Sandalwood Leading OnlineMedia

 GOLDEN MOVIE… ಗಾಳಿ ಗೋಪುರ 

ಗಾಳಿ ಗೋಪುರ ೧೯೬೨ ರಲ್ಲಿ ತೆರೆಕಂಡ ಕಪ್ಪು ಬಿಳುಪು ಸಾಂಸಾರಿಕ ಚಿತ್ರ. ಪದ್ಮಿನಿ ಪಿಕ್ರ‍್ಸ್ ಲಾಂಛನದಲ್ಲಿ ಬಿ.ಆರ್.ಪಂತುಲು ರವರ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಎಸ್.ಆರ್.ಪುಟ್ಟಣ್ಣ ಕಣಗಾಲ್ ಮತ್ತು ಪಿ.ಎಲ್.ಸೆಲ್ವರಾಜ್‌ರವರು ಸಹ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಎಂ.ಎಸ್.ಸೋಲಮಲೈ ರವರು ಕಥೆ ಬರೆದಿದ್ದರೆ ಚಿತ್ರಕಥೆಯನ್ನು ಪದ್ಮಿನಿ ಪಿಕ್ಚರ್ ಸಾಹಿತ್ಯ ಶಾಖೆಯಿಂದ ರಚಿತವಾಗಿತ್ತು. ಚಿತ್ರದ ಸಂಭಾಷಣೆ ಮತ್ತು ಗೀತೆಗಳನ್ನು ಜಿ.ವಿ.ಅಯ್ಯರ್, ವಿಜಯನಾರಸಿಂಹ ರವರು ಬರೆದಿದ್ದರು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರು. ಚಿತ್ರಕ್ಕೆ ಘಂಟಸಾಲ, ಪಿ.ಬಿ.ಶ್ರೀನಿವಾಸ್, ಮಾಧವಪೆದ್ದಿ ಪಿ.ಸುಶೀಲಾ, ರೇಣುಕಾರವರ ಗಾಯನವಿದೆ. ಚಿತ್ರದ ತಾರಾಗಣದಲ್ಲಿ, ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಅಶ್ವಥ್, ಆರ್. ನಾಗೇಂದ್ರ ರಾವ್, ಉದಯ್ ಕುಮಾರ್,ಎಂ ವಿ ರಾಮಯ್ಯ, ಲೀಲಾವತಿ. ಎಂ.ಎನ್. ಲಕ್ಷ್ಮೀದೇವಿ , ಚಿದೋಡಿ ಲೀಲಾ ರಮಾದೇವಿ ಜಯಮ್ಮ, ಡಿಕ್ಕಿ ಮಾಧವರಾವ್ ಮುಂತಾದ ಕಲಾವಿದರು ಅಭಿನಯಿಸಿದ್ದರು.  
 
ಗೋವಿಂದಯ್ಯ ಮತ್ತು ರಂಗಣ್ಣ ಸ್ನೇಹಿತರು
 
ರಂಗಣ್ಣನಿಗೆ ಹೆಂಡತಿ ಇರಲಿಲ್ಲ, ಒಂದು ಗಂಡು ಮಗುವಿತ್ತು. ಗೋವಿಂದಯ್ಯನಿಗೆ ಮಕ್ಕಳಿರಲಿಲ್ಲ. ಒಮ್ಮೆ ರಂಗಣ್ಣ ತೀವ್ರ ಅನಾರೋಗ್ಯದಿಂದಾಗಿ ನರ್ಸಿಂಗ್ ಹೋಂಗೆ ಸೇರುತ್ತಾನೆ. ತನ್ನ ಏಕೈಕ ಮಗುವನ್ನು ಗೋವಿಂದಯ್ಯನ ಉಡಿಗಿರಿಸಿ ಅದರ ಪಾಲನೆ ಪೋಷಣೆಗಾಗಿ ಅಪಾರ ಹಣಕೊಡುತ್ತಾನೆ. ಗೋವಿಂದಯ್ಯ ಅಪಾರ ದುರಾಸೆಯ ಮನುಷ್ಯ ಸ್ನೇಹಿತನ ಹಣದೊಂದಿಗೆ ಊರನ್ನೇ ಬಿಡುತ್ತಾನೆ. ಪರವೂರಿನಲ್ಲಿ ಜಮೀನು, ಮನೆ ಕೊಂಡು ಅಭಿವೃದ್ಧಿ ಹೊಂದುತ್ತಾನೆ. ನಂತರ ಅವನಿಗೇ ಒಂದು ಗಂಡು ಮಗುವಾಗುತ್ತದೆ. ಇತ್ತ ರಂಗಣ್ಣನಿಗೆ ಖಾಯಿಲೆ ವಾಸಿಯಾಗಿ ಹಳ್ಳಿಗೆ ಹಿಂದಿರುಗುತ್ತಾನೆ. ಅಲ್ಲಿ ಗೋವಿಂದಯ್ಯ ತನ್ನ ಮಗುವಿನೊಂದಿಗೆ ಹಳ್ಳಿಯನ್ನು ಬಿಟ್ಟು ಹೋಗಿರುವ ವಿಷಯ ತಿಳಿಯುತ್ತದೆ. ಚಿಂತಾಕ್ರಾAತನಾಗಿ ಗೆಳೆಯನನ್ನು, ಮಗನನ್ನು ಹುಡುಕಲು ಹೊರಡುತ್ತಾನೆ.
 
ಅತ್ತಾ ಗೋವಿಂದಯ್ಯ ಸಾಕುಮಗ ಕೃಷ್ಣನನ್ನು (ರಾಜಕುಮಾರ್) ದುಡಿಮೆಗೆ ಹಚ್ಚಿ, ಸ್ವಂತಮಗನನ್ನು ಚೆನ್ನಾಗಿ ಓದಿಸಿರುತ್ತಾನೆ. ನಾಗಣ್ಣನೆಂಬುವವನು ಅದೇ ಗ್ರಾಮದ ಮತ್ತೊಬ್ಬ ರೈತ. ಇವನ ಮಗಳು ಲಕ್ಷ್ಮಿ, ಇವಳಿಗೂ ಕೃಷ್ಣನಿಗೂ ಪ್ರೇಮ, ಆದರೆ ಲಕ್ಷ್ಮಿಯನ್ನು ತನ್ನ ಸ್ವಂತಮಗ ಮೋಹನನಿಗೆ ಮದುವೆ ಮಾಡಿಕೊಳ್ಳಲು ಗೋವಿಂದಯ್ಯ ನಾಗಣ್ಣನ ಜೊತೆ ಮಾತುಕತೆ ನಡೆಸಿರುತ್ತಾನೆ. ಆದರೆ ಪಟ್ಟಣದಲ್ಲಿ ಓದುತ್ತಿದ್ದ ಮೋಹನನಿಗೆ ಜಮೀನುದಾರ ಕಪನಿಪತಯ್ಯನವರ ಏಕಮಾತ್ರ ಪುತ್ರಿ ನಿಮ್ಮುವಿನ ಮೇಲೆ ಕಣ್ಣು . ಆದರೆ ಅವನಿಗೆ ತನ್ನ ತಂದೆ ದುಡಿಯುತ್ತಿರುವುದು ಕಪನಿಪತಯ್ಯನವರ ಜಮೀನಿನಲ್ಲಿ ಎಂಬುದು ಗೊತ್ತಿರುವುದಿಲ್ಲ. ತಾನೊಬ್ಬ ಶ್ರೀಮಂತನ ಮಗನೆಂದು ಕಪನಿಪತಯ್ಯನವರನ್ನು ನಂಬಿಸಿರುತ್ತಾನೆ. ಕೃಷ್ಣ ಮತ್ತು ಲಕ್ಷ್ಮಿ ನಡುವಿನ ಪ್ರೇಮದ ಬಗ್ಗೆ ತಿಳಿದ ಗೋವಿಂದಯ್ಯ  ಕೃಷ್ಣನಿರುವವರೆಗೂ ತನ್ನ ಮಗ ಮೋಹನನನ್ನು ಲಕ್ಷ್ಮಿ ಒಪ್ಪಲಾರಳೆಂದು ಭಾವಿಸಿ ಕೃಷ್ಣನನ್ನು ಮನೆಯಿಂದ ಓಡಿಸಿಬಿಡುತ್ತಾನೆ. ನೆಲೆ ಕಳೆದುಕೊಂಡ ಕೃಷ್ಣ ನಗರಕ್ಕೆ ಹೋಗಿ ಕೂಲಿ ಕೆಲಸಕ್ಕೆ ತೊಡಗುತ್ತಾನೆ. ಒಮ್ಮೆ ಮೋಹನ ತಂದೆಯನ್ನು ನೋಡಲು ಊರಿಗೆ ಹೋಗಿದ್ದಾಗ ಕಪನಿಪತಯ್ಯನವರೂ ಅಲ್ಲಿಗೆ ಬಂದಿರುತ್ತಾರೆ, ಜಮೀನುದಾರರನ್ನು ಕಾಣಬಂದ ಗೋವಿಂದಯ್ಯ ಅವರ ಮನೆಯಲ್ಲಿ ತನ್ನ ಮಗ ಮೋಹನನನ್ನು ಕಂಡು ಚಕಿತನಾಗುತ್ತಾನೆ, ಜಮೀನುದಾರರು ಅವನನ್ನು ಬಹುವಾಗಿ ಮೆಚ್ಚಿರುವುದನ್ನು, ಅಲ್ಲದೆ ಅವರನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಳ್ಳುವ ಅವರ ಇಚ್ಛೆಯನ್ನೂ ಗಮನಿಸುತ್ತಾನೆ. ಅಷ್ಟೇನು ಸ್ಥಿತಿವಂತನಲ್ಲದ ನಾಗಣ್ಣನ ಸಂಬಂಧಕ್ಕಿಂತಲೂ ಕಪನಿಪತಯ್ಯನವರ ಸಂಬಂಧ ಹೆಚ್ಚು ಲಾಭದಾಯಕವಾಗಿ ಗೋವಿಂದಯ್ಯನಿಗೆ ಕಂಡುಬರುತ್ತದೆ. ಉಪಾಯವಾಗಿ ಕೃಷ್ಣನನ್ನು ಹಡುಕಲು ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳಿಸಿ, ನಾಗಣ್ಣನ ಕಣ್ಣು ತಪ್ಪಿಸಿ ಮೋಹನನ ವಿವಾಹವನ್ನು ನಿಮ್ಮುವಿನ ಜೊತೆಗೆ ನಡೆಸಿಯೇ ಬಿಡುತ್ತಾನೆ! ಜೊತೆಗೆ ಹಳ್ಳಿಯಲ್ಲಿನ ತನ್ನ ಅಸ್ತಿಯನ್ನೆಲ್ಲ ಮಾರಿ ಮಗನೊಂದಿಗೆ ಇರಲು ನಿರ್ಧರಿಸುತ್ತಾನೆ.
 
ಒಂದು ದಿನ ಕೃಷ್ಣ ಆಕಸ್ಮಿಕವಾಗಿ ತನ್ನ ಹೆತ್ತ ತಂದೆ ರಂಗಣ್ಣನನ್ನು ನೋಡುತ್ತಾನೆ. ಆದರೆ ಗುರುತಿಸಲಾಗುವುದಿಲ್ಲ. ರಂಗಣ್ಣನ ಪರ್ಸ್ನ್ನು  ಯಾರೋ ಕಿಡಿಗೇಡಿ ಕದ್ದೊಯ್ದಾಗ, ಕೃಷ್ಣ ಅವನ ಜೊತೆ ಬಡಿದಾಡಿ ಆ ಪರ್ಸನ್ನು ಮರಳಿ ರಂಗಣ್ಣನಿಗೆ ತಂದೊಪ್ಪಿಸುತ್ತಾನೆ. ಅವನ ಪ್ರಾಮಾಣಿಕತೆಯನ್ನು ಮೆಚ್ಚಿದ ರಂಗಣ್ಣ ಕೃಷ್ಣನಿಗೆ ತಮ್ಮ ಮನೆಯಲ್ಲೇ ಕೆಲಸ ಕೊಡುತ್ತಾರೆ. ಒಮ್ಮೆ ಕಪನಿಪತಯ್ಯನ ಮನೆಗೆ ಬಂದ ರಂಗಣ್ಣ, ಮಾತಿನ ನಡುವೆ ತಾವು ತಮ್ಮ ಮಗನಿಗಾಗಿ ಹಂಬಲಿಸುತ್ತಿರುವುದಲ್ಲದೆ ಗೋವಿಂದಯ್ಯನನ್ನೂ ಹುಡುಕುತ್ತಿರುವುದಾಗಿ ತಿಳಿಸುತ್ತಾ, ತಮ್ಮ ಕಥೆಯನ್ನು ಕಪನಿಪತಯ್ಯನವರಿಗೆ ವಿವರಿಸುತ್ತಾರೆ. ಈ ಮಾತುಗಳನ್ನು ಕದ್ದು ಕೇಳಿಸಿಕೊಂಡ ಮೋಹನ್ `ನಾನೇ ರಂಗಣ್ಣನವರ ಮಗ’ ಎಂದು ಹೇಳಿ ಅವರ ಅಪಾರ ಆಸ್ತಿಗೆ ವಾರಸುದಾರನಾಗುವ ದುರಾಲೋಚನೆ ಮಾಡುತ್ತಾನೆ. ಆದರೆ ಅವರ ಮನೆಯಲ್ಲೇ ಇರುವ ಕೃಷ್ಣನಿಗೆ ತಮ್ಮನ ಕುತಂತ್ರ ಅರಿವಾಗುತ್ತದೆ. ಅಂದು ರಾತ್ರಿ ಮೋಹನ, ರಂಗಣ್ಣನ ಮನೆಯಲ್ಲಿ ಕಳ್ಳತನ ಮಾಡುವಾಗ ಕೃಷ್ಣನ ಕೈಗೆ ಸಿಕ್ಕಿಬಿದ್ದು ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾನೆ. ಆ ವೇಳೆಗೆ ಎಲ್ಲ ಸಂಪತ್ತನ್ನೂ ಕಳೆದುಕೊಂಡು ಬೀದಿಪಾಲಾಗಿದ್ದ ಗೋವಿಂದಯ್ಯ ದಂಪತಿಗೂ, ಲಕ್ಷ್ಮಿಗೂ ಕೃಷ್ಣನಿರುವ ಮನೆಯ ಗುರುತು ಸಿಕ್ಕಿ ಅವರು ಅಲ್ಲಿಗೆ ಬಂದಾಗ, ತಮಗೆ ಮಗುವೊಪ್ಪಿಸಿದ್ದ ರಂಗಣ್ಣನನ್ನು ಕಂಡು ಗೋವಿಂದಯ್ಯನಿಗೆ ಪಶ್ಚಾತ್ತಾಪ ಉಂಟಾಗುತ್ತದೆ. ತಾನು ಕೃಷ್ಣ ಹಾಗೂ ರಂಗಣ್ಣನವರಿಗೆ ದ್ರೋಹ ಮಾಡಿದ್ದನ್ನು ಒಪ್ಪಿಕೊಂಡು ಅವರಲ್ಲಿ ಕ್ಷಮೆ ಯಾಚಿಸುತ್ತಾನೆ. ಕೃಷ್ಣನೇ ರಂಗಣ್ಣನವರ ನಿಜವಾದ ಮಗನೆಂದೂ, ಈವರೆಗೆ ಅವರ ಮಗನೆಂದು ಹೇಳಿಕೊಂಡು ಬಂದವನು ತನ್ನ ಮಗ ಮೋಹನನೆಂದೂ ರಂಗಣ್ಣನವರಿಗೆ ನಿಜ ತಿಳಿಸುತ್ತಾನೆ. ಮೋಹನನ ತಪ್ಪನ್ನು ಎಲ್ಲರೂ ಕ್ಷಮಿಸುತ್ತಾರೆ. ಕೃಷ್ಣ ಹಾಗೂ ಲಕ್ಷ್ಮಿಯರ ವಿವಾಹವಾಗುತ್ತದೆ.
 

Share this post:

Related Posts

To Subscribe to our News Letter.

Translate »