ಹಲವು ದಿನಗಳಿಂದ ಸ್ಯಾಂಡಲ್‌ವುಡ್ ಮಂದಿ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದೆ. ಪ್ರತಿ ಬಾರಿ ಸರ್ಕಾರ ಬದಲಾದಾಗಲೂ ಕನ್ನಡ ಚಿತ್ರರಂಗ ಗಣ್ಯರು ಅಂದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಸವರಾಜ್ ಬೊಮ್ಮಾಯಿ ಸಿ ಎಂ ಆಗಿದ್ದಾಗಲೂ ಚಿತ್ರನಗರಿ ನಿರ್ಮಿಸುವಂತೆ ಮಾಡಿಕೊಳ್ಳಲಾಗಿತ್ತು. ಈಗ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಆರ್ಯನ್ ಹೊಸ ಸಿನಿಮಾ ’ದಿ ಭವಾನಿ ಫೈಲ್ಸ್’ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಕಲಾವಿದರ ತಂಡ ಹಾಗೂ ತಂತ್ರಜ್ಞರು ಇಂದು (ಜೂನ್ 13) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿ ನಡೆಸಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರ ಬೇಡಿಕೆಗಳನ್ನು ಕೇಳಿದ ಬಳಿಕ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. “ಬಜೆಟ್ ಮುಗಿದ ನಂತರ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ ಮತ್ತೊಂದು ಸುತ್ತಿನ ಸುದೀರ್ಘ ಚರ್ಚೆ ನಡೆಸುತ್ತೇವೆ” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದರೊಂದಿಗೆ ನಿಯೋಗವು ಸಲ್ಲಿಸಿದ ಇತರೆ ಮನವಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವ ಬಗ್ಗೆ ಆಸ್ವಾಸನೆ ನೀಡಿದ್ದಾರೆನ್ನಲಾಗಿದೆ. ರಾಜೇಂದ್ರ ಸಿಂಗ್ ಬಾಬು ಜೊತೆ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ ಎನ್.ಸೀತಾರಾಮ್, ಲಿಂಗದೇವರು, ನಂಜುಂಡೇಗೌಡ, ಹಿರಿಯ ನಟ ಶ್ರೀನಿವಾಸ ಮೂರ್ತಿ, ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಜೊತೆಯಲ್ಲಿದ್ದರು.