ಪಟ ಪಟ ಅಂತ ಮಾತನಾಡುತ್ತಿದ್ದರೆ ಕೇಳುವುದಕ್ಕೇನೆ ಚೆಂದ. ಅದರಲ್ಲೂ ಸೀರಿಯಲ್ ಲೋಕದಲ್ಲಿ ಯಡವಟ್ಟು ಮಾಡುತ್ತಾ, ಕ್ಯೂಟ್ ಆಗಿ ಮಾತನಾಡುತ್ತಾ ಎಲ್ಲರನ್ನು ಮೋಡಿ ಮಾಡಿದ್ದೆ ಮಲೈಕಾ ಟಿ ವಸುಪಾಲ್. `ಹಿಟ್ಲರ್ ಕಲ್ಯಾಣ’ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಮಲೈಕಾ ಈಗ `ಉಪಾಧ್ಯಕ್ಷ’ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲೂ ಎಲ್ಲರ ಮನಸ್ಸು ಗೆದ್ದಿದ್ದಾರೆ. ಪಟ ಪಟ ಅಂತ ಮಾತನಾಡುತ್ತಾ, ತುಟಿ ಅಂಚಿನಲ್ಲಿ ನಗು ಬೀರುತ್ತಾ, ಎಲ್ಲರ ಮನಸ್ಸು ಗೆಲ್ಲುವ ಚೆಲುವೆ ಮಲೈಕಾ ಟಿ ವಸುಪಾಲ್ `ಚಿತ್ತಾರ’ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
* ದಾವಣಗೆರೆಯ ನಟಿಗೆ ಪೋಷಕರ ಸಲಹೆ
ಮಲೈಕಾ ಟಿ ವಸುಪಾಲ್ ಅವರಿಗೆ ಮೊದಲಿಂದಾನೂ ನಟನೆ ಬಗ್ಗೆ ಆಸ್ತಿ ಜಾಸ್ತಿ. ಆದರೆ ಅವರ ಪೋಷಕರು ಮೊದಲ ಆದ್ಯತೆ ನೀಡಿದ್ದು ಮಾತ್ರ ಶಿಕ್ಷಣಕ್ಕೆ. ಶಿಕ್ಷಣ ಮಾಡದೆ ಮನಸ್ಸು ಬೇರೆ ಕಡೆಗೆ ವಾಲಿದರೆ, ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಗಳಿಗೂ ಕಿವಿ ಮಾತನ್ನು ಹೇಳಿದ್ದರಂತೆ. ಮೊದಲು ಇಂಜಿನಿಯರಿAಗ್ ಮುಗಿಸು, ಆಮೇಲೆ ನಿನ್ನಿಷ್ಟದ ಕ್ಷೇತ್ರದ ಯೊಚನೆ ಮಾಡಿವಂತೆ ಅಂತ. ಹೀಗಾಗಿ ಮಲೈಕಾಗೆ ಆಕ್ಟಿಂಗ್ ಕಡೆ ಮನಸ್ಸಾದರೂ, ಡಿಗ್ರಿಯಲ್ಲಿ ಇರುವಾಗಲೆ ಆಫರ್‌ಗಳು ಬಂದರೂ ಕೂಡ ಭಾಗವಹಿಸುವುದಕ್ಕೆ ಆಗಲಿಲ್ಲವಂತೆ. ತಂದೆ-ತಾಯಿಯ ಮಾತಿಗೆ ಗೌರವ ಕೊಟ್ಟು, ತಪಸ್ಸು ಮಾಡಿದ ರೀತಿ ಇಂಜಿನಿಯರಿಂಗ್ ಮುಗಿಸಿದ್ದಾರೆ ಮಲೈಕಾ ಟಿ ವಸುಪಾಲ್. ಆದರೆ ಈ ರೀತಿಯ ತಪ್ಪಸ್ಸಿನ ರೀತಿ ಇಂಜಿನಿಯರಿಂಗ್ ಮುಗಿಸಿದ ಮೇಲೆ ಇಂಡಸ್ಟಿçಗೆ ಹೋಗುವುದಕ್ಕೆ ಪೋಷಕರು ಮತ್ತೆ ವಿರೋಧ ವ್ಯಕ್ತಪಡಿಸಿದ್ದರಂತೆ. ಆಗ ಮಲೈಕಾ ಮುದ್ದು ಮುದ್ದು ಮಾತುಗಳಿಂದಾನೇ ತನ್ನ ತಂದೆ ತಾಯಿಯನ್ನು ಕಟ್ಟು ಹಾಕಿದ್ದಾರೆ. ` ಮ್ಮ ಆಸೆಯಂತೆ ಎಜುಕೇಷನ್ ಕಂಪ್ಲೀಟ್ ಮಾಡಿದ್ದೀನಿ. ಸೋತು ಬಿದ್ರು ನಿಮ್ಮ ಹತ್ತಿರಾನೇ ಬರ್ತಿನಿ. ಗೆಲ್ಲುತ್ತೀನಿ ಅನ್ನೋ ನಂಬಿಕೆ ಇದೆ ದಯವಿಟ್ಟು ಕಳುಹಿಸಿಕೊಡಿ ಎಂದು ಮನವಿ ಮಾಡಿದಾಗ ಸಪೋರ್ಟ್ ಮಾಡಿದರು. ಬಳಿಕ ಆಡಿಷನ್‌ಗೆ ಅಪ್ಪನೇ ಕರೆದುಕೊಂಡು ಹೋಗುತ್ತಿದ್ದರು. ಒಂದೆರಡು ಆಡಿಷನ್‌ಗೆ ಅಪ್ಪ ಜೊತೆಗೆ ಬಂದಿದ್ದರು. ಮೂರನೇ ಆಡಿಷನ್‌ಗೆ ನಾನಂತು ಕರೆದುಕೊಂಡು ಹೋಗುವುದಿಲ್ಲ ಅಂತಾನೇ ಹೇಳಿದ್ದರು. ನಾನೇ ಮತ್ತೆ ಮನಸ್ಸನ್ನು ಒಲೈಸಿ ಕರೆದುಕೊಂಡು ಹೋದೆ. ಮೂರನೇ ಆಡಿಷನ್‌ನಲ್ಲಿ ಆಯ್ಕೆಯೂ ಆಯ್ತು’ ಎಂದಿದ್ದಾರೆ.
* ಮಲೈಕಾ ಹೆಸರಿನ ಹಿಂದೆ ಬಾಲಿವುಡ್ ನಂಟು
1991ರಲ್ಲಿ ಬಿಡುಗಡೆಯಾಗಿದ್ದ ದಿಲ್ ಸೇ ಚಿತ್ರದ ಚೈಯ್ಯಾ ಚೈಯ್ಯಾ ಹಾಡು ಸಕತ್ ಹಿಟ್ ಆಗಿತ್ತು. ಆಗ ಮಲೈಕಾ ಅರೋರಾ ಅವರಿಗೆ ಬಹುದೊಡ್ಡ ಹೆಸರೇ ಬಂದಿತ್ತು. ಎಲ್ಲರ ಬಾಯಿಯಲ್ಲೂ ಮಲೈಕಾ ಅವರ ಹೆಸರು ಓಡಾಡುತ್ತಿತ್ತು. ಈ ಹಾಡಿಗೆ ಮಲೈಕಾ ಅರೋರಾ ಸೊಂಟ ಬಳುಕಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅದೇ ಟೈಂನಲ್ಲಿ ಹುಟ್ಟಿದ್ದೇ ದಾವಣಗೆರೆಯ ಮಲೈಕಾ. ಇವರ ಹುಟ್ಟು ಹೆಸರು ಕೂಡ ಮ ಅಕ್ಷರದಲ್ಲಿ ಬಂದ ಹಿನ್ನೆಲೆಯಲ್ಲಿ ಮ ಅಕ್ಷರದ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಮಲೈಕಾ ಅವರ ಹೆಸರು ಇಟ್ಟರಂತೆ ಪೋಷಕರು.
* ಕಾಲೇಜಿಗೆ ಬಂಕ್ ಹಾಕಿ ನಿದ್ದೆ ಮಾಡುತ್ತಿದ್ದ ಮಲೈಕಾ..!
ಸ್ಕೂಲಿನ ಲೈಫ್‌ನಲ್ಲಿ ಅಷ್ಟೊಂದು ಬಂಕ್ ಹಕದೆ ಹೋದರೂ ಕಾಲೇಜು ಜೀವನ ಅಂತ ಬಂದಾಗ ಬಂಕ್ ಎಂಬುದು ಎಲ್ಲರ ಜೀವನದಲ್ಲೂ ಸಹಜ ಬಿಡಿ. ಬಂಕ್ ಹಾಕಿ ನೀವೆಲ್ಲಾ ಏನು ಮಾಡ್ತಾ ಇದ್ರಿ, ಫ್ರೆಂಡ್ಸ್ ಜೊತೆಗೆ ಹೊರಗೆ ಹೋಗುವುದೋ ಅಥವಾ ಸಿನಿಮಾ, ಸಿಟಿ ಅಂತ ಸುತ್ತುವುದು ಮಾಡುತ್ತಾ ಇದ್ರಿ. ಆದರೆ ಮಲೈಕಾ ಟಿ ವಸುಪಾಲ್ ಅವರು ಬಂಕ್ ಹಾಕುತ್ತಾ ಇದ್ದಿದ್ದೆ ವಿಶೇಷ ಕಾರ್ಯಕ್ಕೆ. ಅದುವೇ ನಿದ್ದೆ ಮಾಡುವುದಕ್ಕೆ. ಈ ಬಗ್ಗೆ ಮಾತನಾಡಿದ ನಟಿ ಮಲೈಕಾ, `ನಾನು ಬಂಕ್ ಹಾಕ್ತಾ ಇದ್ದದ್ದು ತುಂಬಾ ಮುಖ್ಯವಾದ ಕೆಲಸಕ್ಕೆ. ಮನೆಗೆ ಬಂದು ಮಲಗಿ ಕೊಳ್ತಾ ಇದ್ದೆ. ಆದರೆ ಈಗ ಎಷ್ಟೋ ಸಲ ನಿದ್ದೆ ಇರಲ್ಲ, ಊಟ ಇರಲ್ಲ. ಆದರೂ ಹಾಗೇ ಕೆಲಸ ಮಾಡ್ತೀನಿ. ಅದೇಗೆ ಎನರ್ಜಿ ಬರುತ್ತೋ ಗೊತ್ತಿಲ್ಲ. ಆಕ್ಟಿಂಗ್‌ನ ತುಂಬಾ ಇಷ್ಟಪಡುತ್ತಿರುವ ಕಾರಣಕ್ಕೆ ಎಷ್ಟೇ ಕಷ್ಟವಾದರೂ ಮಾಡ್ತಾ ಇದ್ದೀನಿ ಅನ್ಸುತ್ತೆ’ ಎಂದಿದ್ದಾರೆ.
* ಹೀರೋಯಿನ್ ಆಗ್ಬೇಕು ಅಷ್ಟೇ..!
ಬದುಕಿನ ದಾರಿ ಸಾಗುತ್ತಾ ಹೋದಾಗ ಎಲ್ಲರಿಗೂ ಆಸೆಗಳು ಚಿಗುರುತ್ತವೆ, ಜೀವನದ ಗುರಿ ಬೆಳೆಯುತ್ತಾ ಹೋಗುತ್ತದೆ. ಮಲೈಕಾಗೆ ಇದ್ದದ್ದು ಒಂದೇ ಗುರಿ ನಾನು ಹೀರೋಯಿನ್ ಆಗಬೇಕು ಅಷ್ಟೆ. ಅದು ಹೇಗೆ..? ಏನು..? ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ನಟಿಯಾಗಬೇಕು. ಈ ಆಸೆ ಮನದಲ್ಲಿ ಬಂದ ಮೇಲೆ ಪ್ರಯತ್ನಗಳನ್ನು ಮಾಡುತ್ತಾ ಹೋದರು. ಸಿನಿಮಾದ ಕ್ರೆಜ್ ಜಾಸ್ತಿ ಇದ್ದ ಕಾರಣಕ್ಕೆ ಸಿನಿಮಾ ನೋಡಿದಾಗೆಲ್ಲಾ ತಾನೂ ಈ ರೀತಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು, ತನ್ನನ್ನು ನೋಡಿ ಎಲ್ಲರು ಮಾತನಾಡಿಸಬೇಕು, ತನ್ನ ಪೋಸ್ಟರ್ ಎಲ್ಲೆಡೆ ರಾರಾಜಿಸಬೇಕು ಎಂದೆಲ್ಲಾ ಕನಸುಗಳನ್ನು ಕಂಡಿದ್ದರು. ಆದರೆ ಇದಕ್ಕೆ ಬೇಕಾದ ತರಬೇತಿ ಹೇಗೆ ಪಡೆಯಬೇಕು, ಎಲ್ಲಿ ಪಡೆಯಬೇಕು ಎಂಬುದರ ಬಗ್ಗೆ ತಲೆಯನ್ನು ಕೆಡಿಸಿಕೊಂಡಿರಲಿಲ್ಲ. ಕ್ಯಾಮೆರಾ ಮುಂದೆ ಬರುವುದಕ್ಕೂ ಮುನ್ನ ನಟನೆ ಅಂದರೆ ಏನು ಎಂಬುದರ ಬಗ್ಗೆ ಗಮನ ಹರಿಸದ ಮಲೈಕಾ, ಫಸ್ಟ್ ಟೈಮ್ ನಟನೆ ಮಾಡಿದಾಗಲೇ ಶಬ್ಬಾಶ್ ಗಿರಿ ಪಡೆದುಕೊಂಡಿದ್ದರು. ಮಲೈಕಾ ಅವರಿಗಿದ್ದ ನಟನೆಯ ಪ್ಯಾಷನ್, ಕ್ಯಾಮೆರಾ ಮುಂದೆಯೂ ಅದ್ಭುತವಾಗಿ ನಟಿಸುವಂತೆ ಮಾಡಿತ್ತು.
* ಮನೆಯಲ್ಲಿ ಮುದ್ದಾಗಿ ಬೆಳೆದಿದ್ದ ನಟಿಗೆ ಮೊದಲ ಆಡಿಷನ್‌ನಲ್ಲೇ ಊಟ-ತಿಂಡಿ ಚಿಂತೆ
ಮಲೈಕಾ ಟಿ ವಸುಪಾಲ್ ಅವರ ತಂದೆ-ತಾಯಿಗೆ ಮುದ್ದಿನ ಒಬ್ಬಳೇ ಮಗಳು. ಹೀಗಾಗಿ ಮಗಳನ್ನು ತುಂಬಾ ಪ್ಯಾಂಪರ್ ಮಾಡಿ ಬೆಳೆಸಿದ್ದಾರೆ. ಏನೇ ತಿಂಡಿ-ಊಟ ಬೇಕು ಎಂದರೂ ಮನೆಯಲ್ಲಿಯೇ ತಯಾರಿ ಮಾಡಿಕೊಟ್ಟಿದ್ದಾರೆ. ಆದರೆ ಆಡಿಷನ್‌ಗೆ ಎಂದು ಬಂದಾಗ ಶಾಕ್ ಆಗಿದ್ದರಂತೆ. ಮೊದಲ ಆಡಿಷನ್ ಅಷ್ಟೊಂದು ಖುಷಿ ಕೊಡಲಿಲ್ಲ ಎಂದಿದ್ದಾರೆ. `ಮೊದಲ ಆಡಿಷನ್ ಅಷ್ಟೊಂದು ಚೆನ್ನಾಗಿರಲಿಲ್ಲ. ಇಲ್ಲಿ ಹೇಗಪ್ಪ ಇರೋದು ಅಂತಾನೆ ಅನ್ನಿಸಿತ್ತು. ನಮ್ಮ ಮನೆಯಲ್ಲಿ ನಾನು ಒಬ್ಬಳೆ ಮಗಳು. ತುಂಬಾ ಪ್ರೀತಿಯಿಂದ ಬೆಳೆಸಿದ್ದರು ಎನ್ನುವುದಕ್ಕಿಂತ ತುಂಬಾ ಪ್ಯಾಂಪರಿಂಗ್ ಮಾಡಿ ಬೆಳೆಸಿದ್ದರು. ಆಗ ತಾನೇ ಶಿಕ್ಷಣ ಮುಗಿಸಿ ಬಂದಿದ್ದರಿಂದ ಮನೆಯ ವಾತಾವರಣಕ್ಕೂ, ಆಡಿಷನ್ ನಡೆದ ವಾತಾವರಣಕ್ಕೂ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿತ್ತು. ಎಲ್ಲಾ ಒಂದೇ ರೂಮಿನಲ್ಲಿ ಇರ್ತಾ ಇದ್ದರು. ಮನೆ ಊಟ ಮಾಡಿ ಮಾಡಿ ಅಭ್ಯಾಸ ಆಗಿತ್ತು. ಇಲ್ಲಿನ ಊಟ ಹೇಗೆ ಮಾಡೋದು ಎಂಬೆಲ್ಲಾ ಚಿಂತೆ ಮೊದಲ ಆಡಿಷನ್‌ನಲ್ಲಿಯೇ ಭಯ ಹುಟ್ಟಿಸಿತ್ತು’ ಎಂದಿದ್ದಾರೆ.
* `ಹಿಟ್ಲರ್ ಕಲ್ಯಾಣ’ದ ಆಯ್ಕೆಯಾಗಿದ್ದು ಹೇಗೆ..?
`ಮೊದಲು ನಂಗೆ ಕಲರ್ಸ್ ಕನ್ನಡದವರು ಕರೆದಿದ್ದರು. ಆದರೆ ಆಗ ನಾನು ಓದುತ್ತಾ ಇದ್ದೆ. ಅಲ್ಲಿಂದ ಪ್ರೊಫೈಲ್ ಒಂದೊಂದು ಕಡೆ ಕಡೆ ಸೆಂಡ್ ಆಗ್ತಾ ಹೋಗುತ್ತೆ. ಆ ರೀತಿ ಆದಾಗ ಜೀ ಚಾನೆಲ್‌ಗೂ ತಲುಪಿರುತ್ತದೆ. ನಾನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದೀನಿ. ಅದರಲ್ಲಿ ಒಂದಷ್ಟು ಫೋಟೋಸ್‌ಗಳು ಇದೆ. ಅವರಲ್ಲೂ ಲೀಸ್ಟ್ ಮಾಡಿಕೊಂಡಿದ್ದರು ಅನ್ಸುತ್ತೆ. ಇವರು ಹೊಸಬರು ಅಂತ. ಹೀಗಾಗಿ ಅಲ್ಲಿ ಅವಕಾಶ ಸಿಕ್ಕಿತ್ತು. ಹಿಟ್ಲರ್ ಕಲ್ಯಾಣಕ್ಕೆ ಜೀ ಕನ್ನಡದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕಾಲ್ ಮಾಡಿದ್ದರು. ಅದಕ್ಕೂ ಮುನ್ನ ಒಂದೆರಡು ಆಡಿಷನ್‌ಗೆ ನಮ್ಮ ಅಪ್ಪ ಕರೆದುಕೊಂಡು ಹೋಗಿದ್ದರು. ಆದರೆ ಇನ್ನೊಂದು ಸಲ ಆಡಿಷನ್‌ಗೆ ಕರೆದುಕೊಂಡು ಹೋಗಲ್ಲ ಅಂತಾನೇ ಹೇಳಿದ್ದರು. ಆಗ ಜೀ ಕನ್ನಡದಿಂದ ಕಾಲ್ ಬಂದಾಗ ಅಪ್ಪನೇ ಮತ್ತೊಂದು ಸಲ ಕರೆದುಕೊಂಡು ಬಂದಿದ್ದರು. ಬೆಳಗ್ಗೆ ೮ ಗಂಟೆಗೆ ಹೋದ ಆಡಿಷನ್‌ಗೆ ಸಂಜೆ ೬ ಗಂಟೆಯ ತನಕವೂ ಆಡಿಷನ್ ನಡೆದಿತ್ತು. ನಾನಾ ರೀತಿಯ ಡ್ರೆಸ್‌ಗಳಲ್ಲಿ ಹೇಗೆ ಕಾಣಿಸ್ತೀನಿ ಅಂತೆಲ್ಲಾ ಟೆಸ್ಟ್ ಮಾಡಿದ್ರು. ಅವತ್ತು ರಾತ್ರಿಯೇ ನಾನೂ ಆಯ್ಕೆಯಾಗಿದ್ದೀನಿ ಅಂತ ಕರೆ ಬಂದಿತ್ತು’ ಎಂದು ಮೊದಲ ಆಡಿಷನ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
* `ಉಪಾಧ್ಯಕ್ಷ’ನಿಗೆ ೬೦೦ ಆಡಿಷನ್ ನಡೆದಿತ್ತು..!
ಕಾಮಿಡಿ ಪಾತ್ರಗಳ ಮೂಲಕವೇ ಹೆಚ್ಚು ಫೇಮಸ್ ಆಗಿದ್ದ ಚಿಕ್ಕಣ್ಣ, ಮೊದಲ ಬಾರಿಗೆ ಸಂಪೂರ್ಣವಾಗಿ ನಾಯಕ ನಟನಾಗಿ `ಉಪಾಧ್ಯಕ್ಷ’ ಸಿನಿಮಾ ಮಾಡಿದ್ದಾರೆ. ಚಿಕ್ಕಣ್ಣನಿಗೆ ತಕ್ಕ ಜೋಡಿಯಾಗಿ ಮಲೈಕಾ ನಟಿಸಿದ್ದಾರೆ. ಈ ಅವಕಾಶ ಅವರನ್ನೇ ಅರಸಿ ಹೋಗಿದ್ದು ಹೇಗೆ ಅಂತ ನೋಡುವುದಾದರೇ, ಅದಾಗಲೇ ಈ ಸಿನಿಮಾಗಾಗಿ ೬೦೦ ಹುಡುಗಿಯರ ಆಡಿಷನ್ ನಡೆದಿತ್ತಂತೆ. ಆದರೆ ಯಾರ ಆಯ್ಕೆಯೂ ಆಗಿರಲಿಲ್ಲ. ಆ ಸಿನಿಮಾಗೆ ಬೇಕಾಗಿದ್ದದ್ದು ಬಬ್ಲಿ ಬಬ್ಲಿಯಾಗಿ ನಟಿಸುವ, ಮುದ್ದು ಮುದ್ದಾಗಿ ಕಾಡುವ ನಟಿ ಬೇಕಾಗಿತ್ತು. ಹೀಗಾಗಿ ಹುಡುಕಾಟ ನಿರಂತರವಾಗಿತ್ತು. ಆದರೆ ಒಮ್ಮೆ ಚಿಕ್ಕಣ್ಣ ಟಿವಿ ಚಾನೆಲ್ ಬದಲಾಯಿಸುವಾಗ `ಹಿಟ್ಲರ್ ಕಲ್ಯಾಣ’ ಧಾರಾವಾಹಿ ಬಂದಿದೆ. ಅದರಲ್ಲೂ ಆ ಧಾರಾವಾಹಿಯಲ್ಲಿ ಲೀಲಾಗೆ ನಟನೆ ಮಾಡುವಾಸೆ. ಹೀಗಾಗಿ ಸಿನಿಮಾ ತಂಡದವರಿಗೆ ಎಜೆ ಮನೆಯನ್ನೇ ಬಾಡಿಗೆ ಕೊಟ್ಟು, ತಾನೂ ಆಕ್ಟ್ ಮಾಡುತ್ತಿದ್ದ ಸೀನ್ ಅದು. ಆ ರೀತಿಯಾದಂತ ಹುಡುಗಿಯೇ ಬೇಕು ಅಂತ ಹುಡುಕುತ್ತಿದ್ದ ಚಿಕ್ಕಣ್ಣನಿಗೆ ಫುಲ್ ಖುಷಿಯಾಗಿದೆ. ತಕ್ಷಣ ತಮ್ಮ ತಂಡದವರಿಗೆ ಮಲೈಕಾ ವಿಡಿಯೋ ಕಳುಹಿಸಿದ್ದಾರೆ. ಬಳಿಕ `ಉಪಾಧ್ಯಕ್ಷ’ ತಂಡದವರು ಮಲೈಕಾ ಬಳಿ ಮಾತನಾಡಿ, ಆಡಿಷನ್‌ಗೆ ಕರೆದಿದ್ದಾರೆ. ಅದಕ್ಕೂ ಮುಂಚೆ ೬೦೦ ಜನರ ಆಡಿಷನ್ ಆಗಿತ್ತು. ಯಾರೂ ವೈಟಿಂಗ್ ಲೀಸ್ಟ್ನಲ್ಲಿ ಕೂಡ ಇರಲಿಲ್ಲ. ಲೀಲಾ ಒನ್ ಟೇಕ್‌ಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಮೇಲೆ ಮಲೈಕಾ ಅವರ ಅಮ್ಮನ ಬಳಿಯೂ ನಿರ್ದೇಶಕರು ಹೇಳಿ ಹೊಗಳಿದ್ದರಂತೆ. ನಿಮ್ಮ ಮಗಳಿಗೆ ಒಳ್ಳೆ ಟ್ರೈನಿಂಗ್ ಕೊಟ್ಟಿದ್ದೀರಾ ಅಂತ.
* ಡಿ ಬಾಸ್ ಮೀಟ್ ಮಾಡಿದ್ದು.. ಯಶ್ ಮನೆಯ ಬ್ರೇಕ್ ಫಾಸ್ಟ್ ನೆನೆದ ನಟಿ
ಉಪಾಧ್ಯಕ್ಷ ಸಿನಿಮಾಗೆ ಸ್ಯಾಂಡಲ್‌ವುಡ್ ಇಂಡಸ್ಟಿçಯ ಸ್ಟಾರ್ ನಟರು ಬೆಂಬಲ ನೀಡಿದ್ದಾರೆ. ಅದರಲ್ಲೂ ಚಾಲೆಂಜಿAಗ್ ಸ್ಟಾರ್ ದರ್ಶನ್ ಅವರು, ಪೊಲೀಸ್ ಠಾಣೆ ಮುಂದೆಯೂ ಪ್ರಚಾರ ನೀಡಿದ್ದಾರೆ. ಯಶ್ ಅವರು ಮನೆಗೆ ಕರೆಸಿ, ಇನ್ನಷ್ಟು ಹುಮ್ಮಸ್ಸು ನೀಡಿದ್ದಾರೆ. ಈ ಬಗ್ಗೆ ಮಲೈಕಾ ಸಿಕ್ಕಾಪಟ್ಟೆ ಖುಷಿಯಿಂದ, ಹೆಮ್ಮಿಯಿಂದ ಮಾತನಾಡಿದ್ದಾರೆ. `ನಂಗೆ ಪದಗಳಲ್ಲಿ ಹೇಳುವುದಕ್ಕೆ ಆಗಲ್ಲ. ದರ್ಶನ್ ಸರ್, ಯಶ್ ಸರ್, ಸುದೀಪ್ ಸರ್, ರಿಷಭ್ ಶೆಟ್ಟಿ ಸರ್, ರಶ್ಮಿಕಾ ಮಂದಣ್ಣ, ಹರ್ಷಿಕಾ ಪೂಣಚ್ಚ ಅವರು ಸೇರಿದಂತೆ ಇಡೀ ಚಿತ್ರರಂಗ ಸಪೋರ್ಟ್ ಮಾಡಿದೆ. ಇದೆಲ್ಲ ಚಿಕ್ಕಣ್ಣ ಸರ್ ಗಳಿಸಿದ ಪ್ರೀತಿಯೇ ಸರಿ. ಅದರಲ್ಲಿ ನಾನು ಭಾಗಿಯಾಗಿರುವುದು ನನ್ನ ಅದೃಷ್ಟ. ಯಾರಾದ್ರೂ ೨೦೨೩ ವರ್ಷದ ಬೆಸ್ಟ್ ಮೂಮೆಂಟ್ ಯಾವುದು ಅಂತ ಕೇಳಿದರೆ ಖಂಡಿತವಾಗಲು ನಾನು ಡಿ ಬಾಸ್ ಮೀಟ್ ಮಾಡಿರುವುದು ಅಂತಾನೇ ಹೇಳುವುದು. ಅವರು ತುಂಬಾ ಚೆನ್ನಾಗಿ ಮಾತನಾಡಿದ್ರು. ಅವರು ಹೇಳಿದ್ದು ಒಂದೇ ಮಾತು. `ನೋಡು ಪುಟ್ಟ ನಾನು ಲೈಟ್ ಬಾಯ್ ಬಂದಿದ್ದೆ. ಈಗ ನಾನು ಎಲ್ಲಿದ್ದೀನಿ ಅಂತ ಗೊತ್ತಲ್ವಾ. ಚಿಕ್ಕಣ್ಣ ಗಾರೆ ಕೆಲಸ ಮಾಡಿಕೊಂಡು, ಕಾಮಿಡಿ ಪಾತ್ರಗಳನ್ನು ಮಾಡಿಕೊಂಡು ಬಂದು ಈಗ ಹೀರೋ ಆಗಿದ್ದಾನೆ. ನೀನು ಹೀರೋಯಿನ್ ಆಗಿ ಆಕ್ಟ್ ಮಾಡಿದ್ದೀಯ. ಇದೆ ರೀತಿ ಸಪೋರ್ಟ್ ಆಗಿರಬೇಕು ಅಂತ ಹೇಳಿದ್ರು. ಪೊಲೀಸ್ ಸ್ಟೇಷನ್ ಮುಂದೆಯೂ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿದ್ರು. ಡಿ ಬಾಸ್‌ನಿಂದ ಕಲಿಯಬೇಕಾಗಿರುವುದು ಒಂದೇ ವಿಚಾರ, ಅವರ ಸರಳತೆಯ ಗುಣ. ಆಮೇಲೆ ಯಶ್ ಸರ್ ಮನೆಗೆ ಬ್ರೇಕ್ ಫಾಸ್ಟ್ಗೆ ಕರೆದಿದ್ದರು. ಚಿಕ್ಕಣ್ಣ ಸರ್ ಯಶ್ ಸರ್ ಜೊತೆಗೆ ತುಂಬಾನೇ ಕ್ಲೊಸ್. ಅವರು ಗಳಿಸಿದ ಪ್ರೀತಿ ವಿಶ್ವಾಸ ನನಗೂ ಸಿಕ್ಕಿದೆ ಅನ್ನೋದೆ ಖುಷಿ’ ಎಂದಿದ್ದಾರೆ.
* ರಿಯಲ್ ಮಲೈಕಾ ಹೇಗಿರುತ್ತಾರೆ..?
ಮಲೈಕಾ ಟಿ ವಸುಪಾಲ್ ಅವರನ್ನು ಈಗಾಗಲೇ ಸಿರಿಯಲ್‌ನಲ್ಲಿ ಲೀಲಾ ಆಗಿ, ಉಪಾಧ್ಯಕ್ಷ ಸಿನಿಮಾದಲ್ಲಿ ಕ್ಯೂಟ್ ಕ್ಯೂಟ್ ಆಗಿರುವ ನಟಿಯನ್ನಾಗಿ ನೋಡಿದ್ದೀವಿ. ಆದರೆ ಮಲೈಕಾ ರಿಯಲ್ ಆಗಿ ಹೇಗಿರುತ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತೆ. ಅದಕ್ಕೆ ಮಲೈಕಾ ಕೊಟ್ಟ ಉತ್ತರ, `ಮಲೈಕಾ ರಿಯಲ್ ಆಗಿ ತುಂಬಾ ಜೋಯಲ್, ತುಂಬಾ ಫ್ರೆಂಡ್ಲಿ, ಸಿಕ್ಕಾಪಟ್ಟೆ ಮಾತನಾಡ್ತೀನಿ, ತುಂಬಾ ಅಚ್ಚಿಕೊಳ್ತೀನಿ, ನಂಬ್ತೀನಿ, ತುಂಬಾ ಪ್ರೀತಿ ಮಾಡ್ತೀನಿ, ನೇರವಾಗಿ ಮಾತನಾಡ್ತೀನಿ ಕೂಡ. ಬೆಣ್ಣೆ ಹಚ್ಚುವುದೆಲ್ಲ ನಾನು ಮಾಡುವುದೇ ಇಲ್ಲ. ನೇರವಾದ ಮಾತುಗಳನ್ನ ಹೇಳುತ್ತಾ ಇದ್ದ ಕಾರಣ ಕಾಲೇಜಲ್ಲೂ ಎಷ್ಟೋ ಜನ ನನ್ನ ಜೊತೆಗೆ ಮಾತನಾಡುತ್ತಾ ಇರಲಿಲ್ಲ. ನಾನು ತುಂಬಾ ಕಾನ್ಫಿಡೆಂಟ್ ಆಗಿ ಇರುತ್ತೀನಿ. ಇದೆಲ್ಲ ಅಮ್ಮನಿಂದ ಬಂದAತ ಬಳುವಳಿ. ನನ್ನ ಕಾನ್ಫಿಡೆನ್ಸ್ಗೆ ಇನ್ನೊಬ್ಬರು ಕಾರಣ ಇದ್ದಾರೆ. ನಮ್ಮ ಹಿಟ್ಲರ್ ಕಲ್ಯಾಣ ಧಾರಾವಾಹಿಯ ವಿದ್ಯಾಮೂರ್ತಿ ಅಮ್ಮ. ತುಂಬಾ ಜಾಸ್ತಿ ಸಪೋರ್ಟ್ ಮಾಡುತ್ತಾರೆ. ನಾನು ಬೆಳಿಬೇಕು, ಅವಕಾಶಗಳು ಸಿಗಬೇಕು ಅಂತ ಇಡೀ ತಂಡ ಹಾರೈಸುತ್ತೆ. ನಾನು ತುಂಬಾ ಇಂಡಿಪೆಂಡೆಂಟ್ ಆಗಿರುವಂತ ಹುಡುಗಿ. ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೀನಿ. ಚಿಕ್ಕ ವಯಸ್ಸಿನಿಂದಾನೂ ಇದೇ ಥರ ಇದ್ದೀನಿ. ಈಗ ಫೈನಾನ್ಶಿಯಲೀ ಕೂಡ ಇಂಡಿಪೆಂಡೆಂಟ್ ಆಗಿರಬೇಕು. ಅದು ತುಂಬಾ ಮುಖ್ಯ ಆಗುತ್ತೆ. ನನ್ನ ಫ್ಯಾಮಿಲಿ ಕೂಡ ಹಿಂಗೆ ಇರು ಅಂತ ಯಾವತ್ತೂ ಡಿಮ್ಯಾಂಡ್ ಮಾಡಿಲ್ಲ. ನಿಂಗೆ ಹೇಗೆ ಬೇಕೋ ಹಾಗೆ ಇರು ಅಂತಾನೆ ಹೇಳುವುದು. ತುಂಬಾ ಪ್ರಾಕ್ಟಿಕಲ್ ಆಗಿ ಬದುಕುತ್ತೀನಿ. ಎಮೋಷನಲ್ ಹುಡುಗಿ ಕೂಡ. ನಮ್ಮ ಅಮ್ಮ ಕೂಡ ಅದನ್ನೇ ಹೇಳುತ್ತಾರೆ. ತುಂಬಾ ಹಠವಾದಿ ನೀನು ಅಂತ. ಅದು ಹೌದು, ನನಗೆ ಬೇಕಾದ್ದನ್ನು ಪಡೆಯುವುದಕ್ಕೆ ಹಠ ಮಾಡ್ತೀನಿ. ನನ್ನ ಗುರಿ ಇದು ಅಂತ ಇಟ್ಟುಕೊಂಡರೆ ಅದನ್ನು ತಲುಪುವುದಕ್ಕೆ ಪ್ರಯತ್ನ ಪಡುತ್ತೀನಿ. ಫಲಾನುಫಲ ಕೊಡುವುದು ದೇವರಿಗೆ ಬಿಟ್ಟಿದ್ದು. ಆದರೆ ಪ್ರಯತ್ನ ಬಿಡದಷ್ಟು ಹಠಮಾರಿ ನಾನು’ ಎಂದಿದ್ದಾರೆ.
* ಗಾಸಿಪ್‌ನಿಂದ ತುಂಬಾ ದೂರು `ಎಡವಟ್ಟು ಲೀಲಾ’
`ನನಗೆ ಯಾರೂ ತುಂಬಾ ಇಷ್ಟ ಆಗುತ್ತಾರೋ ಅವರನ್ನು ತುಂಬಾ ಅಂದ್ರೆ ತುಂಬಾ ಪ್ರೀತಿ ಮಾಡ್ತೀನಿ. ನಿಮಗೆ ನಾನು ಇಷ್ಟವಾಗದೆ ಇದ್ದಾಗ ನಾನು ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪಾಡಿಗೆ ನಾನು ಸುಮ್ಮನೆ ಇದ್ದು ಬಿಡುತ್ತೀನಿ. ಗಾಸಿಪ್ ಅಂದ್ರೆ ನನ್ನ ಕಡೆಯಿಂದ ಜೀರೋ. ಬೇರೆಯವರ ಬಗ್ಗೆ ಮಾತನಾಡುವುದಕ್ಕೆ ನನಗೆ ಇಷ್ಟ್ಟ ಆಗುವುದಿಲ್ಲ. ನೇರಾ ನೇರವಾಗಿ ಮಾತನಾಡುವವರನ್ನು ಕಂಡರೆ ಉರಿದುಕೊಳ್ಳುವವರು ಜಾಸ್ತಿ. ನನಗೂ ತುಂಬಾ ಆಗಿದೆ. ಸಿನಿಮಾ ಒಪ್ಪಿಕೊಳ್ಳುವಾಗ ತುಂಬಾ ಜನ ಟೀಕೆ ಮಾಡಿದರು. ಆದರೆ ಈಗ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಎಷ್ಟೋ ಥಿಯೇಟರ್‌ಗಳಲ್ಲಿ ಮಾಲೀಕರು ಕಣ್ಣೀರು ಹಾಕಿದರು. ನಮ್ಮ ಥಿಯೇಟರ್‌ಗೆ ಜನವೇ ಬರುತ್ತಿರಲಿಲ್ಲ. ಆದರೆ ನಿಮ್ಮ ಸಿನಿಮಾದಿಂದ ನಮ್ಮ ಹೊಟ್ಟೆ ತುಂಬಿದೆ ಅಂತ ಅಂದ್ರು. ನಾನು ಕಡೆಯದಾಗಿ ನಂಬುವುದು ಒಂದೇ ಒಳ್ಳೆಯವರಿಗೆ ಒಳ್ಳೆಯದ್ದೆ ಆಗುತ್ತೆ ಅಂತ’.
* ಆನ್ಲೈನ್ ಫುಡ್ ಬಿಟ್ಟಿದ್ದರೆ ಮಲೈಕಾ ಮನೆ ತೆಗೆದುಕೊಳ್ಳಬಹುದಿತ್ತಂತೆ..!
ಮಲೈಕಾ ಮೊದಲೇ ಹೇಳಿದ ಹಾಗೇ ಆಹಾರ ಪ್ರಿಯೆ . ಅದರಲ್ಲೂ ಮನೆಯ ಊಟವನ್ನೇ ತಿಂದು ಅಭ್ಯಾಸವಿರುವ ಈ ನಟಿಗೆ ಸೆಟ್ ಊಟ ಎಂದರೆ ಅಷ್ಟಕ್ಕೆ ಅಷ್ಟೇ. ಮೊದಲೇ ತಿಂಡಿಪೋತಿ ಜೊತೆಗೆ ಸ್ವೀಟ್ ಅಂದ್ರೆ ಪ್ರಾಣ. ಹೀಗಾಗಿ ಯಾವಾಗಲೂ ಸ್ವಿಗ್ಗಿ, ಝೋಮೋಟೋ ಅಂತ ಆರ್ಡರ್ ಮಾಡುತ್ತಲೇ ಇರುತ್ತಾರಂತೆ. ಇದನ್ನು ನೋಡಿದ ಸೆಟ್‌ನವರು, ಆನ್ಲೈನ್ ನಲ್ಲಿ ಊಟ ತರಿಸಿದ ಹಣದಲ್ಲಿ ನೀನೊಂದು ಮನೆಯನ್ನೆ ತೆಗೆದುಕೊಳ್ಳಬಹುದು ಎಂದು ರೇಗಿಸುತ್ತಾ ಇರುತ್ತಾರಂತೆ.
* ಮಲೈಕಾ ಫಿಟ್ನೆಸ್ ಗುಟ್ಟೇನು..?
`ಮುಂಚೆ ಎಲ್ಲಾ ವರ್ಕೌಟ್ ಮಾಡುತ್ತಾ ಇದ್ದೆ. ಆದರೆ ಈಗ ಸಮಯವೇ ಸಿಗುತ್ತಿಲ್ಲ. ಹೀಗಾಗಿ ಮನೆಯಲ್ಲೇ ಸ್ವಲ್ಪ ವರ್ಕೌಟ್ ಮಾಡುತ್ತೀನಿ. ಇನ್ನು ಸ್ಕಿನ್ ವಿಚಾರಕ್ಕೆ ಬಂರ‍್ರೆ ನಮ್ಮ ಅಮ್ಮನಿಂದಾನೇ ಅಷ್ಟೊಳ್ಳೆ ಸ್ಕಿನ್ ಬಂದಿರುವುದು. ನಾನು ಡಯೆಟ್ ಮಾಡ್ತೀನಿ. ಈಗ ಪ್ರತಿದಿನ ಐದು ಗಂಟೆಗೆ ಎದ್ದೇಳುತ್ತೀನಿ. ಶೂಟಿಂಗ್‌ನಿAದ ರಾತ್ರಿ ಲೇಟಾಗಿ ಹೋಗ್ತೀನಿ. ಪ್ಯಾಷನ್ ಇದ್ರೆ ಎಲ್ಲವೂ ತಾನಾಗಿಯೇ ಸರಿ ಹೋಗುತ್ತೆ ಅನ್ನೋದಕ್ಕೆ ಇದೆ ಉದಾಹರಣೆ. ನಾನು ಆಕ್ಚುಲಿ ಸ್ವಿಮ್ಮರ್. ಸ್ಟೇಟ್ ಲೆವೆಲ್ ಪ್ಲೇಯರ್ ಕೂಡ. ಆದರೆ ನಮ್ಮಮ್ಮ ಬಾಡಿ ಫ್ಲೆಕ್ಸಿಬಲ್ ಇಲ್ಲ ಅಂತ ತೆಗೆದು ಡ್ಯಾನ್ಸ್ಗೆ ಹಾಕಿದ್ರು. ಡ್ಯಾನ್ಸ್ ಮಾಡಿ ಮಾಡಿ ತುಂಬಾ ಖುಷಿ ಪಡುತ್ತಿದ್ದೆ. ನಂಗೆ ಡ್ಯಾನ್ಸ್ ಅಂದ್ರೆ ಇಷ್ಟ. ನಾನು ತುಂಬಾ ಸೂಪರ್ ಆಗಿ ಡ್ಯಾನ್ಸ್ ಮಾಡಲ್ಲ. ಆದರೆ ಬರುವಷ್ಟನ್ನು ಅಚ್ಚುಕಟ್ಟಾಗಿ ಮಾಡ್ತೀನಿ. ನನ್ನಲ್ಲಿರುವ ಒತ್ತಡ ನಿವಾರಣೆಯ ಟಾನಿಕ್ ಅದು’ ಎಂದಿದ್ದಾರೆ.
* ನಿದ್ದೆಗಾಗಿ ಬಂಕ್ ಮಾಡುತ್ತಿದ್ದ ನಟಿ ಈಗ ನಿದ್ದೆ ಇಲ್ಲದೆ ಕೆಲಸ..!
ನಟಿ ಮಲೈಕಾ ಟಿ ವಸುಪಾಲ್ ಕಿರುತೆರೆಯಿಂದ ಎಲ್ಲರ ಮನಸ್ಸನ್ನು ಗೆದ್ದವರು. ಬಳಿಕ ಒಂದೊಳ್ಳೆ ಸಿನಿಮಾಗೂ ಅವಕಾಶ ಸಿಕ್ಕಿತ್ತು. ಆದರೆ ಈಗಲೂ ಧಾರಾವಾಹಿಯನ್ನು ಬಿಟ್ಟಿಲ್ಲ. ಎಡರನ್ನು ಬ್ಯಾಲೆನ್ಸ್ ಮಾಡುವುದು ಅಷ್ಟು ಸುಲಭವೂ ಅಲ್ಲ. `ಉಪಾಧ್ಯಕ್ಷ’ ಸಿನಿಮಾ ನಡೆಯುವಾಗಲೂ `ಹಿಟ್ಲರ್ ಕಲ್ಯಾನ’ ಧಾರಾವಾಹಿ ಶೂಟಿಂಗ್ ನಡೆಯುತ್ತಾ ಇತ್ತು. ಆಗ ಸಿನಿಮಾ ಶೂಟಿಂಗ್‌ಗಾಗಿ ಮೈಸುರಿಗೆ ಹೋಗುತ್ತಿದ್ದ ನಟಿ ಮಲೈಕಾ, ಅಲ್ಲಿಂದ ಹೊರಟು ಬೆಂಗಳೂರಿಗೆ ಬರುತ್ತಾ ಇದ್ದರು. ಮೈಸೂರು ಟು ಬೆಂಗಳೂರು ಕಾರಿನ ಜರ್ನಿಯಲ್ಲಿ ಮಾತ್ರ ನಿದ್ದೆ ಮಾಡುತ್ತಿದ್ದ ಮಲ್ಲಿಕಾ, ಬೆಂಗಳೂರಿಗೆ ಬಮದ ಕೂಡಲೇ ಶೂಟಿಂಗ್‌ನಲ್ಲಿ ಬ್ಯುಸಿಯಾಗುತ್ತಿದ್ದರು. ನಿದ್ದೆ ಮಾಡುವುದಕ್ಕಾಗಿಯೇ ಕಾಲೇಜು ಬಂಕ್ ಹಾಕುತ್ತಿದ್ದ ಮಲೈಕಾಗೆ, ಈಗ ನಿದ್ದೆಯೇ ಇಲ್ಲದಂತೆ ಆಗಿದೆ. ಆದರೂ ಖುಷಿ ಖುಷಿಯಿಂದಾನೇ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಾರೆ. ನಿದ್ದೆ ಇಲ್ಲದೆ ಹೋದರೂ ಹೇಗೆ ಬ್ಯಾಲೆನ್ಸ್ ಮಾಡುತ್ತೀರಾ ಅಂದ್ರೆ, `ಫಸ್ಟ್ ಟೈಮ್‌ನಲ್ಲಿಯೇ ಉಮಾಪತಿ ಸರ್ ಅಂಥ ದೊಡ್ಡ ಪ್ರೊಡಕ್ಷನ್ ಸಿಕ್ಕಿರುವುದೇ ನನ್ನ ಅದೃಷ್ಟ. ನಿದ್ದೆ ಇಲ್ಲದೆ ಶೂಟಿಂಗ್ ಮಾಡುವಾಗ ಎಷ್ಟೋ ಸಲ ಅಳುನೇ ಬರುತ್ತೆ. ಒಮ್ಮೆ ಅತ್ತು ಬಿಟ್ಟು ಆಮೇಲೆ ಮುಖ ತೊಳೆದು ಹೋಗಿ ಮತ್ತೆ ಮೇಕಪ್ ಹಾಕಿಕೊಳ್ಳುತ್ತೇನೆ. ನನಗೆ ಅದೊಂದು ಪ್ಯಾಷನ್. ಹಗಲು ರಾತ್ರಿ ಕೆಲಸ ಮಾಡು ಎಂದರು ಮಾಡುತ್ತೀನಿ. ಆದರೆ ಅಮ್ಮ ನಂಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನನ್ನ ಹೆಲ್ತ್ ಎಲ್ಲಾ ಅಮ್ಮನೇ ನೋಡಿಕೊಳ್ಳುತ್ತಾರೆ’ ಎಂದಿದ್ದಾರೆ.
* ಗ್ಯಾಪ್ ಸಿಕ್ಕಾಗೆಲ್ಲಾ ನಿದ್ದೆ ಮಾಡುವ ನಟಿ
ಸಿನಿಮಾ ತಾರೆಯರನ್ನು ನಾವೂ ಮೂರು ಗಂಟೆಗಳ ಕಾಲ ತೆರೆ ಮೇಲೆ ನೋಡಿ ಮನರಂಜನೆ ಪಡೆದುಕೊಂಡು ಬಂದು ಬಿಡುತ್ತೀವಿ. ಆದರೆ ಆ ಮೂರು ಗಂಟೆಗಳ ಕಾಲದ ಸಿನಿಮಾಗಾಗಿ ನಟ-ನಟಿಯರು ನೂರಾರು ದಿನಗಳ ಕಾಲ ಊಟ, ನಿದ್ದೆ, ನೆಮ್ಮದಿಯನ್ನು ಮರೆತು ಕೆಲಸ ಮಾಡಿರುತ್ತಾರೆ. ಮಲೈಕಾ ಕೂಡ ಅಂಥ ನಿದ್ದೆ ಇಲ್ಲದ ಅದೆಷ್ಟೋ ದಿನಗಳನ್ನು ಕಳೆದಿದ್ದಾರೆ. ಹೀಗಾಗಿ ಈಗ ಶೂಟಿಂಗ್ ಸಮಯದಲ್ಲಿ ಗ್ಯಾಪ್ ಸಿಕ್ಕ ಕೂಡಲೇ ನಿದ್ದೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ನಿದ್ದೆ ಮುಗಿದ ಮೇಲೆ ಡ್ಯಾನ್ಸ್ ಮಾಡುತ್ತಾರೆ. ವಾರಕ್ಕೆ ಒಂದಾದರೂ ಸಿನಿಮಾ ನೋಡುತ್ತಾರೆ ಅದನ್ನು ಮಾತ್ರ ಮಾಡುವುದೇ ಇಲ್ಲ ಎನ್ನುತ್ತಾರೆ.
* ರಾಧಿಕಾ ಪಂಡಿತ್ ಸ್ಪೂರ್ತಿ
ಇಂಡಸ್ಟಿçಗೆ ಹೊಸದಾಗಿ ಬರುವವರಿಗೆ ಈಗಾಗಲೇ ಇಂಡಸ್ಟಿçಯಲ್ಲಿ ಇರುವವರು ಯಾವುದೋ ಒಂದು ವಿಚಾರಕ್ಕೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಕಾಣುತ್ತಾರೆ. ಮಲೈಕಾಗೂ ಇಂಡಸ್ಟಿçಯಲ್ಲಿ ಸ್ಪೂರ್ತಿ ಕೊಟ್ಟವರು ಇದ್ದಾರೆ. ನಟಿ ರಾಧಿಕಾ ಪಂಡಿತ್, ಮಲೈಕಾಗೆ ಸ್ಪೂರ್ತಿದಾಯಕ ನಟಿಯಾಗಿ ಕಾಣುತ್ತಾರೆ. ಅದರಲ್ಲೂ `ಮೊಗ್ಗಿನ ಮನಸ್ಸು’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ಮಾಡಿದಂತ ಪಾತ್ರವನ್ನು ನಾನು ಮಾಡಬೇಕೆಮಬ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಕನಸಿನ ಪಾತ್ರ ಅಂತ ಏನು ಇಲ್ಲ. ಕಲಾವಿದೆಯಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ.
* ಯಾವಾಗಲೂ ಸುಂದರವಾಗಿ ಕಾಣುವಾಸೆ
`ಹಿಟ್ಲರ್ ಕಲ್ಯಾಣ’ ಸೀರಿಯಲ್ ನೋಡುವವರಿಗೆ ಲೀಲಾ ಬ್ಯೂಟಿಗೆ, ಚೆಂದವಾಗಿ ರೆಡಿಯಾಗುವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡುತ್ತಾರೆ ಎಂಬುದು ಗೊತ್ತಿರುತ್ತೆ. ಹೆಣ್ಣು ಮಕ್ಕಳು ಯಾವಾಗಲೂ ಚೆನ್ನಾಗಿ ಕಾಣಬೇಕು ಎಂಬ ಡೈಲಾಗ್ ಹೊಡಿತಾರೆ ಲೀಲಾ. ಆದರೆ ಇದೇ ಗುಣ ನಿಜವಾದ ಲೀಲಾರಿಗೂ ಇರುವುದು. ಅಂದರೆ ನಟಿ ಮಲೈಕಾ ಟಿ ವಸುಪಾಲ್ ಅವರಿಗೂ ಸದಾ ಸುಂದರವಾಗಿ, ಚೆನ್ನಾಗಿ ಕಾಣಬೇಕು ಎಂಬುದೇ ಆಸೆ. ಅದಕ್ಕಾಗಿಯೇ ಚೆಂದವಾಗಿ ರೆಡಿಯಾಗುತ್ತಾರೆ. ಲೂಸ್ ಲೂಸ್ ಥರದ ಬಟ್ಟೆಗಳನ್ನು ಇಷ್ಟಪಡುವ ಮಲೈಕಾ, ಇತ್ತಿಚೆಗೆ ಸೀರೆಗಳನ್ನು ತುಂಬಾ ಇಷ್ಟಪಡುತ್ತಾರೆ.
ಚಂದನವನದಲ್ಲಿ ಮಲೈಕಾ ವಸುಪಾಲ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವಿದ್ಯಾಪತಿ ಸಿನಿಮಾದ ಜೊತೆಗೆ ಕಲ್ಟ್ ಸಿನಿಮಾದಲ್ಲೂ ಅವಕಾಶ ಪಡೆದಿದ್ದಾರೆ. ಇಂಡಸ್ಟ್ರಿಯಲ್ಲಿ ಪರಿಚಯವಾದ ಆರಂಭದಲ್ಲಿಯೇ ಅದ್ಭುತ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಮಲೈಕಾಗೆ ಇನ್ನಷ್ಟು ಅವಕಾಶಗಳು ಅರಸಿ ಬರಬೇಕು ಎಂಬುದೇ `ಚಿತ್ತಾರ’ದ ಹಾರೈಕೆ..