ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಗಳಿಸಿ, ಬಳಿಕ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಕನಸಿನ ರಾಣಿ ಎಂದೇ ಖ್ಯಾತರಾದ ಮಾಲಾಶ್ರೀ ಅಭಿನಯಿಸಿದ ಚಿತ್ರವೆಂದರೆ ಗೆದ್ದೇ ಗೆಲ್ಲುತ್ತದೆ ಎಂಬ ಮಾತಿತ್ತು.ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿ ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡವರು ಈ ನಟಿ. ಅಂದಿನ ಕಾಲದಲ್ಲಿ ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಮಾಲಾಶ್ರೀ ಕೂಡ ಒಬ್ಬರು. ಇಂದಿಗೂ ಮಾಲಾಶ್ರೀ ಅವರ ಸಿನಿಮಾಗಳಿಗಾಗಿ ಕಾಯುತ್ತಿರುವ ಅಭಿಮಾನಿ ವರ್ಗವೇ ಇದೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ರಾಧನಾರಾಮ್ ಕೂಡ ಈಗ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು.. ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ವರಮಹಾಲಕ್ಷಿ ಹಬ್ಬದಂದು ಸಿಹಿ ಸುದ್ದಿ ನೀಡಿದ್ದಾರೆ. ದರ್ಶನ್ ಅಭಿನಯದ ೫೬ನೇ ಚಿತ್ರದ ನಾಯಕಿಯಾಗಿ ನಾಯಕಿಯಾಗಿ ರಾಧನಾ ರಾಮ್ ಬಣ್ಣ ಹಚ್ಚಿದ್ದು, ಮೊದಲ ಚಿತ್ರದಲ್ಲಿಯೇ ಸ್ಟಾರ್ ನಟನೊಂದಿಗೆ ಅಭಿನಯಿಸುವ ಅವಕಾಶ ಪಡೆದುಕೊಂಡು ಚಿತ್ರರಂಗಕ್ಕೆ ಗ್ರ‍್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ದರ್ಶನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಅನನ್ಯ ಅವರ ಹೆಸರು ರಾಧನಾ ರಾಮ್ ಎಂದು ಜನರಿಗೆ ಪರಿಚಯವಾಗಲಿದ್ದು, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ನಿರ್ಮಾಪಕ ರಾಮು ಹಾಗೂ ಮಾಲಾಶ್ರೀ ದಂಪತಿಯ ಪುತ್ರಿ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ತಮಗೆ ಸಿಕ್ಕ ಮೊದಲ ಅವಕಾಶ ಬಗ್ಗೆ ರಾಧಾನಾರಾಮ್ ಅವರು ಭಾವುಕರಾಗಿದ್ದು, ಈ ಸುಸಂದರ್ಭದಲ್ಲಿ ಅವರು ತಮಗೆ ಸಿಕ್ಕ ಗೋಲ್ಡನ್ ಅವಕಾಶದ ಬಗ್ಗೆ, ತಮ್ಮ ಮುಂದಿನ ಕನಸಿನ ಬಗ್ಗೆ `ಚಿತ್ತಾರ’ದೊಡನೆ ಹಂಚಿಕೊ0ಡಿದ್ದಾರೆ.
ಚಂದನವನಕ್ಕೆ ದೊಡ್ದ ಮಟ್ಟದಲ್ಲಿ ಎಂಟ್ರಿ ಕೊಡ್ತಿದ್ದೀರಿ, ಏನನ್ನಿಸುತ್ತಿದೆ?
ಎಲ್ಲಿಕ್ಕಿಂತ ಮೊದಲು ನಾನು `ಚಿತ್ತಾರ’ ಬಳಗಕ್ಕೆ ಚಿರಋಣಿ, ಯಾಕೆಂದ್ರೆ `ಚಿತ್ತಾರ ಸ್ಟಾರ್ ಅವಾರ್ಡ್-2022’ನಲ್ಲಿ ನನ್ನ ತಂದೆಯ ಸವಿನೆನಪಾಗಿ ಅವರ ಸಾಧನೆಯನ್ನು ಗಮನಿಸಿ ಅವಾರ್ಡ್ ಕೊಡ್ಡಿದೀರಿ. ಇದು ನನಗೆ ಅತೀವವಾದ ಸಂತಸ ಮತ್ತು ಸಮಾಧಾನವನ್ನು ನೀಡಿದೆ. ಇನ್ನು, ನನ್ನ ವಿಚಾರಕ್ಕೆ ಬರೋದಾದ್ರೆ, ನಾನು ದರ್ಶನ್ ಸರ್ ಜೊತೆ ಸಿನಿಮಾ ಮಾಡ್ತೀನಿ ಅನ್ನೋ ವಿಚಾರ ನನಗೇ ತಿಳಿದೇ ಇರಲಿಲ್ಲ. ನನ್ನ ಕಿವಿಗೆ ಸುದ್ದಿ ಬೀಳೋ ಮೊದಲೆ ನನ್ನ ತಾಯಿ ಡೈರೆಕ್ಟರ್ ತರುಣ್ ಸರ್ ಮತ್ತು ನಿರ್ಮಾಪಕರಾದ ರಾಕಲೈನ್ ಸರ್ ಜೊತೆ ಸಾಕಷ್ಟು ಚರ್ಚೆ ಮಾಡಿದ್ರು. ನಾನು ದರ್ಶನ್ ಅವರ ಜೊತೆ ಸ್ಕಿçÃನ್ ಶೇರ್ ಮಾಡ್ತಿನಿ ಅನ್ನೋದು ಕನ್‌ಫರ್ಮ್ ಆದ ಮೇಲೆ ನನಗೆ ತಿಳಿಸಿದಾಗ ನಿಜಕ್ಕೂ ಶಾಕ್ ಆಯ್ತು, ನನಗೆ ನಂಬೋಕೆ ಸಾಧ್ಯ ಆಗಿಲ್ಲ. ಅಂಥಾ ಸೂಪರ್ ಸ್ಟಾರ್ ಜೊತೆ ನಟಿಸೋದು ನಿಜಕ್ಕೂ ದೊಡ್ಡ ಸವಾಲು. ಆಡಿಶನ್ ಮಾಡಿ, ಲುಕ್ ಟೆಸ್ಟ್ ಮಾಡಿದ ಮೇಲೆಯೇ ನನಗೆ ನಂಬಿಕೆ ಬಂದಿದ್ದು. ಒಟ್ಟಿನಲ್ಲಿ, ನನ್ನ ಮೊದಲ ಚಿತ್ರದ ನನ್ನ ಬಗ್ಗೆ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಪದಗಳಿಲ್ಲ. ಈ ಅವಕಾಶಕ್ಕಾಗಿ ನಾನು ಅಭಾರಿಯಾಗಿದ್ದೇನೆ ಮತ್ತು ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲು ತುಂಬಾ ಉತ್ಸುಕಳಾಗಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ.
ಸಿನಿಮಾವನ್ನು ವೃತ್ತಿಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ತಂದೆ-ತಾಯಿ ಕೊಟ್ಟ ಸಲಹೆ ಸೂಚನೆಗಳೇನು?
ಬಾಲ್ಯದಿಂದಲೇ ತಾಯಿ ಸಾಕಷ್ಟು ಸಲಹೆ-ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಅವರಿಬ್ಬರಿಗೂ ಸಿನಿಮಾರಂಗದ ಬಗ್ಗೆ ಸಾಕಷ್ಟು ಗೌರವ ಇದೆ. ದಶಕಗಳ ಸಿನಿಜರ್ನಿಯಲ್ಲಿನ ಅವರಿಬ್ಬರ ಅನುಭವ ಬಹಳ ದೊಡ್ಡದು. ನಟನೆ, ಶೂಟಿಂಗ್ ಕಲ್ಚರ್, ಸಿನಿಮಾ ಬ್ಯುಸಿನೆಸ್… ಹೀಗೆ ಚಿತ್ರರಂಗದ ಎಲ್ಲಾ ರಂಗಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದ್ದರು. ಚಿತ್ರರಂಗದಲ್ಲಿ ನೆಲೆಯೂರುವುದು ಸುಲಭದ ಸಂಗತಿಯಲ್ಲ, ಅದಕ್ಕೆ ವಿಷೇಷವಾದ ಆಸಕ್ತಿ ಮತ್ತು ಡೆಡಿಕೇಶನ್ ಬೇಕು ಅನ್ನುವುದನ್ನು ಅವರಿಬ್ಬರೂ ಅರ್ಥ ಮಾಡಿಸಿದ್ದಾರೆ. ನಿರ್ದೇಶಕರು ಸೃಷ್ಟಿಸಿದ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ನನ್ನ ತಂದೆಯೇ ನನ್ನ ದೊಡ್ಡ ರೋಲ್‌ಮಾಡೆಲ್ ಅನ್ನಬಹುದು, ಯಾಕೆಂದರೆ ಒಬ್ಬ ಸಾಮಾನ್ಯ ನಿರ್ಮಾಪಕನಾಗಿ ಬಂದು ಕೋಟಿ ವೆಚ್ಚದ ಚಿತ್ರದ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದು ನೂರು ಪ್ರತಿಶತಃ ಸಮರ್ಪಣೆಯ ಮನೋಭಾವ ಬೇಡುತ್ತದೆ. ನೀನು ಇದೇ ದಾರಿಯಲ್ಲಿ ನಡೆಯಬೇಕು, ಇದೇ ದಾರಿಯಲ್ಲಿ ಕಷ್ಟಪಟ್ಟು ಮುಂದುವರೆದಿದ್ದೇ ಆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಅಪ್ಪನ ಮಾತು. ಅಪ್ಪ-ಅಮ್ಮ, ಬಾಳಿ-ಬದುಕಿದ ದಾರಿಯೆ ನನಗೆ ದೊಡ್ಡ ಪಾಠ.
‘ನಮ್ ಕನಸ ಕನ್ನಡ.. ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಇನ್ನೊಂದು ಹಾಡು
ಈ ನಿಮ್ಮ ವೃತ್ತಿಬದುಕಿನ ಮಹತ್ತರ ಘಟ್ಟದಲ್ಲಿ ನಿಮ್ಮ ತಂದೆಯನ್ನು ಎಷ್ಟು ಮಿಸ್ ಮಾಡ್ಕೋತೀರ?
ಎಷ್ಟು ಮಿಸ್ ಮಾಡ್ಕೊಳ್ತಿದ್ದೀನಿ ಅನ್ನುವುದನ್ನು ಹೇಳುವುದೇ ಕಷ್ಟ. ಮಾನಸಿಕವಾಗಿ ನನ್ನ ಜೊತೆಗೆ ಇದ್ದರೂ, ಭೌತಿಕವಾಗಿಯೂ ಇರಬೇಕಿತ್ತು. ಅವರಿದ್ದಿದ್ದರೆ, ನನ್ನ ಬಗ್ಗೆ ತುಂಬಾ ಹೆಮ್ಮೆ ಮತ್ತು ಖುಷಿ ಪಡ್ತಾ ಇದ್ರು. ಅಮೇಲೆ, ಅವರ ಆಶೀರ್ವಾದದಿಂದಾನೇ ಇದೆಲ್ಲಾ ಸಾಧ್ಯ ಆಗ್ತಿದೆ, ನಾನು ಸಾಕಷ್ಟು ಅವರನ್ನು ನೆನೆಪಿಸಿಕೊಳ್ತೀನಿ, ಅವರ ಬಗ್ಗೆ ಈ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ರೆ… ಅವರು ನನಗೆ ಎನೆಲ್ಲಾ ಸಲಹೆ ಕೊಡ್ತಿದ್ರು… ಎಂದೆಲ್ಲಾ ಯೋಚಿಸ್ತೀನಿ.
ಸಹಜವಾಗಿ ನಿಮ್ಮ ತಾಯಿ ಅಭಿನಯದ ಎಲ್ಲಾ ಸಿನಿಮಾಗಳನ್ನು ನೀವು ಮೆಚ್ಚಿಕೊಂಡಿದ್ದೀರಿ, ಅದರಲ್ಲಿ ಬಹಳ ಇಷ್ಟ ಪಟ್ಟ ಚಿತ್ರ ಯಾವುದು? ಯಾಕೆ?
ಖಂಡಿತಾ, ನನಗೆ ಅವರ ಅಷ್ಟೂ ಸಿನಿಮಾಗಳು ಇಷ್ಟ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಕಷ್ಟ. ಮೊದಲ ಸಿನಿಮಾ `ನಂಜುAಡಿ ಕಲ್ಯಾಣ’ ಬಿಟ್ರೆ `ರಾಣಿ ಮಹರಾಣಿ’ ನನ್ನ ಎವರ್‌ಗ್ರೀನ್ ಫೇವರೇಟ್. ಈ ಚಿತ್ರವನ್ನು ಸಾಕಷ್ಟು ಬಾರಿ ನೋಡಿದೀನಿ, ಮುಂದೆಯೂ ನೋಡ್ತೀನಿ. ಏಕೆಂದರೆ, ಅದರಲ್ಲಿ ಅವರ ದ್ವಿಪಾತ್ರ, ಭಾವಪೂರ್ಣ ಅಭಿನಯ… ಎಲ್ಲವೂ ಸಾಕಷ್ಟು ಪ್ರೇರಣೆ ನೀಡುವಂಥದ್ದು.
ನಟ ದರ್ಶನ್ ಒಡನಾಟದಲ್ಲಿ ನೀವು ಕಲಿತುಕೊಂಡಿದ್ದೇನು?
ಅವರು ದೊಡ್ಡ ಸೂಪರ್‌ಸ್ಟಾರ್, ನಾನಿನ್ನೂ ಅಂಬೆಗಾಲು ಇಟ್ಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದೀನಿ. ಮೊದಲ ಚಿತ್ರದಲ್ಲೇ ನನ್ನದು ಚಾಲೆಂAಜಿಗ್ ಪಾತ್ರ, ಸಾಕಷ್ಟು ನರ್ವಸ್ ಆಗಿದ್ದೆ. ಆದರೆ, ಅವರು ಕಂಫರ್ಟಬಲ್ ಫೀಲ್ ಮಾಡ್ಸಿ, ಸಾಕಷ್ಟು ಟಿಪ್ಸ್ ಕೊಟ್ಟು ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಾರೆ. ಅವರದ್ದು ತುಂಬಾ ಸರಳ ವ್ಯಕ್ತಿತ್ವ, ಇಡೀ ಸಿನಿಮಾ ಸೆಟ್‌ಅನ್ನು ಲವಲವಿಲಿಕೆಯಿಂದ ಇಟ್ಟುಕೊಳ್ಳುತ್ತಾರೆ. ತಮ್ಮ ಸಹ ಕಲಾವಿದರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಾರೆ. ನನಗೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕದ್ದೇ ನನ್ನ ಪುಣ್ಯ. ಅವರ ಜೊತೆಗೆ ಸಿನಿಮಾ ಒಡನಾಟದ ನಂತರ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಅವರ ಜೊತೆ ಕೆಲಸ ಮಾಡುವುದೇ ಒಂದು ವಿಶಿಷ್ಟ ಕಲಿಕೆ ಮತ್ತು ಅನುಭವ.
ನಿಮಗೆ ಚೊಚ್ಚಲ ಅವಕಾಶ ಕೊಟ್ಟ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್ ಮತ್ತು ನಿರ್ದೇಶಕರಾದ ತರುಣ್ ಸುಧೀರ್ ಅವರ ಬಗ್ಗೆ ನಿಮ್ಮ ಅನಿಸಿಕೆ…
ರಾಕ್‌ಲೈನ್ ಸರ್ ಬಹುದೊಡ್ಡ, ಅವರು ರಾಷ್ಟçಮಟ್ಟದ ನಿರ್ಮಾಪಕರು. ಖುಷಿಯ ಸಂಗತಿಯೆAದರೆ ನನ್ನ ತಾಯಿಗೆ ಕೂಡ ಇವರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಈಗ ನನ್ನನ್ನು ಲಾಂಚ್ ಮಾಡುತ್ತಿದ್ದಾರೆ. ಅವರ ಅನುಭವದ ಮಾತುಗಳು ನಮಗೆ ಸದಾ ದಾರಿದೀಪ. ಇನ್ನು ನಿರ್ದೇಶಕರಾದ ತರುಣ್ ಸುಧೀರ್ ಅವರು ಸಾಕಷ್ಟು ಹಿಟ್‌ಗಳನ್ನು ಕೊಟ್ಟವರು. ಅವರ ನಿರ್ದೇಶನದಲ್ಲಿ ಕೆಲಸ ಮಾಡೋದು ನಿಜಕ್ಕೂ ಥ್ರಿಲ್ಲಿಂಗ್ ನೀಡುವಂತದ್ದು. ಅವರ ಅನುಭವದಿಂದ ಕೂಡಿದ ಮಾರ್ಗದರ್ಶನ ನನ್ನ ಮುಂದಿನ ಹೆಜ್ಜೆಗೆ ಖಂಡಿತವಾಗಿಯೂ ದೊಡ್ಡ ಆಸ್ತಿಯಾಗಬಲ್ಲುದು.
-ಬಿ.ನವೀನ್‌ಕೃಷ್ಣ ಪುತ್ತೂರು