Sandalwood Leading OnlineMedia

‘ಮನದ ಕಡಲು’ ; ‘ಮುಂಗಾರು ಮಳೆ’ ನಿರ್ಮಾಪಕರ ಜತೆ ಯೋಗರಾಜ್ ಭಟ್ ಸಿನಿಮಾ 

 

 

ಮುಂಗಾರು ಮಳೆ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಲವರಿಗೆ ಬದುಕು ಸಿಕ್ಕಿತ್ತು. ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ. ಕೃಷ್ಣಪ್ಪ ಅವರಿಗೂ ಈ ಸಿನಿಮಾದ ಅದೃಷ್ಟ ತಂದುಕೊಟ್ಟಿತ್ತು. ಇದೀಗ 18 ವರ್ಷಗಳ ನಂತರ ಯೋಗರಾಜ್ ಭಟ್ ಮತ್ತು ಇ. ಕೃಷ್ಣಪ್ಪ ಒಂದಾಗಿದ್ದು, ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಈ ಜೋಡಿಯ ಹೊಸ ಸಿನಿಮಾಕ್ಕೆ ‘ಮನದ ಕಡಲು’ ಎಂದು ಹೆಸರಿಡಲಾಗಿದೆ.


ಈ ಬಾರಿ ಯೋಗರಾಜ್ ಭಟ್ ಅವರು ಹೊಸ ಮುಖಗಳಿಗೆ ಆದ್ಯತೆ ನೀಡಿದ್ದಾರೆ. ‘ಫಿಸಿಕ್ಸ್ ಟೀಚರ್’ ಸಿನಿಮಾ ಖ್ಯಾತಿಯ ಸುಮುಖ್‌ ಈ ಸಲ ಯೋಗರಾಜ್ ಭಟ್ ಅವರ ‘ಮನದ ಕಡಲು’ ಸಿನಿಮಾಗೆ ಹೀರೋ ಆಗಿದ್ದಾರೆ. ಜೊತೆಗೆ ನಾಯಕಿಯರಾಗಿ ರಾಶಿಕಾ ಶೆಟ್ಟಿ ಮತ್ತು ‘ಪದವಿಪೂರ್ವ’ ಸಿನಿಮಾ ಖ್ಯಾತಿಯ ಅಂಜಲಿ ಅನೀಶ್ ನಟಿಸುತ್ತಿದ್ದಾರೆ. ರಂಗಾಯಣ ರಘು ಮತ್ತು ದತ್ತಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ.


‘ಮನದ ಕಡಲು’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಗಮನಿಸಿದರೆ, ಈ ಬಾರಿ ತ್ರಿಕೋನ ಪ್ರೇಮಕಥೆಯನ್ನು ಹೇಳುವುದಕ್ಕೆ ಯೋಗರಾಜ್ ಭಟ್ ಹೊರಟಿರುವಂತೆ ಕಾಣುತ್ತಿದೆ. ‘ಮುಂಗಾರು ಮಳೆ’ ಸಿನಿಮಾವನ್ನು ಮಳೆಯ ಹಿನ್ನೆಲೆಯಲ್ಲಿ ಹೇಳಿದ್ದರೆ, ‘ಮನದ ಕಡಲು’ ಸಿನಿಮಾವನ್ನು ಸಮುದ್ರದ ಹಿನ್ನೆಲೆಯಲ್ಲಿ ಹೇಳುವುದಕ್ಕೆ ಯೋಗರಾಜ್ ಭಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನಿಸುತ್ತದೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಕರಾವಳಿಯಲ್ಲಿ ಮಾಡಲಾಗಿದೆ. ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ, ಅತೀ ಶೀಘ್ರದಲ್ಲೇ ತೆರೆಗೆ ತರಬೇಕು ಎಂಬುದು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಅಂದಹಾಗೆ, ಇ. ಕೃಷ್ಣಪ್ಪ ಅವರು ನಿರ್ಮಾಣ ಮಾಡಿರುವ ಎಲ್ಲಾ ಸಿನಿಮಾಗಳ ಟೈಟಲ್‌ಗಳು ‘ಮ’ ಅಕ್ಷರದಿಂದಲೇ ಶುರುವಾಗುವುದು ವಿಶೇಷ. ಹೌದು, ಅವರು ನಿರ್ಮಾಣ ಮಾಡಿದ್ದ ಮೊದಲ ಸಿನಿಮಾ ‘ಮುಂಗಾರು ಮಳೆ’. ಆನಂತರ ‘ಮೊಗ್ಗಿನ ಮನಸು’, ‘ಮತ್ತೆ ಮುಂಗಾರು’ ಸಿನಿಮಾಗಳನ್ನು ಮಾಡಿದ್ದರು. ಇದೀಗ ‘ಮನದ ಕಡಲು’ ಎಂದು ತಮ್ಮ ನಿರ್ಮಾಣದ ಸಿನಿಮಾಕ್ಕೆ ಟೈಟಲ್ ಇಟ್ಟಿದ್ದಾರೆ.

ಇನ್ನು, ‘ಮನದ ಕಡಲು’ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಇದರ ಛಾಯಾಗ್ರಹಕರು. ಇನ್ನುಳಿದಂತೆ ಸಿನಿಮಾದಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಿದ್ದಾರೆ? ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ಮಾಹಿತಿ ಶೀಘ್ರದಲ್ಲೇ ಗೊತ್ತಾಗಲಿದೆ.

 

 

Share this post:

Related Posts

To Subscribe to our News Letter.

Translate »