ಟಾಲಿವುಡ್ ಸೆನ್ಸೇಷನಲ್ ವಿಜಯ್ ದೇವರಕೊಂಡ ಸಿನಿಕರಿಯರ್ ಗೆ ಬ್ರೇಕ್ ಕೊಟ್ಟ ಸಿನಿಮಾ ಗೀತಾ ಗೋವಿಂದಂ. ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ಮಾಡಿತ್ತು. 100 ಕೋಟಿ ಕ್ಲಬ್ ಬಾಚಿದ್ದ ಗೀತಾ ಗೋವಿಂದಂ ಸಿನಿಮಾಗೆ ಸೌತ್ ಸಿನಿಜಗತ್ತು ಜೈಕಾರ ಹಾಕಿತ್ತು. ಈ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಈ ಚಿತ್ರತಂಡ ಮಗದೊಮ್ಮೆ ಕೈ ಜೋಡಿಸುವ ಗುಸುಗುಸು ಕೇಳಿಬಂದಿತ್ತು. ಆದ್ರೆ ಅದ್ಯಾಕೋ ಸಮಯವೇ ಕೂಡಿ ಬಂದಿರಲಿಲ್ಲ. ಬರೋಬ್ಬರಿ ಆರು ವರ್ಷದ ನಂತರ ಗೀತಾ ಗೋವಿಂದಂ ಚಿತ್ರತಂಡ ಸಂಗಮವಾಗ್ತಿದೆ. ಇಲ್ಲಿ ಹೀರೋ ಹಾಗೂ ಡೈರೆಕ್ಟರ್ ಅವ್ರೇ. ಆದರೆ ನಾಯಕಿ ಬೇರೆ.
ಇದನ್ನೂ ಓದಿ: ‘ಕಾಂತಾರ 2’ ಚಿತ್ರಕ್ಕೆ ಮುಹೂರ್ತ ದಿನಾಂಕ, ಸ್ಥಳ ಫಿಕ್ಸ್!
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದು, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೈದ್ರಾಬಾದ್ ನಲ್ಲಿಂದು ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲ್ಯಾಪ್ ಮಾಡಿದ್ರೆ, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದರು, ಜನಪ್ರಿಯ ಹಣಕಾಸುದಾರ ಸತ್ತಿ ರಂಗಯ್ಯ ಕ್ಯಾಮೆರಾಗೆ ಚಾಲನೆ ನೀಡಿದರು.
ಇದನ್ನೂ ಓದಿ: ಸ್ಯಾಂಡಲ್ವುಡ್ನತ್ತ ಕಿಚ್ಚನ ಕುಟುಂಬದ ಕುಡಿ; ಸಂಚಿತ್ ಸಂಚಲನ!
ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ಸೀತಾರಾಮಂ ಸಿನಿಮಾ ಮೂಲಕ ಸೌತ್ ಸಿನಿಪ್ರಿಯರಿಗೆ ಪರಿಚಿತರಾಗಿರುವ ಮೃಣಾಲ್ ಠಕೂರ್ ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ದಿಲ್ ರಾಜು ಹಾಗೂ ಶಿರೀಶ್ ಜೊತೆ ಕೈ ಜೋಡಿಸ್ತಿದ್ದು, ಶ್ರೀ ವೆಂಕಟೇಶ್ವರ್ ಕ್ರಿಯೇಷನ್ ನ 54ನೇ ಸಿನಿಮಾ ಇದಾಗಿದೆ. ಅದ್ಧೂರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಲಾಗ್ತಿದ್ದು, ಉಳಿದ ಪಾತ್ರವರ್ಗದ ಬಗ್ಗೆ ಆದಷ್ಟು ಬೇಗ ಚಿತ್ರತಂಡ ಮಾಹಿತಿ ನೀಡಲಿದೆ. ಕೆಯು ಮೋಹನನ್ ಛಾಯಾಗ್ರಹಣ, ಗೋಪಿಸುಂದರ್ ಸಂಗೀತ, ಎಎಸ್ ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಸಿನಿಮಾಕ್ಕಿದೆ.