ನಿರ್ದೇಶ & ನಿರ್ಮಾಣ: ಚಂದನ್ ಕುಮಾರ್
ರೇಟಿಂಗ್ ; 3/5
ಪಾತ್ರವರ್ಗ: ಚಂದನ್, ನಿಮಿಕಾ ರತ್ನಾಕರ, ಗಿರೀಶ್ ಶಿವಣ್ಣ, ಮತ್ತಿತರರು
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ‘ಪ್ಲರ್ಟ್’ ಮಾಡುವ ಹುಡುಗನ ಜಾಲಿ ಜಾಲಿ ಕಥೆ. ಕಥೆಯ ನಾಯಕ ಕೃಷ್ಣ ಹತ್ತಾರು ಹುಡುಗಿಯರನ್ನು ಯಾರಿಗೂ ಹರ್ಟ್ ಆಗದಂತೆ ‘ಪ್ಲರ್ಟ್’ ಮಾಡಿಕೊಂಡು ಲಾವಿಶ್ ಜೀವನ ಸಾಗಿಸುತ್ತಿರುತ್ತಾನೆ. ಚಿತ್ರ ಪ್ರಾರಂಭವಾಗಿ ಮೊದಲ ಹದಿನೈದು-ಇಪ್ಪತ್ತು ನಿಮಿಷ ಇದೊಂದು ಬರೀ ʻಮಜಾʼ ಕೊಡುವ ಸಿನಿಮಾದಂತೆ ಭಾಸವಾಗುತ್ತದೆ. ಬಳಿಕ ನಿಧಾನಕ್ಕೆ ತೆರೆದುಕೊಳ್ಳುವ ಕಥೆ ಚಿತ್ರ ಮುಗಿಯುವ ತನಕವೂ ಅನಿರೀಕ್ಷಿತ ಮಜಲುಗಳನ್ನು ಬದಲಿಸುತ್ತ, ತಿರುವುಗಳೊಂದಿಗೆ ತನ್ನೊಳಗೆ ಸೆಳೆದುಕೊಳ್ಳುತ್ತದೆ. ಕಿರುತೆರೆಯಿಂದ ಹಿರಿತೆರೆಗೆ ಬಂದ ಚಂದನ್ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಆದರೆ ಎಲ್ಲಿಯೂ ನಿರ್ದೇಶಕನ ಮೊದಲ ಸಿನಿಮಾ ಎಂಬುದು ಗೊತ್ತಾಗದಷ್ಟು ಸೊಗಸಾಗಿ ಚಿತ್ರವನ್ನು ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಕಥಾನಾಯಕ ಕೃಷ್ಣ ಜಿಮ್ ಟ್ರೈನರ್. ಜಿಮ್ ಗೆ ಬರುವ ಹುಡುಗಿಯರನ್ನೆಲ್ಲ ʻಲವ್ ಟ್ರೈನಿಂಗ್ʼ ಕೊಟ್ಟು ʻಲವ್ʼನಲ್ಲಿ ʻಏಳುʼವಂತೆ ಮಾಡುತ್ತಾನೆ. ಆತನ ದೃಷ್ಟಿಯಲ್ಲಿ ಹುಡುಗಿಯರು ʻಡಬಲ್ ಗೇಮ್ʼ ಗಿರಾಕಿಗಳು. ಅವರ ಲವರ್ ಕೈಗೆ ʻಚೊಂಬುʼ ಕೊಟ್ಟು ಇನ್ನೊಬ್ಬರ ಜೊತೆ ʻಸುವ್ವಾಲಿʼ ಆಟ ಆಡೋರು. ಅಂಥ ʻಡಬಲ್ ಗೇಮ್ʼ ಗಿರಾಕಿಗಳನ್ನು ಪತ್ತೆ ಮಾಡಿ ಅವರ ಪ್ರಿಯತಮನಿಗೆ ವಿಷಯ ತಿಳಿಸಿ ಬ್ರೇಕ್ ಅಪ್ ಮಾಡಿಸುವುದು ಈತನ ಕಾಯಕ. ಅಷ್ಟೇ ಅಲ್ಲದೆ, ಅವರ ಪ್ರೀತಿ ನಿಜವಾಗಿದ್ದರೆ ತಾನೇ ಮುಂದೆ ನಿಂತು ಕರಿಮಣಿ ಕಟ್ಟಿಸಲೂ ಹೇಸದ ಅಸಾಮಿ ಈ ಕೃಷ್ಣ.
ಚಿತ್ರದ ಆರಂಭ ಇಂಟ್ರೆಸ್ಟಿಂಗ್ ಆಗಿದೆ ಕೃಷ್ಣ ಒಂದು ಹುಡುಗಿ ಮೇಲೆ ರೇಪ್ ಮಾಡಿದ್ದಾನೆ ಎಂಬ ಆರೋಪದ ವಿಚಾರಣೆಯಿಂದ. ಡಜನ್ ಗಟ್ಟಲೆ ಹೆಣ್ಣು ಮಕ್ಕಳ ಜೀವನದಲ್ಲಿ ಡಿಸೈನ್ ಡಿಸೈನ್ ಆಟ ಆಡಿರುವ ಕೃಷ್ಣನಿಗೆ ಬಾಲ್ಯದ ಕುಚುಕು ಬಾಲು ಸಿಗುತ್ತಾನೆ. ಅಲ್ಲಿಂದ ‘ಪ್ಲರ್ಟ್’ನ ಆಯಾಮ ಬದಲಾಗುತ್ತದೆ. ಬಾಲು ಕೂಡ ಕೃಷ್ಣನ ಜತೆಯೇ ʻಫೆವಿಕಾಲ್ʼ ಥರ ಜೀವಿಸುತ್ತಾನೆ. ಈ ʻಫೆವಿಕಾಲ್ ಗೆಳೆತನʼಕ್ಕೆ ಏನು ಕಾರಣ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಈ ಮಧ್ಯೆ ಕೃಷ್ಣ ಮತ್ತು ಬಾಲು ನಡುವೆ ಬರುವವಳು ದೂರ ಇದ್ದ ಸನಿಹ! ಈಕೆಯ ಆಗಮನದ ನಂತರ ಕಥೆಗೆ ಹೊಸ ವೇಗ ಪ್ರಾಪ್ತಿಯಾಗುತ್ತದೆ. ಪ್ರಾರಂಭದಲ್ಲಿ confuse ಮಾಡುವ ಕೃಷ್ಣ, ದ್ವಿತೀಯಾರ್ಧದಲ್ಲಿ convince ಮಾಡುವ ಮೂಲಕ ಮನಸ್ಸು ಗೆಲ್ಲುತ್ತಾನೆ.
ನಟನೆಯ ವಿಚಾರಕ್ಕೆ ಬರುವುದಾದರೆ. ಕೃಷ್ಣನಾಗಿ ಚಂದನ್ ಚಂದದ ನಟನೆ ನೀಡಿದ್ದಾರೆ. ಸನಿಹಳಾಗಿ ನಿಮಿಕಾ ರತ್ನಾಕರ ನೋಡುಗನಿಗೆ ಸನಿಹವಾಗಿದ್ದಾರೆ. ಪ್ರೇಮಕಥೆಯಲ್ಲಿಕೃಷ್ಣ&ಸನಿಹ chemistry workout ಆಗಿದೆ. ಬಾಲುವಾಗಿ ಗಿರೀಶ್ ಶಿವಣ್ಣ ಕೃಷ್ಣನಿಗೆ ಸಕತ್ ಸಾಥ್ ನೀಡಿದ್ದಾರೆ. ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡುವ ಸ್ನೇಹದ ಹಾಡು ಕಥೆಗೆ ಪೂರಕವಾಗಿದೆ. ವಿನಯ್ ಗೌಡ ಖಳನಾಯಕನಾಗಿ ಗಮನ ಸೆಳೆಯುತ್ತಾರೆ. ನಾಯಕನ ಅಣ್ಣನಾಗಿ ರಂಗಾಯಣ ರಘು ಎಂದಿನಂತೆ ರಂಗಿನ ನಟನೆ ನೀಡಿದ್ದಾರೆ. ಆದರೆ, ವಕೀಲನಾಗಿ ಬರುವ ಸಾಧು ಕೋಕಿಲ, ಬಹಳ ಗಂಭೀರವಾಗಿ ನಡೆಯಬೇಕಿದ್ದ ಕೋರ್ಟ್ ವಿಚಾರಣೆಯನ್ನು ʻಓವರ್ʼ ಕಾಮಿಡಿ ಮೂಲಕ ನೋಡುಗರನ್ನು ಬಲವಂತವಾಗಿ ನಗಿಸಲು ಪ್ರಯತ್ನಿಸುವುದು ಯಾಕೆ ಎಂದು ಚಂದನ್ ಅವರೇ ಹೇಳಬೇಕು!
ನಕುಲ್ ಅಭ್ಯಂಕರ್ ಹಿನ್ನೆಲೆ ಸಂಗೀತ ಸೂಪರ್. ಎಚ್.ಸಿ. ವೇಣು ಛಾಯಾಗ್ರಹಣ ಕಥೆಗೆ ಪೂರಕವಾದೆ. ಯಾವ ಪ್ರಮುಖ ಪಾತ್ರವೂ ಪ್ರೇಕ್ಷಕ guess ಮಾಡದೇ ಇರೋ ಥರ ಇರೋದು ಚಂದನ್ ಬಗ್ಗೆ ಇನ್ನಷ್ಟು ಭರವಸೆ ಮೂಡಿಸುತ್ತದೆ. ಚಂದನ್ ʻಹೇಗಾದರೂ ನಗಿಸಲೇ ಬೇಕುʼ ಎಂದು ಹಟಕ್ಕೆ ಬೀಳದೆ, ಇನ್ನಷ್ಟು natural treatmentಗೆ ಒತ್ತು ಕೊಟ್ಟಿದ್ದರೆ ಚಿತ್ರ ನೋಡುಗನಿಗೆ ಇನ್ನಷ್ಟು ಹತ್ತಿರವಾಗಿ, mouth publicityಗೆ ಸಾಕಷ್ಟು ಅವಕಾಶವಿರುತ್ತಿತ್ತು.
