Sandalwood Leading OnlineMedia

Dwarakish: ಹುಟ್ಟು ಹಬ್ಬದ ಸಂಭ್ರಮದಲ್ಲಿ ಕರ್ನಾಟಕದ ಕುಳ್ಳ ದ್ವಾರಕೀಶ್

ಕರ್ನಾಟಕದ  ಕುಳ್ಳ ಎಂದೇ ಪ್ರಖ್ಯಾತವಾಗಿರುವ ದ್ವಾರಕೀಶ್  ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರು ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಮತ್ತು ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.

ಕರ್ನಾಟಕದ ಕುಳ್ಳ ಎಂದೇ ಪ್ರಖ್ಯಾತವಾಗಿರುವ ದ್ವಾರಕೀಶ್ ಕನ್ನಡ ಚಲನಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿ ಖ್ಯಾತರಾಗಿರುವುದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಆಶ್ರಯದಾತರಾಗಿರುವುದಲ್ಲದೇ, ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣಕರ್ತರಾಗಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟರು ತಮ್ಮದೇ ಆದ ನಟನೆಯ ಛಾಪನ್ನು ಮೂಡಿಸಿದ್ದಾರೆ. ಹೌದು ಎಂತಹ ಪಾತ್ರ ಕೊಟ್ಟರೂ ಕೂಡ ನಟಿಸಲು ಸೈ ಎನ್ನುವ ಹಲವಾರು ನಟರ ನಾವು ನೋಡಬಹುದು. ಇಂತಹ ನಟರಲ್ಲಿ ದ್ವಾರಕೀಶ್ ಕೂಡ ಒಬ್ಬರು.

ಹೌದು ಕನ್ನಡ ಚಿತ್ರರಂಗದ ಹಿರಿಯ ನಟರಾದ ದ್ವಾರಕೇಶ್ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎನ್ನುವವರು ಅಭಿನಯಿಸಿದ ಸಾಕಷ್ಟು ಸಿನಿಮಾಗಳು ಜನರ ಬಾಯಲ್ಲಿ ಇಂದಿಗೂ ಓಡಾಡುತ್ತಿವೆ. ಅಷ್ಟರಮಟ್ಟಿಗೆ ಅವರ ನಟನೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು. ಇನ್ನು ದ್ವಾರಕೀಶ್ ಅವರು ಕೇವಲ ನಟನೆ ಮಾತ್ರವಲ್ಲದೆ ಒಬ್ಬ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

 

ಕನ್ನಡ ಚಿತ್ರರಂಗದಲ್ಲಿ ದ್ವಾರಕೀಶ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೌದು ಚಿಕ್ಕವಯಸ್ಸಿನಲ್ಲಿಯೇ ಸಿನಿಮಾ ಜಗತ್ತಿಗೆ ಕಾಲಿಟ್ಟ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದರು. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಕೆಲಸ ನೀಡಿ ಅವರ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದ್ದರು.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಾಮನ ರೂಪದಿ ಬಂದು ತ್ರಿವಿಕ್ರಮನಾಗಿ ಬೆಳೆದ ದ್ವಾರಕೀಶ್ ಸಾಧನೆ ಅಪೂರ್ವವಾದ್ದು ಮತ್ತು ಸ್ತುತ್ಯಾರ್ಹವಾದದ್ದು. ನಟನಾಗಿ ಪ್ರವೇಶ ಪಡೆದವರು ನಿರ್ಮಾಪಕನಾದರು, ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು. ಹೊಸ ಹೊಸ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದರು. ! 50 ಹೆಚ್ಚು ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ದ್ವಾರಕಿಶ್‌ರ ಎಷ್ಟೋ ಸಿನಿಮಾಗಳು, ಯಾವತ್ತಿಗೂ ಹಸಿರಾಗಿ ಉಳಿವಂಥ ಕ್ಲಾಸಿಕ್ ಚಿತ್ರಗಳೆಂದೇ ಕರೆಯಿಸಿಕೊಂಡಿವೆ.


ಶಾಮರಾವ್ ದ್ವಾರಕಾನಾಥ್ ಎಂಬುದು ದ್ವಾರಕೀಶ್ ಅವರ ನಿಜನಾಮವಾಗಿದ್ದು, ಹುಣಸೂರಿನ ಬಂಗ್ಲೆ ಶಾಮಾರಾವ್ ಮತ್ತು ಜಯಮ್ಮದಂಪತಿಗಳಿಗೆ ಆಗಸ್ಟ್ 19 1942 ರಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸುತ್ತಾರೆ. ಮುಂದೆ ಅವರ ವಿದ್ಯಾಭ್ಯಾಸವೆಲ್ಲವೂ ಮೈಸೂರಿನ ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಮೈಸೂರಿನ CPC ಪಾಲಿಟೆಕ್ನಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮೋ ಮುಗಿಸುವಷ್ಟರಲ್ಲಿ ಅದಾಗಲೇ ಅವರ ಸೋದರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ದ್ವಾರಕನಾಥ್ ಅವರಿಗೂ ಭಾರತ್ ಆಟೋ ಸ್ಪೇರ್ ಸ್ಟೋರ್ ಅರಂಭಿಸಿ ಕೆಲಕಾಲ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.

ಕಲೆ ಎನ್ನುವುದು ದ್ವಾರಕೀಶ್ ಅವರಿಗೆ ಹುಟ್ಟಿನಿಂದಲೇ ಬಂದಿತ್ತು ಎಂದರೂ ತಪ್ಪಾಗದು ಅವರ ತಾಯಿಯ ಸಹೋದರರಾದ ಶ್ರೀ ಹುಣಸೂರು ಕೃಷ್ಣಮೂರ್ತಿಗಳು ಅದಾಗಲೇ ಖ್ಯಾತ ನಟ, ಗೀತರಚನೆಕಾರ, ಕಥೆಗಾರ, ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಖ್ಯಾತಿಗಳಿಸಿದ್ದಲ್ಲದೇ, ಗುಬ್ಬಿ ವೀರಣ್ಣ, ಮೊಹಮ್ಮದ್ ಪೀರ್ ಮತ್ತು ಬಿ.ಆರ್.ಪಂತುಲು ಅಂತಹವರೊಂದಿಗೆ ಕೆಲಸ ಮಾಡಿದ ನಂತರ, ಸತ್ಯ ಹರಿಶ್ಚಂದ್ರ ಭಕ್ತ ಕುಂಬಾರ, ಬಬ್ರುವಾಹನ ಮುಂತಾದ ರಾಜಕುಮಾರ್ ಅವರಿಗೆ ಹೆಸರನ್ನು ತಂದುಕೊಟ್ಟ ಪೌರಾಣಿಕ ಚಿತ್ರಗಳಲ್ಲದೇ ಅನೇಕ ಸಾಮಾಜಿಕ ಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತರಾಗಿದ್ದರು. ಆಗ್ಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ ದ್ವಾರಕೀಶ್ ಸಹಜವಾಗಿ ಚಿತ್ರರಂಗದತ್ತ ಆಕರ್ಷಿತರಾಗಿ ಮದ್ರಾಸಿನಲ್ಲಿದ್ದ 1963 ರಲ್ಲಿ ಅವರ ಮಾವನ ಮನೆಗೆ ಹೋಗಿ ಅವರ ಚಿತ್ರಗಳಲ್ಲಿಅಭಿನಯಿಸಲು ಅವಕಾಶ ನೀಡುವಂತೆ ಹೇಳಿಕೊಂಡರು. ತನ್ನ ಸೋದರಳಿನ ಕೋರಿಕೆಯನ್ನು ಮನ್ನಿಸಿದ ಹುಣಸೂರು ಕೃಷ್ಣಮೂರ್ತಿಗಳು ತಮ್ಮ ವೀರ ಸಂಕಲ್ಪ ಚಿತ್ರದಲ್ಲಿ ಮೊದಲಬಾರಿಗೆ ಬಣ್ಣವನ್ನು ಹಚ್ಚಿಸುತ್ತಾರೆ. ಅಲ್ಲಿಂದ ಶುರುವಾದ ಬಣ್ಣದ ಗೀಳು ಬಲುಬೇಗನೇ ಅವರನ್ನು ಸಂಪೂರ್ಣವಾಗಿ ಸೆಳೆದುಕೊಂಡಿತು.


1969 ರಲ್ಲಿ ಸ್ವತಂತ್ರವಾಗಿ ದ್ವಾರಕಾ ಫಿಲ್ಮ್ ಎಂಬ ಬ್ಯಾನರ್ ಆರಂಭಿಸಿ ಕನ್ನಡದ ವರನಟ ರಾಜಕುಮಾರ್ ಅವರನ್ನು ನಾಯಕರನ್ನಾಗಿ ಮಾಡಿಕೊಂಡು ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುತ್ತಾರೆ. ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಅವರ ಅಮೋಘ ಅಭಿನಯದಿಂದಾಗಿ ಚಿತ್ರ ಅತ್ಯಂತ ಯಶಸ್ವಿಯಾಗಿದ್ದೇ ತಡಾ ಮಂದೆ ಸುಮಾರು ಎರಡು ಎರಡು ದಶಕಗಳ ಕಾಲ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ಕಾಣುವ ಮೂಲಕ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ನಿರ್ಮಾಪಕರಾಗುತ್ತಾರೆ.


1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ವಿಷ್ಣುವರ್ಧನ್ ದ್ವಾರಕೀಶ್ ಕಣ್ಣಿಗೆ ಬಿದ್ದನಂತರ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಜೋಡಿ ಒಂದರ ಹಿಂದೆ ಒಂದಂತೆ ಅನೇಕ ಕಳ್ಳಾ-ಕುಳ್ಳ ಹಾಸ್ಯಭರಿತ ಸಾಹಸವುಳ್ಳ ಸರಣಿಯ ಚಿತ್ರಗಳನ್ನು ಮಾಡುತ್ತಾ, ಕನ್ನಡ ಚಿತ್ರರಂಗದ ಕಳ್ಳ-ಕುಳ್ಳ ಜೋಡಿ ಎಂದೇ ಪ್ರಸಿದ್ಧವಾಗಿತ್ತು. 1978ರಲ್ಲಿ ದ್ವಾರಕೀಶ್ ಬಹಳ ಧೈರ್ಯಮಾಡಿ ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮವಾಗಿ ಸಿಂಗಪೂರಿನಲ್ಲಿ ರಾಜಾ ಕುಳ್ಳ ಚಿತ್ರವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಿ ಯಶಸ್ವಿಯಾಗುತ್ತಾರೆ. 1985ರಲ್ಲಿ ವಿಷ್ಣುವರ್ಧನ್ ಮತ್ತು ಭವ್ಯ ನಟಿಸಿದ ನೀ ಬರೆದ ಕಾದಂಬರಿ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಖ್ಯಾತರಾಗುತ್ತಾರೆ. ಇಷ್ಟರ ಮಧ್ಯೆ ಮಂಕುತಿಮ್ಮ, ಪೆದ್ದಗೆದ್ದ, ಅದೃಷ್ಟವಂತ ಮುಂತಾದ ಚಿತ್ರಗಳಲ್ಲಿ ತಾವೇ ನಾಯಕರಾಗಿಯೂ ನಟಿಸಿ ಸೈ ಎನಿಸಿಕೊಳ್ಳುತ್ತಾರೆ.

ನಿರ್ಮಾಪಕರಾಗಿ ನಟ-ನಟಿಯರಷ್ಟೇ ಅಲ್ಲ- ಹೊಸ ನಿರ್ದೇಶಕರು ಮತ್ತು ಇತರ ತಂತ್ರಜ್ಞರಿಗೂ ಅವಕಾಶ ಕೊಟ್ಟಿದ್ದಾರೆ ಮತ್ತು ಅರೀತಿಯಾಗಿ ಪ್ರಸಿದ್ಧರಾದವರೆಲ್ಲರೂ ಇಂದಿಗೂ ದ್ವಾರಕೀಶ್ ಅವರನ್ನೇ ತಮ್ಮ ತಮ್ಮ ಗಾಡ್ ಫಾದರ್ ಎಂದು ಪರಿಗಣಿಸುತ್ತಾರೆ ಎನ್ನುವುದು ಗಮನಾರ್ಹವಾಗಿದೆ. ಇದುವರೆವಿಗೂ ಅವರು 50ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರಲ್ಲದೇ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಕುಳ್ಳ ಅಂತಲೇ ಗುರುತಿಸಿಕೊಂಡಿದ್ದಾರೆ. ಹೌದು ನೋಡಲು ಗಿಡ್ಡಗಿದ್ದ ಇವರನ್ನು ಕುಳ್ಳ ಅಂತಲೇ ಕರೆಯುತ್ತಾರೆ. ಇನ್ನು ಇವರು ವಿಷ್ಣುವರ್ಧನ್ ಅವರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇವರು ಹಾಗೂ ನಟ ವಿಷ್ಣುವರ್ಧನ್ ಅವರು ಅಭಿನಯಿಸಿದ ‘ಸಿಂಗಾಪುರದಲ್ಲಿ ರಾಜಾಕುಳ್ಳ’ ಎಂಬ ಸಿನಿಮಾ ಇಂದಿಗೂ ಸಾಕಷ್ಟು ಜನರಿಗೆ ಮತ್ತೆ ನೋಡಬೇಕು ಎಂದು ಅನಿಸುತ್ತದೆ. ಅಷ್ಟರಮಟ್ಟಿಗೆ ಅದರಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ ಅವರ ಅಭಿನಯ ಪ್ರಶಂಸೆ ಪಡೆದಿತ್ತು.

ಆಪ್ತಮಿತ್ರ ಚಿತ್ರವಂತೂ ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ರಣಜಿತ್‌ನಲ್ಲಿ ಚಿತ್ರಮಂದಿರಗಳಲ್ಲಿ ಪ್ರತಿ ದಿನ ನಾಲ್ಕು ಪ್ರದರ್ಶನಗಳೊಂದಿಗೆ ಒಂದು ವರ್ಷ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಕನ್ನಡ ಚಲನಚಿತ್ರವಾಗಿದೆ. ಆಪ್ತಮಿತ್ರ ಚಿತ್ರದ ಹೆಸರಿಗೆ ಅನ್ವರ್ಥವಾಗಿ ವಿಷ್ಣುವರ್ಧನ್ ಮತ್ತೊಮ್ಮೆ ಅಪ್ತಮಿತ್ರನಾಗಿ ಹೊರಹೊಮ್ಮಿ, ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸಿಕೊಡುವ ಮೂಲಕ ಅವರ ಹಿಂದಿನ ಚಿತ್ರಗಳಿಂದ ಅಗಿದ್ದ ನಷ್ಟವನ್ನೆಲ್ಲಾ ಮತ್ತು ಎಲ್ಲಾ ಸಾಲಗಳನ್ನು ತೀರಿಸಲು ಸಹಾಯ ಮಾಡಿತು.


ಅವರ ಬ್ಯಾನರಿನ 50 ನೇ ಚಿತ್ರವಾಗಿ ನಿರ್ಮಿಸಿದ ಚೌಕ ಕೂಡಾ ಅತ್ಯಂತ ಯಶಸ್ವಿಯಾಗಿತ್ತು. ಹೀಗೆ ಕನ್ನಡ ಚಿತ್ರರಂಗಕ್ಕೆ ಹಾಸ್ಯ ನಟನಾಗಿ ಪ್ರವೇಶಿಸಿ ನಾಯಕ ನಟ, ಪೋಷಕ ನಟನಾಗಿದ್ದಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿ ಹಲವಾರು ಹೊಸಾ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾದ ದ್ವಾರಕೀಶ್ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

Share this post:

Related Posts

To Subscribe to our News Letter.

Translate »