![]()
`ಸು ಪ್ರಮ್ ಸೋ’ ಪ್ರೇಕ್ಷಕರನ್ನು ಮತ್ತೆ ಸಿನಿಮಾ ಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಕನ್ನಡ ಪ್ರೇಕ್ಷಕ ನಿಜವಾದ ಕಂಟೆoಟ್ ಚಿತ್ರಗಳನ್ನು ನೋಡುವ ಹಂಬಲದಲ್ಲಿದ್ದಾನೆ. ಅದೇ ಸಮಯಕ್ಕೆ `ಏಳು ಮಲೆ’ ರಿಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿದೆ. ಹಾಗಿದ್ದಾರೆ `ಏಳು ಮಲೆ’ ಹೇಳುವ ಡಿಫೆರೆಂಟ್ ಕಥೆ ಯಾವುದು? ಅಂತಹ ರೋಚಕತೆ ಏನಿದೆ? `ಏಳುಮಲೆ’ ಎರಡುಕಾಲು ಗಂಟೆ ಅವಧಿಯ ಸಿನಿಮಾ, ಆದರೆ ರಪ್ಪಕ್ ಅಂತ ಪಾಸ್ ಆದ ಅನುಭವ ನೀಡುತ್ತದೆ. ಮೊದಲ ಹದಿನೈದು ನಿಮಿಷಗಳಲ್ಲಿ ಅಚ್ಚುಕಟ್ಟಾಗಿ ಅಗತ್ಯವಿದ್ದಷ್ಟೇ ಎಲ್ಲ ಪಾತ್ರಗಳ ಹಿನ್ನೆಲೆ ಮತ್ತು ಅವುಗಳು ಸಾಗುವ ಮುಂದಿನ ಹಾದಿಯ ಬಗ್ಗೆ ಕುತೂಹಲವನ್ನು ಕಟ್ಟಿಕೊಟ್ಟು ನಿರ್ದೇಶಕರು ನೇರವಾಗಿ ಕಥೆಗೆ ಇಳಿದುಬಿಡುತ್ತಾರೆ. ಅಲ್ಲಿಂದ ಸಿನಿಮಾ ಮುಗಿಯುವ ತನಕ ಪ್ರೇಕ್ಷಕನ ಮೊಬೈಲ್ ಸೈಲೆಂಟ್!
ನಿರ್ದೇಶಕ ಪುನೀತ್ ರಂಗಸ್ವಾಮಿ ಸಿನಿಮಾದಲ್ಲಿ ಪಾತ್ರಗಳು ಅಲ್ಲಿಂದ ಇಲ್ಲಿಗೆ ಹೇಗೆ ಬಂದ್ವು, ಯಾವ ಬಾಗಿಲಲ್ಲಿ ಬಂದ್ವು, ಯಾವ ಕಿಟಕಿಯಲ್ಲಿ ತೂರಿದವು ಎಂಬೆಲ್ಲ ಅನಗತ್ಯ ವಿವರಗಳನ್ನು ಕೊಡದೇ, ಕಥೆಯಲ್ಲಿ ಅಗತ್ಯ ತಿರುವುಗಳು ಮತ್ತು ಅತ್ಯಾವಶ್ಯಕ ಸನ್ನಿವೇಶಗಳಲ್ಲಿ ಇರಬೇಕಾದ ಪಾತ್ರಗಳನ್ನು ಕರೆದುಕೊಂಡು ಬಂದು ಇರಿಸಿದ್ದಾರೆ. ಪ್ರೇಮಿಗಳಿಗೆ ಪ್ರೀತಿ ಯಾವಾಗ ಮತ್ತು ಹೇಗೆ ಹುಟ್ಟಿತು ಎಂಬ ಫ್ಲಾಶ್-ಬ್ಯಾಕ್ ತೋರಿಸದೇ, ಇಲ್ಲಿಂದ ಶುರು ಮತ್ತು ಇದೇ ನಾನು ಕಥೆ ಹೇಳುವ ಪರಿ ಎಂದು ತೋರಿಸಿಕೊಂಡು ಹೋಗಿದ್ದಾರೆ. ಆ ಮಾದರಿಯ ಚಿತ್ರಕಥೆಯಿಂದಲೇ ಸಿನಿಮಾಗೆ ಬಿಗಿ-ಹಿಡಿತ ದಕ್ಕಿದೆ. ಹಾಡು ಬರೆಯುತ್ತಿದ್ದ ಪುನೀತ್ ತುಂಬಾ ಚೆನ್ನಾಗಿ ಕಥೆಯನ್ನು ಹೇಳೋದು ಗೊತ್ತಿದೆ, ತಾನು ಹೇಳುವ ಕಥೆಯಲ್ಲಿ ಅಗತ್ಯವಾಗಿರುವಷ್ಟೇ ಹಾಡುಗಳನ್ನು ಬಳಸಿಕೊಂಡಿರುವುದು ಅವರಿಗೆ ಕಥೆ ಮತ್ತು ಚಿತ್ರಕಥೆಯ ಮೇಲಿದ್ದ ಗಟ್ಟಿ ನಂಬಿಕೆ.
ಕೆಲವು ಸಿನಿಮಾ ದ Trailerಗಳು, ಪ್ರೇಕ್ಷಕನ ನಿರೀಕ್ಷೆಯನ್ನೇ `ಕಬ್ಜ’ ಮಾಡಿಬಿಡುತ್ತದೆ. ಆದರೆ, Trailer ನೀಡಿದ ಕಿಕ್ಕು ಸಿನಿಮಾದಲ್ಲಿ ನಿರಾಸೆ ಮೂಡಿಸುತ್ತದೆ. ಆದರೆ, `ಏಳು ಮಲೆ’ ಇಡೀ ಸಿನಿಮಾವೇ ಒಂದು ದೊಡ್ಡ Trailerನಂತಿದೆ! ಅಷ್ಟು ಬಿಗಿಯಾದ ನರೇಶನ್ ಪ್ರಾಪ್ತವಾಗಿದೆ. ಏಕ್ ಲವ್ ಯಾ ಸಿನಿಮಾ ನೋಡಿದವರಿಗೆ ಈ ಸಿನಿಮಾದಲ್ಲಿ ರಾಣಾ ಒಬ್ಬ ನಟನಾಗಿ, ಪಾತ್ರಕ್ಕೆ ತಕ್ಕಂತೆ ಮಾಗಿರುವುದು ಕಾಣುತ್ತದೆ. ಹೀರೋ ಆಗಲು ಹೋಗದೇ, ಸಹಜವಾಗಿ ಪಾತ್ರವನ್ನು ಆವರಿಸಿಕೊಂಡಿದ್ದಾರೆ. ಲವ್ ಸ್ಟೋರಿಗಳಲ್ಲಿ ಹುಡುಗಿಯ ಪಾತ್ರ ಮತ್ತು ನಟನೆ ಇಷ್ಟವಾಗಿಬಿಟ್ರೆ ಅಲ್ಲೇ ಸಿನಿಮಾ ಅರ್ಧ ಗೆದ್ದಂತೆ ಎಂಬ ಮಾತಿದೆ. ಮಹಾನಟಿ ಶೋನ ಮಹಾನಟಿ ಪ್ರಿಯಾಂಕ ಎಲ್ಲರಿಗೂ ತನ್ನ ಅಭಿನಯದಿಂದ ಪ್ರಿಯವಾಗುತ್ತಾರೆ. ತೆರೆಮೇಲೆ ರಾಣಾ ಮತ್ತು ಪ್ರಿಯಾಂಕ ಅವರ ಸಹಜ ಅಭಿನಯದ ಹಿಂದೆ ಶ್ರೀ ಜೋಸೆಫ್ ಜಾನ್ ಅವರ ಶ್ರಮವಿದೆ. ಹೌದು, ರಂಗ ದಿಗ್ಗಜ ಜೋಸೆಫ್ ಅವರ ಗರಡಿಯಲ್ಲಿ ರಾಣಾ ಮತ್ತು ಪ್ರಿಯಾಂಕ ಬರೋಬ್ಬರಿ ಮೂವತ್ತು ದಿನಗಳ ಕಾಲ ನಟನಾ ತರಬೇತಿ ಪಡೆದುಕೊಂಡಿದ್ದರು. ಜೋಸೆಫ್ ಅಂತಹ ರಂಗ ತರಬೇತುದಾರರು ಕನ್ನಡದ ಮಟ್ಟಿಗೆ ಅನಿವಾರ್ಯ. ಏಕೆಂದರೆ, ಸಾಕಷ್ಟು ಸಿನಿಮಾಗಳು ಎಲ್ಲವೂ ಇದ್ದು ಅಭಿನಯವಿಲ್ಲದೆ ಮಕಾಡೆ ಮಲಗುತ್ತಿದೆ. ಸಿನಿಮಾ ತಂಡಗಳು ಜೋಸೆಫ್ ಅವರಂತಹ ಅನುಭವೀ ರಂಗಕರ್ಮಿಗಳನ್ನು ಬಳಸಿಕೊಂಡರೆ ಕನ್ನಡದಲ್ಲೂ ಉತ್ತಮ ನಟರು ಕನ್ನಡಿಗರನ್ನು ರಂಜಿಸಬಹುದು.
ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ, ಪುನೀತ್ ರಂಗಸ್ವಾಮಿಯ ಕನಸನ್ನು ನನಸಾಗಲು ಹಗಲು-ರಾತ್ರಿ ದುಡಿದಿದ್ದಾರೆ. ಅದರಲ್ಲೂ ರಾತ್ರಿಯ ದುಡಿತ ಅದ್ಭುತ! ಏಕೆಂದರೆ ಸಿನಿಮಾ ಭಾಗಶಃ ಕತ್ತಲಲ್ಲಿ ನಡೆಯುತ್ತದೆ. ಆ ಕತ್ತಲಲ್ಲಿ ಸಣ್ಣ ಸಣ್ಣ ವಿವರಗಳ ಮೇಲೆ ಅಸಹಜ ಎನ್ನಿಸದ ಹಾಗೆ ಬೆಳಕು ಚೆಲ್ಲಿರುವುದು, ಕತ್ತಲು ಮತ್ತು ಬೆಳಕನ್ನು ಪ್ರೇಕ್ಷಕರಿಗೆ ಮತ್ತಷ್ಟು ಕುತೂಹಲ ಕೆರಳಸುವಂತೆ ಬಳಸಿಕೊಂಡಿರುವುದು ಮತ್ತು ಸಿನಿಮಾಟೋಗ್ರಫಿ ಕ್ರಾಫ್ಟ್ಗೆ ಅದ್ವೈತ ಈ ಸಿನಿಮಾದ ಹೀರೋ ಆಗ್ತಾರೆ. ಸಿನಿಮಾದ ನಿರ್ಮಾಪಕರಾದ ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ. ಹೊಸ ನಿರ್ದೇಶಕರಿಗೆ ದೊಡ್ಡ ಕ್ಯಾನ್ವಾಸಿನ ಕಥೆ ಹೇಳಬೇಕು ಅಂದುಕೊ0ಡಾಗ ಇಂತಹ ನಿರ್ಮಾಪಕರು ಸಿಗುವುದು ಕಷ್ಟ. ಸಿನಿಮಾದ ಕ್ಯಾನ್ವಾಸಿಗೆ ಪ್ರೊಡಕ್ಷನ್ ವ್ಯಾಲ್ಯೂ ಹೇಗಿರಬೇಕು ಎಂಬ ತಿಳುವಳಿಕೆ ಇರುವ ನಿರ್ಮಾಪಕರಿಂದಲೇ ಏಳುಮಲೆಯಂತಹ ಸಿನಿಮಾಗಳು ಆಗುವುದು ಸಾಧ್ಯ. ಈ ನಿರ್ಮಾಪಕರು ಅದನ್ನು ಸಾಧ್ಯವಾಗಿಸಿದ್ದಾರೆ. ಇಂತಹ ನಿರ್ಮಾಕರನ್ನು `ಏಳು ಮಲೆ’ ಉಳಿಸಿಕೊಳ್ಳಲಿದೆ.
ಡಿ ಇಮ್ಮನ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ವಿನೋದ್ ಮತ್ತು ಅರುಣ್ ಅವರ ಸಾಹಸ ಸಂಯೋಜನೆ ಮತ್ತು ಪ್ರಕಾಶ್ ಅವರ ಸಂಕಲನದ ಕೆಲಸಗಳು. ಕಿಶೋರ್, ನಾಗಾಭರಣ ಹೀಗೆ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ನಾಗಾಭರಣವರ ಸಂಭಾಷಣೆ ಅಲ್ಲಲ್ಲಿ ನಾಟಕೀಯ ಎಂದೆನೆಸುತ್ತದೆ. ಒಟ್ಟಿನಲ್ಲಿ `ಸು ಫ್ರಾಮ್ ಸೋ’ ಗೆಲುವಿನ ಅಲೆ `ಏಳು ಮಲೆ’ ಮೂಲಕ ಮುಂದುವರೆಯುತ್ತಾ ಕಾದು ನೋಡಬೇಕಿದೆ.
