Sandalwood Leading OnlineMedia

ಹೊಚ್ಚ ಹೊಸದಾಗಿ ಬರಲಿದೆ ಜಗ ಮೆಚ್ಚಿದ ಚಿತ್ರ ‘ಘಟಶ್ರಾದ್ಧ’

ಕನ್ನಡ ವಾಕ್ಷಿತ್ರ ಪರಂಪರೆಗೆ ತೊಂಬತ್ತು ವರ್ಷಗಳು ತುಂಬಿರುವ ಮಾರ್ಚ್ ತಿಂಗಳು ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ ಪಾಲಿಗೆ ಹೆಮ್ಮೆಯ ಘಳಿಗೆ. ಏಕೆಂದರೆ ‘ಘಟಶ್ರಾದ್ಧ’ ಸಿನಿಮಾದ ಹೊಸ ಪ್ರಿಂಟ್ ಬರಲಿರುವುದು ಹಾಗೂ ಗಿರೀಶರ ಸಿನಿಮಾಗಳ ಕುರಿತ ಪುಸ್ತಕ ಬಿಡುಗಡೆಯಾಗುತ್ತಿರುವುದು.ಗಿರೀಶರ ನಿರ್ದೇಶನದ ಚೊಚ್ಚಿಲ ಸಿನಿಮಾ ‘ಘಟಶ್ರಾದ್ಧ’ (1978) ಹಲವು ಹಿರಿಮೆಗಳ ಪ್ರಯೋಗ, ಯು.ಆರ್. ಅನಂತಮೂರ್ತಿಯವರ ಕಥೆ ಆಧರಿಸಿದ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಮೂರನೇ ‘ಸ್ವರ್ಣಕಮಲ’ ದೊರಕಿಸಿ ಕೊಟ್ಟ ಕಲಾಕೃತಿ. ಕನ್ನಡ ಸಿನಿಮಾರಂಗದ ತೊಂಬತ್ತು ವರ್ಷಗಳ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ರಾಷ್ಟ್ರಪತಿಗಳ ‘ಸ್ವರ್ಣಕಮಲ’ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳೇ ಆಗಿವೆ. ಆ ಸರಣಿಯಲ್ಲಿ ಮೊದಲ ಸಿನಿಮಾ ‘ಘಟಶ್ರಾದ್ಧ’.

ಇದನ್ನೂ ಓದಿ ಮಾರ್ಚ್ 22 ರಂದು ತೆರೆಗೆ ಬರಲಿದೆ ಬಹು ನಿರೀಕ್ಷಿತ “ಅವತಾರ ಪುರುಷ 2”

ಭಾರತೀಯ ಸಿನಿಮಾದ ಶತಮಾನೋತ್ಸವ ಸಂದರ್ಭ, ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ಈ ಚಿತ್ರ ಅನೇಕ ಅಂತರರಾಷ್ಟ್ರೀಯ ಮನ್ನಣೆಗಳಿಗೂ ಪಾತ್ರವಾಗಿತ್ತು. ಇದೀಗ ‘ಘಟಶ್ರಾದ್ಧ’ಕ್ಕೆ ಹೊಸ ಸ್ಪರ್ಶ.ಹಾಲಿವುಡ್ ಚಿತ್ರರಂಗದ ಮಾರ್ಟಿನ್ ಸ್ಟಾರ್ಸೆಸಿ ಅವರ ಸಿನಿಮಾ ಫೌಂಡೇಷನ್ ಮತ್ತು ಶಿವೇಂದ್ರ ಸಿಂಗ್ ಅವರ ಫಿಲ್ಡ್ ಹೆರಿಟೇಜ್ ಫೌಂಡೇಷನ್ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ಗೆ ಹಾಲಿವುಡ್ ನಿರ್ದೇಶಕ ಜಾರ್ಜ್ ಲ್ಯೂಕಾಸ್ ಅವರ ಹಾಬ್ರನ್-ಲ್ಯೂಕಾಸ್ ಫೌಂಡೇಷನ್ ಕೂಡ ಕೈಜೋಡಿಸಿದೆ.

ಜಾಗತಿಕ ಸಿನಿಮಾರಂಗದಲ್ಲಿನ ಶ್ರೇಷ್ಠ ಚಿತ್ರಗಳನ್ನು ಗುರ್ತಿಸಿ, ಅವುಗಳನ್ನು ತಾಂತ್ರಿಕವಾಗಿ ಉನ್ನತೀಕರಿಸುವುದು ಹಾಗೂ ಸಂರಕ್ಷಿಸುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯಲ್ಲಿ ತೊಡಗಿರುವ ಮಾರ್ಟಿನ್ ಸ್ಕಾರ್ಸೆಸಿಯವರ ಸಿನಿಮಾ ಫೌಂಡೇಷನ್, ಭಾರತದಿಂದ ಆಯ್ಕೆ ಮಾಡಿರುವ ಮೂರನೇ ಚಿತ್ರ ‘ಘಟಶ್ರಾದ್ಧ’, ಅರವಿಂದನ್ ನಿರ್ದೇಶನದ ಮಲೆಯಾಳಂ ಚಿತ್ರ ‘ತಂಪ್’ ಹಾಗೂ ಅರಿಭಾಮ್ ಶ್ಯಾಂ ಶರ್ಮ ಅವರ ಮಣಿಪುರಿ ಭಾಷೆಯ ‘ಇಶಾನು’ ಉಳಿದೆರಡು ಸಿನಿಮಾಗಳು.

ಗಿರೀಶ ಕಾಸರವಳ್ಳಿಯವರು ತಾವು ಬಳಸಿದ ಚಿತ್ರ ಸಾಮಗ್ರಿಗಳನ್ನು ಫೌಂಡೇಷನ್‌ಗೆ ನೀಡಿದ್ದು, ಸಂಸ್ಥೆಯು, ಸಿನಿಮಾದ ಪ್ರತಿ ಅಂಶವನ್ನು ಎಚ್ಚರದಿಂದ ಸಂರಕ್ಷಿಸುವ ಹೊಣೆ ಹೊತ್ತಿದೆ. ಸುಮಾರು 8 ತಿಂಗಳ ಕಾಲ ಈ ಸಿನಿಮಾ ಹೊಸ ಪ್ರಿಂಟ್ನ ಕಾರ್ಯ ನಡೆಯಲಿದೆ.

‘ಘಟಶ್ರಾದ್ಧ’ದ ಹೊಸ ಪ್ರಿಂಟ್ ಸುದ್ದಿಯ ಜೊತೆಗೆ ಕಾಸರವಳ್ಳಿಯವರ ಹೊಸ ಪುಸ್ತಕದ ಸಮಾಚಾರ ಪ್ರಕಟಗೊಂಡಿದೆ. ಗಿರೀಶರು ತಮ್ಮ ಸಿನಿಮಾಗಳನ್ನು ನಿರ್ದೇಶಕನ ಕಣ್ಣೊಟದಲ್ಲಿ ವಿವರಿಸುವ ಪ್ರಶೋತ್ತರ ಮಾದರಿಯ ಈ ಪುಸ್ತಕ ಮಾರ್ಚ್ 17ರಂದು ಬಿಡುಗಡೆಯಾಗಲಿದೆ. ತಮ್ಮ ಎಲ್ಲ ಸಿನಿಮಾಗಳಿಗೆ ಸಂಬಂಧಿಸಿದಂತೆ, ಗಿರೀಶರು ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಇಂಥ ಪುಸ್ತಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಕಟಗೊಳ್ಳುತ್ತಿದೆ. ಇದು ಕನ್ನಡಿಗರ ಹೆಮ್ಮೆ ಅಲ್ಲವೇ?

Share this post:

Related Posts

To Subscribe to our News Letter.

Translate »