ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು ನೀಡಿದ ನಟ, ನಿರ್ದೇಶಕ ದ್ವಾರಕೀಶ್, ವೈಯಕ್ತಿಕ ಜೀವನದಲ್ಲಿ ಕಿಂಗ್ ಆಗಿದ್ದರು. ದೊಡ್ಡ ಫ್ಯಾಮಿಲಿಯೊಂದಿಗೆ ನಗು ನಗುತ್ತಾ ಖುಷಿಯಾಗಿದ್ದರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ದ್ವಾರಕೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ರು.
ಏಪ್ರಿಲ್ 26, 1967 ರಂದು ದ್ವಾರಕೀಶ್ ಅಂಬುಜಾ ಅವರನ್ನು ವಿವಾಹವಾದ್ರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ಮಗ ಗಿರಿ ದ್ವಾರಕೀಶ್ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ದ್ವಾರಕೀಶ್ ಅವರಿಗೆ ಒಟ್ಟು 6 ಮಂದಿ ಮಕ್ಕಳಿದ್ದಾರೆ.
ನಟ ದ್ವಾರಕೀಶ್ ಶೈಲಜಾ ಎಂಬುವವರನ್ನು ಎರಡನೇ ಮದುವೆ ಮಾಡಿಕೊಂಡ್ರು. ಅಂಬುಜಾ ಹಾಗೂ ಶೈಲಾಜಾ ಜೊತೆಯಾಗಿಯೇ ಇದ್ದರು. ನನ್ನ ಜೀವನ ಹೀಗೆ ಸಾಗುತ್ತಿದೆ ಎಂದು ದ್ವಾರಕೀಶ್ ತಮ್ಮ ಎರಡನೇ ಮದುವೆ ಪತ್ನಿಯ ಬಗ್ಗೆ ಯಾವುದೇ ಅಳುಕಿಲ್ಲದೆ ಹೇಳಿಕೊಂಡಿದ್ದರು.
ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಜೊತೆ ನಟ ದ್ವಾರಕೀಶ್ ನೆಮ್ಮದಿ ಜೀವನ ನಡೆಸುತ್ತಿದ್ರು. ದೊಡ್ಡ ಫ್ಯಾಮಿಲಿ ದೊರೆಯನ್ನು ಇಡೀ ಕುಟುಂಬ ಕಳೆದುಕೊಂಡಿದೆ. ದ್ವಾರಕೀಶ್ ಸಾವಿನಿಂದ ಇಡೀ ಫ್ಯಾಮಿಲಿ ಕಣ್ಣೀರು ಹಾಕಿದೆ.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಬಂಗಲೆ ಶಾಮ ರಾವ್ ದ್ವಾರಕನಾಥ, ದ್ವಾರಕೀಶ್ ಹೆಸರಲ್ಲಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ರು. 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ರು. ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದ ದ್ವಾರಕೀಶ್ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ರು.
ಇದನ್ನೂ ಓದಿ :ದ್ವಾರಕೀಶ್
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದರು.
ಇದನ್ನೂ ಓದಿ :ದರ್ಶನ್, ಸುದೀಪ್, ರಜನೀಕಾಂತ್ : ಕಲಾವಿದರಿಂದ ದ್ವಾರಕೀಶ್ಗೆ ಸಂತಾಪ

1966ರಲ್ಲಿ ದ್ವಾರಕೀಶ್ ಅವರು ಮಮತೆಯ ಬಂಧನ ಸಿನಿಮಾವನ್ನು ಇನ್ನಿಬ್ಬರು ನಿರ್ಮಾಪಕರ ಜೊತೆ ಸೇರಿ ತುಂಬಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದರು. 1969ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕರಾದರು.

ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಬಳಿಕ ಹಲವು ಸಿನಿಮಾಗಳನ್ನು ನಿರ್ಮಿಸಿ, ಅದರಲ್ಲಿ ಯಶಸ್ಸು ಗಳಿಸಿದರು. ದ್ವಾರಕೀಶ್ ಈವರೆಗೂ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಹಲವು ಕಲಾವಿದರನ್ನು ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ.

1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದ್ರು. ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಇವರು ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.