ಕಳೆದ ಮೂರು ದಶಕಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ, ಫ್ಯಾಮಿಲಿ ಸ್ಟಾರ್ ಎಂದೇ ಖ್ಯಾತರಾಗಿರುವ ಅಭಿಜಿತ್ “ಅಟ್ಲಿ” ಚಿತ್ರದ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
“ಅಟ್ಲಿ” ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತೊಂಭತ್ತರ ದಶಕದಲ್ಲಿ ನನ್ನ ಹಾಗೂ ಶೃತಿ ಅವರ ಜೋಡಿಯಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದೆ. ಈಗ ಹಲವು ವರ್ಷಗಳ ನಂತರ ನಾನು ಶೃತಿ ಅವರ ಜೊತೆ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷ ತಂದಿದೆ ಎಂದರು ಹಿರಿಯ ನಟ ಅಭಿಜಿತ್.
ಆರ್ ಜಿ ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶನದ “ಅಟ್ಲಿ” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
ಇತ್ತೀಚಿಗೆ ಖ್ಯಾತ ನಟ – ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದರು. ಕಾಸರಗೋಡಿನ ಸುತ್ತಮುತ್ತ “ಅಟ್ಲಿ” ಕಥೆ ನಡೆಯುತ್ತದೆ. ನಿರ್ದೇಶಕ ರಂಗನಾಥ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ “ಅರಿವು”, “ಪ್ರಭುತ್ವ” ಚಿತ್ರಗಳನ್ನು ನಿರ್ದೇಶಿಸಿದ್ದ ರಂಗನಾಥ್ ಅವರಿಗೆ ಇದು ಮೂರನೇ ಚಿತ್ರ.
ಈ ಚಿತ್ರದ ನಾಯಕಿಯಾಗಿ ಪೂಜಾ ಜನಾರ್ದನ್ ನಟಿಸುತ್ತಿದ್ದಾರೆ. ಕೆ.ಜಿ.ಎಫ್ ಅನ್ ಮೋಲ್, ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ, ಲಲಿತಾ “ಅಟ್ಲಿ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರದ ಮೂರು ಹಾಡುಗಳನ್ನು ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ..