Sandalwood Leading OnlineMedia

ಇಂದಿನ ಕಥೆ ಹೇಳಲು ಬಂತು “ಎಂಥಾ ಕಥೆ ಮಾರಾಯ”

ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ತನ್ನ ರಾಕ್ಷಸ ಹೆಜ್ಜೆಗಳನ್ನ ಮುಂದುವರೆಸಿರುವ ಈ ಹೊತ್ತಿನಲ್ಲಿ ಪ್ರಸಕ್ತ ಪ್ರಾಕೃತಿಕ ವಿದ್ಯಮಾನಗಳ ಸುತ್ತ ಹೆಣೆದಿರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ “ಎಂಥಾ ಕಥೆ ಮಾರಾಯ” ಚಿತ್ರ ನೇರವಾಗಿ ಓಟಿಟಿ ಅಂಗಳದಲ್ಲಿ ಬಿಡುಗಡೆಯಾಗಿದೆ. ಏರ್ಟೆಲ್ ಎಕ್ಸ್ಟ್ರೀಮ್, ಹಂಗಾಮ ಪ್ಲೇ, ಓಟಿಟಿ ಪ್ಲೇ ಮುಂತಾದ ಒಟಿಟಿಗಳಲ್ಲಿ ಪ್ರಸಾರವಾಗಿ ವೀಕ್ಷಕರ ಗಮನ ಸೆಳೆದಿದೆ. “ಚೆನ್ನೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ದಲ್ಲಿ ಪ್ರದರ್ಶನವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರ ಬೆಂಗಳೂರಿನ ಪ್ರಸಕ್ತ ನೀರಿನ ಸಮಸ್ಯೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಬೆಳಕು ಚೆಲ್ಲಿದೆ.
ನಿರ್ದೇಶಕರಾದ ರಕ್ಷಿತ್ ತೀರ್ಥಹಳ್ಳಿಯವರೇ ಬರೆದ ‘ಕಾಡಿನ ನೆಂಟರು‘ ಕಥಾಸಂಕಲನ ಆಧಾರಿತ ಚಿತ್ರದಲ್ಲಿ ಸುಧೀರ್ ಎಸ್.ಜೆ, ವೇದಾಂತ್ ಸುಬ್ರಮಣ್ಯ, ಶ್ರೀಪ್ರಿಯ, ಅಶ್ವಿನ್ ಹಾಸನ್, ಕರಿಸುಬ್ಬು, ಕೇಶವ್ ಗುತ್ತಳಿಕೆ, ಸಮೀರ್ ನಗರದ್ ಮುಂತಾದವರು ನಟಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಮತ್ತು ಸುಧೀರ್ ಎಸ್ ಜೆ ಸಂಕಲನ ಚಿತ್ರಕ್ಕಿದೆ. ಸಂಚಲನ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

READ MORE; “ನನ್ನ ದೇಶವನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನೆ”-ಎಮ್.ಕೆ.ಮಠ ; Chittara Exclusive
ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರಿಸುವ ವಿಚಾರದ ಸುತ್ತಲೂ ಚಿತ್ರದ ಕಥೆ ಸಾಗುತ್ತದೆ. ಶರಾವತಿ ನದಿಯ ಸಂತ್ರಸ್ತರ ಬದುಕಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣದಿಂದ ಹಿಡಿದು ಇಲ್ಲಿಯವರೆಗಿನ ಆಗುಹೋಗುಗಳು ಚಿತ್ರದಲ್ಲಿ ಅಡಕವಾಗಿವೆ. ಒಂದು ನದಿ, ಒಂದು ಕುಟುಂಬ ಹಾಗೂ ಹಲವು ಯೋಜನೆಗಳ ಸಾಲು ಆ ಕುಟುಂಬದ ಮೇಲೆ ಹೇಗೆ ಪರಿಣಾಮ ಭೀರುತ್ತದೆ ಎಂಬುದರ ಜೊತೆಗೆ ಪಶ್ಚಿಮ ಘಟ್ಟಗಳ ಅವಶ್ಯಕತೆ ಹಾಗೂ ನದಿಮೂಲಗಳನ್ನ ಉಳಿಸಿಕೊಳ್ಳುವುದರ ತುರ್ತು ಪ್ರಾಮುಖ್ಯತೆಗೆ ಚಿತ್ರ ಕನ್ನಡಿ ಹಿಡಿದಂತಿದೆ.
​ನೀರಿನ ಪ್ರಮುಖ ಮೂಲ ಕಾಡು. ಆದರೆ ಕುಡಿಯುವ ನೀರಿಗಾಗಿ ಪಶ್ಚಿಮ ಘಟ್ಟದಂತಹ ಕಾಡುಗಳನ್ನೇ ನಾಶ ಮಾಡಿ ನೀರು ಹರಿಸುವ ಯೋಜನೆ ಹಾಗೂ ಇಂತಹ ಅನೇಕ ಯೋಜನೆಗಳನ್ನು ಪಶ್ಚಿಮ ಘಟ್ಟದ ಗರ್ಭದಲ್ಲಿ ಮಾಡುವುದರಿಂದ ನಮ್ಮ ಮುಂದಿನ ಘೋರ ದಿನಗಳನ್ನ ನಾವೇ ಆಹ್ವಾನಿಸಿದಂತೆ ಎಂಬ ಸೂಕ್ಷ್ಮವಾದ ವಿಷಯವನ್ನು ಪಾತ್ರ ಮತ್ತು ಸನ್ನೀವೇಶಗಳ ಮೂಲಕ ಕಟ್ಟಿಕೊಟ್ಟಿರುವುದು ‘ಎಂಥಾ ಕಥೆ ಮಾರಾಯ‘ ಚಿತ್ರದ ಪ್ರಮುಖ ಅಂಶ. ಪ್ರತಿಯೊಬ್ಬರು ಚಿತ್ರವನ್ನ ವೀಕ್ಷಿಸಿ ಜಾಗತಿಕ ತಾಪಮಾನ ಮತ್ತು ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಲಿ ಎನ್ನುವುದು ಚಿತ್ರತಂಡದ ಕಳಕಳಿ.

Share this post:

Related Posts

To Subscribe to our News Letter.

Translate »