ಧನ್ಯವಾದ. ಮೊದಲ ಬಾರಿ ನಿರ್ಮಾಣ ಮಾಡಿರುವ ರಾಮ್ ಗೋಪಾಲ್ ಅವರಿಗೆ ಒಳ್ಳೆಯದಾಗಲಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಸಾಕಷ್ಟು ಟ್ವಿಸ್ಟು, ಟರ್ನ್ ಗಳಿರುತ್ತವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಚಿತ್ರದ ಕೊನೆಯ ಇಪ್ಪತ್ತು ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.
 
 
 
“ತ್ರಿಬಲ್ ರೈಡಿಂಗ್” ಹೋದರೆ ಏನೆಲ್ಲಾ ತೊಂದರೆ ಆಗಬಹುದು ಎನ್ನುವುದನ್ನ ಇದರಲ್ಲಿ ನೋಡಬಹುದು. ಈ ಚಿತ್ರದಲ್ಲಿ ಮೂವರು ನಾಯಕಿಯರು. ಅದಿತಿ ಪ್ರಭುದೇವ, ಮೇಘ ಶೆಟ್ಟಿ ಹಾಗೂ ರಚನಾ ಇಂದರ್. ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ. ನೋಡಿ ಹರಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
 
ನನ್ನದು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ. ಗಣೇಶ್ ಸರ್ ಜೊತೆ ನನ್ನ ಮೊದಲ ಸಿನಿಮಾ. ಹಾಡು ಹಾಗೂ ಸಿನಿಮಾ ಎರಡು ಚೆನ್ನಾಗಿದೆ ಎಂದು ಮೇಘ ಶೆಟ್ಟಿ ತಿಳಿಸಿದರು.
“ಲವ್ ಮಾಕ್ಟೇಲ್” ನಂತರ ನಾನು‌ ಒಪ್ಪಿಕೊಂಡ ಚಿತ್ರ ಇದು. ಹಠಮಾರಿ ಹೆಣ್ಣಿನ ಪಾತ್ರ ನನ್ನದು. ಏನಾದರೂ ಬೇಕೆಂದರೆ ಅದು ಬೇಕು ಎಂದು ಪಡೆದುಕೊಳ್ಳುತ್ತೇನೆ. ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ರಚನಾ ಇಂದರ್.
 
 
 ಗಣೇಶ್ ಸರ್ ಗೆ ಈ ಹಿಂದೆ ಎರಡು ಹಾಡು ಹಾಡಿದೆ. ಇದು ಮೂರನೇ ಹಾಡು. ಸಾಯಿಕಾರ್ತಿಕ್ ತುಂಬಾ ಚೆನ್ನಾಗಿ ಸಂಗೀತ ನೀಡಿದ್ದಾರೆ. ಹಾಡು ಹಾಗೂ ಸಿನಿಮಾ ಎರಡೂ ಹಿಟ್ ಆಗಲಿ ಎಂದು ಚಂದನ್ ಶೆಟ್ಟಿ ಹಾರೈಸಿದರು. ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ.
ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ ಸಾಯಿಕಾರ್ತಿಕ್ ಮಾತನಾಡಿದರು.
ಚಿತ್ರತಂಡದ ಅನೇಕ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

Share this post:

Related Posts

To Subscribe to our News Letter.

Translate »